ನಿಜಕ್ಕೂ ನಾನು ಬಹು ಕಾಲದಿಂದ ಈ ಬಗ್ಗೆ ಆಲೋಚಿಸುತ್ತಲೇ ಇದ್ದೇನೆ. ಮುಖ್ಯವಾಗಿ ಈ ಹೆಣ್ಣು ಮಕ್ಕಳು ತಾವು ತೋರಬಾರದ ಅಂಗಾಗಗಳನ್ನು ತೋರಿಸುವ ಉದ್ದೇಶವಾದರೂ ಏನು? “Skin tight with skin colour” ನ ಪ್ಯಾಂಟ್ ಹಾಕುವ ಉದ್ದೇಶವಾದರೂ ಏನು? ಒಮ್ಮೆ ಆಲೋಚಿಸಿ. (ಬಟ್ಟೆ ಹಾಕದಂತೆ ಕಾಣಬೇಕು ಎಂದಲ್ಲವೇ) ಅಥವಾ ಅದರಿಂದ ಅವರಿಗಾಗುವ ಬೇರೆ ಲಾಭವೇನು? ಈ ಪ್ರಶ್ನೆ ಎಷ್ಟು ಸಮಂಜಸವೋ ಗೊತ್ತಿಲ್ಲ. ಇದು ನನ್ನ ವೈಯಕ್ತಿಕ ಮನದ ಮಾತು. ಕ್ಷಮಿಸಿ. ಆದರೆ ಇದು ಬಹುಕಾಲದಿಂದ ನನ್ನನ್ನು ಕಾಡುತ್ತಿರುವ ಪ್ರಶ್ನೆ? ಇಲ್ಲಿ ಅವರ ಅಂತಸ್ತು, ಹುದ್ದೆ, ಮನೆತನ, ಪದವಿ ಇದೆಲ್ಲದ್ದಕ್ಕಿಂತ ಆಕೆ ಒಬ್ಬಳು ಹೆಣ್ಣು ಎಂಬುದು ಮುಖ್ಯವಾಗುತ್ತದೆ.
ಮರ್ಯಾದೆ ಅನ್ನುವುದು ಹೆಣ್ಣು ಮತ್ತು ಗಂಡು ಎಂಬ ಭೇದವಿಲ್ಲದ್ದು, ಸತ್ಯವೂ. ಆದರೆ ಅದರ ಇತಿಮಿತಿ ಬೇರೆಬೇರೆ. ಗಂಡಿಗೆ ಮತ್ತು ಹೆಣ್ಣಿಗೆ ದೇವರು ಕೊಟ್ಟ ಭಿನ್ನವಾದ ದೇಹಕ್ಕೆ ಬೇಕು ಬೇಕಾದಲ್ಲಿ ಮುಚ್ಚುವ ಮತ್ತು ಎಲ್ಲಿ ಕಾಣಬೇಕೋ ಅಲ್ಲಿ ಕಾಣಿಸುವಂತೆ ಇರಿಸುವ ಹಕ್ಕಿದೆ. ಆದರೆ ನಾಗರಿಕ ಸಭ್ಯತೆಯ ಗುಣ ಲಕ್ಷಣಗಳನ್ನು ಪಾಲಿಸುವ ಕರ್ತವ್ಯವೂ ಇದೆಯಲ್ಲವೇ? ರೂಢಿಯಂತೆ ಈ ಹೆಣ್ಣು ಮಕ್ಕಳು ದೇಹದ ಕೆಲವೊಂದು ಭಾಗವನ್ನು ಪ್ರದರ್ಶನ ಮಾಡುವುದನ್ನು ಕಡ್ಡಾಯವಾಗಿ ಸಮಾಜ ಸ್ವೀಕರಿಸುವುದಿಲ್ಲ. ಸ್ವೀಕರಿಸುವವರ ದೃಷ್ಟಿಕೋನವೇ ಬೇರೆ ಮತ್ತು ಅದರ ಉದ್ದೇಶವೂ ಆರೋಗ್ಯಾದಾಯಕವಲ್ಲ. ತೋರಿಸಬಾರದ ದೇಹದ ಭಾಗಗಳನ್ನು ಅನಾಯಸವಾಗಿ ತೋರಿಸಿದಾಗ ಪ್ರಕೃತಿ ಸಹಜವಾಗಿ ಅದು ಗಂಡಸಾದವನನ್ನು ಉದ್ರೇಕಿಸುತ್ತದೆ. ಅದಕ್ಕೆ ಪ್ರಾಯದ ಮಿತಿ ಇಲ್ಲ. ಸಂಬಂಧದ ಪರಿಧಿ ಇಲ್ಲ!.
ಹಾಗಾಗಿ ನಮ್ಮ ಹಿರಿಯರು ಪ್ರಾಯಕ್ಕೆ ಬಂದ ಅಣ್ಣ ತಂಗಿಯೂ ಒಟ್ಟಿಗೆ ಮಲಗಬಾರದು ಎಂಬ ಕಟ್ಟುನಿಟ್ಟಿನ ಕ್ರಮ ಇರಿಸಿದ್ದರು. ಕಾರಣ ಸ್ಪಷ್ಟ. ಇದರಲ್ಲಿ ಮುಚ್ಚುಮರೆ ಇಲ್ಲ. ಈ ಪ್ರಕೃತಿಯು ಯಾವತ್ತೂ ಸಂತಾನೋತ್ಪತ್ತಿಯ ಶಕ್ತಿಯನ್ನು ಪ್ರೇರೇಪಿಸುತ್ತದೆ. ಇದಕ್ಕೆ ಉದಾಹರಣೆ ಮಳೆ ಬಂದ ಮರುದಿನವೇ ಉತ್ಪತ್ತಿಯಾಗುವ ಅಣಬೆ, ಅದೆಷ್ಟೋ ಕೀಟಗಳು. ಗಮನಿಸಿ, ಅವು ಬಂದ ಕೂಡಲೇ ಸಂತಾನೋತ್ಪತ್ತಿಗಾಗಿ ಉತ್ಸಾಹಿತವಾಗಿರುತ್ತವೆ. ಇದು ಪ್ರಕೃತಿಯ ವಿಚಿತ್ರ! ಇದಕ್ಕೆ ಸಂಬಂಧಗಳ ಅಗತ್ಯವಿಲ್ಲ. ಉಪ್ಪುಹುಳಿ ಖಾರ ತಿನ್ನುವ ದೇಹ “ಕಾಮಾತುರಾನಮ್ ನಾ ಭಯ ನಾ ಲಜ್ಜಾ” ಇದ್ದಕ್ಕೆ ಈಗ ಸೇರಿಸಬೇಕಾಗಿದೆ “ನಾ ಸಂಬಂಧ ನಾ ಪರಿಸರ ನಾ ಪರಿಸ್ಥಿತಿ”. ಆದರೆ ಭಗವಂತ ಕೊಟ್ಟ ಬುದ್ದಿ ಇರುವ ಮನುಷ್ಯ ಇದೆಲ್ಲವನ್ನೂ ಯೋಚಿಸದೆ ಇದ್ದರೆ ಆ ಅಚ್ಚುತ ನಮ್ಮ ಮೇಲೆ ಇಟ್ಟ ವಿಶ್ವಾಸಕ್ಕೆ ಚ್ಯುತಿ ತಂದಂತೆ.
