ಒಮ್ಮೆ ರಾವಣ ಒಂದು ಸುಂದರ ನಗರ ‘ಅಲಕಾ’ ವನ್ನು ಲೂಟಿ ಮಾಡಿದ. ಅದು ಅವನ ತಮ್ಮನಾದ ಕುಬೇರನದಾಗಿತ್ತು. ನಗರವನ್ನು ಲೂಟಿ ಮಾಡಿ ತನ್ನ ಪುಷ್ಪಕ ವಿಮಾನದಲ್ಲಿ ಲಂಕೆಗೆ ಮರಳುತ್ತಿರುವಾಗ ಒಂದು ಸುಂದರ ಪ್ರದೇಶವನ್ನು ಕಂಡ. ಅಲ್ಲಿ ಹೋಗುವ ಮನಸ್ಸಾಯಿತು ರಾವಣನಿಗೆ. ಆದರೆ ಆ ಪ್ರದೇಶದ ಪ್ರವೇಶದ್ವಾರದಲ್ಲಿ ನಂದಿಕೇಶ್ವರ ಕಾವಲುಗಾರನಾಗಿ ನಿಂತಿದ್ದ. ಇದರಿಂದ ರಾವಣನ ಪುಷ್ಪಕ ವಿಮಾನವು ಚಲಿಸಲಾಗದೆ ನಿಂತಿತು.

ರಾವಣನು ನಂದಿಕೇಶ್ವರನಿಗೆ ಆ ದಾರಿಯನ್ನು ಬಿಟ್ಟುಕೊಡಲು ಹೇಳಿದ. ಆಗ ನಂದಿಕೇಶ್ವರನು ‘ಈ ನಗರದಲ್ಲಿ ಶಿವ ಪಾರ್ವತಿಯರು ಸಮಯವನ್ನು ಕಳೆಯುತ್ತಿದ್ದಾರೆ. ಆದರಿಂದ ಇಲ್ಲಿ ಯಾರಿಗೂ ಪ್ರವೇಶವಿಲ್ಲ. ಇದನ್ನು ಕಾಯುವ ಹೊಣೆ ನನ್ನದಾಗಿದೆ’ ಎಂದು ತಿಳಿಸಿದ. ಕುಪಿತಗೊಂಡ ರಾವಣ ಶಿವ ಮತ್ತು ನಂದಿಯನ್ನು ಮೂದಲಿಸುತ್ತಾನೆ. ಆಗ ನಂದಿಯು ಕೋಪಗೊಂಡು “ನಿನ್ನ ಸಾವಿಗೆ ಮಂಗಗಳು ಕಾರಣವಾಗಲಿ” ಎಂದು ಶಪಿಸುತ್ತಾನೆ. ಆಗ ರಾವಣನು ತನ್ನ ತೋಳುಗಳನ್ನು ಆಗಲಿಸಿ ಆಗ ಕೈಲಾಸ ಪರ್ವತದ ತಳಕ್ಕೆ ಕೈಹಾಕಿ ಅಲುಗಾಡಿಸುತ್ತಾನೆ.
ಕೈಲಾಸ ಪರ್ವತ ಅಲುಗಾಡಿದಾಗ ಪಾರ್ವತಿ ದೇವಿ ಭಯದಿಂದ ಕಿರುಚುತ್ತಾಳೆ. ಎಲ್ಲವನ್ನೂ ಅರಿತಿದ್ದ ಶಿವ ರಾವಣನನ್ನು ತಡೆಯಲು ತನ್ನ ಕಾಲಿನ ಅಂಗುಷ್ಟದಿಂದ ಪರ್ವತವನ್ನು ಗಟ್ಟಿಯಾಗಿ ಒತ್ತುತ್ತಾನೆ. ಆಗ ರಾವಣನಿಗೆ ವಿಪರೀತ ನೋವಾಗಿ ರೋಧಿಸುತ್ತಾನೆ. ಮೇಲೇಳಲಾಗದೆ ರಾವಣ ಆರ್ತತೆಯಿಂದ ಶಿವನನ್ನು ಕುರಿತು ಪ್ರಾರ್ಥಿಸುತ್ತಾನೆ. ಶಿವನ ವರಪ್ರಸಾದದಿಂದ ರಾವಣನಾಗುತ್ತಾನೆ. ಸಂಸ್ಕೃತದಲ್ಲಿ ‘ರವ’ ಎಂದರೆ ತಡೆಯಲಾರದ ನೋವು. ಹೀಗೆ ನೋವಿನ ಕಾರಣದಿಂದ ಆತ ಕೂಗಿದ ಕಾರಣ ಅವನಿಗೆ ‘ರಾವಣ’ ನೆಂಬ ಹೆಸರು ಬರುತ್ತದೆ.