ಭಾರತವು ದೇವಾಲಯಗಳ ದೇಶ. ಕೋಟ್ಯಾಂತರ ಭಕ್ತರು ತಮ್ಮ ನಂಬಿಕೆ, ಭಕ್ತಿ ಮತ್ತು ಹರಕೆಯ ರೂಪದಲ್ಲಿ ಪ್ರತೀ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ದೇವಾಲಯಗಳಿಗೆ ಸಮರ್ಪಿಸುತ್ತಾರೆ. ದೇವರಿಗೆ ಸಲ್ಲಿಸುವ ಕಾಣಿಕೆ ಭಕ್ತಿಯ ಸಂಕೇತ. ಆದರೆ ಈ ಭಕ್ತಿಯೊಂದಿಗೆ ಒಂದು ಪ್ರಮುಖ ಪ್ರಶ್ನೆಯೂ ಸಮಾಜದ ಮುಂದೆ ನಿಂತಿದೆ. ದೇವರು ಹಣ ತಿನ್ನುವುದಿಲ್ಲ; ಹಾಗಾದರೆ ದೇವರ ಹೆಸರಿನಲ್ಲಿ ಸಂಗ್ರಹವಾಗುವ ಹಣವನ್ನು ಯಾರು ನಿರ್ವಹಿಸುತ್ತಿದ್ದಾರೆ? ಅದು ಹೇಗೆ ಬಳಸಲಾಗುತ್ತಿದೆ? ಅದರ ಬಗ್ಗೆ ಪಾರದರ್ಶಕ ಮಾಹಿತಿ ಸಮಾಜಕ್ಕೆ ಲಭ್ಯವಿದೆಯೇ? ಇತ್ತೀಚೆಗೆ ಒಬ್ಬರು ಮಂಗಳೂರಿನ ಉದ್ಯಮಿ ಹಾಗೂ ಧಾರ್ಮಿಕ ಭಕ್ತರು ತಮ್ಮ ಸ್ನೇಹಿತರೊಂದಿಗೆ ತಿರುಪತಿ ಯಾತ್ರೆ ಮುಗಿಸಿ ಮಂತ್ರಾಲಯದತ್ತ ತೆರಳುತ್ತಿದ್ದ ವೇಳೆ ಮಂತ್ರಾಲಯದ ಒಂದು ಕಿ.ಮೀಟರ್ ಹತ್ತಿರ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟರು. ಅವರ ಜೊತೆಗಾರ ಒಬ್ಬರ ಎರಡೂ ಕಾಲುಗಳು ಕತ್ತರಿಸಲ್ಪಟ್ಟರೆ, ಉಳಿದಿಬ್ಬರಿಗೆ ಭೀಕರ ಗಾಯಗಳಾದವು. ಇವರೊಂದಿಗೆ ಯಾತ್ರೆಗೆ ತೆರಳಿದ ಇನ್ನೊಂದು ವಾಹನದಲ್ಲಿ ಇದ್ದವರು ಇವರನ್ನು ಕೂಡಲೇ ಅಪಘಾತ ನಡೆದ ಸ್ಥಳದ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಅಲ್ಲಿ ಇದ್ದಿದ್ದು ಕೇವಲ ಇಬ್ಬರು ನರ್ಸ್ ಗಳು ಮಾತ್ರ. ಅವರೂ ಕೂಡ ಈ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಇರಲಿಲ್ಲ. ತುರ್ತು ಚಿಕಿತ್ಸೆ ನೀಡುವ ಬದಲಾಗಿ ನಿಮ್ಮ ಹೆಸರೇನು? ಯಾವ ಊರು? ತಿರುಪತಿಗೆ ಯಾಕೆ ಹೋಗಿದ್ದೀರಿ? ಅಲ್ಲಿಂದ ಇಲ್ಲಿಗೆ ಯಾಕೆ ಬಂದಿರಿ? ಎಂಬುದರ ಬಗ್ಗೆ ಫಾರಂ ಫಿಲ್ ಮಾಡುವುದರಲ್ಲಿಯೇ ತಲ್ಲೀನರಾಗಿದ್ದರು. ಬಹಳ ಸಮಯದ ಮೇಲೆ ಓರ್ವ ವೈದ್ಯರು ಅಲ್ಲಿಗೆ ಆಗಮಿಸಿ ಓರ್ವರು ಮೃತರಾಗಿದ್ದಾರೆ ಎಂದು ಘೋಷಿಸಿ, ಇನ್ನುಳಿದವರಿಗೆ ಚಿಕಿತ್ಸೆ ಕೊಡಲು ತಮ್ಮಲ್ಲಿ ಯಾವುದೇ ಉನ್ನತ ತಂತ್ರಜ್ಞಾನ, ಯಂತ್ರೋಪಕರಣಗಳು ಇಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದ್ದರು ಹಾಗೂ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ/ ಬೆಂಗಳೂರು ಅಥವಾ ಬೇರೆ ಕಡೆ ಕೊಂಡೊಯ್ಯಲು ತಿಳಿಸಿದರು.
