ಗುರು ಬ್ರಹ್ಮ, ಗುರು ವಿಷ್ಣು ಗುರು ದೇವೋ ಮಹೇಶ್ವರ ಎನ್ನುವಂತೆ ಶಿಕ್ಷಕರಿಗೆ ಸಮಾಜದಲ್ಲಿರುವಂತಹ ಸ್ಥಾನಮಾನ ಎಂಥವರನ್ನು ಕೂಡ ಸಂಭ್ರಮಿಸುತ್ತದೆ. ವಿದ್ಯಾರ್ಥಿಗಳನ್ನು ಪ್ರಜ್ಞಾವಂತರಾಗಿ ಮಾಡಿ ಶೈಕ್ಷಣಿಕ ಬುನಾದಿಯಲ್ಲಿ ತಳಗಟ್ಟಿನವರೆಗೂ ಪ್ರಬಲನಾಗಿ ತೋರ್ಪಡಿಸುವ ಶಕ್ತಿ ಇರುವುದು ಗುರುಗಳಿಗೆ ಮಾತ್ರ. ಬಿದ್ಕಲ್ ಕಟ್ಟೆ ಕೆಪಿಎಸ್ ನ ಉಪ ಪ್ರಾಂಶುಪಾಲರಾದ ಎಂ ಕರುಣಾಕರ ಶೆಟ್ಟಿಯವರು ಅವರು ಅಗ್ರಪಂತಿಯಲ್ಲಿ ನಿಲ್ಲುತ್ತಾರೆ. ಸರಳ ಸಜ್ಜನ ಮೃದು ಸ್ವಭಾವದ ಇವರ ವ್ಯಕ್ತಿತ್ವ ಎಂಥವರನ್ನು ಕೂಡಾ ಆಕರ್ಷಿಸಿ ಬಿಡುತ್ತದೆ. ಯಾವ ಪ್ರಶಸ್ತಿಯ ಹಿಂದೆ ಬಿದ್ದವರಲ್ಲ. ಇಂತಹ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿ ಅಂತ ಅಧಿಕಾರಿಗಳನ್ನು ಕೇಳಿದವರಲ್ಲ. ಆದರೂ ಸಜ್ಜನ ಶಿಕ್ಷಕರಾಗಿ, ಉತ್ತಮ ಕಾರ್ಯನಿರ್ವಹಣೆ ಕಂಡುಕೊಂಡ ಕರುಣಾಕರ ಶೆಟ್ಟಿಯವರು ಇತರ ಶಿಕ್ಷಕರಿಗೆ ಮಾದರಿಯಾಗಿ ನಿಲ್ಲುತ್ತಾರೆ.
ಶಿಕ್ಷಕರ ಕಾರ್ಯನಿರ್ವಹಣೆ :- ಶ್ರೀಯುತರು ಉಡುಪಿ ಜಿಲ್ಲೆಯ ಆವರ್ಸೆಯ ಸರಕಾರಿ ಪ್ರೌಢಶಾಲೆಯಲ್ಲಿ 1994 ರಿಂದ ಕನ್ನಡ ಅಧ್ಯಾಪಕರಾಗಿ ತಮ್ಮ ಸೇವೆಯನ್ನು ಆರಂಭಿಸಿ 1998 ರಂದು ಕೆಪಿಎಸ್ ಬಿದ್ಕಲ್ ಕಟ್ಟೆಗೆ ವರ್ಗಾವಣೆಗೊಂಡು ದಿನಾಂಕ 9.11.2020 ರಂದು ಅದೇ ಸಂಸ್ಥೆಯ ಉಪ ಪ್ರಾಂಶುಪಾಲರಾಗಿ ಭಡ್ತಿ ಹೊಂದಿದರು. ಸೃಜನಶೀಲ ವ್ಯಕ್ತಿತ್ವದ ಇವರು ತಮ್ಮ ಶಿಸ್ತು, ಸರಳ, ಪ್ರಾಮಾಣಿಕ ವ್ಯಕ್ತಿತ್ವಗಳಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗಾಂಭೀರ್ಯ ಮತ್ತು ವಿನಯದಿಂದ ಕೂಡಿದ ಇವರ ಮಾತುಗಳು ಇವರ ವ್ಯಕ್ತಿತ್ವದ ಗೌರವವನ್ನು ಹೆಚ್ಚಿಸಿದೆ. ಸಂಸ್ಥೆಯ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವಲ್ಲಿ ಹಳೆ ವಿದ್ಯಾರ್ಥಿಗಳು, ಪೋಷಕರ ಜೊತೆಯಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಇವರ ಪಾತ್ರ ಬಹಳ ಮುಖ್ಯವಾದದ್ದು. ಇದೀಗ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಸಾಲಿಗೆ ಕರುಣಾಕರ ಶೆಟ್ಟಿ ಅವರು ಆಯ್ಕೆ ಆಗಿರುವುದು ಶಾಲಾ ಆಡಳಿತ ರಂಗದಲ್ಲಿ, ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ, ಊರಿನವರಲ್ಲಿ ಹೆಮ್ಮೆ ತಂದಿದೆ. ಇವರ ಉತ್ತರಾ ಸೇವಾ ಅವಧಿಯು ನಿರಂತರವಾಗಿ ಇನ್ನಷ್ಟು ವಿದ್ಯಾರ್ಥಿಗಳ ಭವಿಷ್ಯ ಪ್ರಜ್ವಲಿಸಲಿ ಎನ್ನುವುದೇ ಮಾಧ್ಯಮ ಸಂಸ್ಥೆಯ ಹಾರೈಕೆ.