ನಾನು ಮದುವೆಗೆ ಹೋದಾಗ ವಧು-ವರರಿಗೆ ಅಕ್ಷತೆ ಹಾಕುವುದಿಲ್ಲ. ನನ್ನ ಗೆಳೆಯರಿಗೂ ಗೊತ್ತಿದೆ. ನಾನು ಇತ್ತೀಚೆಗಿನ ವರ್ಷದಲ್ಲಿ ಮೆಹಂದಿ ಕಾರ್ಯಕ್ರಮಕ್ಕೂ ಹೋಗುವುದಿಲ್ಲ. ತೀರಾ ಬೇಕಾದವರು, ಅವರ ಮದುವೆಯ ದಿವಸ ನಾನು ಊರಲ್ಲಿ ಇಲ್ಲ ಅಂತಾದರೆ ಹೋಗಿ ಶುಭಾಶಯ ಹೇಳಿ ಬರುತ್ತೇನೆ. ಮದುವೆಯ ದಿವಸ ಅಕ್ಷತೆಯನ್ನ ಎಂದೂ ಹಾಕುವುದಿಲ್ಲ. ಅಷ್ಟೇ ಅಲ್ಲದೆ ಆ ಎಡಂತರ ಬಂದ ಕೆಟ್ಟ ಸಂಪ್ರದಾಯವನ್ನ ನಿಲ್ಲಿಸುವ ಪಣ ತೊಟ್ಟಿದ್ದೇನೆ. ಮದುವೆಯಲ್ಲಿ ಅಕ್ಷತೆ ಹಾಕುವ ಸಂಪ್ರದಾಯ ನಿಜಕ್ಕೂ ಹಿಂದಿನಿಂದಲೂ ಬಂದದ್ದಾ? ಕೇಳಿದರೆ ಖಂಡಿತ ಇಲ್ಲ ಎನ್ನುವುದನ್ನ ಹಲವು ಹಿರಿಯರನ್ನ, ಶಾಸ್ತ್ರ ಬಲ್ಲವರನ್ನ ಕೇಳಿಯೇ ನಾನಿಲ್ಲಿ ದಾಖಲಿಸುತ್ತಿದ್ದೇನೆ.

ಚಪ್ಪಲಿಯಡಿ ಅಕ್ಕಿ ಕಾಳುಗಳು
ನಾವು ಅನ್ನ ಮತ್ತು ಅಕ್ಕಿಯನ್ನ ದೇವರು ಅಂತಲೇ ಪೂಜಿಸಿದವರು, ಅನ್ನ ಬ್ರಹ್ಮ ಎನ್ನುತ್ತೇವೆ. ನಾವೆಲ್ಲವೂ ಅನ್ನಮೂಲದಿಂದಲೇ ಬಂದವರು. ಭಗವದ್ಗೀತೆ ಓದಿದವರಿಗೆ ಅನ್ನದ ಮಹತ್ವ ಅರ್ಥವಾದೀತು.