ವಿದ್ಯಾಗಿರಿ(ಮೂಡುಬಿದಿರೆ): ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ರಾಷ್ಟ್ರ ಪ್ರೇಮ,ಮಾನವೀಯ ಸ್ಪರ್ಶ, ಸೇವಾ ಮನೋಭಾವ, ಹೃದಯ ಶ್ರೀಮಂತಿಕೆ ಅತಿ ಮುಖ್ಯ ಎಂದು ಶಿಕ್ಷಕ, ರಾಜ್ಯ ಮಟ್ಟದ ವಿಕಸನ ತರಬೇತಿದಾರ ರಾಜೇಂದ್ರ ಭಟ್ ಕೆ. ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ 30 ನೇ ಆಳ್ವಾಸ್ ವಿರಾಸಾತ್ ಸಂದರ್ಭದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ – ರೇಂಜರ್ಸ್ ಸಾಂಸ್ಕೃತಿಕ ಉತ್ಸವದ ಅಂಗವಾಗಿ ರತ್ನಾಕರವರ್ಣಿ ವೇದಿಕೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಗುರುವಾರ ಅವರು ಉಪನ್ಯಾಸ ನೀಡಿದರು.
ಸೇವೆ ಎನ್ನುವುದು ಪ್ರತಿ ಮನುಷ್ಯನ ಹೃದಯ ಶ್ರೀಮಂತಿಕೆ ಎಂದರು. ಇನ್ನೊಬ್ಬರ ಸಂತೋಷದಲ್ಲಿ ನಮ್ಮ ನಗುವನ್ನು ನೋಡುವ ಸೇವಾ ಮನೋಭಾವ, ಮಾನವೀಯ ಮೌಲ್ಯ ಇದ್ದಾಗ ಮಾತ್ರ ನಿಜವಾದ ಬದುಕನ್ನು ಜೀವಿಸಲು ಸಾಧ್ಯ ಎಂದು ಅವರು ಹೇಳಿದರು. ಅಮ್ಮನ ಪ್ರೀತಿ, ಕಷ್ಟ, ಹಸಿವು,ನೋವು, ಬೇರೆಯವರ ಆಸೆ ನೋವಿಗೆ ಸ್ಪಂದನೆ ಇದ್ದಾಗ ಮಾತ್ರ ಸಾಧನೆಯ ಹಾದಿಯಲಿ ಮುನ್ನಡೆಯಲು ಸಾಧ್ಯ ಎಂದರು. ಪ್ರತಿಯೊಬ್ಬರಲ್ಲೂ ಶಕ್ತಿ ಇರುತ್ತದೆ. ದೃಢನಿರ್ಧಾರ, ಸಾಧನೆ ಮಾಡುವ ಮನಸ್ಸು ಇದ್ದಾಗ ನಮ್ಮ ಶಕ್ತಿಯ ಬಗ್ಗೆ ಅರಿತು ಸಾಧನೆ ಮಾಡಬೇಕು ಎಂದು ತಿಳಿಸಿದರು. ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದರೆ ಸಮಾಜಕ್ಕೆ ನಾವು ಏನಾದರೂ ನೀಡಲೇಬೇಕು. ಪ್ರತಿಭೆ, ಸತ್ವಗಳನ್ನು ಬಂಡವಾಳವಾಗಿಸಿಕೊAಡು ದೇಶ ಸೇವೆ ಮಾಡುವ ಮನೋಭಾವ ಹೊಂದಿರಬೇಕು ಎಂದರು. ಮಾಡುವ ಯಾವುದೇ ಕೆಲಸವನ್ನು ಹಣ, ಪ್ರಶಸ್ತಿ, ಅಂಕ, ಕೀರ್ತಿ, ಪ್ರಚಾರ, ಸನ್ಮಾನ, ಮೆಚ್ಚುಗೆ ಮಾತಿಗೆ ಮಾಡಬೇಡಿ ಸಂತೋಷಕ್ಕೆ ಮಾಡಿ ಎಂದರು.
ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ ಮಾತನಾಡಿ, ಏನೇ ಬದಲಾವಣೆ ಆಗಬೇಕಾದರೆ ನಿಮ್ಮ ಯೋಚನಾ ಶಕ್ತಿ ಬದಲಾಯಿಸಿಕೊಳ್ಳಿ. ಆಗ ಮಾತ್ರ ಯಾವ ಸಾಧನೆ ಮಾಡಲು ಸಾಧ್ಯ ಎಂದರು. ಓದುವ ಹವ್ಯಾಸ ಬೆಳೆಸಿಕೊಳ್ಳಿ. ಓದುವುದನ್ನು ಕಲಿತರೆ ಜೀವನವನ್ನು ಒಳ್ಳೆ ರೀತಿಯಲ್ಲಿ ಬದಲಾಯಿಸಿಕೊಳ್ಳಬಹುದು ಎಂದರು. ಭಾರತ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್. ಸಿಂಧ್ಯಾ,ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ ಭಟ್, ಶಿಬಿರದ ಮೇಲ್ವಿಚಾರಕಿ ಮಲ್ಲೇಶ್ವರಿ ಜೂಜಾರೆ, ಸ್ಕೌಟ್ಸ್ ವಿಭಾಗದ ಮೇಲ್ವಿಚಾರಕ ನಿತಿನ್ ಮಿಲಾಸ್ ಇದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರೇಂಜರ್ಸ್ ನಾಯಕಿ ಸ್ವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.