ಬಂಟ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಬಂಟರ ಸಂಘಗಳ ಸಹಕಾರದ ಜೊತೆ ಪೋಷಕರ ಪ್ರೋತ್ಸಾಹವೂ ಅತ್ಯಗತ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಹೇಳಿದರು. ಅವರು ಮುಚ್ಚೂರಿನ ಮಿಥಿಲಾ ಸಭಾಭವನದಲ್ಲಿ ಮುಚ್ಚೂರು ಕೊಂಪದವು ಬಂಟರ ಸಂಘದ ತೃತೀಯ ವಾರ್ಷಿಕೋತ್ಸವ ಸಂದರ್ಭ ಬಂಟರಿಂದ ಬಂಟರಿಗಾಗಿ ಶಿಕ್ಷಣ ಮತ್ತು ಆರೋಗ್ಯ ಚಿಕಿತ್ಸಾ ಸಹಾಯ ಯೋಜನೆ ‘ಬೊಲ್ಪು’ ಇದರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿ.ಎ. ಅಶೋಕ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಸಹಕಾರ ನೀಡುವ ಅಗತ್ಯ ಇದೆ ಎಂದರು. ಮುಚ್ಚೂರು ಕೊಂಪದವು ಬಂಟರ ಸಂಘದ ಅಧ್ಯಕ್ಷ ಬಿ. ವಿದ್ಯಾಧರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದು, ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಬಿ. ಜೈರಾಜ್ ರೈ, ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಗುತ್ತಿಗೆದಾರ ಸಂತೋಷ್ ಕುಮಾರ್ ಹೆಗ್ಡೆ, ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರು, ಬೆಂಗಳೂರು ಬಂಟರ ಸಂಘದ ವಿದ್ಯಾರ್ಥಿ ವೇತನ ಹಾಗೂ ಪ್ರಶಸ್ತಿ ಸಮಿತಿಯ ಸಂಪನ್ಮೂಲ ವ್ಯಕ್ತಿ ಉಮೇಶ್ ಶೆಟ್ಟಿ, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಉಪಾಧ್ಯಕ್ಷ ಪ್ರದೀಪ್ ಪಕ್ಕಳ, ಮೂಡಬಿದಿರಿಯ ಉದ್ಯಮಿ ಪ್ರೇಮನಾಥ ಮಾರ್ಲ ಮುಖ್ಯ ಅತಿಥಿಗಳಾಗಿದ್ದರು.
ವಿದ್ಯಾರ್ಥಿ ವೇತನ, ಬಂಟ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಬೊಲ್ಪು ವಿದ್ಯಾನಿಧಿ ಯೋಜನೆಯಡಿಯಲ್ಲಿ ಹಾಗೂ ಕೆಲವರಿಗೆ ವಿಶೇಷ ನೆರವು ನೀಡಲಾಯಿತು. ಸಿಎ ಅಶೋಕ್ ಕುಮಾರ್ ಶೆಟ್ಟಿ, ಎಳತ್ತೂರುಗುತ್ತು ಸಂತೋಷ್ ಕುಮಾರ್ ಹೆಗ್ಡೆ, ಮುಕ್ತಾನಂದ ಶೆಟ್ಟಿ ಹಾಗೂ ದಯಾನಂದ ಶೆಟ್ಟಿ, ಸಾಧಕ ಕೃಷಿಕ ಜಗನ್ನಾಥ ಚೌಟರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಬಿ. ವಿದ್ಯಾಧರ ಹೆಗ್ಡೆ ಪ್ರಸ್ತಾವಿಸಿ, ಸ್ವಾಗತಿಸಿದರು. ಪ್ರಸಾದ್ ಶೆಟ್ಟಿ ವರದಿ ವಾಚಿಸಿದರು. ಪ್ರಶಾಂತ ಶೆಟ್ಟಿ, ಸರಿತಾ ಶೆಟ್ಟಿ, ನಾಗರತ್ನ ಚೌಟ, ಶರ್ಮಿಳಾ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಸನುತಾ ಶೆಟ್ಟಿ ವಂದಿಸಿದರು. ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.