ಇದೊಂದು ಅತ್ಯಂತ ಸಾಮಾನ್ಯವಾದ ತೊಂದರೆ. ಕಡಿಮೆಯೆಂದರೂ ಶೇಕಡ 80 ಮಹಿಳೆಯರು ಹದಿಹರೆಯದಲ್ಲಿ ಮುಟ್ಟು ಪ್ರಾರಂಭವಾಗುವ ಕೆಲವು ವರ್ಷಗಳಾದರೂ ಈ ನೋವನ್ನು ಅನುಭವಿಸಿರಬಹುದು. ಇದರ ತೀವ್ರತೆಯಲ್ಲಿ ವ್ಯತ್ಯಾಸ ಇರಬಹುದಷ್ಟೆ. ಹದಿಹರೆಯದಲ್ಲಿ ಮುಟ್ಟಿನ ನೋವು ತಾಯಿಗೆ ಅತೀವ ಮಾನಸಿಕ ಒತ್ತಡ ಉಂಟು ಮಾಡಿದರೆ ಮಧ್ಯ ವಯಸ್ಸಿನ ಮುಟ್ಟಿನ ನೋವು ಆ ಮಹಿಳೆಗೆ ಬಹಳ ಮಾನಸಿಕ ಒತ್ತಡ ಮತ್ತು ದೈಹಿಕ ಒತ್ತಡ ಉಂಟು ಮಾಡುತ್ತದೆ. ಮುಟ್ಟಿನ ತೊಂದರೆಗಳಲ್ಲಿ ಎರಡು ವಿಧಗಳಿವೆ.

1) ಹದಿಹರೆಯದ ಮುಟ್ಟಿನ ನೋವು : ಹುಡುಗಿ ಪ್ರಬುದ್ಧಾವಸ್ಥೆಗೆ ಬಂದ ಮೇಲೆ ಮುಟ್ಟಿನ ಜೊತೆಗೆ ಬರುವ ನೋವು ಹಲವು ರೀತಿಯ ಸಮಸ್ಯೆಗಳನ್ನು ತಂದೊಡುತ್ತವೆ. ಕಲಿಕೆಗೂ ತೊಂದರೆ ಉಂಟು ಮಾಡುವುದಲ್ಲದೇ ಆಹಾರ ಸೇವಿಸುವಲ್ಲಿಯೂ ವ್ಯತ್ಯಯವಾಗುತ್ತದೆ. ಕೆಳ ಹೊಟ್ಟೆನೋವು, ಸೊಂಟನೋವು, ತೊಡೆಗಳಲ್ಲಿ ನೋವು ಕಂಡು ಬರಬಹುದು. ಇದರ ಜೊತೆಗೆ ವಾಂತಿಭೇದಿಯೂ ಕಂಡು ಬರಬಹುದು. ಕೆಲವರಲ್ಲಿ ಯಾವುದೇ ಕಾರಣವಿಲ್ಲದೇ ಅತೀವ ಬಳಲಿಕೆಯೂ ಇರಬಹುದು. ಆದರೆ ಸಮಾಧಾನದ ವಿಷಯವೆಂದರೆ ಈ ಹರೆಯದಲ್ಲಿ ಬರುವ ಮುಟ್ಟಿನ ನೋವು ಬೇರೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ. ದೇಹದ ಒಳಗೆ ಗರ್ಭಕೋಶ ಅಂಡಾಶಯಗಳಲ್ಲಿ ಯಾವುದೇ ನ್ಯೂನತೆ ಇರುವುದಿಲ್ಲ. ಪ್ರಬುದ್ಧಾವಸ್ಥೆಗೆ ಬಂದ ಕೆಲವು ವರ್ಷಗಳ ಬಳಿಕ ಅಥವಾ ಒಂದು ಹೆರಿಗೆಯ ಬಳಿಕ ತನ್ನಿಂತಾನೆಯೇ ಮರೆಯಾಗಿ ಬಿಡಬಹುದು.
2) ಮಧ್ಯ ವಯಸ್ಸಿನಲ್ಲಿ ಬರುವ ಮುಟ್ಟಿನ ನೋವು : ಇದು ತೀವ್ರವೂ ಹಲವು ಬಗೆಯ ತೊಂದರೆಗಳನ್ನು ಉಂಟು ಮಾಡುವ ರೀತಿಯಲ್ಲಿರಬಹುದು. ಮದುವೆಯಾಗಿ ಮಕ್ಕಳಾದ ಮೇಲೆ ಈ ನೋವು ಕಾಣಿಸಿಕೊಳ್ಳಬಹುದು. ಹಲವರು ಇಂಥ ನೋವನ್ನು ಹಿಂದೆಂದೂ ಅನುಭವಿಸಿ ಇರದಿರಬಹುದು. ಈ ಪ್ರಾಯದಲ್ಲಿ ಬರುವ ನೋವನ್ನು ಕಡೆಗಣಿಸಬಾರದು. ಆ ಕೂಡಲೇ ಹೊಟ್ಟೆಯ ಸ್ಕ್ಯಾನ್ ಮಾಡುವುದು ಅತೀ ಅಗತ್ಯ. ಯಾಕೆಂದರೆ ಮಧ್ಯವಯಸ್ಸಿನ ಹೊಟ್ಟೆಯ ನೋವಿಗೆ ಗರ್ಭಕೋಶದ ಗೆಡ್ಡೆ, ಅಂಡಾಶಯದ ಗುಳ್ಳೆ, ಎಂಡೋಮೆಟಿಯೋಸಿಸ್ ಎನ್ನುವ ತೊಂದರೆಗಳು ಕಾರಣವಾಗಿರಲೂಬಹುದು.
