ಭೂತದ ನೆನಪಿಲ್ಲದ ವರ್ತಮಾನ ಭವಿಷ್ಯದ ಕಲ್ಪನೆ ಮಾಡಲಾರದು,ನೆಲದಲ್ಲಿ ಬೇರಿಳಿಸದ ವೃಕ್ಷ ಆಕಾಶದಲ್ಲಿ ಕೊಂಬೆಗಳನ್ನು ಚಾಚಲಾರದು ಎನ್ನುವ ವಸ್ತುಸ್ಥಿತಿ ನಮಗಿರಬೇಕು.ನಾವು ನಿಸರ್ಗದ ಕೂಸು,ಈ ಪ್ರಕೃತಿ ನಮ್ಮ ಆಡಂಬೋಲ. ನಮ್ಮ ಸಾಂಸ್ಕೃತಿಕ ಪ್ರಜ್ಞೆ, ಪಾರಂಪರಿಕ ಮೌಲ್ಯ, ನಾಗರಿಕತೆಯ ಅರಿವು, ಆಯುರ್ವೇದ ಸ್ಥಾಪಿತ ಆರೋಗ್ಯ ಸೂತ್ರಗಳು, ಜನಪದದ ಆಚರಣೆ, ಗುರುಹಿರಿಯರ ಜೀವನಾದರ್ಶ, ಸಂತರ ಪಥದರ್ಶನ, ದಾರ್ಶನಿಕರ ನಿರೂಪ….ಹೀಗೆ ಭಾರತೀಯ ಮಣ್ಣಲ್ಲಿ ಕಣ್ಣಾಗಿರುವ ಸಾವಿರದ ಸಾವಿರಸಾವಿರ ಜೀವನ ಪದ್ಧತಿಯ ಅಸಂಖ್ಯ ಎಳೆ ಎಳೆಯ ಸದ್ವಿಚಾರಗಳು, ಸದ್ವೃತ್ತದ ಔನ್ನತ್ಯ ನಮ್ಮ ಬದುಕಿನ ಭಾಗವಾಗಬೇಕು.
ಕವಲು ಹಾದಿಯಲ್ಲಿ ನಿಂತ ನಾವೀಗ ಅಂತರಂಗಕ್ಕೆ ಕಿವಿಕೊಡಬೇಕು. ನಮ್ಮ ನಡೆ-ನುಡಿ, ಆಚಾರ-ವಿಚಾರ, ಹಾವ-ಬಾವ, ಆಹಾರ-ವಿಹಾರ, ವಿಧಿ-ನಿಷೇಧ…ಎಲ್ಲವುಗಳ ಬಗೆಗಾಗಿನ ಪರಿಕಲ್ಪನೆಯನ್ನು ಪುನರ್ ವ್ಯಾಖ್ಯಾನಿಸಬೇಕು.
ಆತ್ಯಂತಿಕ ಸತ್ಯದ ಸ್ವರೂಪ, ಅಲ್ಲಿರುವ ಗಟ್ಟಿತನದ ಮಾನಕೀಕರಣ, ತಲೆಮಾರುಗಳಿಂದ ಆಚರಿಸಿ ಅನುಸರಿಸಿ ಅನುಭವಿಸಿದ ಗುಣಾತ್ಮಕ ಪರಿಣಾಮ ಆಯುರ್ವೇದದ ಆಹಾರ ಪದ್ಧತಿಯ ಪ್ರತಿ ಪದಗಳಲ್ಲಿ ಪ್ರತಿಫಲಿಸಿದೆ.
“ಆಹಾರ” ಜನರ ಜೀವನ ನಿರ್ವಹಣೆಗೆ ಇಂಧನವಾಗಿ,ಆರೋಗ್ಯ ಕಾಪಾಡಲು ಔಷಧವಾಗಿ ಮತ್ತು ಧನಾತ್ಮಕ ಆರೋಗ್ಯದ ಮುಖೇನ ರೋಗರುಜಿನಗಳಿಂದ ಮುಕ್ತವಾದ ಬದುಕು ನಡೆಸಲು ಪ್ರಕೃತಿ ನಮಗಿತ್ತ ಅನನ್ಯ ಕೊಡುಗೆ.
