ತಾನು ಕೈಗೆತ್ತಿಕೊಂಡ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿಯೇ ನೆಮ್ಮದಿಯ ಉಸಿರು ಬಿಡುವ ಛಲವಂತ. ಸಮುದಾಯದ ಸೇವೆಗೆಂದೇ ಜನ್ಮ ತಳೆದರೋ ಎಂಬಂತೆ ಅರ್ಪಣಾ ಭಾವದಿಂದ ತನ್ನವರ ಏಳಿಗೆಗಾಗಿ ಟೊಂಕಕಟ್ಟಿ ದುಡಿಯುತ್ತಿರುವ ಸಂತೋಷ್ ವಿ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಅವರನ್ನು ಅಪರೂಪದ ಅಪರಂಜಿ ಎಂದರೂ ತಪ್ಪಾಗಲಾರದು. ಸಮಸ್ತ ಸಮುದಾಯ ಬಾಂಧವರ ಅಸ್ಮಿತೆಯ ಕೇಂದ್ರವಾಗಿ ಗುರುತಿಸಲ್ಪಡುವ ಮಹಾರಾಷ್ಟ್ರದ ಸಾಂಸ್ಕೃತಿಕ ನಗರವೆಂದೇ ಖ್ಯಾತಿವೆತ್ತ ಪುಣೆ ನಗರದಲ್ಲಿ ಇಂದು ತಲೆಯೆತ್ತಿ ನಿಂತ ಸುಂದರ ಸುಸಜ್ಜಿತ ಬಂಟರ ಭವನ ಆದರಣೀಯ ಸಂತೋಷ್ ಶೆಟ್ಟಿ ಅವರ ಸಂಘರ್ಷ, ಛಲ, ಪರಿಶ್ರಮ ಅರ್ಪಣಾ ಭಾವದ ಕತೆಯನ್ನು ಸಾರಿ ಹೇಳುತ್ತಿದೆ. ಹೀಗೆ ಸಿಧ್ಧಿ ಸಾಧನೆಗಳೆರಡೂ ಸಮನ್ವಯಗೊಂಡು ಪ್ರಖರ ತೇಜ ಹೊಂದಿದ ಬಂಟ ನಾಯಕ ಸಂತೋಷ್ ಶೆಟ್ಟಿಯವರು ಇಂದು ಮಹಾನಗರ ಹಾಗೂ ಹುಟ್ಟೂರಿನ ಹೆಮ್ಮೆಯ ಸಮಾಜ ಸೇವಕ, ಸಂಘಟಕ, ಸರ್ವ ಸಮಾಜ ಬಾಂಧವರೊಂದಿಗೆ ಸೌಹಾರ್ದ ಭಾವ ಹೊಂದಿರುವ ಪ್ರಭಾವಿ ನಾಯಕರಾಗಿ ನಿರ್ವಿವಾದಿತ ವ್ಯಕ್ತಿಯಾಗಿ ಆಕರ್ಷಿಸುತ್ತಾರೆ. ನೂರು ಜನರ ನಡುವೆ ಎದ್ದು ಕಾಣುವ ಗಟ್ಟಿ ಧೃಢ ವ್ಯಕ್ತಿತ್ವ ಹೊಂದಿದ ಇವರು ಕಠಿಣ ಪರಿಶ್ರಮಿ. ಇಂದು ಬಹುಶಃ ನಮ್ಮ ವಿಶ್ವ ಬಂಟ ನಾಯಕ ಐಕಳ ಅವರೊಂದಿಗೆ ತನ್ನ ಸಮುದಾಯದ ಏಳಿಗೆಗಾಗಿ ಅಹರ್ನಿಶಿ ಹೆಗಲೆಣೆಯಾಗಿ ದುಡಿಯುತ್ತಿರುವವರಲ್ಲಿ ಕುರ್ಕಿಲ್ ಬೆಟ್ಟು ಅವರೂ ಪ್ರಮುಖರು.
