ಮಂದಾರ್ತಿ ಸೇವಾ ಸಹಕಾರಿ ಸಂಘ ಶತಮಾನೋತ್ಸವ ಸಂಭ್ರಮದಲ್ಲಿದೆ. 1925ರ ಜನವರಿ 14ರಂದು ಶಿರೂರು ಗ್ರಾಮದಲ್ಲಿ ಊರಿನ ಹಿರಿಯರು ಸಹಕಾರಿ ಸಂಘವನ್ನು ಆರಂಭಿಸಿದ್ದರು. ಮೊದಲ ವರ್ಷ ಸಂಘವು 24 ಮಂದಿ ಸದಸ್ಯರು, 59 ರೂ. ಪಾಲು ಬಂಡವಾಳ, 25 ರೂ. ಠೇವಣಿ, 50 ರೂ. ಹೊರ ಬಾಕಿ ಸಾಲ, 10 ರೂ. ಜಿಲ್ಲಾ ಬ್ಯಾಂಕಿನ ಸಾಲ ಹೊಂದಿತ್ತು. ಅನಂತರ ಸರ್ವರ ಸಹಕಾರದಿಂದ ಹಂತ ಹಂತವಾಗಿ ಬೆಳೆದು, ಹೆಗ್ಗುಂಜೆ ಗ್ರಾಮದ ಮಂದಾರ್ತಿಗೆ ಸ್ಥಳಾಂತರಗೊಂಡು ಮಂದಾರ್ತಿ ಸೇವಾ ಸಹಕಾರಿ ಸಂಘ ಎನ್ನುವ ಹೆಸರಿನಿಂದ ಹೆಮ್ಮರವಾಯಿತು.
1964-65 ರಲ್ಲಿ ಗೋದಾಮು ರಚನೆ, 71-72 ರಲ್ಲಿ ಆಡಳಿತ ಕಚೇರಿ ನಿರ್ಮಾಣ, 86ರಲ್ಲಿ ನಡೂರಿನಲ್ಲಿ ಗೋಧಾಮು ಹಾಗೂ ಪ್ರಥಮ ಶಾಖೆ ರಚಿಸಲಾಯಿತು. 90ರಲ್ಲಿ ಶೀಲೂರಿನಲ್ಲಿ 2ನೇ ಶಾಖೆ, 2023ರಲ್ಲಿ ಕೇಂದ್ರ ಸ್ಥಾನದಲ್ಲಿ ನೂತನ ಸುಸಜ್ಜಿತ ಸಹಕಾರಿ ಸೌಧ ನಿರ್ಮಾಣಗೊಂಡಿತು. ಪ್ರಸ್ತುತ 2.98 ಕೋಟಿ ರೂ. ಪಾಲು ಬಂಡವಾಳ, 106 ಕೋಟಿ ರೂ. ಠೇವಣಿ, 33.48 ಕೋಟಿ ರೂ. ವಿನಿಯೋಗ, 2.33 ಕೋಟಿ ರೂ. ಕ್ಷೇಮ ನಿಧಿ, 9.15 ಕೋಟಿ ರೂ. ಇತರ ನಿಧಿ, 147 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿ, 625 ಕೋಟಿ ರೂ. ವ್ಯವಹಾರ ನಡೆಸಿದೆ. ಹೆಗ್ಗುಂಜೆ, ಶಿರೂರು, ಕಾಡೂರು, ನಡೂರು, ಬಿಲ್ಲಾಡಿ ಗ್ರಾಮಗಳ ಸದಸ್ಯರ ಸೇವೆಯೊಂದಿಗೆ ಸಮಾಜಮುಖಿಯಾಗಿ ತೊಡಗಿಕೊಂಡು ನೂರನೇ ವರ್ಷದ ಸಂಭ್ರಮಾಚರಣೆಯಲ್ಲಿದೆ.
ಸ್ಥಾಪಕರು, ಮಾಜಿ ಅಧ್ಯಕ್ಷರು, ಆಡಳಿತ ಮಂಡಳಿ, ಸಿಬ್ಬಂದಿ, ಸದಸ್ಯರ ಸಹಕಾರದಿಂದ ಸಂಘವು ಬೆಳೆದು ಬಂದು 1995ರಂದು ಎಚ್. ಗಂಗಾಧರ ಶೆಟ್ಟಿ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಭಿವೃದ್ಧಿಯ ವೇಗ ಹೆಚ್ಚಿತು. ಕಳೆದ 25 ವರ್ಷಗಳಲ್ಲಿ ಅತ್ಯುತ್ತಮ ಸಹಕಾರಿ ಸಂಘಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸಂಘವು ಶತಮಾನೋತ್ಸವ ವರ್ಷದಲ್ಲಿ ನಿರಂತರವಾಗಿ ಅಭೂತಪೂರ್ವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಪ್ರತಿ ಗ್ರಾಮದಲ್ಲಿ ಸದಸ್ಯರ ಸಮಾವೇಶ, ರೈತರಿಗೆ ಸನ್ಮಾನ, ಆರೋಗ್ಯ ತಪಾಸಣೆ ಶಿಬಿರ, ಶಾಖಾ ನೂತನ ಕಟ್ಟಡಗಳಿಗೆ ಶಿಲಾನ್ಯಾಸ ಸಹಕಾರಿ ಕ್ರೀಡಾಕೂಟ ಅದ್ದೂರಿಯಾಗಿ ಜರಗಿದೆ.
ಶತಸಾರ್ಥಕ್ಯ ಸಂಭ್ರಮವು ನವೆಂಬರ್ 3ರಂದು ಬೆಳಗ್ಗೆ 10.30 ರಿಂದ ಮಂದಾರ್ತಿ ರಥಬೀದಿಯಲ್ಲಿ ಜರಗಲಿದೆ. ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಎಚ್. ಗಂಗಾಧರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಬೆಂಗಳೂರು ವಿ.ವಿ. ಕುಲಪತಿ ಡಾ. ಜಯಕರ ಶೆಟ್ಟಿ ಎಂ., ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಡಾ| ದೇವಿ ಪ್ರಸಾದ್ ಶೆಟ್ಟಿ ಬೆಳಪು, ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ರಾಜೇಶ್ ರಾವ್, ಸಹಕಾರ ಸಂಘಗಳ ಉಪನಿಬಂಧಕಿ ಕೆ.ಆರ್. ಲಾವಣ್ಯಾ, ಸಹಾಯಕ ಉಪನಿಬಂಧಕಿ ಸುಕನ್ಯಾ, ಹೆಗ್ಗುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ, ಜಲಂಧರ ಶೆಟ್ಟಿ ಕಾಡೂರು, ಶಾರದಾ ಬಿಲ್ಲಾಡಿ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮಕ್ಕೂ ಮೊದಲು ಮನು ಹಂದಾಡಿ ತಂಡದಿಂದ ಹಾಸ್ಯ, ಯಕ್ಷಗಾನ ನೃತ್ಯ ರೂಪಕ ಜರಗಲಿದೆ.