ಆಹಾರದ ವಿಧ:
ನಾವು ಸೇವಿಸುವ ಆಹಾರವು ವಿವಿಧ ರೀತಿಯಲ್ಲಿ ಹುರಿದ,ಕರಿದ,ಬೇಯಿಸಿದ,ಕಾಯಿಸಿದ ಹಸಿಯಾದ,ಬಿಸಿಯಾದ ತರವಾಗಿದ್ದು ಮುಖ್ಯವಾಗಿ ಈ ರೀತಿಯಾಗಿ ವಿಭಾಗಿಸಲಾಗಿದೆ.
ಭೋಜ್ಯ: ಅನಂದವಾಗಿ ಸವಿದು ಉಣ್ಣುವ ಆಹಾರ, ಉದಾ: ಹಬ್ಬದೂಟ
ಭಕ್ಷ್ಯ: ಕಚ್ಚಿ ಅಗಿದು ನುಂಗುವ ಆಹಾರ,ಉದಾ: ಹೋಳಿಗೆ
ಚರ್ವ್ಯ: ಜಗಿದು ತಿನ್ನುವ ಆಹಾರ,ಉದಾ: ಹಪ್ಪಳ,ಚಕ್ಕುಲಿ
ಲೇಹ್ಯ: ನಾಲಿಗೆಯಿಂದ ನೆಕ್ಕುವ ಆಹಾರ, ಉದಾ:ಜೇನುತುಪ್ಪ
ಚೂಸ್ಯ: ಚೀಪುತ್ತಾ ಸವಿಯುವ ಆಹಾರ,ಉದಾ: ಮಾವಿನ ಹಣ್ಣು
ಪೇಯ: ಕುಡಿಯುವ ದ್ರವಪದಾರ್ಥದ ಆಹಾರ
ಆಹಾರ ವರ್ಗ:
ಪ್ರಕೃತಿಯ ಮಡಿಲಲ್ಲಿ ದೊರಕುವ ಸಾವಯವ ತಾಜಾ ಆಹಾರ ಪದಾರ್ಥಗಳನ್ನು ಬೇರೆಬೇರೆ ವರ್ಗಗಳಾಗಿ ವಿವರಿಸಿದ ಉಲ್ಲೇಖ ಆಯುರ್ವೇದದಲ್ಲಿ ಸ್ಪಷ್ಟವಾಗಿದೆ.
ಶೂಕಧಾನ್ಯ ವರ್ಗ: ಏಕದಳ/ಸಿರಿಧಾನ್ಯಗಳು
ಶಮೀಧಾನ್ಯ ವರ್ಗ:ದ್ವಿದಳ ಧಾನ್ಯಗಳು
ಮಾಂಸ ವರ್ಗ:ನೆಲ ಜಲದ ಮಾಂಸ
ಶಾಕ ವರ್ಗ: ತರಕಾರಿಗಳು
ಫಲ ವರ್ಗ:ಹಣ್ಣುಹಂಪಲು
ಹರೀತ ವರ್ಗ:ಹಸಿರು ಸೊಪ್ಪು
ಮದ್ಯ ವರ್ಗ: ಹುಳಿಬರಿಸಿ ತಯಾರಿಸಿದ ಮದ್ಯಗಳು
ಜಲ ವರ್ಗ:ವಿವಿಧ ಮೂಲದ ಶುದ್ಧ ನೀರು
ಗೋರಸ ವರ್ಗ:ಹಾಲು ಮತ್ತು ಹಾಲಿನ ಉತ್ಪನ್ನಗಳು
ಇಕ್ಷು ವರ್ಗ: ಕಬ್ಬಿನ ಹಾಲಿನಿಂದ ತಯಾರಿಸಿದ ಉತ್ಪನ್ನಗಳು
ಕೃತಾನ್ನ ವರ್ಗ: ಅಕ್ಕಿ ಮತ್ತು ಗಿಡಮೂಲಿಕೆಗಲಿಂದ ತಯಾಸಿದ ಪೇಯ,ವಿಲೇಪಿ,ಮಂಡ,ಯೂಷ ಇತ್ಯಾದಿ
