ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಅಂದರೆ ಪ್ರತಿಭೆ ವಿಕಾಸನವಾಗಿ ಅರ್ಧ ಜಯಶಾಲಿಯಾದಂತೆ ಪಠ್ಯ ವಿಷಯದ ಕಲಿಕೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಅತ್ಯುತ್ತಮ ಪ್ರತಿಭೆಯನ್ನು ತೋರಿಸಿ ವಿಜೇತರಾಗಿ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಶುಭ ಹಾರೈಸಿದರು. ಡಿ. 9ರಂದು ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜು, ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಜರುಗಿದ 2024-25 ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ವಿದ್ಯಾರ್ಥಿಗಳ ಮೈಸೂರು ವಿಭಾಗೀಯ ಮಟ್ಟದ ಸಾಂಸ್ಕೃತಿಕ ಮತ್ತು ಪಠ್ಯೇತರ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಉಪನಿರ್ದೇಶಕ ಮಾರುತಿ ಅವರು ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಇಂತಹ ಶೈಕ್ಷಣಿಕ ಸಂಸ್ಥೆಯನ್ನು ಕಟ್ಟಿ ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವುದು ಅದ್ಭುತ ಸಾಧನೆಯೇ ಸರಿ. ವಿದ್ಯಾರ್ಥಿಗಳು ಭಾರತದ ಮುಂದಿನ ಆಶಾಕಿರಣಗಳು, ಭವಿಷ್ಯತ್ತಿನಲ್ಲಿ ದೇಶವನ್ನು ಆಳುವವರು. ಆದುದರಿಂದ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್ ಮಾತನಾಡಿ, ಒಂದು ಉತ್ತಮ ಧ್ಯೇಯೋದ್ದೇಶವನ್ನು ಇಟ್ಟುಕೊಂಡು ಸಂಸ್ಥೆಯನ್ನು ಏಳು ಮಂದಿ ಸಮಾನ ಮನಸ್ಕರು ಸೇರಿ ಸಂಸ್ಥೆಯನ್ನು ಕಟ್ಟಿರುವೆವು. ಇಂದು ಹೆಮ್ಮರವಾಗಿ ಬೆಳೆಯುವುದಕ್ಕೆ ಎಲ್ಲರೂ ಕಾರಣೀಕರ್ತರು ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ತಹಶೀಲ್ದಾರ್ ಪ್ರದೀಪ್ ಆರ್. ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನೀತಾ ಪೂಜಾರಿ, ಸಂಸ್ಥೆಯ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ, ಆದರ್ಶ ಎಂ. ಕೆ. ಹಾಗೂ ಗಣಪತಿ ಭಟ್ ಕೆ.ಎಸ್ ಉಪಸ್ಥಿತರಿದ್ದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಲೋಹಿತ್ ನಿರೂಪಿಸಿ ವಂದಿಸಿದರು.
ಸಮಾರೋಪ ಸಮಾರಂಭ ಅಪರಾಹ್ನ 3 ಗಂಟೆಗೆ ನೆರವೇರಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ವರ್ಗೀಸ್ ಪಿ. ಮಾತನಾಡಿ, ಜೀವನದ ಪ್ರತಿ ಹಂತದಲ್ಲೂ ನಾವು ತಿದ್ದಿಕೊಂಡು ಮುನ್ನಡೆಯಬೇಕು. ಸೋಲು ಗೆಲುವಿಗಿಂತ ನಾನು ಏನು ಕಲಿತೆ ಎಂಬುವುದು ಬಹು ಮುಖ್ಯ ಎಂದು ತಿಳಿಸಿದರು. ಉಡುಪಿ ಜಿಲ್ಲಾ ಅನುದಾನಿತ ಹಾಗೂ ಅನುದಾನ ರಹಿತ ಪ್ರಾಂಶುಪಾಲರ ಸಂಘದ ಅಧ್ಯಕ್ಷ ದಿನೇಶ್ ಎಂ ಕೊಡವೂರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ ಕ್ರಿಯೇಟಿವ್ ಸಂಸ್ಥೆಯ ಸಂಸ್ಥಾಪಕರನ್ನು ಅಭಿನಂದಿಸಿದರು. ಸಹ ಸಂಸ್ಥಾಪಕ ಅಶ್ವತ್ ಎಸ್.ಎಲ್. ಮಾತನಾಡಿ, ಶಿಕ್ಷಣ ತರಬೇತಿ ಕೋಣೆಯಲ್ಲಿ ಕಲಿಯುವ ವಿದ್ಯಾರ್ಜನೆಗೆ ಸೀಮಿತವಾಗಿರದೆ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಉನ್ನತೀಕರಿಸಿ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಮುಂತಾದ ಎಲ್ಲಾ ವಿಚಾರಗಳನ್ನು ವಿದ್ಯಾರ್ಥಿ ಜೀವನದಲ್ಲಿ ರೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮೌಲ್ಯಯುತ ಬದುಕು ನಮ್ಮೆಲ್ಲರದ್ದಾಗಬೇಕು ಎಂದು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಗಣ್ಯರನ್ನು ಸ್ವಾಗತಿಸಿದರು.
ಉಪನಿರ್ದೇಶಕ ಮಾರುತಿ, ಉಡುಪಿ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಸುಚೇತಾ, ಸಂಸ್ಥಾಪಕರಾದ ಅಮೃತ ರೈ, ವಿಮಲ್ ರಾಜ್ ಜಿ. ಉಪಸ್ಥಿತರಿದ್ದರು. ಪ್ರಿಯಾಂಕ ನಿರೂಪಿಸಿ ವಂದಿಸಿದರು. ವಿಜೇತ ವಿದ್ಯಾರ್ಥಿಗಳ ಪಟ್ಟಿಯನ್ನು ಕನ್ನಡ ಉಪನ್ಯಾಸಕ ಶಿವಕುಮಾರ್ ವಾಚಿಸಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು.