ಅಸ್ತ್ರ ಪ್ರೊಡಕ್ಷನ್ ಸಂಸ್ಥೆಯ ಲಂಚುಲಾಲ್ ಕೆ.ಎಸ್ ನಿರ್ಮಾಣದ ಬಹುನಿರೀಕ್ಷಿತ ಕ್ರೈಂ ಥ್ರಿಲ್ಲರ್ ತುಳು ಸಿನಿಮಾ ‘ಕಟ್ಟೆಮಾರ್’ ಇದೇ ಜನವರಿ 23ರಂದು ತೆರೆಗೆ ಬರಲಿದ್ದು, ಅದರ ಟ್ರೇಲರ್ ಬಿಡುಗಡೆ ಸಮಾರಂಭ ಮಂಗಳೂರಿನ ಬಿಗ್ ಸಿನಿಮಾಸ್ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ನೆರವೇರಿತು. ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಿರ್ಮಾಪಕ ಲಂಚುಲಾಲ್ ಕೆ.ಎಸ್., ಜನವರಿ 23ರಂದು ಕಟ್ಟೆಮಾರ್ ಸಿನಿಮಾ ಬಿಡುಗಡೆಯಾಗುತ್ತಿದೆ. ಬೇರೆ ಭಾಷೆಗಳ ಸಿನಿಮಾಗಳಿಗಿಂತ ತುಳು ಚಿತ್ರವೂ ಯಾವುದಕ್ಕೂ ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಈ ಚಿತ್ರವನ್ನು ಭರ್ಜರಿಯಾಗಿ ನಿರ್ಮಿಸಿದ್ದೇವೆ. ತುಳು ಚಿತ್ರರಂಗಕ್ಕೆ ಕಟ್ಟೆಮಾರ್ ನಮ್ಮ ವಿಶೇಷ ಕೊಡುಗೆ. ಎಲ್ಲರೂ ಈ ಹೊಸ ಪ್ರಯತ್ನಕ್ಕೆ ಬೆಂಬಲ ನೀಡಬೇಕು. ನಿಮ್ಮ ಬೆಂಬಲ ದೊರೆತರೆ ತುಳು ಸಿನಿ ಇಂಡಸ್ಟ್ರಿಗೆ ಇನ್ನೂ ಹಲವು ಹೊಸ ಸಾಹಸಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಟ ರೂಪೇಶ್ ಶೆಟ್ಟಿ ಮಾತನಾಡಿ, ಈ ಚಿತ್ರಕ್ಕೆ ರಿವ್ಯೂ ಕೊಡುವ ಅವಶ್ಯಕತೆಯೇ ಇಲ್ಲ. ಟ್ರೇಲರ್ ಪ್ರದರ್ಶನದ ವೇಳೆ ಕೇಳಿಬಂದ ಪ್ರೇಕ್ಷಕರ ಚಪ್ಪಾಳೆ, ಶಿಳ್ಳೆಗಳೇ ಇದರ ಮಟ್ಟವನ್ನು ತೋರಿಸಿವೆ ಎಂದರು. ಮುಖ್ಯ ಪಾತ್ರದಲ್ಲಿ ನಟಿಸಿರುವ ಜೆಪಿ ತುಮಿನಾಡ್ ಮಾತನಾಡಿ, ಹೊಸತನದ ನಿರೀಕ್ಷೆಯಲ್ಲಿ ಮೂಡಿದ ಚಿತ್ರವೇ ಕಟ್ಟೆಮಾರ್. ಲಂಚುಲಾಲ್ ಅವರು ಸದಾ ಹೊಸ ನಿರ್ದೇಶಕರು ಮತ್ತು ಹೊಸ ಪ್ರತಿಭೆಗಳನ್ನು ತೆರೆಗೆ ತರುತ್ತಿದ್ದಾರೆ. ಈ ಸಿನಿಮಾ ತುಳು ಚಿತ್ರರಂಗಕ್ಕೆ ದೊಡ್ಡ ಕೊಡುಗೆ ಆಗಬಹುದು ಎಂಬ ನಂಬಿಕೆ ನನಗಿದೆ. ಈ ಚಿತ್ರ ಗೆದ್ದರೆ ಇಂಥಾ ವಿಭಿನ್ನ ಪ್ರಯತ್ನಗಳಿಗೆ ಇನ್ನಷ್ಟು ಮಂದಿ ಮುಂದೆ ಬರಲಿದ್ದಾರೆ ಎಂದರು. ನಿರ್ದೇಶಕ ಸಚಿನ್ ಕಟ್ಲ ಮಾತನಾಡಿ, ಈ ತರಹದ ಸಿನಿಮಾ ಮಾಡಲು ಧೈರ್ಯ ಬೇಕು. ಆ ಧೈರ್ಯವನ್ನು ನಿರ್ಮಾಪಕ ಲಂಚುಲಾಲ್ ತೋರಿಸಿದ್ದಾರೆ. ಈ ಚಿತ್ರದಲ್ಲಿ ಹೊಸತನವಿದೆ. ಎಲ್ಲರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ನಟಿ ಹರ್ಷಿತಾ ಕುಲಾಲ್ ಮಾತನಾಡಿ, ಇದು ತಮ್ಮ ಮೊದಲ ಅನುಭವವಾಗಿದ್ದು, ಪ್ರೇಕ್ಷಕರ ಸಹಕಾರವನ್ನು ಕೋರಿದರು.

ಸಮಾರಂಭದಲ್ಲಿ ಆಕಾಂಕ್ಷ ರಾವ್, ಪಲ್ಲವಿ ದೇವಾಡಿಗ, ರಕ್ಷಿತ್ ಗಾಣಿಗ, ಬಾಸುಮಾ ಕೊಡಗು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಖ್ಯಾತ ನಿರೂಪಕ ಚೇತನ್ ನಿರೂಪಿಸಿದರು.

















































































