ಆಹಾರೋಪಯೋಗಿ ವರ್ಗ: ಅಡುಗೆಗೆ ಬಳಸುವ ವಿವಿಧ ತೈಲಗಳು,ಹಿಪ್ಪಲಿ, ಶುಂಠಿ ಇತ್ಯಾದಿ
ಆಹಾರದ ಮಾರ್ಗಸೂಚಿಗಳು:
ಬದುಕಿನಲ್ಲಿ ಪ್ರತಿಯೊಂದರಲ್ಲೂ ಕಾಣಸಿಗುವ ಮಾರ್ಗಸೂಚಿಗಳಂತೆ ತಿನ್ನುವ ಆಹಾರ,ಉಣ್ಣುವ ಭೋಜನಕ್ಕೂ ನಿರ್ದಿಷ್ಟ ವಿಧಿ ನಿಷೇಧಗಳಿವೆ. ಸರಿಯಾದ ಕ್ರಮದಲ್ಲಿ ಆಹಾರದ ಮಾರ್ಗಸೂಚಿಗಳನ್ನು ಅನುಸರಿಸಿದರೆ ರೋಗಮುಕ್ತ ಸ್ವಾಸ್ಥ್ಯಯುಕ್ತ ಜೀವನ ನಮ್ಮದಾಗುತ್ತದೆ.
* ಕಾಲೇ ಭೋಜನ – ಹೊತ್ತಿಗೆ ಸರಿಯಾಗಿ ಭೋಜನ ಮಾಡಬೇಕು
* ಸಾತ್ಮ್ಯ ಭೋಜನ – ನಾಲಿಗೆ, ದೇಹ ಹಾಗೂ ಮನಸ್ಸಿಗೆ ಒಗ್ಗುವ ಭೋಜನ
* ಹಿತ ಭೋಜನ – ಮೈಮನಕ್ಕೆ ಹಿತವಾದ ಆಹಾರ
* ಶುಚಿ ಭೋಜನ – ಶುಚಿಯಾಗಿ ತಯಾರಿಸಿದ ಆಹಾರ
* ಸ್ನಿಗ್ಧ ಭೋಜನ – ಮೃದು ಮತ್ತು ಸ್ನಿಗ್ದವಾದ ಪದಾರ್ಥಗಳಿಂದ ಸಿದ್ಧಪಡಿಸಿದ ಆಹಾರ
* ಉಷ್ಣ ಭೋಜನ – ಬಿಸಿಯಿರುವ ಭೋಜನ
* ಲಘು ಭೋಜನ – ಜೀರ್ಣಕ್ರೀಯೆಗೆ ಸುಲಭವಾದ ಭೋಜನ
* ತನ್ಮನ ಭೋಜನ – ತಾನು ಮನಕ್ಕೆ ಆಹ್ಲಾದ ನೀಡುವ ಭೋಜನ
* ಷಡ್ರಸ ಭೋಜನ – ಆರು ರಸಗಳಿಂದ ಕೂಡಿದ ಭೋಜನ
* ಮಧುರಪ್ರಾಯ ಭೋಜನ – ಮೊದಲು ಸಿಹಿಯಾದ ರಸದಿಂದ ತೊಡಗುವ ಭೋಜನ
* ನಾತಿದ್ರುತ ಭೋಜನ – ಗಡಿಬಿಡಿ ಇಲ್ಲದ ಸಾವಧಾನದ ಭೋಜನ ಸೇವನೆ
* ನಾತಿವಿಳಂಬಿತ ಭೋಜನ – ಅತೀ ನಿದಾನವಾಗಿ,ವಿಳಂಬವಾಗಿ ಸಹ ಊಟ ಮಾಡಬಾರದು
* ಸ್ನಾತ – ಸ್ನಾನ ಮಾಡಿ ಶುಚಿಯಾಗಿ ಬಂದು ಭೋಜನ ಸೇವನೆ
* ಕ್ಷುತ್ ವಾನ್ – ಸರಿಯಾಗಿ ಹಸಿವು ಅನುಭವಕ್ಕೆ ಬಂದ ನಂತರವೇ ಭೋಜನ