ಇಲ್ಲಿ ಅದ್ಯಾಕೆ ನಾವು ಎಲ್ಲಾ ಮುಚ್ಚಬೇಕು? ಗಂಡಸರು ಎಲ್ಲವನ್ನೂ ತೋರಿಸಿದರೆ ತಪ್ಪಲ್ಲವೇ? ಆದರೆ ನಾವು ಯಾಕೆ ತೋರಿಸಬಾರದು? ಎಂಬುದಕ್ಕೆ, ಹೆಣ್ಣೇ ಯಾಕೆ ಹೆರಬೇಕು? ಗಂಡು ಯಾಕೆ ಹೆರಬಾರದು ಎಂಬುದೇ ಉತ್ತರ. ಈ ಪ್ರಶ್ನೆಗಳಿಗೆ ಭಗವಂತನೇ ಉತ್ತರಿಸಬೇಕು. ಈಗಿನ ತಂದೆ ತಾಯಿಯೂ ಬಾಕಿ ವಿಚಾರದಲ್ಲಿ ಗಂಡು ಹೆಣ್ಣು ಎಂಬ ಭೇದ ಮಾಡುವುದಿಲ್ಲ ಮತ್ತು ಮಾಡುವುದು ಸರಿಯೂ ಅಲ್ಲ. ಆದರೆ ದೇಹ ಪ್ರದರ್ಶನದ ವಿಚಾರ ಬಂದಾಗ ಅಲ್ಲೂ ಸಮಾನತೆ ತೋರುವ ಔದಾರ್ಯ. ಅದು ನಮ್ಮ ಮಗಳ ಮೇಲೆ ನಾವು ತೋರುವ ಪ್ರೀತಿಯಾಗಿರುವುದಿಲ್ಲ. ಆ ಕಾರಣವೇ ಸ್ವೇಚ್ಛೆಯಾಗಿ ಮುಂದೆ ಅದೇ ಅವಳ ಬದುಕಿನಲ್ಲಿ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು. ಜಾಗ್ರತೆ!
ಸಿನೆಮಾ, ಟಿವಿ ರಿಯಾಲಿಟಿ ಶೋಗಳಲ್ಲಿ ಬಟ್ಟೆಯೇ ಹಾಕಿಸದೆ, ಹಾಕಿದರೂ ಎಲ್ಲಾ ಕಡೆ ದೇಹ ಸೌಂದರ್ಯ ಇಣುಕಿಸುವ ಅರ್ಧಂಬರ್ದ ಬಟ್ಟೆಯ ಪ್ಯಾಷನ್ ಡಿಸೈನರ್ ಗಳೆಂಬ ಕಸುಬಿನ ಮಂದಿ ದುಡ್ಡಿಗೋಸ್ಕರ ಏನೆಲ್ಲಾ ಮಾಡಿಸುತ್ತಾರೆ. ದುಡ್ಡು ಸಿಗುತ್ತದೆ, ಪ್ರಚಾರವೂ ಸಿಗುತ್ತದೆ. ಈ ತೆವಲಿನಿಂದ ಆ ಹೆಣ್ಮಕ್ಕಳೂ ಏನೂ ಮಾಡಲು ಹೇಸುವುದಿಲ್ಲ. ಆದರೆ ಅವರನ್ನು ಅನುಕರಿಸುವ ಇಂದಿನ ಸಮಾಜದ ನಮ್ಮ ಹೆಣ್ಮಕ್ಕಳಿಗೆ ಅವರವರ ಮಾನದ ಅರಿವಿಲ್ಲ ಎಂದರೆ ಇದಕ್ಕೆ ಏನೆನ್ನಬೇಕು? ಈ ಬಗ್ಗೆ ಮಾತಾಡುವವನೆ ಹಳ್ಳಿಗುಗ್ಗು, ಸ್ತ್ರೀ ವಿರೋಧಿ, ಜಗತ್ತು ತಿಳಿಯದವ ಎಲ್ಲವೂ ಆಗುತ್ತಾನೆ?. ಅವನ ಧೋರಣೆಯನ್ನು ಅವನ ಮನೆಯವರು, ಕುಟುಂಬದವರು, ಸಮಾಜ ಎಲ್ಲವೂ ವಿರೋಧಿಸುವವರೇ. ಇದು ಇಂದಿನ ವಿಪರ್ಯಾಸ. ಆದರೆ ತಿಳಿದೂ ಸುಮ್ಮನಿರುವ ಎಲ್ಲಾ ನವ ನಾಗರಿಕರ ದೌರ್ಬಲ್ಯತೆ. ಈ ದುರ್ಬಲತೆಯ ಪರಿಣಾಮ ನಾವೇ ನಾಳೆ ಪಶ್ಚತ್ತಾಪ ಪಡುವಂತೆ ಮಾಡುತ್ತದೆ. ಇದು ನಿಶ್ಚಯ. ಈಗಿನ ಹೊಸ ಆಲೋಚನೆಯ ಹೊಸ ಜನರೇಶನ್ ನ ಮಂದಿಗೆ ಬಿಂದಾಸ್ ಇರಲು ಬೇಕು. ಅದಕ್ಕೆ ಅಡ್ಡಿ ಮಾತಾಡುವವರೆಲ್ಲ ಅವರ ವಿರೋಧಿಗಳಾಗಿ ಬಿಡುತ್ತೇವೆ. ಆದರೆ ಅದೆಷ್ಟೋ ಘಟನೆಗಳನ್ನು ನಾವು ದಿನ ಬೆಳಿಗ್ಗೆ ನೋಡುತ್ತೇವೆ ಕೇಳುತ್ತೇವೆ. ತಮ್ಮ ಜೊತೆಯಲ್ಲೇ ಇದ್ದವರಿಂದ ಅನ್ಯಾಯ ಚಿತ್ರ ಹಿಂಸೆಯಿಂದ ಮಾನಭಂಗ. ಇಂತಹ ಚಿತ್ರ ವಿಚಿತ್ರ ಘಟನೆಗಳು ಘಟಿಸುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣವೇ ನಮ್ಮ ಹೆಣ್ಮಕ್ಕಳ ಬಿಂದಾಸ್ ಡ್ರೆಸ್ ಮತ್ತು ಮಿತಿಮೀರಿದ ಸಲುಗೆ. ಇದನ್ನು ಗಮನಿಸಲೇ ಬೇಕು. ಸ್ವಾತಂತ್ರ್ಯ ಮತ್ತು ಸ್ವೇಚ್ಚಾಚಾರ, ಮಾನ ಮತ್ತು ಮರ್ಯಾದೆ ಇದನ್ನು ನಾವು ನಾವೇ ಮನಸ್ಸಿನಲ್ಲಿ ಇಟ್ಟು ವ್ಯವಹರಿಸಬೇಕು. ಯಾರೊಂದಿಗೆ ಎಲ್ಲಿ ಹೇಗೆ ಉಡುಗೆ ತೊಡಬೇಕು? ಎಲ್ಲಿ ಮುಟ್ಟಬಹುದು? ಯಾವುದು ಸ್ನೇಹ? ಯಾವುದು ಕಾಮ ಪ್ರೌಢರಾದ ಮೇಲೇಯೂ ಎಲ್ಲವನ್ನೂ ಗಮನಿಸಿದ ಮೇಲೆಯೂ ಈ ಅರಿವು ಉಂಟಾಗದಿದ್ದರೆ ಮತ್ತೆ ಸಮಾಜವನ್ನು, ಹುಡುಗರನ್ನು ದೂರಿ ಪ್ರಯೋಜನವಿಲ್ಲ. ಹೇಗೆ ಹೊಸ ಮೊಬೈಲ್ ಒಂದಕ್ಕೆ ಸ್ಕ್ರೀನ್ ಗಾರ್ಡ್, ಕವರ್ ಎಂದೆಲ್ಲ ಜಾಗ್ರತೆ ಮಾಡುತ್ತೇವೋ ಹಾಗೆಯೇ ನಮ್ಮ ಮುಖವನ್ನು ಅವಲೋಕಿಸಿದಂತೆಯೇ ನಮ್ಮ ಮೈ ಮುಚ್ಚುವ ಉಡುಗೆಯ ಬಗೆಗೂ ಕಾಳಜಿ ವಹಿಸಿದರೆ ಅದೆಷ್ಟೋ ಕೆಟ್ಟ ದೃಷ್ಟಿಯ ಕಾಮುಕ ಜನರ ಆಲೋಚನೆಗೂ ಕಡಿವಾಣ ಹಾಕಬಹುದು. ಇದು ಸತ್ಯ.
-ಶರತ್ ಶೆಟ್ಟಿ ಪಡುಪಳ್ಳಿ.