ಕಾಲು ಕತ್ತರಿಸಲ್ಪಟ್ಟ ವ್ಯಕ್ತಿ ಮತ್ತು ಅಪಘಾತದಲ್ಲಿ ತೀವ್ರ ತರವಾಗಿ ಗಾಯಗೊಂಡ ವ್ಯಕ್ತಿಗಳಲ್ಲಿ ಅಪಾರ ಪ್ರಮಾಣದ ರಕ್ತಸ್ರಾವವಾಗಿ ಜೀವ ಹಾನಿ ಆಗುವ ಪರಿಸ್ಥಿತಿಯಲ್ಲಿದ್ದರೂ ಕೂಡಾ ಆ ಸಂದರ್ಭದಲ್ಲಿ ಮಂತ್ರಾಲಯದಂತಹ ಅತೀ ದೊಡ್ಡ ಧಾರ್ಮಿಕ ಸ್ಥಳದಲ್ಲಿ ತುರ್ತು ಚಿಕಿತ್ಸೆ ನೀಡುವ ಉತ್ತಮ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳು ಸುತ್ತಲಿನ 80 ಕಿಲೋಮೀಟರ್ ಅಂತರದಲ್ಲಿ ಇಲ್ಲದಿರುವುದು
ವಿಷಾದನೀಯ. ತುರ್ತು ಚಿಕಿತ್ಸೆಗೆ ಅಗತ್ಯ ತಜ್ಞ ವೈದ್ಯರು ಮತ್ತು ಮೂಲ ಸೌಕರ್ಯಗಳ ಕೊರತೆಯಿಂದ ತಕ್ಷಣದ ಉನ್ನತ ಚಿಕಿತ್ಸೆ ದೊರೆಯದೇ ಈ ಘಟನೆ ನಮ್ಮ ಆರೋಗ್ಯ ವ್ಯವಸ್ಥೆಯ ಸವಾಲುಗಳನ್ನು ಮತ್ತೊಮ್ಮೆ ನೆನಪಿಸುತ್ತದೆ. ಚಿನ್ನ ಬೆಳ್ಳಿಯ ಆಭರಣಗಳು, ದೇವಸ್ಥಾನದ ಶಿಖರಕ್ಕೆ ಮುಚ್ಚುವ ಚಿನ್ನದ ತಗಡು, ಚಿನ್ನ ಬೆಳ್ಳಿಯ ರಥ ಇವೆಲ್ಲವುಗಳನ್ನು ಮಾಡುವುದಕ್ಕಿಂತ ಮೊದಲು ಅತೀ ಹೆಚ್ಚು ಭಕ್ತಾದಿಗಳು ಬರುವ ಧಾರ್ಮಿಕ ಕ್ಷೇತ್ರಗಳ ಬಳಿ ಉತ್ತಮ ಆಸ್ಪತ್ರೆ, ವಸತಿ ಗೃಹ, ಕುಡಿಯುವ ನೀರು, ಶೌಚಾಲಯ, ಕಸ ವಿಲೇವಾರಿ ಘಟಕ, ಉಚಿತ ಮತ್ತು ಉನ್ನತ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳ ರಚನೆ ಮತ್ತು ನಿರ್ಮಾಣ ಮೊದಲು ಆಗಬೇಕಾಗಿದೆ.