* ಧೌತ ಕರಪಾದಾನನ – ಕೈ ಕಾಲು ಮುಖ ತೊಳೆದ ಬಳಿಕವೇ ಭೋಜನ ಸೇವನೆ
* ಪಿತೃ- ದೇವ ತರ್ಪಣ – ರೂಢಿಯ ಪಾಲನೆ
* ಅತಿಥಿ – ಬಾಲ – ಗುರು ತರ್ಪಣ- ಅತಿಥಿ,ಮಕ್ಕಳು, ಗುರುಹಿರಿಯರಿಗೆ ಬಡಿಸಿದ ನಂತರ ಭೋಜನ
* ಅನಿಂದಾ – ಊಟವನ್ನು ನಿಂದಿಸದೆ,ಆಕ್ಷೇಪಿಸದೆ, ಹೀಯಾಳಿಸದೆ ಗೌರವಿಸಿ ಸೇವಿಸಬೇಕು
* ಮೌನ – ಆದ್ಯಂತ ಭೋಜನ ಕಾಲದಲ್ಲಿ ಮೌನವಾಗಿದ್ದು ಆಹಾರ ಸೇವಿಸಬೇಕು.
ಆಹಾರವಿಧಿ ವಿಶೇಷಾಯತನ:
ಆಹಾರದ ಸಂಬಂಧ ವ್ಯಕ್ತಿಯ ಮೇಲೆ ಬೇರೆಬೇರೆ ಕಾರಣಗಳಿಗಾಗಿ ವ್ಯತ್ಯಯವಾಗುತ್ತದೆ. ಅದನ್ನೇ ಆಯುರ್ವೇದ ಶಾಸ್ತ್ರ ಆಹಾರದ ಬಗೆಗಾಗಿನ ಆಯತನವೆಂದು ಗುರುತಿಸಿ ಅದರ ಪ್ರಾಮುಖ್ಯತೆಯ ವಿವರಣೆ ಕೊಟ್ಟಿದೆ.
ಪ್ರಕೃತಿ: ಆಹಾರ ಗುರು-ಲಘು, ಶೀತ-ಉಷ್ಣ, ಸ್ನಿಗ್ಧ-ರೂಕ್ಷ ಗುಣಲಕ್ಷಣಗಳನ್ನು ಹೊಂದಿದ್ದು ಪಚನಕ್ರೀಯೆಯಲ್ಲಿ ತನ್ನದೇ ಪ್ರಭಾವವನ್ನು ಬೀರುತ್ತದೆ.
ಉದಾ:ಹಾಲು,ಮೊಸರು,ಮಾಂಸ ಗುರುಗುಣಗಳಿಂದ ಕೂಡಿದ್ದು ಜೀರ್ಣಕ್ರೀಯೆಗೆ ಕಷ್ಟವಾಗುತ್ತದೆ.
ಹೆಸರುಕಾಳು ಮೊದಲಾದ ಧಾನ್ಯಗಳು ಬೇಗ ಜೀರ್ಣವಾಗುತ್ತವೆ.
ಕರಣ: ಕೆಲವು ಆಹಾರ ದ್ರವ್ಯಗಳನ್ನು ಸಂಸ್ಕರಣ ಮಾಡಿ ಉಪಯೋಗಿಸಬೇಕು ಆದರೆ ಕೆಲವನ್ನು ಮಾಡಲೇಬಾರದು.
ಉದಾ: ಮೊಸರನ್ನು ಕಾಯಿಸಿ ಸೇವಿಸಬಾರದು.
ಸಂಯೋಗ: ಒಂದಕ್ಕಿಂತ ಹೆಚ್ಚಿನ ದ್ರವ್ಯಗಳನ್ನು ಬಳಸಿ ಆಹಾರ ತಯಾರಿಸುವಾಗ ಅವುಗಳ ಗುಣವೃದ್ಧಿಯಾಗುವಂತೆ ಸಂಯೋಜಿಸಬೇಕು.
