ಬಾಲ್ಯದಲ್ಲಿ ಬೆಳೆದ ಮಲೆನಾಡಿನ ಪರಿಸರ, ಪುಸ್ತಕ ಓದುವ ಹವ್ಯಾಸ, ಶ್ರೇಷ್ಠ ಗುರುಗಳ ಮಾರ್ಗದರ್ಶನ, ಯಕ್ಷಗಾನದ ಆಕರ್ಷಣೆ ಇದೆಲ್ಲವೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿತು. ಪುರಾಣ ಕೃತಿಗಳ ಅಧ್ಯಯನದ ಆಸಕ್ತಿಯಿಂದ ಹೆಚ್ಚಿನ ಜ್ಞಾನ ಸಂಪಾದನೆ ಸಾಧ್ಯವಾಯಿತು ಎಂದು ಹಿರಿಯ ಸಾಹಿತಿ, ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಶ್ರೀಧರ ಡಿ.ಎಸ್ ಕಿನ್ನಿಗೋಳಿ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿದ ಹಿರಿಯ ಸಾಹಿತಿಗಳ ಸಂಪರ್ಕ ಅಭಿಯಾನದಡಿ ಶುಕ್ರವಾರ ಸ್ವಗೃಹದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಉಡುಪಿ ಮತ್ತು ಕಟೀಲು ಕ್ಷೇತ್ರದ ಪರಿಸರ ಸಾಂಸ್ಕೃತಿಕವಾಗಿ ಬೆಳೆಯಲು ಇನ್ನಷ್ಟು ಅವಕಾಶ ಕಲ್ಪಿಸಿತು ಎಂದರು. ಪುರಾಣ ಕೃತಿಗಳು ಸೇರಿದಂತೆ ಭಾರತೀಯ ಸಂವೇದನೆಯುಳ್ಳ ಕೃತಿಗಳ ಸಂದೇಶವನ್ನು ಸಮಾಜಕ್ಕೆ ಪಸರಿಸುವುದು ಅಗತ್ಯ. ಅಖಿಲ ಭಾರತೀಯ ಸಾಹಿತ್ಯ ಪರಿಷದ್ನ ಇಂತಹ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ವಿದ್ವಾಂಸ ಪಶುಪತಿ ಶಾಸ್ತ್ರಿ ಶಿರಂಕಲ್ಲು ಮಾತನಾಡಿ, ಬಹುಶ್ರುತ ವಿದ್ವಾಂಸರಾದ ಶ್ರೀಧರ್ ಡಿ.ಎಸ್ ಅವರು ಪುರಾಣ ಲೋಕದ ವಿಶಿಷ್ಟ ಪಾತ್ರಗಳನ್ನು ತಮ್ಮ ಕೃತಿಯ ಮೂಲಕ ಜನಮಾನಸಕ್ಕೆ ಪರಿಚಯಿಸಿದ ಅಪರೂಪದ ಸಾಹಿತಿ. 40ಕ್ಕೂ ಹೆಚ್ಚು ಪ್ರಸಂಗ ರಚಿಸಿ ಯಕ್ಷಗಾನ ಕ್ಷೇತ್ರಕ್ಕೆ ಅತ್ಯಪೂರ್ವ ಕೊಡುಗೆ ನೀಡಿದ್ದಾರೆ ಎಂದರು.
ಅಭಾಸಾಪ ಮೂಲ್ಕಿ ತಾಲೂಕು ಸಮಿತಿಯ ಉಪಾಧ್ಯಕ್ಷ ವಿದ್ಯಾಧರ ಶೆಟ್ಟಿ ಕೊಲ್ನಾಡು, ಜಿಲ್ಲಾ ಸಮಿತಿಯ ಸಾಹಿತ್ಯ ಕೂಟದ ಮುಖ್ಯಸ್ಥೆ ಗೀತಾ
ಲಕ್ಷ್ಮೀಶ್ ಉಪಸ್ಥಿತರಿದ್ದರು. ಅಭಾಸಾಪ ದ.ಕ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಬಿ ಹರೀಶ್ ರೈ ಸ್ವಾಗತಿಸಿ, ಸಮಿತಿ ಸದಸ್ಯ ಡಾ.ಸುರೇಶ್ ನೆಗಳಗುಳಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸುಮಂಗಲಾ ರತ್ನಾಕರ್ ಕಾರ್ಯಕ್ರಮ ನಿರೂಪಿಸಿದರು.