ಧರ್ಮ ಮತ್ತು ಧಾರ್ಮಿಕತೆಯೆಂದರೆ ಕೇವಲ ಆಡಂಬರ ಮತ್ತು ಪ್ರಚಾರದ ವಸ್ತು ಅಲ್ಲ. ಹೃದಯದ, ಮನಸ್ಸಿನ ಅಂತರಾಳದ ನಂಬಿಕೆಗೆ ಪೂರಕವಾಗಿ ನಂಬಿಕೆಗಳ ಆಚರಣೆಗೆ ಬರುವ ಭಕ್ತರು ದೇವರು ಅಲ್ಲಿ ಇದ್ದಾನೆ ಇರಬಹುದು ಎನ್ನುವ ನಂಬಿಕೆ. ಅದಕ್ಕೆ ಪೂರಕವಾಗಿ ಭಕ್ತರು ಈ ತರ ರಸ್ತೆಯಲ್ಲಿ ಚಿಕಿತ್ಸೆ ಸಿಗದೆ ಮೃತ ಹೊಂದಿದರೆ ದೇವರ ಇರುವಿಕೆಯ ಮೇಲೂ ಅಪನಂಬಿಕೆ ಬರುವುದು ಖಂಡಿತ. ದೇವರನ್ನು ಹುಡುಕಿ ಬರುವ ಭಕ್ತರಿಗೆ ಅನುಕೂಲವಾಗುವ ಧಾರ್ಮಿಕ ಕೇಂದ್ರಗಳಿಗೆ ದೇವರ ಹಣ ಅಂದರೆ ಎಲ್ಲರ ಹಣವನ್ನು ಜೀವ ಉಳಿಸಲು ಅದರ ವೈದ್ಯಕೀಯ ವೈಜ್ಞಾನಿಕ ಸೌಕರ್ಯಗಳ ರಚನೆ ಕೂಡಾ ಧರ್ಮ ಕ್ಷೇತ್ರಗಳ ಜವಾಬ್ದಾರಿಯಾಗಿದೆ ಹಾಗೂ ಇಂದಿಗೂ ಅನೇಕ ದೇವರ ಭಕ್ತ ಬಡ ಕುಟುಂಬಗಳು ಮಕ್ಕಳ ಶಿಕ್ಷಣಕ್ಕಾಗಿ, ಚಿಕಿತ್ಸೆಗಾಗಿ, ಶಸ್ತ್ರಚಿಕಿತ್ಸೆಗಾಗಿ ಸಾರ್ವಜನಿಕರಿಂದ ಸಹಾಯ ಕೇಳುವ ಪರಿಸ್ಥಿತಿ ಎದುರಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ನೆರವಿನ ಮನವಿಗಳು ಹೆಚ್ಚಾಗುತ್ತಿರುವುದು ನಮ್ಮ ಸಮಾಜ ಮತ್ತು ಕಲ್ಯಾಣ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ರಾಜ್ಯಸಭೆಯ ಹಣಕಾಸು ಸಮಿತಿಯು 2023 -24ರ ಅವಧಿಯಲ್ಲಿ ಕೆಲವು ಪ್ರಮುಖ ದೇವಾಲಯಗಳ ಲೆಕ್ಕಪತ್ರಗಳಲ್ಲಿ ಪಾರದರ್ಶಕತೆಯ ಕೊರತೆಯನ್ನು ಪ್ರಶ್ನಿಸಿತ್ತು. ಆ ಸಂದರ್ಭದಲ್ಲಿ ದೇಶದ ದೇವಾಲಯಗಳಲ್ಲಿ ವಾರ್ಷಿಕವಾಗಿ ರೂಪಾಯಿ 25,000 ದಿಂದ 35,000 ಕೋಟಿ ಕಾಣಿಕೆ ಸಂಗ್ರಹವಾಗುತ್ತದೆ ಎಂಬ ಅಂದಾಜು ವ್ಯಾಪಕವಾಗಿ ಉಲ್ಲೇಖಿಸಲಾಯಿತು. ಉದ್ಯಮ ವಿಶ್ಲೇಷಕರ ಅಭಿಪ್ರಾಯದಂತೆ, ಉತ್ತರ ಭಾರತದ ಅಸಂಘಟಿತ ಸಣ್ಣ ದೇವಾಲಯಗಳ ಕಾಣಿಕೆಗಳನ್ನೂ ಸೇರಿಸಿದರೆ, ಈ ಮೊತ್ತ ರೂಪಾಯಿ 50,000 ಕೋಟಿ ದಾಟುವ ಸಾಧ್ಯತೆಯೂ ಇದೆ. ಇವು ಅಂದಾಜು ಸಂಖ್ಯೆಗಳಾಗಿದ್ದು, ದೇಶದ ಎಲಲ್ಲಾ ದೇವಾಲಯಗಳ ನಿಖರ ಹಾಗೂ ಏಕೀಕೃತ ಸಾರ್ವಜನಿಕ ಲೆಕ್ಕಪತ್ರಗಳು ಲಭ್ಯವಿಲ್ಲ. ಆದ್ದರಿಂದ ಈ ಅಂಕಿ ಅಂಶಗಳನ್ನು