ರಾಶಿ: ಸೇವಿಸಬೇಕಾದ ಆಹಾರದ ಪ್ರಮಾಣ ಆ ವ್ಯಕ್ತಿಯ ಜೀರ್ಣ ಶಕ್ತಿ ಮತ್ತು ತಿನ್ನುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ.
ದೇಶ:ಯಾವ ಪ್ರದೇಶದಲ್ಲಿರುವ ವ್ಯಕ್ತಿ ಯಾವ ಆಹಾರಕ್ಕೆ ಒಗ್ಗಿಹೋಗಿದ್ದಾನೋ ಅದು ಸೂಕ್ತ ಮತ್ತು ಆಯಾಯ ಪ್ರದೇಶದಲ್ಲಿ ಬೆಳೆಯುವ ಆಹಾರ ಪದಾರ್ಥಗಳ ಗುಣಲಕ್ಷಣಗಳು ಅಲ್ಲಿನ ಮಣ್ಣಿನ ಗುಣಕ್ಕೆ ನಿರ್ಭರವಾಗಿವೆ.
ಕಾಲ:ದೈನಂದಿನ,ಋತು ಅನುಸಾರ,ಜೀರ್ಣಾವಸ್ಥೆ ಮುಂತಾದ ವಿಷಯಗಳ ಮೇಲೆ ಸೇವಿಸುವ ಆಹಾರದ ಕಾಲ ನಿಗದಿಮಾಡಬೇಕು.
ಉಪಯೋಗಸಂಸ್ಥಾ: ಆಹಾರದ ಮಾರ್ಗಸೂಚಿಗಳು ಏನೆಲ್ಲಾ ಇವೆಯೋ ಅವೆಲ್ಲವನ್ನು ಚಾಚೂ ತಪ್ಪದೆ ಕಡ್ಡಾಯವಾಗಿ ಪಾಲಿಸಬೇಕು.
ಉಪಯೋಕ್ತಾ:ಆಹಾರ ಸೇವಿಸುವ ವ್ಯಕ್ತಿ ತನಗೆ ಅಭ್ಯಾಸವಿರುವ,ಭಾಧಕವಿರದ, ಒಗ್ಗುವ, ಇಷ್ಟವಿರುವ ಆಹಾರ ಪದಾರ್ಥಗಳನ್ನೇ ಇಷ್ಟಪಟ್ಟು ಆನಂದಿಸಿ ತಿನ್ನಬೇಕು.
ದ್ವಾದಶ ಅಶನ ವಿಧಿ:
ಆಚಾರ್ಯ ಸುಶ್ರುತರು ಹನ್ನೆರಡು ಭೋಜನ ವಿಧಿಯನ್ನು ನಿರ್ದೇಶಿಸಿದ್ದು ಅದು ಪ್ರಮುಖವಾಗಿ ರೋಗ ಪ್ರಶಮನ ಹಾಗೂ ಪ್ರತಿಬಂಧಕವಾಗಿ ಹೆಚ್ಚು ಬೆಳಕು ಚೆಲ್ಲುತ್ತದೆ.
ಶೀತ ಆಹಾರ – ಶರೀರದಲ್ಲಿ ಪಿತ್ತದೋಷ ಪ್ರಕೋಪವಾದಾಗ
ಉಷ್ಣ ಆಹಾರ – ಕಫ ವಾತ ದೋಷ ವಿಕಾರದಲ್ಲಿ
ಸ್ನಿಗ್ಧ ಆಹಾರ – ವಾತರೋಗದಲ್ಲಿ
ರೂಕ್ಷ ಆಹಾರ – ಕಫಜ ವಿಕಾರಗಳಲ್ಲಿ
ದ್ರವ ಆಹಾರ – ದೇಹದಲ್ಲಿ ದ್ರವಾಂಶದ ಕೊರತೆಯಾದಲ್ಲಿ
ಶುಷ್ಕ ಆಹಾರ – ಜಿಡ್ಡು/ ಎಣ್ಣೆಯ ಅಂಶ ಶರೀರದಲ್ಲಿ ಹೆಚ್ಚು ಗೋಚರವಾದಲ್ಲಿ
ಏಕ ಕಾಲಿಕಾ ಆಹಾರ – ಅಜೀರ್ಣ,ಹಸಿವು ಕಡಿಮೆಯಾದ ಪಕ್ಷದಲ್ಲಿ ಒಂದೊತ್ತಿನ ಊಟ.
ದ್ವಿ ಕಾಲಿಕಾ ಆಹಾರ – ಸ್ವಸ್ಥವಾಗಿದ್ದಾಗ
ಔಷಧಯುಕ್ತ ಆಹಾರ – ರೋಗಿಯ ಬಲ ಕಡಿಮೆಯಾಗಿದ್ದಾಗ ಔಷಧವನ್ನು ಆಹಾರದ ಜೊತೆ ಸೇವಿಸುವುದು
ಮಾತ್ರಾಹೀನ ಆಹಾರ – ಪಾಚಕಾಗ್ನಿಯ ಬಲ ಕಡಿಮೆಯಿದ್ದಾಗ ಪ್ರಮಾಣಕ್ಕಿಂತ ಕಡಿಮೆ ತಿನ್ನುವುದು
ವೃತ್ತಿ ಪ್ರಯೋಜಕ ಆಹಾರ – ಎಲ್ಲ ಪೋಷಕಾಂಶಗಳಿಂದ ಕ್ರೋಢೀಕೃತ ಸಮತೋಲಿತ ಆಹಾರ
ವಿರುದ್ಧ ಆಹಾರ:
ಕೆಲವೊಮ್ಮೆ ಕೆಲವು ಆಹಾರ ಪದಾರ್ಥಗಳು ನಿರ್ಧಿಷ್ಟ ವಿಷಯ ವಿಚಾರಗಳಿಂದಾಗಿ ಪರಸ್ಪರ ವಿರೋಧಿಗಳಾಗಿ ಪರಿಣಮಿಸಿ ಶರೀರದ ಮೇಲೆ ವಿಪರೀತ ವಿಷಾಕ್ತ ಪರಿಣಾಮ ಬೀರುತ್ತದೆ.ಹೊಸ ರೋಗದ/ಸಮಸ್ಯೆಯ ಜನ್ಮಕ್ಕೆ ಕಾರಣವಾಗುತ್ತದೆ.ಇದನ್ನೇ ಆಯುರ್ವೇದ ಅಷ್ಠಾದಶ ವಿರುದ್ಧ ಆಹಾರ ಎಂದು ಘೋಷಿಸಿದ್ದು.
* ದೇಶ ವಿರುದ್ಧ – ಉಷ್ಣಪ್ರದೇಶದಲ್ಲಿ ವಾಸಿಸುವವರು ಮದ್ಯಪಾನ ಮಾಡುವುದು
* ಕಾಲ ವಿರುದ್ಧ – ಚಳಿಗಾಲದಲ್ಲಿ ಅತಿತಣ್ಣಗಿನ ಪದಾರ್ಥಗಳನ್ನು ಸೇವಿಸುವುದು
* ಅಗ್ನಿ ವಿರುದ್ಧ- ಹೊಟ್ಟೆಹಸಿವು ಜೋರಾಗಿದ್ದಾಗ ಸ್ವಲ್ಪ ತಿನ್ನುವುದು ಮತ್ತೆ ಹಸಿವಿಲ್ಲದಿದ್ದರೂ ಆಕಂಠ ಭೋಜನ
* ಮಾತ್ರಾವಿರುದ್ಧ – ಹಸುವಿನ ತುಪ್ಪ ಮತ್ತು ಜೇನು ತುಪ್ಪವನ್ನು ಸಮಪ್ರಮಾಣದಲ್ಲಿ ಸೇವಿಸುವುದು
* ಸಾತ್ಮ್ಯವಿರುದ್ಧ- ಶರೀರಕ್ಕೆ ಒಗ್ಗದ ಹಿಡಿಸದ ಆಹಾರ ಸೇವನೆ
* ದೋಷ ವಿರುದ್ಧ – ವಾತದೋಷದ ಉಪದ್ರವ ಇರುವಾಗ ಪುನಃ ಕಷಾಯರಸ ಪದಾರ್ಥ ಸೇವನೆ
* ಸಂಸ್ಕಾರ ವಿರುದ್ಧ – ಜೇನುತುಪ್ಪವನ್ನು ಕಾಯಿಸಿ ಸೇವಿಸುವುದು
* ವೀರ್ಯ ವಿರುದ್ಧ – ಉದಾ: ಮೀನು ಮತ್ತು ಹಾಲು ಜೊತೆಯಾಗಿ ಸೇವಿಸುವುದು
