ಹಿಂದೂ ಧರ್ಮದ ಪ್ರಕಾರ ಕೆಲವೊಂದು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ವ್ಯಕ್ತಿಯು ತನ್ನೆಲ್ಲಾ ಸಂಕಷ್ಟಗಳಿಂದ ಮುಕ್ತನಾಗಿ ಮೋಕ್ಷವನ್ನು ಪಡೆದುಕೊಳ್ಳುತ್ತಾನೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಅದಲ್ಲದೇ ತೀರ್ಥಯಾತ್ರೆ ಭಾರತೀಯ ಸನಾತನ ಹಿಂದೂ ಸಂಸ್ಕ್ರತಿಯ ಅವಿಭಾಜ್ಯ ಅಂಗವಾಗಿದೆ. ಅದೇ ಧಾರ್ಮಿಕ ಭಾವನೆಯನ್ನು ಮನವರಿಸಿಕೊಂಡು ಬಾಂಬೆ ಬಂಟ್ಸ್ ಅಸೋಸಿಯೇಶನ್ನ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿ, ಉಪಾಧ್ಯಕ್ಷ ಐಕಳ ಕಿಶೋರ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ನ್ಯಾ. ಶೇಖರ್ ಆರ್ ಶೆಟ್ಟಿ ಹಾಗೂ ಇನ್ನಿತರನ್ನೊಳಗೊಂಡ 57 ಸದಸ್ಯರ ತಂಡ, ಆಡಳಿತ ಮಂಡಳಿಯ ಸದಸ್ಯರುಗಳಾದ ಜಯ ಸಿ ಶೆಟ್ಟಿ ಮತ್ತು ಶಶಿಧರ ಶೆಟ್ಟಿ ಅವರ ಮುಂದಾಳತ್ವದಲ್ಲಿ, ಶ್ರೀ ಸಂತೋಷ್ ಶೆಟ್ಟಿ ಗುರುಸ್ವಾಮಿಯವರ ಮಾರ್ಗದರ್ಶನದಲ್ಲಿ ಸೆಪ್ಟೆಂಬರ್ 21 ರಿಂದ 24 ರ ತನಕ ಉತ್ತರ ಪ್ರದೇಶದ ಪುಣ್ಯ ಕ್ಷೇತ್ರಗಳಾದ ಪ್ರಯಾಗ್ ರಾಜ್, ತ್ರಿವೇಣಿ ಸಂಗಮ, ಅಯೋಧ್ಯೆ ರಾಮಮಂದಿರ, ಕಾಶಿ ವಿಶ್ವನಾಥ ಹಾಗೂ ಇನ್ನುಳಿದ ಹಲವಾರು ಕ್ಷೇತ್ರಗಳ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದರು.

ಹೆಚ್ಚಿನ ಯಾತ್ರಿಗಳು 60 ವರ್ಷಗಳಿಗಿಂತ ಮೇಲ್ಪಟ್ಟವರಾದರೂ ಶಾಲಾ ಪ್ರವಾಸದ ಸಮಯ ಮಕ್ಕಳಲ್ಲಿದ್ದ ಲವಲವಿಕೆಯಿಂದ ತಾ ಮುಂದು ತಾ ಮುಂದು ಎಂದು ಸಾಗುತ್ತಿದ್ದರು. ಯಾತ್ರಾ ನಿಯೋಜಕರು ಗುರುತಿನ ಸಂಕೇತವಾಗಿ ಅವರವರ ಹೆಸರಿದ್ದ ಗುರುತು ಪಟ್ಟಿಯನ್ನು ಕೊರಳಲ್ಲಿ ದರಿಸಲು ಕೊಟ್ಟು ಹಿಂದೂ ಧರ್ಮದ ಸಾಂಕೇತದ ಕೇಸರಿ ಶಾಲನ್ನು ಎಲ್ಲರಿಗೂ ಹಾಕಿದರು. ಆನಂತರ ಪ್ರಯಾಗ್ ರಾಜ್ (ಮೊದಲಿನ ಅಲಹಾಬಾದ್) ವಿಮಾನ ನಿಲ್ದಾಣ ತಲುಪಿ ಆವಾಗಲೆ ನಿಯೋಜಿಸಿದ್ದ ಬಸ್ಸಿನ ಮೂಲಕ ಸಾಗಿ “ಸಾಗರ್ ರತ್ನ” ಉಪಹಾರ ಗೃಹದಲ್ಲಿ ಸಾಯಂಕಾಲದ ಚಾ ತಿಂಡಿಗಳನ್ನು ಪೂರೈಸಿ ಅಲ್ಲಿಂದ ಪ್ರಯಾಗ್ ರಾಜ್ ತೀರ್ಥ ಕ್ಷೇತ್ರವನ್ನು ತಲುಪಿದರು. ಅದನ್ನು ತೀರ್ಥರಾಜ ಎಂದೂ ಹೇಳುತ್ತಾರೆ. ಅದೇ ಕ್ಷೇತ್ರದಲ್ಲಿ ಈ ಬಾರಿ ನಡೆದ ಕುಂಭ ಮೇಳದಲ್ಲಿ ಸರಿ ಸುಮಾರು 40 ಕೋಟಿಗೂ ಮಿಕ್ಕಿದ ಸಂಖ್ಯೆಯಲ್ಲಿ ಜನರು ಪವಿತ್ರ ಸ್ನಾನಗೈದಿದ್ದರು.
