ಕಲ್ಯಾಣ್ ಪರಿಸರದ ಪ್ರತಿಷ್ಠಿತ ಸಂಸ್ಥೆ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಮತ್ತು ಸಂಸ್ಥೆಯ 22ನೇ ವಾರ್ಷಿಕೋತ್ಸವ ಆಚರಣೆ ಬಹಳ ಅದ್ಭುತವಾಗಿ ನಡೆದಿದೆ. ಈ ಸಂಭ್ರಮದಲ್ಲಿ ಮಹಿಳೆಯರು ಸಂಖ್ಯೆಯ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದು ಇದನ್ನು ಕಂಡಾಗ ನಿಜವಾಗಿಯೂ ಅವರು ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕಾರ, ಸಂಸ್ಕೃತಿಯ ಆರಾಧಕರೆಂದು ತಿಳಿಯುತ್ತದೆ. ಜಾತಿ ಮತ ಭೇದವನ್ನೆಲ್ಲಾ ಬದಿಗೆ ಸರಿಸಿ ನಾವೆಲ್ಲಾ ಸನಾತನ ಧರ್ಮದ ಮತ್ತು ಕರ್ನಾಟಕದ ರಾಯಭಾರಿಗಳಂತೆ ಇಲ್ಲಿ ಎಲ್ಲರೊಳಗೊಂದಾಗಿ ಬದುಕುವುದಕ್ಕೆ ಪ್ರಯತ್ನಿಸೋಣ ಎಂದು ಬಿಲ್ಲವರ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅವರು ಹೇಳಿದರು.
ನವೆಂಬರ್ 17ರಂದು ಅಪರಾಹ್ನ ಕಲ್ಯಾಣ್ ಪಶ್ಚಿಮದ ಪಾಟೀದಾರ್ ನಿಯಂತ್ರಿತ ಸಭಾಗೃಹದಲ್ಲಿ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಮತ್ತು ಸಂಸ್ಥೆಯ 22ನೇ ವಾರ್ಷಿಕೋತ್ಸವ ಸಂಭ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿಯ ಮತ್ತು ಪರಿಸರದ ಮಹಿಳೆಯರಲ್ಲಿರುವ ಈ ಉತ್ಸಾಹ ಮುಂದಿನ ದಿನಗಳಲ್ಲಿ ಇಮ್ಮಡಿಯಾಗಲಿ. ಶ್ರೀ ಶಕ್ತಿಯ ಕೃಪೆ, ಸಹಕಾರ, ನಾಯಕತ್ವದ ಮಾರ್ಗದರ್ಶನ ನಮ್ಮ ಜೊತೆಗಿದ್ದರೆ ಎಲ್ಲವೂ ಸುಗಮ. ಮಹಿಳೆಯರಲ್ಲಿ ಸಂಸ್ಕಾರ, ಸಂಸ್ಕೃತಿ ಹೇಗೆ ಉಳಿದಿದೆ ಮುಂದೆ ಹೇಗೆ ಉಳಿಯಬಹುದಾಗಿದೆ ಎಂಬ ಬಗ್ಗೆ ರಾಮಾಯಣದ ಋಷ್ಯ ಶೃಂಗನ ಕಥೆಯ ಮೂಲಕ ವಿವರಿಸಿ ಹೇಳಿದ ಅವರು, ಈ ಸಂಸ್ಥೆಯ ಕನ್ನಡ ಪರ ಚಟುವಟಿಕೆಗಳನ್ನು ಗುರುತಿಸಿ ನಮ್ಮ ಘನ ಕರ್ನಾಟಕ ಸರಕಾರದಿಂದ ಒಂದಷ್ಟು ಜಾಸ್ತಿ ಅನುದಾನವೂ ಸಿಗುವಂತಾಗಲಿ ಎಂದರು.