ಹೆಜಮಾಡಿ ಪಟೇಲರ ಮನೆ ದಿವಂಗತ ವಸಂತ ಶೆಟ್ಟಿ ಹಾಗೂ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಶ್ರೀಮತಿ ವಿನೋದಾ ವಿ ಶೆಟ್ಟಿ ದಂಪತಿಗೆ ಜನಿಸಿದ ಸಂತೋಷ್ ಬಾಲ್ಯದ ದಿನಗಳಿಂದಲೇ ಅಂತರ್ಮುಖಿ ಗಾಢ ಚಿಂತನೆಯ ಹುಡುಗನಾಗಿ ತನ್ನ ಮಾತಾಪಿತರ, ಬಂಧುಗಳ, ತನ್ನನ್ನು ನಂಬಿದ ಪರಿವಾರದ ಏಳಿಗೆಗೆ ತಾನೇನು ಮಾಡಬೇಕೆಂಬ ಪ್ರಾಯಕ್ಕೆ ಮೀರಿದ ಚಿಂತೆಯನ್ನು ಹೊಂದಿದ್ದರು. ನಾಲ್ಕು ಮಕ್ಕಳಿಗೆ ಹಿರಿಯನಾಗಿ ಹುಟ್ಟಿದ ತನ್ನ ಭವಿಷ್ಯದ ಗುರುತರ ಜವಾಬ್ದಾರಿಯ ಅರಿವಿದ್ದ ಬಾಲಕ ಸಂತೋಷ್ ಬಾಲ್ಯದ ದಿನಗಳಿಂಲೇ ಯಕ್ಷಗಾನ, ನಾಟಕ, ಏಕಪಾತ್ರಾಭಿನಯ ಮುಂತಾದ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದು ವಿದ್ಯಾರ್ಥಿ ದೆಸೆಯಲ್ಲಿ ಓಂ ಪ್ರತಿಭೆಗಳು ಕ್ರಮೇಣ ಪ್ರಕಟಗೊಳ್ಳುತ್ತಾ ಬಂದವು. ತಂದೆಯ ಅಕಾಲಿಕ ಮರಣದಿಂದ ಕಂಗೆಟ್ಟ ಬಾಲಕ ತನ್ನ ದೊಡ್ಡಮ್ಮನ ಪಾಲನೆ ಪೋಷಣೆಯಲ್ಲಿ ಬೆಳೆಯುತ್ತಾ ಇನ್ನ ಮತ್ತು ಸುರತ್ಕಲ್ ಚೇಳಾರ್ ನಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ನಂತರ ಸುರತ್ಕಲ್ ಕೆ.ಆರ್.ಇ.ಸಿ ಯಲ್ಲಿ ಫ್ರೌಢ ಶಿಕ್ಷಣ ಪಡೆಯುತ್ತಿರುವ ಹೊತ್ತಿಗೇ ತನ್ನ ವಿಶಿಷ್ಟ ನಾಯಕತ್ವ ಗುಣಗಳನ್ನು ಪ್ರದರ್ಶಿಸುತ್ತಾ ಅಧ್ಯಾಪಕರಿಂದ ಶಹಬ್ಬಾಸ್ ಗಿರಿ ಪಡೆದರು. ಆದರೆ ಬಹಳ ಬೇಗನೆ ಸಂಸಾರದ ಜವಾಬ್ದಾರಿ ತನ್ನ ಹೆಗಲೇರಿದ ಕಾರಣ ಹುಟ್ಟೂರು ಬಿಟ್ಟು ಪುಣೆ ನಗರ ಸೇರಿ ತನ್ನ ಚಿಕ್ಕಪ್ಪನ ಹೋಟೆಲಿನಲ್ಲಿ ದುಡಿಯುತ್ತಲೇ ಸ್ಥಾನೀಯ ವಾಡಿಯಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ ಪ್ರತಿಭಾವಂತ ಹಠವಾದಿ ಶೆಟ್ಟಿ ಅವರು ಅಲ್ಲಿನ ಪ್ರತಿಷ್ಠಿತ ಫರ್ಗ್ಯುಸನ್ ಕಾಲೇಜಿನಿಂದ ಪದವಿಧರರಾಗಿ ಹೊರಬಂದರು. ತನ್ನ ಪದವಿ ಶಿಕ್ಷಣ ಮುಗಿಯುತ್ತಲೇ ತನ್ನ ಬದುಕಿನ ಬಂಡಿ ಎಳೆಯಬೇಕಾದ ಅನಿವಾರ್ಯತೆಯಲ್ಲಿ ಅವರಿವರಿಂದ, ಬಂಧುಗಳಿಂದ ಹಣ ಹೊಂದಿಸಿಕೊಂಡು ತನ್ನ “ಸುಧಾಮ” ಹೆಸರಿನ ಹೋಟೆಲೊಂದನ್ನು ಆರಂಭಿಸಿ ಬಹಳ ಏಕಾಗ್ರತೆ ಪರಿಶ್ರಮದಿಂದ ನಡೆಸತೊಡಗಿ ಕ್ರಮೇಣ ತುಸು ಸಮಾಧಾನದ ನಿಟ್ಟುಸಿರು ಬಿಡತೊಡಗಿದರು.