ಇರಲಿ. ಮದುವೆಯಲ್ಲಿ ತಾಳಿ ಕಟ್ಟುವ ವೇಳೆಯಲ್ಲಿ ಪುರೋಹಿತರ ಸಮೇತ ಕುಟುಂಬ ವರ್ಗ ಅಕ್ಷತೆ ಹಾಕುವ ಸಂಪ್ರದಾಯವಿತ್ತು. ಈಗಲೂ ಇದೆ. ಅದು ಸರಿಯೂ ಹೌದು. ಅದು ಅಲ್ಲಿಗೇ ಮುಗಿಯಬೇಕು. ಆ ಪ್ರೋಸೆಸ್ ಮುಗಿದ ತಕ್ಷಣ ಬಿದ್ದ ಅಕ್ಷತೆಯನ್ನ ಅಗ್ನಿಕುಂಡ ತೆಗೆಯುವ ಸಂದರ್ಭದಲ್ಲೇ ಗುಡಿಸಿಯೋ, ಒರೆಸಿಯೋ ತೆಗೆಯುತ್ತಾರೆ. ಈಗೇನಾಗುತ್ತಿದೆ? ಕೆಜಿಗಟ್ಟಲೆ ಅಕ್ಷತೆಯನ್ನ ಸಾರ್ವಜನಿಕರಿಗೆ ಹರಿವಾಣದಲ್ಲಿ ಇಡಲಾಗುತ್ತದೆ, ಕೆಲವು ಮುಷ್ಠಿಗಟ್ಟಲೆ ಅಕ್ಷತೆ ವಧು-ವರರ ತಲೆಗೆ ಸುರಿಯುತ್ತಾರೆ, ಅದೆಲ್ಲವೂ ಕೆಳಗೆ ಬೀಳುತ್ತದಲ್ಲಾ? ಮುಂದೆ ಬರುವವರೆಲ್ಲರೂ ಅದನ್ನೇ ತಮ್ಮ ಚಪ್ಪಲಿ, ಶೂವಿನಲ್ಲಿ ತುಳಿದುಕೊಳ್ಳುತ್ತಾ ಬರುತ್ತಾರೆ, ರಾಶಿ ರಾಶಿ ಅಕ್ಷತೆಗಳು ಕೆಳಗೆ ಬಿದ್ದಿರುತ್ತದೆ, ಅದನ್ನ ಚಪ್ಪಲಿ ಕಾಲಲ್ಲಿ ಮೆಟ್ಟಿಕೊಂಡು ನಾವು ಪೋಟೋಗೆ ಶೋ ಕೊಡುತ್ತಿರುತ್ತೇವೆ. ಇದನ್ನ ಹಿಂದು ಧರ್ಮದ ಆಚರಣೆಗಳ ಬಗ್ಗೆ ಗೌರವ ಇರುವವರು ನಿಲ್ಲಿಸಬೇಕು, ಇಂದೇ ಆ ನಿರ್ಧಾರಕ್ಕೆ ಬರಬೇಕು, ಇದಕ್ಕೇನು ಹೋರಾಟ ಮಾಡಬೇಕಾದ ಅಗತ್ಯವಿಲ್ಲ, ನೀವು ಅಕ್ಷತೆ ಹಾಕದೆ ವಧು- ವರರಿಗೆ ಶುಭಾಶಯ ಹೇಳಿ, ಹಾರೈಸಿ ಬಂದರೆ ಸಾಕು. ನಾನಿದನ್ನ ಹಲವು ವರ್ಷದಿಂದಲೂ ಅನುಸರಿಸುತ್ತಿದ್ದೇನೆ, ನನ್ನ ಜೊತೆಗಿರುವ ಕೆಲವು ಗೆಳೆಯರೂ ಇದನ್ನ ಪಾಲಿಸುತ್ತಾರೆ.
ನೆಗಿಟೀವ್ ಎನರ್ಜಿ ವಧು-ವರರ ನೆತ್ತಿಯ ಮೇಲೆ!