ಸನಾತನ ಹಿಂದೂ ಪದ್ಧತಿಯಲ್ಲಿ ಮನುಷ್ಯನು ಜನ್ಮ ಪಡೆಯಲು ಆಶ್ರಯ ಒದಗಿಸಿದ ಮತ್ತು ಬದುಕಲು ಅವಶ್ಯಕವಾಗಿರುವ ವಸ್ತುಗಳೆಂದರೆ ನೀರು, ಆಹಾರ, ಗಾಳಿ. ಆದ್ದರಿಂದಲೇ ಮನುಷ್ಯರು ಸ್ನಾನ ಮಾಡುವಾಗ ಏಳು ಪುಣ್ಯ ನದಿಗಳನ್ನು ಸ್ಮರಿಸಿ “ಗಂಗಾ ಚ ಯಮುನೆ ಚೈವ ಗೋದಾವರಿ ಸರಸ್ವತಿ, ನರ್ಮದೆ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು” ಎಂದು ಮುಳುಗುತ್ತಾರೆ. ಆ ಏಳು ನದಿಗಳಲ್ಲಿ ಶಿವನ ಆದೇಶದಂತೆ ಸ್ವರ್ಗದಿಂದ ಧರೆಗಿಳಿದ ಗಂಗಾದೇವಿ ಅಥವಾ ಹಿಮಾಲಯದ ತಟದಿಂದ ಹೊರಟದ್ದರಿಂದ ಭಾಗೀರಥಿ ಎಂದು ಕರೆಯಲ್ಪಡುವ “ಗಂಗಾ ಮತ್ತು ಯಮುನಾ, ಸರಸ್ವತಿ” ಎಂಬ ಮೂರು ನದಿಗಳ ಸಮ್ಮಿಲನವಾಗುವುದರಿಂದ “ತ್ರಿವೇಣಿ ಸಂಗಮ” ಎಂದೆಣಿಸುತ್ತದೆ. ಅಲ್ಲಿ ಮುಳುಗಿ ಸ್ನಾನ ಮಾಡಲು ದೋಣಿಯ ಮೂಲಕ ಸಾಗಿ “ತ್ರಿವೇಣಿ ಸಂಗಮ”ದ ನಡು ಮಧ್ಯದಲ್ಲಿ ಮುಳುಗಿ ಸ್ನಾನ ಮಾಡಲೆಂದೇ ಎರಡು ದೋಣಿಗಳನ್ನು ನಿಲ್ಲಿಸಿ ನಿರ್ಮಿಸಿರುವ ಸ್ಥಳದಲ್ಲಿ ಒಬ್ಬೋಬ್ಬರಂತೆ ಮುಳುಗೇಳಿದರು. ಆದರೆ, ಅಲ್ಲಿಯ ಕೊಳಕು, ಕಲುಷಿತ ನೀರನ್ನು ಕಂಡು ಕೆಲವರು ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದರೂ ಪಾಪ ಪರಿಹಾರದ ಸ್ನಾನ ಎಂಬ ಭಾವನೆಯಿಂದ ಮಿಂದೇಳಿದರು. ನಂತರದಲ್ಲಿ, ಅದೇ ದಿನ ಮುಂದಕ್ಕೆ ಪ್ರಯಾಣ ಬೆಳೆಸಿ ಪಠ್ ಹನುಮಾನ್ (ಮಲಗಿಕೊಂಡ ಹನುಮಾನ್) ಮಂದಿರ, ವೇಣಿ ಮಾಧವ ದೇವಸ್ಥಾನ, ವಾಸುಕಿ ನಾಗರಾಜ, ಐವತ್ತೆರಡು ಪೀಠಗಳಲ್ಲೊಂದಾದ ಶಕ್ತಿ ಪೀಠದ ದರ್ಶನಗೈದು ರಾತ್ರಿ ಕಾಶಿ ಇಂಟರ್ ನ್ಯಾಷನಲ್ ಹೋಟೇಲಿನತ್ತ ಹೊರಟು, ರಾತ್ರಿಯ ಊಟ ಮಾಡಿ ಅಲ್ಲಿಯೇ ತಂಗಿ ವಿಶ್ರಮಿಸಿದರು. ಮಾರನೆ ದಿನ ಬೆಳಿಗ್ಗಿನ ಉಪಹಾರದ ನಂತರ ಅಯೋಧ್ಯದತ್ತ ಪ್ರಯಣ ಬೆಳೆಸಿ, ಸುಮಾರು ಸಂಜೆ 4 ಗಂಟೆಗೆ ಅಯೋಧ್ಯಾ ತಲುಪಿ ಅಯೋಧ್ಯಾ ವೃಷ ಹೋಟೇಲಿನಲ್ಲಿ ಆಶ್ರಯ ಪಡೆದು ಸುಚಿರ್ಭೂತರಾಗಿ ಸಂಜೆ 6.30 ಕ್ಕೆ, ಸರಾಯೂ ನದಿ ತಟಕ್ಕೆ ತಲುಪಿ, ಹೂ ಹಣತೆಯಿಂದ ಕೂಡಿದ ತಟ್ಟೆಯಲ್ಲಿ ದೀಪ ಹಚ್ಚಿ ನದಿಗರ್ಪಿಸಿದರು. ಸರಾಯೂ ನದಿ 7 ಪವಿತ್ರ ಯಾತ್ರಾ ಪ್ರದೇಶಗಳಲ್ಲಿ ಒಂದಾಗಿದ್ದು, ಹಿಂದೆ ದಶರಥ ಮಹಾರಾಜ ಅದೇ ನದಿಯ ಉತ್ತರ ತಟದಲ್ಲಿ ಪುತ್ರಕಾಮೇಷ್ಟಿ ಯಾಗವನ್ನು ಮಾಡಿದ್ದನು ಮತ್ತು ಅದೇ ನದಿಯಲ್ಲಿ ಮುಂದಕ್ಕೆ ರಾಮನು ಮುಳುಗಿ ಜಲ ಸಮಾಧಿಯನ್ನು ಮಾಡಿಕೊಂಡಿದ್ದನು ಎಂದು ಪುರಾಣದಿಂದ ತಿಳಿದು ಬರುತ್ತದೆ. ಆನಂತರ, 2024ರ ಜನವರಿ 22 ರಂದು, ಪ್ರಧಾನ ಮಂತ್ರಿ ಶ್ರೀಯುತ ನರೇಂದ್ರ ಮೋದಿಯವರ ದಿವ್ಯ ಹಸ್ತದಿಂದ ಶ್ರೀರಾಮ ವಿಗ್ರಹ ಪ್ರಾಣ ಪ್ರತಿಷ್ಟಾಪನೆಗೊಂಡ ಶ್ರೀರಾಮ ಮಂದಿರದಲ್ಲಿ ಬಾಲಕ ರಾಮನ ದರ್ಶನಗೈದರು. ನಂತರ, ಗಡಿ ಹನುಮಾನ್ ದೇವಸ್ಧಾನದ ದರ್ಶನ ಮಾಡಿ ದಶರಥ ಮಹಲ್ ನೋಡಿದರು. ಮರುದಿನ ಬೆಳಿಗ್ಗೆ 6 ಗಂಟೆಗೆ ಎದ್ದು ಮತ್ತೋಮ್ಮೆ ಬಾಲಕ ರಾಮನ ದರ್ಶನಗೈದರು.