ಮುಂದೆ ತನ್ನ ಕಠಿಣ ಪರಿಶ್ರಮ ಹಾಗೂ ತಾನು ನಂಬಿಕೊಂಡು ಬಂದ ದೈವದೇವರ, ಗುರು ಹಿರಿಯರ ಆಶೀರ್ವಾದ ಬಲದಿಂದ ಹೋಟೆಲು ಉದ್ಯಮದಲ್ಲಿ ಯಶಸ್ಸು ಕಂಡು ಕೊರೋನೆಟ್ ಎಂಬ ತ್ರೀಸ್ಟಾರ್ ಹೋಟೆಲನ್ನು ಆರಂಭಿಸಿದರು. ಜೊತೆಗೆ ಸುಧಾಮ ರೆಸಿಡೆನ್ಸಿ, ಕಲ್ಪನಾ, ಸ್ವಾಗತ್ ಮೊದಲಾದ ಹೋಟೆಲುಗಳನ್ನು ನಡೆಸುತ್ತಲೇ ಮಹಾಗಣಪತಿ ಡೆವಲಪರ್ಸ್ ಪಡುಬಿದ್ರಿ ಇವುಗಳ ಮಾಲಿಕರಾಗಿ ಅದೆಷ್ಟೋ ದುಡಿಯುವ ಕೈಗಳಿಗೆ ಅನ್ನದಾತರಾಗಿ ಪ್ರಕಾಶಿಸತೊಡಗಿದರು. ಇದರ ಜೊತೆ ಜೊತೆಗೆ ಸಮಾಜ ಸೇವೆಯ ಹಸಿವು ಇವರನ್ನು ಬಂಟರ ಸಂಘ ಪುಣೆಯ ಕಡೆಗೆ ಸೆಳೆದೊಯ್ಯಿತು. ಮೊತ್ತ ಮೊದಲು ಜನಸಂಪರ್ಕ ಕಾರ್ಯದ ಜವಾಬ್ದಾರಿ ವಹಿಸಿ ತನ್ನ ವಿಚಕ್ಷಣ ಕಾರ್ಯ ಸಾಮರ್ಥ್ಯ ಪ್ರದರ್ಶಿಸಿದ ಶೆಟ್ಟರು ಅನತಿ ಅವಧಿಯಲ್ಲಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಏರಿದವರು ಬಳಿಕ ಹಿಂದಿರುಗಿ ನೋಡಿದವರಲ್ಲ. ಬಂಟರ ಸಂಘದ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಸ್ಥಾನೀಯ ಬಂಟರ ವೈಯಕ್ತಿಕ, ವ್ಯಾವಹಾರಿಕ ಸಮಸ್ಯೆಗಳಿಗೆ ಸ್ಫಂದಿಸುತ್ತಲೇ ಓರ್ವ ಜನ ಮೆಚ್ಚಿದ ನಾಯಕನಾಗಿ ಹೊರ ಹೊಮ್ಮಿದರು.
ಬಳಿಕ ಸ್ಥಳೀಯ ದಾನಿಗಳ ಹಾಗೂ ಸದಸ್ಯರ ಸಂಪೂರ್ಣ ಸಹಕಾರ ಪಡೆದು ಬಂಟರ ಸಂಘದ ಕಟ್ಟಣ ನಿರ್ಮಾಣ ಕಾರ್ಯಕ್ಕೆ ಇಳಿದರು. ಮೊದಲ ವರ್ಷದಲ್ಲಿ ಬಹಳಷ್ಟು ಸಂಕಷ್ಟ ಎದುರಿಸಬೇಕಾದರೂ ಕ್ರಮೇಣ ಹಠ ಸಾಧಿಸಿ ಹಣ ಸಂಗ್ರಹಿಸಿ ಕಟ್ಟಡದ ಕೆಲಸ ಪೂರ್ತಿಗೊಳಿಸಿಯೇ ವಿಶ್ರಮಿಸಿದರು. ಹೀಗೆ ಬಂಟ ಸಮುದಾಯ ಚಿರಕಾಲ ನೆನಪಿಸಿಕೊಳ್ಳುವ ಕಾರ್ಯ ಎಸಗಿ ಕೃತಾರ್ಥರಾದರು. ಸುಮಾರು 30 ಕೋಟಿ ರೂಪಾಯಿ ಖರ್ಚು ಮಾಡಿ ಅಂದಾಜು ಒಂದು ಸಾವಿರದ ನೂರು ಜನ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ, ಪಾರ್ಟಿ ಹಾಲ್, ಕೇಟರಿಂಗ್ ಅವಕಾಶ, ಮೀಟಿಂಗ್ ಹಾಲ್, ಸುಸಜ್ಜಿತ ರಂಗ ವೇದಿಕೆ ಹೀಗೆ ಎಲ್ಲಾ ಆಧುನಿಕ ವ್ಯವಸ್ಥೆಗಳೊಂದಿಗೆ ಸಮಾಜ ಬಾಂಧವರ ಕಾರ್ಯಕ್ರಮಗಳಿಗೆ ಸಜ್ಜಾಗಿ ನಿಲ್ಲುವಂತೆ ಮಾಡಲು ಅಹರ್ನಿಶಿ ದುಡಿದರು. ಇಲ್ಲಿ ವಾಹನ ಪಾರ್ಕಿಂಗ್ ಗೋಸ್ಕರವೇ ವಿಶಾಲ ಜಾಗದ ಅವಕಾಶ ಇದೆ. ಪುಣೆ ಬಂಟರ ಸಂಘದ ಕಟ್ಟಡ ಕೇವಲ ಕಲ್ಲು ಬಂಡೆಯ ಕಟ್ಟಡವಾಗಿರದೆ ಅಲ್ಲೊಂದು ಧನಾತ್ಮಕ ಸಂವೇದನಾಕರ್ಷಣೆ ಇದೆ ಎಂದು ಹಿರಿಯ ಸಮಾಜ ಬಾಂಧವರು ಹೇಳುತ್ತಾರೆ. ಒಳಗೆ ಪ್ರವೇಶಿಸುತ್ತಲೇ ರಜತ ಲೇಪನದ ದೇವರ ಬೆಳ್ಳಿ ವಿಗ್ರಹ. ಬಳಿಕ ತುಳುನಾಡಿನ ಸಂಸ್ಕೃತಿಗೆ ಅನುಗುಣವಾಗಿ ನಿರ್ಮಿಸಿದ ಒಳಾಂಗಣ ಸಭಾ ಭವನ. ಇನ್ನು ಬಂಟ ಸಮಾಜದ ಅಭ್ಯುದಯಕ್ಕೆ ಹೆಣಗಿ ಕೀರ್ತಿ ಶೇಷರಾದ ಗಣ್ಯರ ಭಾವಚಿತ್ರಗಳು. ಪುಣೆ ನಗರದ ಗತಿಸಿದ ಬಂಟ ನಾಯಕರ ಮಹಾದಾನಿಗಳ ಭಾವಚಿತ್ರಗಳಿವೆ. ಒಟ್ಟಿನಲ್ಲಿ ಎಲ್ಲವೂ ಸುಂದರ ಆಕರ್ಷಕ.
ಪರಿಸರದ ಅಶಕ್ತ ನತದೃಷ್ಟ ಬಂಧುಗಳ ಮನೆ ಮನೆಗೆ ಭೇಟಿ ನೀಡಿ ಅವರ ಸಮಸ್ಯೆಗಳಿಗೆ ಧನಾತ್ಮಕ ಸ್ಪಂದನೆ ನೀಡುವ ದೈವೀ ಕಾರ್ಯ ಪುಣೆ ಬಂಟರ ಸಂಘದ ಮುಖಾಂತರ ನಿರಂತರ ನಡೆಯುತ್ತಿದೆ. ಇನ್ನು ಸಂತೋಷ್ ಶೆಟ್ಟಿ ಅವರು ಹುಟ್ಟೂರಿನ ಗ್ರಾಮಾಭಿವೃದ್ಧಿ ಯೋಜನೆಯನ್ನೂ ಕೈಗೆತ್ತಿಕೊಂಡು ರಾಜಕೀಯ ಮುಖಂಡರ ಸಹಕಾರದೊಂದಿಗೆ ಸತತ ಕಾರ್ಯೋನ್ಮುಖರಾಗಿದ್ದಾರೆ.ಊರ ದೇವಾಲಯಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಕೈಜೋಡಿಸಿ ದೇವರ ಕೃಪೆ ಹಾಗೂ ಊರ ಜನರ ಪ್ರೀತಿ ಅಭಿಮಾನಗಳಿಗೆ ಪಾತ್ರರಾಗಿದ್ದಾರೆ. ಊರಿನಲ್ಲಿ ದೇವಾಲಯ ಅಭಿವೃದ್ಧಿ, ಶಾಲೆಗಳ ರಸ್ತೆಗಳ ದುರಸ್ತೀಕರಣ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ರೋಗಿಗಳಿಗೆ ವೈಯಕ್ತಿಕ ರೀತಿಯ ಸಹಾಯದಿಂದ ಜನ ಮನ ಗೆದ್ದಿದ್ದಾರೆ. ಇನ್ನು ಹೊರನಾಡಿನ ಮರಾಠಿ ಬಾಂಧವರು ಹಾಗೂ ಮೂಲ ನಿವಾಸಿಗಳೊಂದಿಗೆ ಅತ್ಯುತ್ತಮ ಸೌಹಾರ್ದ ಭಾವ ಹೊಂದಿರುವ ಶೆಟ್ಟರು ಆಗಾಗ ಮರಾಠಿ ಕನ್ನಡ ಕವಿ ಸಮ್ಮೇಳನಗಳನ್ನು ವಿಚಾರಗೋಷ್ಠಿಗಳನ್ನು ಏರ್ಪಡಿಸುತ್ತಾ ಬರುತ್ತಿದ್ದಾರೆ. ಸಮಾಜದ ಪ್ರತಿಭಾ ಸಂಪನ್ನರ ಪ್ರತಿಭೆಯ ಅನಾವರಣಕ್ಕಾಗಿ ಯಕ್ಷಗಾನ, ತಾಳಮದ್ದಳೆ, ನೃತ್ಯ, ನಾಟಕ, ಸಾಹಿತ್ಯ ಸಂಭ್ರಮ, ಕವಿಗೋಷ್ಠಿಗಳನ್ನು ಆಗಾಗ ಆಯೋಜಿಸುತ್ತಾ ಇರುತ್ತಾರೆ.
ಇಂಥಹ ಘನತರ ಕಾರ್ಯ ಎಸಗಿದ ಮಹನೀಯರಿಗೆ ಅನೇಕ ಪ್ರಶಸ್ತಿಗಳು, ಸನ್ಮಾನ ಗೌರವಗಳು ದೊರಕಿವೆ. ಬಂಟ ಭಗೀರಥ, ಬಂಟಸೇನಾನಿ, ಸಮಾಜಸೇವಾ ದುರಂಧರ ಹೀಗೆ ಅನೇಕ ಬಿರುದುಗಳು ಸಮಾಜ ಬಾಂಧವರ ಸಂಘಟನೆಗಳಿಂದ ದೊರೆತಿದೆ. ಪುಣೆ ನಗರದ ಅನ್ಯ ಜಾತೀಯ ಸಂಸ್ಥೆಗಳು, ಸಾಂಸ್ಕೃತಿಕ ಕಲಾ ಸಾಮಾಜಿಕ ಸಂಸ್ಥೆಗಳು, ರಾಜಕೀಯ ಸಂಘಟನೆಗಳು ಆತ್ಮೀಯವಾಗಿ ಸನ್ಮಾನಿಸಿವೆ. ಹುಟ್ಟೂರಿನ ಹೆಮ್ಮೆಯ ಪುತ್ರ ಎಂಬ ಗೌರವವೂ ಇವರಿಗೆ ಸಂದಿದೆ. ಇವರ ಎಲ್ಲಾ ಸಮಾಜ ಸೇವಾ ಕಾರ್ಯಗಳನ್ನು ಪ್ರೋತ್ಸಾಹಿಸುತ್ತಾ ಅವರ ಬೆನ್ನೆಲುಬಾಗಿ ನಿಂತವರು ಧರ್ಮಪತ್ನಿ ದಿವ್ಯಾ ಶೆಟ್ಟಿ ಅವರು ನಿಜವಾಗಲೂ ಅದೃಷ್ಟವಂತರು. ಮನಗೆದ್ದ ಮಡದಿ ದಿವ್ಯಾ ಶೆಟ್ಟಿ, ಮಕ್ಕಳಾದ ಶ್ರಾವ್ಯ, ಸೃಷ್ಟಿ ಇವರ ಜೊತೆ ವಾಸ್ತವ್ಯ ಹೊಂದಿರುವ ಸಂತೋಷ್ ಶೆಟ್ಟರದ್ದು ಸಂತೃಪ್ತ ಸಂಸಾರ. ಇಂಥಹ ಮಹಾನ್ ಸಾಧಕ, ಸಮಾಜ ಸೇವಾಸಕ್ತ ಬಂಟ ಬಾಂಧವನಿಗೆ ಭವಿಷ್ಯದಲ್ಲೂ ಇನ್ನಷ್ಟು ಯಶ, ಕೀರ್ತಿ, ಸ್ಥಾನಮಾನ ಲಭ್ಯವಾಗಲಿ. ಆರೋಗ್ಯ, ನೆಮ್ಮದಿ ಸ್ಥಿರವಿರಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.
ಸರ್ವರಿಗೂ ಸದಾ ಸನ್ಮಂಗಲವಿರಲಿ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು