ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಅಭೂತಪೂರ್ವ ಕಾರ್ಯವೈಖರಿಯನ್ನು ಮೆಚ್ಚಿ ಫೌಂಡೇಶನ್ ನ ಗೌರವಾಧ್ಯಕ್ಷರಾದ ಮಹಾದಾನಿ, ಗೌರವಾನ್ವಿತ ಡಾ| ಕೆ ಸದಾಶಿವ ಶೆಟ್ಟಿಯವರು ಫೌಂಡೇಶನ್ ಟ್ರಸ್ಟ್ ಗೆ ಮೂರು ಕೋಟಿ ರೂಪಾಯಿಗಳ ದೊಡ್ಡ ದೇಣಿಗೆಯನ್ನು ಘೋಷಿಸಿದ್ದಾರೆ. ಕನ್ಯಾನ ಸದಾಶಿವ ಶೆಟ್ಟಿಯವರು ಪಟ್ಲ ಫೌಂಡೇಶನ್ ನ ಗೌರವಾಧ್ಯಕ್ಷರಾದ ನಂತರ ಟ್ರಸ್ಟಿನ ಕಾರ್ಯ ಯೋಜನೆಗಳು ನಾಗಾಲೋಟದಲ್ಲಿ ಮುಂದುವರಿಯುತ್ತಿದ್ದು ಕಲಾಭಿಮಾನಿಗಳ ಹಾಗೂ ಸಂಘಟಕರಿಂದ ಪ್ರಶಂಸೆಯ ಸುರಿಮಳೆ ಹರಿದು ಬರುತ್ತಿದೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಗೋಲ್ಡ್ ಪಿಂಚ್ ಹೋಟೆಲ್ ನಲ್ಲಿ “ಪಟ್ಲ ದಶಮ” ಸಂಭ್ರಮದ ಸಮಾಲೋಚನಾ ಸಭೆಯ ದಿನದಂದು ಫೌಂಡೇಶನ್ ನ ಎಲ್ಲಾ ಮಹಾದಾನಿಗಳು ಮತ್ತು ಫೌಂಡೇಶನ್ ನ ಪದಾಧಿಕಾರಿಗಳ ಸಮ್ಮುಖದಲ್ಲಿ ಪಟ್ಲ ಫೌಂಡೇಶನ್ ನ ದಶಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಎಂಆರ್ ಜಿ ಗ್ರೂಪ್ ನ ಅಧ್ಯಕ್ಷ ಡಾ| ಕೆ. ಪ್ರಕಾಶ್ ಶೆಟ್ಟಿ ಮತ್ತು ಅಧ್ಯಕ್ಷರಾಗಿ ಬರೋಡ ಶಶಿಧರ ಶೆಟ್ಟಿ ಅವರು ಜವಾಬ್ದಾರಿಯನ್ನು ಬಹಳ ಪ್ರೀತಿಯಿಂದ ವಹಿಸಿಕೊಂಡಿದ್ದರು. ದಶಮಾನೋತ್ಸವದ ಮುಖ್ಯ ಧ್ಯೇಯವಾಗಿ ಕನಿಷ್ಠ 10 ಕೋಟಿ ರೂಪಾಯಿ ಆದರೂ ಈ ವರ್ಷ ದೇಣಿಗೆ ಸಂಗ್ರಹ ಆಗಬೇಕೆಂದು ಎಲ್ಲಾ ದಾನಿಗಳಲ್ಲಿ ಮನವಿ ಮಾಡಿಕೊಂಡರು.ಅದರಂತೆ ಬರೋಡ ಶಶಿಧರ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿದ ಮಹಾದಾನಿಗಳಾದ ಡಾ| ಕೆ ಸದಾಶಿವ ಶೆಟ್ಟಿ ಅವರು ಫೌಂಡೇಶನ್ ಗೆ ತನ್ನ ದೇಣಿಗೆಯನ್ನು ಮೂರು ಕೋಟಿ ರೂಪಾಯಿಗೆ ಹೆಚ್ಚಿಸಿದರು. 2020 ರಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಗೌರವಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ನಂತರ ಕನ್ಯಾನ ಸದಾಶಿವ ಶೆಟ್ಟಿಯವರು ನೀಡಿದ ಕೊಡುಗೆ ಅಪಾರ. ಈ ರೀತಿಯ ವಿಶಾಲ ಹೃದಯ ಶ್ರೀಮಂತಿಕೆಯನ್ನು ತೋರಿಸಿದ ನಮ್ಮ ಹೆಮ್ಮೆಯ ಮಹಾದಾನಿಗಳಿಗೆ ಅವರ ಧರ್ಮಪತ್ನಿ ಮತ್ತು ಮಕ್ಕಳಿಗೆ ಫೌಂಡೇಶನ್ ನ ಎಲ್ಲಾ ಬಂಧುಗಳ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇವೆ ಹಾಗೂ ನಾವು ನಂಬಿದ ಕಟೀಲು ತಾಯಿ ಭ್ರಮರಾಂಬೆ, ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿಯ ಕೃಪೆ ಸದಾ ತಮ್ಮ ಮೇಲೆ ಇರಲಿ ಎಂಬುದಾಗಿ ನಾವೆಲ್ಲರೂ ಬೇಡಿಕೊಳ್ಳುತ್ತಿದ್ದೇವೆ ಎಂದು ಗೌರವಾಧ್ಯಕ್ಷ ಡಾ| ಕೆ. ಪ್ರಕಾಶ್ ಶೆಟ್ಟಿ, ಅಧ್ಯಕ್ಷ ಬರೋಡ ಶಶಿಧರ ಶೆಟ್ಟಿ ಹಾಗೂ ಯಕ್ಷಧ್ರುವ ಪಟ್ಲ ಸಂಭ್ರಮ ದಶಮಾನೋತ್ಸವ ಸಮಿತಿ ಮತ್ತು ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಅಧ್ಯಕ್ಷರು, ಪದಾಧಿಕಾರಿಗಳು ತಿಳಿಸಿದ್ದಾರೆ.