* ಕೋಷ್ಠ ವಿರುದ್ಧ – ಮಲಬದ್ಧತೆ ಇರುವಾಗ ಪುನಃ ಅದಕ್ಕೆ ಕಾರಣವಾಗುವ ಆಹಾರ ಸೇವನೆ
* ಅವಸ್ಥಾ ವಿರುದ್ಧ – ಸ್ವಂತ ಆರೋಗ್ಯದ ಅವಸ್ಥೆಯ ಆಗುಹೋಗುಗಳ ಅರಿವಿಲ್ಲದೆ ಅರಿವಿಲ್ಲದ ಪದಾರ್ಥದ ಸೇವನೆ
* ಕ್ರಮ ವಿರುದ್ಧ – ಜೇನುತುಪ್ಪ ಸೇವಿಸಿದ ಕೂಡಲೇ ಬಿಸಿನೀರು ಕುಡಿಯುವುದು
* ಪರಿಹಾರ ವಿರುದ್ಧ – ಬಿಸಿ ಖಾರ ಪದಾರ್ಥ ತಿಂದ ಬೆನ್ನಿಗೇ ತಂಪು ಪಾನೀಯ ಸೇವಿಸುವುದು.
* ಉಪಚಾರ ವಿರುದ್ಧ – ಬಿಸಿಬಿಸಿ ಬಿಸಿನೀರು ಸ್ನಾನ ಮಾಡಿದ ಕೂಡಲೇ ತಣ್ಣೀರು ಕುಡಿಯುವುದು.
* ಪಾಕ ವಿರುದ್ಧ – ಅರೆಬೆಂದ,ಅತಿಬೆಂದ, ಕರಟಿದ ಒಟ್ಟಾರೆ ಪಾಕ ಸರಿಯಿರದ ಆಹಾರ ಸೇವನೆ
* ಸಂಯೋಗ ವಿರುದ್ಧ – ಹುಳಿಯಾದ ಹಣ್ಣಿನ ರಸ ಹಾಲಿನೊಂದಿಗೆ ಬೆರೆಸಿ ಮಿಲ್ಕ್ ಶೇಕ್ ಮಾಡಿ ಕುಡಿಯುವುದು.
* ಹೃದಯ ವಿರುದ್ಧ – ಇಷ್ಟವಿಲ್ಲದ ಕಷಾಯ ಮಕ್ಕಳು ಕುಡಿದ ಹಾಗೆ. ಇಷ್ಟವಿಲ್ಲದ ಆಹಾರ ಸೇವನೆ ಕಷ್ಟಪಟ್ಟು.
* ಸಂಪತ ವಿರುದ್ಧ – ಗುಣಹೀನ ಕಳಪೆ ಗುಣಮಟ್ಟದ ದ್ರವ್ಯಗಳಿಂದ ಆಹಾರ ತಯಾರಿಸುವುದು.ವೆಜಿಟೇಬಲ್ ಎಣ್ಣೆ ಬಳಸಿ ಕೇಸರಿಬಾತ್ ಮಾಡಿದಂತೆ
* ವಿಧಿ ವಿರುದ್ಧ – ಆಹಾರ ಸೇವನಾವಿಧಿ ಮಾರ್ಗಸೂಚಿಗಳ ಉಲ್ಲಂಘನೆ
ಪಥ್ಯಾಪಥ್ಯ ವಿವೇಚನೆ:
ಸಹಸ್ರಸಹಸ್ರ ಸಂಖ್ಯೆಯ ಸ್ರೋತಸ್ಸುಗಳಿಂದ ಸ್ರಜಿಸಿದ ಶರೀರ ಇದು. ಪ್ರತಿಯೊಂದು ಸ್ರೋತಸ್ಸಿನ ಪಥ ಅವರೋಧ ಪ್ರತಿರೋಧಗಳು ಮುಕ್ತವಾದಾಗ ಸ್ವಾಸ್ಥ್ಯ ನಮ್ಮದಾಗುತ್ತದೆ. ಆ ಅದೇ ಪಥಗಳ ಆರೋಗ್ಯ ನಾವು ಸೇವಿಸುವ ಆಹಾರದ ಮೇಲೆ ನಿಂತಿದೆ,ಹಾಗಾಗಿ ಅದನ್ನೇ ಪಥ್ಯ ಎನ್ನುತ್ತೇವೆ.
