ಹುಬ್ಬಳ್ಳಿಯ ಲಿಂಗರಾಜನಗರ ಬಿವ್ಹಿಕೆ ವ್ಹಿಸಿಬಿ ಬಾಲಿಕೆಯರ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ನ ಸಂಸ್ಥಾಪಕ ರಾಜೇಂದ್ರ ವಿ ಶೆಟ್ಟಿಯವರು, ಇಂದು ಹೆಣ್ಣು ಮಕ್ಕಳ ಯುಗವಾಗಿದ್ದು ಹೆಣ್ಣು ಮಕ್ಕಳು ಗೃಹಿಣಿಯ ಕೆಲಸದಿಂದ ಉಪಗ್ರಹ ಉಡಾವಣೆವರೆಗೂ ಎಲ್ಲಾ ಕೆಲಸಗಳಲ್ಲಿ ತಮ್ಮ ಸಂಸ್ಕಾರಯುತವಾದ ಜೀವನದಿಂದ ದೇಶದ ಅಭಿವೃದ್ಧಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ಸತ್ಯ ಪ್ರಾಮಾಣಿಕತೆ ಧರ್ಮ ಹಾಗೂ ನ್ಯಾಯಯುತವಾದ ಜೀವನವನ್ನು ನಡೆಸಲು ಸಲಹೆ ನೀಡಿದರು. ತಂದೆ ತಾಯಿ ಹಾಗೂ ಗುರುಗಳನ್ನು ಗೌರವಿಸಬೇಕು. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆದು ಉತ್ತಮ ಜೀವನ ರೂಪಿಸಿಕೊಳ್ಳಲು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಉದ್ಯಮಿ ಮಹೇಶ್ ಶೆಟ್ಟಿಯವರು, ಶಾಲೆಗೆ 100 ಪ್ರತಿಶತ ಫಲಿತಾಂಶ ತಂದು ಕೊಡಲು ವಿದ್ಯಾರ್ಥಿನಿಯರು ತುಂಬಾ ಶ್ರಮ ಪಟ್ಟು ಪ್ರಾಮಾಣಿಕವಾಗಿ ಓದಬೇಕು ಹಾಗೂ ಪ್ರತಿಯೊಬ್ಬರು ಒಂದಲ್ಲ ಒಂದು ಕ್ಷೇತ್ರದಲ್ಲಿ ಕೆಲಸ ಮಾಡಿ ಸಾಧನೆ ಮಾಡಬಹುದು. ಕೆಲಸದಲ್ಲಿ ಮೇಲು ಕೀಳು ಇಲ್ಲ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಬಮ್ಮಕ್ಕನವರ್ ಮಾತನಾಡಿ, ಅನೇಕ ದೈಹಿಕ ನ್ಯೂನ್ಯತೆಗಳನ್ನು ಹೊಂದಿದ ವಿದ್ಯಾರ್ಥಿಗಳು ಏನೆಲ್ಲಾ ಸಾಧನೆಗಳನ್ನು ಮಾಡಿದ್ದಾರೆ. ನಮಗೆ ದೇವರು ಎಲ್ಲಾ ಅಂಗಾಂಗಗಳನ್ನು ಕೊಟ್ಟರೂ ನಮ್ಮಿಂದ ಸಾಧನೆ ಮಾಡಲು ಏಕೆ ಸಾಧ್ಯವಿಲ್ಲ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು ಹಾಗೂ ಪ್ರತಿನಿತ್ಯ ನಮ್ಮ ಓದಿನ ಕಡೆಗೆ ಗಮನಹರಿಸಬೇಕು ಎಂದು ಮಾರ್ಗದರ್ಶನ ಮಾಡಿದರು. ಮುಖ್ಯ ಉಪಾಧ್ಯಾಯರಾದ ಪಿ ಎಂ ದೊಡ್ಡಮನಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಶಬಾನ ಎಲಿಗಾರ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವಿ ಎಮ್ ಪಟ್ಟಣ ಶೆಟ್ಟಿ ಪುಷ್ಪಾರ್ಪಣೆ ಮಾಡಿದರು. ಬಿ ಜಿ ಕುಮಾರಸ್ವಾಮಿ ಮಠ ವಂದಿಸಿದರು. ನಿಂಗಪ್ಪ ಕಾಶಪ್ಪನವರ್, ಜೆ ಜಿ ಸುಬ್ಬಾಪುರಮಠ, ಶಿವಾನಂದ ಹೂಗಾರ ಉಪಸ್ಥಿತರಿದ್ದರು.