ಪಾರದರ್ಶಕತೆ ಮತ್ತು ಸಾರ್ವಜನಿಕ ಉತ್ತರದಾಯಿತ್ವದ ಅಗತ್ಯವನ್ನು ಒತ್ತಿ ಹೇಳುವ ಹಿನ್ನೆಲೆಯಲ್ಲಿ ನೋಡಬೇಕು. ಗಮನಿಸಬೇಕಾದ ಸಂಗತಿ ಏನೆಂದರೆ, ಇದು ಕೇವಲ ಒಂದು ವರ್ಷದ ಅಂದಾಜು ಮೊತ್ತ ಮಾತ್ರ. ಹಲವು ದಶಕಗಳ ಒಟ್ಟು ಕಾಣಿಕೆಗಳ ಮೌಲ್ಯ ಎಷ್ಟಿರಬಹುದು ಎಂಬ ಪ್ರಶ್ನೆಯೂ ಸಹಜವಾಗಿ ಮೂಡುತ್ತದೆ. ಈ ಅಪಾರ ಸಂಪತ್ತಿನ ಒಂದು ಭಾಗವನ್ನಾದರೂ ಕಾನೂನುಬದ್ಧ ಮತ್ತು ಪಾರದರ್ಶಕ ವ್ಯವಸ್ಥೆಯ ಮೂಲಕ ಬಡ ಮಕ್ಕಳ ಶಿಕ್ಷಣ, ಆರೋಗ್ಯ ಚಿಕಿತ್ಸೆ, ವಿದ್ಯಾರ್ಥಿವೇತನ, ಅನಾಥಾಶ್ರಮಗಳು, ವೃದ್ಧಾಶ್ರಮಗಳು ಹಾಗೂ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟರೆ ಸಾವಿರಾರು ಕುಟುಂಬಗಳ ಜೀವನದಲ್ಲಿ ಆಶಾಕಿರಣ ಮೂಡಬಹುದು.
ಇದು ಯಾವುದೇ ಧರ್ಮ ಅಥವಾ ದೇವಾಲಯದ ವಿರುದ್ಧದ ಪ್ರಶ್ನೆಯಲ್ಲ. ಭಕ್ತರು ಸಮರ್ಪಿಸಿದ ಕಾಣಿಕೆಗಳನ್ನು ಹೇಗೆ ಬಳಸಲಾಗುತ್ತಿದೆ ಎಂಬುದರ ಬಗ್ಗೆ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಉತ್ತಮ ಆಡಳಿತ ಇರಬೇಕೆಂಬ ಪ್ರಶ್ನೆ. ದೊಡ್ಡ ಧಾರ್ಮಿಕ ಸಂಸ್ಥೆಗಳು ನಿಯಮಿತ ವಾರ್ಷಿಕ ವರದಿಗಳು, ಸ್ವತಂತ್ರ ಲೆಕ್ಕಪರಿಶೋಧನೆ ಮತ್ತು ಸಾರ್ವಜನಿಕ ಲೆಕ್ಕಪತ್ರಗಳನ್ನು ಪ್ರಕಟಿಸಿದರೆ ಭಕ್ತರ ವಿಶ್ವಾಸ ಇನ್ನಷ್ಟು ಬಲವಾಗುತ್ತದೆ. ಭಕ್ತಿ ಮತ್ತು ಜವಾಬ್ದಾರಿ ಒಂದಕ್ಕೊಂದು ವಿರುದ್ಧವಲ್ಲ. ಭಕ್ತಿ ದೇವರ ಮೇಲಿನ ನಂಬಿಕೆಯನ್ನು ತೋರಿಸಿದರೆ, ಪಾರದರ್ಶಕತೆ ಸಮಾಜದ ಮೇಲಿನ ಹೊಣೆಗಾರಿಕೆಯನ್ನು ತೋರಿಸುತ್ತದೆ. ಭಕ್ತಿ ಇರಲಿ, ಆದರೆ ಪ್ರಶ್ನಿಸುವ ಜವಾಬ್ದಾರಿಯೂ ಇರಲಿ. ದೇವರಿಗೆ ಸಲ್ಲಿಸಿದ ಕಾಣಿಕೆ, ದೇವರ ಮಕ್ಕಳಾದ ಬಡವರ ಶಿಕ್ಷಣ, ಆರೋಗ್ಯ ಮತ್ತು ಮಾನವೀಯ ಸೇವೆಗೆ ಬೆಳಕಾಗಲಿ. ಇದೇ ನಿಜವಾದ ಧರ್ಮ, ಇದೇ ನಿಜವಾದ ಸೇವೆ.
ಬರಹ : ಶಶಿಧರ ಶೆಟ್ಟಿ






















































































































