ಅರ್ಥವ್ಯವಸ್ಥೆ ಬೇರೆ. ಆಧ್ಯಾತ್ಮ ಬೇರೆ. ಜ್ಞಾನ, ಪ್ರೀತಿ ತುಂಬಿದ ಅಂತರಂಗ ಅವಶ್ಯ. ನಿಸ್ವಾರ್ಥ ಸೇವೆ, ಪರೋಪಕಾರ ಮನೋಭಾವ, ಸತ್ಕರ್ಮ ಇಹ ಪರ ಲೋಕದಲ್ಲಿ ಶಾಶ್ವತವಾಗಿ ದಾಖಲಾಗುತ್ತದೆ. ಹರಿಯುವ ನದಿಯಂತೆ ವಿಕಾಸ ವಾಹಿನಿ ನಿರಂತರವಾಗಿ ಮುಂದುವರಿಯಬೇಕು ಎಂದು ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು. ಅವರು ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ರಜತ ಸಂಭ್ರಮ ಸಮಿತಿ ಮತ್ತು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಗ್ರಾಮವಿಕಾಸ ರಜತ ಸಂಭ್ರಮ, ಒಡಿಯೂರು ಶ್ರೀ ವಿಕಾಸವಾಹಿನಿ ಸಂಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸಾಧ್ವಿ ಶ್ರೀ ಮಾತಾನಂದಮಯೀ ಅವರು ಆಶೀರ್ವಚನ ನೀಡಿ, ತುಳು ಭಾಷೆಗೆ 2ನೇ ಭಾಷೆಯಾಗಿ ಸ್ಥಾನಮಾನ ಸಿಕ್ಕಿದ್ದು ಪ್ರಥಮ ಹಂತದ ಗುರು ಸಂಕಲ್ಪ ಈಡೇರಿದೆ ಎಂದರು. ಕ್ಯಾ. ಬ್ರಿಜೇಶ್ ಚೌಟ ಅವರು ರಜತ ವಿಕಾಸ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ, ಒಡಿಯೂರು ಶ್ರೀಗಳ ಕಲ್ಪನೆಯಂತೆ 25 ವರ್ಷಗಳಿಂದ ಸ್ವಚ್ಛ ಜಿಲ್ಲೆಯಾಗಿಸುವ ಚಟುವಟಿಕೆ ನಡೆಯುತ್ತ ಬಂದಿರುವುದು ಶ್ರೇಷ್ಠ ಕಾರ್ಯ ಎಂದು ಹೇಳಿದರು.




ಶಾಸಕರಾದ ರಾಜೇಶ್ ನ್ಯಾಕ್ ಯು, ಉಮಾನಾಥ ಕೋಟ್ಯಾನ್, ಅಶೋಕ್ ಕುಮಾರ್ ರೈ, ಮಾಜಿ ಸಚಿವ ಬಿ ನಾಗರಾಜ ಶೆಟ್ಟಿ, ಮಾಜಿ ಸಚಿವ ಬಿ ರಮಾನಾಥ ರೈ, ಮುಂಬಯಿ ಉದ್ಯಮಿ ವಾಮಯ್ಯ ಬಿ ಶೆಟ್ಟಿ, ಎಸ್.ಆರ್ ಸತೀಶ್ಚಂದ್ರ, ಮುಂಬಯಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ದಾಮೋದರ ಎಸ್ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ ಹುಬ್ಬಳ್ಳಿ, ಪುಣೆ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ ವಿ ಶೆಟ್ಟಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಲೋಕನಾಥ ಶೆಟ್ಟಿ ತಾಳಿಪಡ್ಪುಗುತ್ತು ಮತ್ತಿತರರು ಭಾಗವಹಿಸಿದ್ದರು. ಮುಂಬಯಿಯ ಒಡಿಯೂರು ಶ್ರೀ ಯುವ ಸೇವಾ ಬಳಗದ ಅಧ್ಯಕ್ಷ ಡಾ. ಅದೀಪ್ ಕೆ ಶೆಟ್ಟಿ ಅವರಿಗೆ ಸಾಧನಾ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ರಾಜೇಶ್ ನ್ಯಾಕ್ ಯು, ರಜತ ಸಂಭ್ರಮ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಕಾರ್ಯಾಧ್ಯಕ್ಷ ಎ ಸುರೇಶ್ ರೈ ಅವರನ್ನು ಸನ್ಮಾನಿಸಲಾಯಿತು. ಯಶವಂತ ವಿಟ್ಲ ಸ್ವಾಗತಿಸಿ, ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. ಪಿ.ಆರ್.ಒ ಮಾತೇಶ್ ಭಂಡಾರಿ ವಂದಿಸಿದರು.













































































