ಆಮೇಲೆ ಸಪ್ತ ಮೋಕ್ಷಧಾಮಗಳಲ್ಲಿ ಒಂದಾದ ಕಾಶಿ (ವಾರಣಾಸಿ)ಯತ್ತ ಮುಖ ಮಾಡಿದರು. ದಾರಿ ಮಧ್ಯದಲ್ಲಿ ಇರುವ ಹಲವಾರು ವರುಷಗಳ ಇತಿಹಾಸ ಇದ್ದ ಮತ್ತು ಪಂಡಿತ್ ಮದನ್ ಮೋಹನ್ ಮಾಳವೀಯರಿಂದ ಸ್ಥಾಪಿಸಲ್ಪಟ್ಟ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಿ ಅಲ್ಲಿಯ ಸೌಂದರ್ಯವನ್ನು ವೀಕ್ಷಿಸಿ, ಆವರಣದೊಳಗಿನ ಬಿರ್ಲಾ ಮಂದಿರಕ್ಕೆ ಭೇಟಿ ನೀಡಿದರು. ಮುಂದಕ್ಕೆ ಸಂಕಟ ವಿಮೋಚನ ಹನುಮಾನ್ ಮಂದಿರ, ಬಡೆ ಹನುಮಾನ್ ಮಂದಿರ, ದುರ್ಗಾಮಂದಿರ ಮುಂತಾದ ಮಂದಿರಗಳ ದರ್ಶನಗೈದು ರಾತ್ರಿ ಕಾಶಿಯಲ್ಲಿರುವ ಹೋಟೆಲ್ ಸೆವನ್ಸ್ ಗೆ ತಲುಪಿ ನಂತರ ಅಸ್ಸೀ ಘಾಟ್ ನಲ್ಲಿ, ಗಂಗೆಗೆ ಗೌರವ ಸೂಚಕವಾಗಿ ಪ್ರತಿನಿತ್ಯ ನಡೆಯುವ ಆಕರ್ಷಕವಾದ ಗಂಗಾ ಆರತಿಯನ್ನು ಶ್ರದ್ದೆಯಿಂದ ನೋಡಿ ಬಂದರು. ಮರುದಿನ ಬೆಳಿಗ್ಗೆ ಎದ್ದು ಸುಚಿರ್ಭೂತರಾಗಿ ಮುಂಜಾವ 4.00 ಗಂಟೆ ಸುಮಾರಿಗೆ ಹೊರಟು ಕಾಲ ಭೈರವ ದೇವಸ್ಥಾನದ ದರ್ಶನ ಪಡೆದು, ಆನಂತರ ಕಾಶೀ ವಿಶ್ವನಾಥ, ನಂದಿ, ಅನ್ನಪೂರ್ಣ ದೇವಸ್ಥಾನ, ವಿಶಾಲಾಕ್ಷಿ ಮಂದಿರ, ಬಿಂದು ಮಾಧವ ಮಂದಿರ ಇನ್ನುಳಿದ ಹಲವಾರು ಮಂದಿರ, ದೇವಸ್ಥಾನಗಳ ದರ್ಶನಗೈದು ಮುಂದಕ್ಕೆ ಅಲ್ಲಿಂದ ಬೋಟ್ ಮೂಲಕ 64 ಘಾಟ್ ಗಳನ್ನು ವೀಕ್ಷಿಸಿದರು. ಅವುಗಳಲ್ಲಿ ಮಣಿಕರ್ಣಿಕ, ಹರಿಶ್ಚಂದ್ರ, ಜಾನಕಿ, ಇತ್ತೀಚೆಗೆ ಮೋದಿಯವರು ಉದ್ಘಾಟಿಸಿದ ನಮೋ ಘಾಟ್ ಮುಂತಾದವುಗಳು ಇದ್ದವು. ಆದರೆ ಖೇದಕರ ವಿಷಯವೆಂದರೆ ಕರ್ನಾಟಕ ಘಾಟ್ ಹತ್ತಿರ ಭೂಕುಸಿತವಾಗಿ ಅದಕ್ಕೆ ಯಾರೂ ಮೇಲ್ವಿಚಾರಕರಿಲ್ಲದೇ ಅನಾಥವಾಗಿದ್ದಂತೆ ತೋರುತ್ತಿತ್ತು. ಅಲ್ಲಿಂದ ಹೊರಟು ರಾತ್ರಿ ನಿಂತ ಹೋಟೇಲಿಗೆ ಬಂದು ಉಪಹಾರ ಮಾಡಿ ಮುಂಬಯಿಗೆ ಹೊರಡಲನುವಾದರು. ದಾರಿ ಮಧ್ಯೆ ಸಿಕ್ಕ ಅಂಗಡಿಯಲ್ಲಿ, ಕೆಲವರು ಅಲ್ಲಿಯ ಬನಾರಸ್ ಸೀರೆಗಳನ್ನು ತೆಗದುಕೊಂಡು ವಾರಣಾಸಿ ವಿಮಾನ ನಿಲ್ದಾಣದತ್ತ ತೆರಳಿ ರಾತ್ರಿ ಸುಮಾರು 1.00 ಗಂಟೆಗೆ ಮುಂಬಯಿಗೆ ಸೌಖ್ಯದಿಂದ ಬಂದಿಳಿದರು.
ವರದಿ : ನ್ಯಾ. ಶೇಖರ ರಾಜು ಶೆಟ್ಟಿ