ಬಂಟರ ಸಂಘ ಮುಂಬಯಿಯ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು ಅಧ್ಯಕ್ಷ ಕುಂಠಿನಿ ಪ್ರಕಾಶ್ ಹೆಗ್ಡೆಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಸ್. ನಾಯ್ಕ್ ವಾರ್ಷಿಕ ವರದಿಯನ್ನು ವಾಚಿಸಿದರು. ಮಹಿಳಾ ವಿಭಾಗದ ವಾರ್ಷಿಕ ವರದಿಯನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕುಮುದಾ ಶೆಟ್ಟಿ ಅವರು ವಾಚಿಸಿದರು. ಉಪಾಧ್ಯಕ್ಷೆ ಸುಲೋಚನಾ ಜಗದೀಶ್ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಸರೋಜಾ ಆಮಾತಿ, ಜೊತೆ ಕೋಶಾಧಿಕಾರಿ ಜಯರಾಮ ಹೆಗ್ಡೆಯವರು ಅತಿಥಿಗಳನ್ನು ಪರಿಚಯಿಸಿದರು. ಮಲ್ಲಿಕಾರ್ಜುನ ಬಡಿಗೇರ ಸನ್ಮಾನ ಪತ್ರ ವಾಚಿಸಿದರು.
ಸಮಾರಂಭದಲ್ಲಿ ಹಿರಿಯ ಸಾಹಿತಿ ಈಶ್ವರ ಅಲೆವೂರು ಅವರಿಗೆ ಡಾ| ಆರ್. ಕೆ. ಶೆಟ್ಟಿ ಪ್ರಾಯೋಜಕತ್ವದ 2024 ನೇ ಸಾಲಿನ ಕಲ್ಯಾಣ ಕಸ್ತೂರಿ ಸಾಹಿತ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಲಾಯಿತು, ಸಂಸ್ಥೆಯ ಹಿರಿಯ ಸದಸ್ಯರು ಹೋಟೆಲ್ ರಾಮದೇವ್ ಕಲ್ಯಾಣ್ ಇದರ ಮಾಲಕ ರಮೇಶ್ ಡಿ. ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಗೌರವ ಕೋಶಾಧಿಕಾರಿ ಧನಂಜಯ ಶೆಟ್ಟಿ, ಆನಂದ ಭಾವಿಕಟ್ಟೆ, ವಿಜಯಲಕ್ಷ್ಮಿ ಹುಣಸಿಕಟ್ಟಿ, ವನಜಾಕ್ಷಿ ಜಿಗಳೂರು ಮತ್ತಿತರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಜೊತೆ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಲಗಾಂವರವರು ನಿರೂಪಿಸಿದರು. ಸಭಾ ಕಾರ್ಯಕ್ರಮವನ್ನು ಸರೋಜಾ ಅಮಾತಿಯವರು ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಸ್. ನಾಯ್ಕ್ ರವರು ಬಹುಮಾನ ಘೋಷಿಸಿ, ಎಲ್ಲರಿಗೂ ವಂದಿಸಿದರು. ಕೆ.ಎನ್. ಪಾರ್ಕ್ ಹೋಟೆಲ್ ಸತೀಶ್ ಎನ್. ಶೆಟ್ಟಿ ಮತ್ತು ಸಾಂಗ್ರಿಲಾ ರೆಸಾರ್ಟ್ ಅಂಡ್ ವಾಟರ್ ಪಾರ್ಕ್ ನ ಹರೀಶ್ ಶೆಟ್ಟಿ ಮತ್ತು ಕಿಶೋರ್ ಶೆಟ್ಟಿ ಪ್ರಾಯೋಜಕತ್ವದಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಅಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳು, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಗರದ ಪ್ರತಿಷ್ಠಿತ ಸಂಘ ಸಂಸ್ಥೆಗಳಿಗಾಗಿ ಸಮೂಹ ಭಾವಗೀತೆ ಹಾಗೂ ಜಾನಪದ ನೃತ್ಯ ಸ್ವರ್ಧೆಗಳನ್ನು ಆಯೋಜಿಸಲಾಗಿತ್ತು.