ಪರಿಹಾರ : ಎರಡು ವಿಧಗಳ ಹೊಟ್ಟೆನೋವುಗಳಿಗೆ ಹೋಮಿಯೋಪಥಿ ಅತ್ಯುತ್ತಮ ಪರಿಹಾರ ನೀಡಬಲ್ಲದು. ಉದಾಹರಣೆಗೆ ಹದಿಹರೆಯದ ಹೊಟ್ಟೆನೋವು, ವಾಂತಿಭೇದಿ, ಆಯಾಸಗಳನ್ನು ಯಾವುದೋ ನೋವು ನಿವಾರಕ ಮಾತ್ರೆಗಳನ್ನು ನೀಡದೇ, ಅಡ್ಡ ಪರಿಣಾಮಗಳು ಇಲ್ಲದೇ ಗುಣಪಡಿಸಬಹುದು. ಕಾಲೇಜಿಗೆ ಹೋಗುವವರು ರಜೆ ಮಾಡಬೇಕಾಗಿಯೂ ಬರುವುದಿಲ್ಲ. ಹೋಮಿಯೋಪಥಿಯಲ್ಲಿ 20 ಕ್ಕಿಂತಲೂ ಹೆಚ್ಚು ಔಷಧಿಗಳು ಮುಟ್ಟಿನ ತೊಂದರೆಗಳನ್ನು ಗುಣಪಡಿಸಲೆಂದೇ ಇವೆ. ಇಷ್ಟು ಔಷಧಗಳು ಬೇರೆ ಯಾವುದೇ ವೈದ್ಯಕೀಯ ಪದ್ಧತಿಯಲ್ಲೂ ಇರುವುದಿಲ್ಲ. ಮಧ್ಯವಯಸ್ಕರಲ್ಲಿ ಬರುವ ಮುಟ್ಟಿನ ನೋವಿಗೆ ಕಾರಣವಾಗಿರುವ ಸಾಧ್ಯತೆಯನ್ನು ಕಂಡುಹಿಡಿದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕಾಗಬಹುದು. ಉದಾಹರಣೆಗೆ ಗರ್ಭಕೋಶದಲ್ಲಿ ಗಡ್ಡೆ ಇದ್ದರೆ ಶಸ್ತ್ರಚಿಕಿತ್ಸೆ ಇಲ್ಲದೆ ಹೋಮಿಯೋಪಥಿ ಔಷಧಿ ಮೂಲಕ ಕಡಿಮೆ ಮಾಡಬಹುದು. ಅಂಡಾಶಯದ ತೊಂದರೆಯನ್ನು ಶಮನ ಮಾಡಬಹುದು. ಮುಟ್ಟಿನ ಸಮಯದಲ್ಲಿ ಕೋಪ, ಬೇಸರ, ದುಃಖ, ಖಿನ್ನತೆ ಇತ್ಯಾದಿಗಳನ್ನು ಕಾಣಬಹುದು. ಹೋಮಿಯೋಪಥಿಯಲ್ಲಿ ಇದಕ್ಕೆ ಉತ್ತಮ ಔಷಧಿಗಳಿವೆ. ಒಟ್ಟಿನಲ್ಲಿ ಮುಟ್ಟಿನ ನೋವಿಗೆ ಹೋಮಿಯೋಪಥಿ ನೀಡುವ ಪರಿಹಾರವು ಪರಿಪೂರ್ಣ ಮತ್ತು ಶಾಶ್ವತವಾಗಿದೆ.
ಬರಹ : ಡಾ. ಪ್ರವೀಣ್ ರಾಜ್ ಆಳ್ವ
ಕೆನರಾ ಹೊಮಿಯೋ ಕ್ಲಿನಿಕ್ ಮಂಗಳೂರು
9448483214

















































































