ಶರೀರೋಪಚಯ,ಬಲ,ವರ್ಣ,ಸುಖ,ಓಜ,ತೇಜ,ಧೃತಿ, ಮೇಧಾ,ಪ್ರತಿಭಾ,ತುಷ್ಟಿ,ಪುಷ್ಟಿ,ಸೌಸ್ವರ್ಯ,
ಜೀವಿತ,ಆಯುಷ್ಯ….ಹೀಗೆ ಎಲ್ಲವೂ ನಾವು ಅನುಸರಿಸುವ ಪಥ್ಯಾಹಾರ ನಮಗೀಯುತ್ತದೆ. ಪಥ್ಯವನ್ನು ಪಾಲಿಸುವ ವ್ಯಕ್ತಿಗೆ ಔಷಧದ ಹಂಗಿಲ್ಲ ಮತ್ತು ಅಪಥ್ಯದ ಜೊತೆಗೆ ರಾಜಿಯಾದವನಿಗೆ ಮದ್ದುಕೊಟ್ಟರೂ ವ್ಯರ್ಥ.
ನಾವು ಏನಾಗುತ್ತೇವೆ,ನಮಗೇನಾಗುತ್ತದೆ ಮತ್ತು ಏಕೆ ಹೀಗೆ ರೋಗದ ಗೂಡಾಗುತ್ತೇವೆ ಎನ್ನುವುದು ನಾವು ತಿನ್ನುವ ಆಹಾರ ನಿರ್ಧರಿಸುತ್ತದೆ ಎಂದಾದಮೇಲೆ ಆಹಾರದ ಬಗ್ಗೆ ವಿಚಾರ ಅಗತ್ಯ ಮಾಡಲೇಬೇಕು. ಆಹಾರದ ಸತ್ ಆಚಾರದ ಕುರಿತು ಯೋಚಿಸಬೇಕು.
ತ್ರಿಕರಣಕ್ಕೆ ಒಪ್ಪುವ ಆಹಾರ ಸೇವನೆಯ ಮಾದರಿ ಕ್ರಮವಿಧಾನಗಳನ್ನು ಪಾಲಿಸೋಣ. ಸದಾಚಾರದರ ಆರೋಗ್ಯ ಮಾರ್ಗಸೂಚಿಗಳ ಮೂಲಕ ದೇಶ-ದೇಹವನ್ನು ಕಾಡುತ್ತಿರುವ ವೈರಾಣುಗಳನ್ನು ಗೆಲ್ಲೋಣ.ಹಿತವಾಗಿ ಮಿತವಾಗಿ ತಿನ್ನುತ್ತಾ, ರಾಗ ರೋಗಗಳ ಸವಾಲುಗಳನ್ನು ಮೆಟ್ಟುತ್ತಾ ಆನಂದಮಯ ಬದುಕು ಕಟ್ಟೋಣ.
ಡಾ.ಬುಡ್ನಾರು ವಿನಯಚಂದ್ರ ಶೆಟ್ಟಿ
9611497446
ನಿಕಟಪೂರ್ವ ಪ್ರಾಂಶುಪಾಲರು,
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು,ಮೂಡುಬಿದಿರೆ.
ಆಡಳಿತ ನಿರ್ದೇಶಕರು,
ಕ್ಷೇಮಧಾಮ ಆಯುರ್ವೇದ ಆಸ್ಪತ್ರೆ,
ಬ್ರಹ್ಮಾವರ,ಉಡುಪಿ