ಅಪರಿಚಿತರು ಯಾರಾದರೂ ನಿಮ್ಮ ತಲೆ ಮುಟ್ಟಿದರೆ ನಿಮ್ಮ ಒಳಮನಸ್ಸು ಸಿಟ್ಟುಗೊಳ್ಳುತ್ತಿತ್ತು ಗೊತ್ತಿದೆಯ ನಿಮಗೆ? ಯಾರ್ ಯಾರೋ ಬಂದು ಸಾವಿರ ಸಾವಿರ ಜನ ಮುಟ್ಟಿದ ಅಕ್ಷತೆಯನ್ನ ಮೂವ್ವತ್ತು ಸೆಕುಂಡುಗಳ ಕಾಲ ಕೈನಲ್ಲಿ ಹಿಡಿದಾಗ ಅವರಲ್ಲಿನ ಪಾಸಿಟೀವ್ ಅಥವಾ ನೆಗಿಟೀವ್ ಎನರ್ಜಿ ಅವರ ಕೈನಲ್ಲಿನ ಅಕ್ಷತೆಗೆ ಟ್ರಾನ್ಸ್ಫರ್ ಆಗುತ್ತದೆ ಮತ್ತು ವಧು-ವರರ ನೆತ್ತಿಗೂ ಬಂದು ಬೀಳುತ್ತದೆಯಾದ್ದರಿಂದ ಅವರಿಗೂ ವರ್ಗವಾಗುತ್ತದೆ. ಹಾಗಾಗಿ ಮದುವೆಯಾಗುವ ಮಧು ಮಕ್ಕಳೂ ನಿಮ್ಮ ಎರಡೂ ಕುಟುಂಬಕ್ಕೂ ಹೇಳಿ ಅಕ್ಷತೆ ತಾಳಿ ಕಟ್ಟುವಾಗ ಮಾತ್ರ ಸಾಕು, ಹರಿವಾಣದಲ್ಲಿ ಕಿಲೋಗಟ್ಟಲೆ ಇಡೋದು ಬೇಡ ಅಂತ. ಅಲ್ಲಿಗೆ ಸಮಸ್ಯೆ ಪರಿಹಾರ! ಈ ನೆಗಿಟೀವ್ ಎನರ್ಜಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳೋದು ಬೇಡ, ಮದುವೆ ಎಲ್ಲಾ ಮುಗಿದ ಮೇಲೆ ಮಧು ಮಕ್ಕಳಿಬ್ಬರೂ ಒಂದು ಮುಷ್ಠಿ ಕಲ್ಲುಪ್ಪು ಮತ್ತು ಒಂದು ಚಿಟಿಕೆ ಅರಶಿಣ ಸ್ನಾನ ಮಾಡುವ ನೀರಿಗೆ ಹಾಕಿ ಮಿಂದರೆ ಅದು ನಿರ್ನಾಮ. ಆದರೆ ಅಕ್ಷತೆಯನ್ನ ಚಪ್ಪಲಿಯಲ್ಲಿ ತುಳಿದ ಪಾಪ ಎಲ್ಲಿ ತೊಳೆಯುವುದು?. ಉಡಾಪೆಯ ಪ್ರಶ್ನೆ ಮಾಡುವವರು, ನೀನೇನು ಲೋಕ ಉದ್ದಾರ ಮಾಡ್ತೀಯ ಕೇಳುವವರಿಗೆ ನನ್ನಲ್ಲಿ ಉತ್ತರವಿಲ್ಲ ಅವರಿಗೆಲ್ಲ ನಾನೊಂದು ಹಾಡು ಡೆಡಿಕೇಟ್ ಮಾಡ್ತೀನಿ ’ಮೂಕನಾಗಬೇಕು, ಜಗದೊಳು ಜ್ವಾಕ್ಯಾಗ್ ಇರಬೇಕು’ ಎನ್ನುವ ಹಾಡದು. ಮಿಕ್ಕುಳಿದ ಚಿಂತನಾಶೀಲರಿಗೆ, ಇದು ಸರಿ ಅಂತನ್ನಿಸುವವರು ಇದನ್ನ ಶೇರ್ ಮಾಡಿ, ವಸಂತ್ ಗಿಳಿಯಾರ್ ಬರೆದಿದ್ದಾನೆ ಅಂತ ಸುಮ್ಮನೇ ಕಣ್ಣು ಮುಚ್ಚಿಕೊಂಡು ಒಪ್ಪಬೇಕಿಲ್ಲ. ನೀವೂ ಒಮ್ಮೆ ಯೋಚಿಸಿ ಹೌದಲ್ಲವೆ ಅಂತನ್ನಿಸಿದರೆ ಆ ಬದಲಾವಣೆ ನಿಮ್ಮಿಂದಲೇ ಶುರುವಾಗಲಿ. ಚಿಂತನೆಯೊಂದಿಗೆ ನಾವು ಬದುಕು ಕಟ್ಟಿಕೊಳ್ಳೋಣ.
ಬರಹ : ವಸಂತ್ ಗಿಳಿಯಾರ್