ಇದು ಯಾವುದೇ ಆರಾಧನಾ ಪದ್ಧತಿಯನ್ನು ವೈಭವಿಕರಿಸುವ ಅಥವಾ ಕನಿಷ್ಠ ಅಂತ ಹೇಳುವ ಉದ್ದೇಶದಿಂದ ಬರೆದದ್ದು ಅಲ್ಲ. ವೈದಿಕರು ಮಾಡುವ ದೇವರ ಆರಾಧನೆ ಹಾಗೂ ಅವೈದಿಕ, ತೌಳವರು ಮಾಡುವ ದೈವಗಳ (ಭೂತಗಳ ಅಥವಾ ಸತ್ಯಗಳ) ಆರಾಧನೆ ಎರಡು ಸಂಪೂರ್ಣ ಬೇರೆ ಬೇರೆ. ವೈದಿಕರು ಮಾಡುವ ದೇವರ ಆರಾಧನೆ ಆಗಮ ಶಾಸ್ತ್ರದ ಪ್ರಕಾರ ಆದರೆ, ತೌಳವರು ಮಾಡುವ ದೈವಗಳ ಆರಾಧನೆ ಯಾವುದೇ ಗ್ರಂಥಗಳ ಪ್ರಕಾರ ನಡೆಯುವಂತದ್ದಲ್ಲ. ಇಲ್ಲೊಂದು ಆಲಿಖಿತ ತಲೆತಲಾಂತರದಿಂದ ಬಂದಿರುವ ನಿಯಮವಿದೆ. ವೈದಿಕರು ತುಳುನಾಡಿಗೆ ಬರುವ ಮೊದಲೇ ಈ ಮಣ್ಣಿನಲ್ಲಿ ದೈವಗಳ ಆರಾಧನೆ ನಡೆಯುತ್ತಿತ್ತು. ನಮ್ಮ ಆರಾಧನಾ ಪದ್ಧತಿ ಬಹಳ ಸರಳ. “ಗುಡ್ಡದ ಪೂ, ತೋಡುದ ನೀರ್” ಇಷ್ಟರಿಂದಲೇ ಸಂತೃಪ್ತರಾಗುತ್ತಿದ್ದವು ನಮ್ಮ ದೈವಗಳು. ಇದರಲ್ಲಿ ಭಾಗವಹಿಸುವರು, ಗಡಿಕಾರರು, ಬಿಲ್ಲವರು, ಮಡಿವಾಳರು ಮತ್ತು ಕೆಲೆಸಿಗಳು. ದೈವಗಳನ್ನು ಶುದ್ಧೀಕರಿಸುವುದಕ್ಕೂ ಪುಣ್ಯಾರ್ಚನೆ ಇತ್ಯಾದಿಗಳ ಅಗತ್ಯ ಇಲ್ಲ. ಬಿಲ್ಲವರು ಮತ್ತು ಮಡಿವಾಳರೆ ಮಾಡುತ್ತಿದ್ದರು. ನಿಜಕ್ಕಾದರೆ ದೈವಗಳನ್ನು ಶುದ್ಧೀಕರಿಸುವ ಅಗತ್ಯವೇ ಇಲ್ಲ, ಅವುಗಳು ಶುದ್ಧವಾಗಿಯೆ ಇರುತ್ತದೆ. ಶುದ್ಧೀಕರಿಸಬೇಕಾದದ್ದು ನಮ್ಮನ್ನು ನಾವು. ಭೂತಸ್ಥಾನದ ಒಳಗೆ ಬ್ರಹ್ಮಕಲಶ, ಸತ್ಯನಾರಾಯಣ ಪೂಜೆ, ಭಜನೆ ಇತ್ಯಾದಿಗಳ ಅಗತ್ಯವೇ ಇಲ್ಲ. ಭೂತಸ್ಥಾನದ ಒಳಗೆ ಇಂಥಹುದನ್ನು ಮಾಡಿಸುವುದೆಂದರೆ, ದೇವಸ್ಥಾನದ ಒಳಗೆ ಮಸೀದಿಯ ಮುಲ್ಲಾನನ್ನು ಕರೆದು ಅವರಿಂದ ಕಲ್ಮಾ ಓದಿಸಿದ ಹಾಗೆ. ಎಲ್ಲಾ ಧರ್ಮದ ಆರಾಧನಾ ಪದ್ಧತಿಗಳು ಶ್ರೇಷ್ಠವೇ ಹೌದು, ಆದರೆ ಒಂದನ್ನು ಇನ್ನೊಂದರೊಂದಿಗೆ ಬೆರೆಸುವುದು ಸರಿಯಲ್ಲ.


ಇತ್ತೀಚೆಗೆ ಹರಡುತ್ತಿರುವ ಇನ್ನೊಂದು ದೊಡ್ಡ ರೋಗ, ವೃತ್ತಿಪರ ಮಧು ಹೇಳುವವರನ್ನು ಕರೆಸುವುದು. ದೈವವನ್ನು “ಆಕಾಸ ಬುಡ್ಲ, ಭೂಮಿಗ್ ಬಲ, ಭೂಮಿನ್ ಬುಡ್ಲ, ಮಣೆ ಮಂಚಾವುನ್ ಸೇರೊನ್ಲ” “ಮಣೆ ಮಂಚಾವಿ”ನಿಂದ ದೈವ ಕಟ್ಟಿದವನ ಮೖಮೇಲೆ ಆವೇಶ ಆಗುವಂತೆ ಪ್ರಾರ್ಥಿಸುವ ಕ್ರಮ ಇದೆ. ಇದು ಒಂದೆರಡು ಮಾತುಗಳಲ್ಲಿ ಮನೆಯ ಒಂದು ಸಣ್ಣ ಮಗು ಹೇಳಿದರೂ ದೈವಗಳು ಕಟ್ಟಿದ ಮಾಣಿಯ ಮೈಯಲ್ಲಿ ಬರಬೇಕು. ಈಗ ಆ ಕೆಲಸವನ್ನು ವೃತ್ತಿಪರರು ವಹಿಸಿಕೊಂಡಿದ್ದಾರೆ. ಕೆಲವರು ಅರ್ಧ ಗಂಟೆ ದೈವದ ಸಂಪೂರ್ಣ ಕಥೆ ಹೇಳಿ, ದೈವವನ್ನು ಆಹ್ವಾನಿಸುತ್ತಾರೆ. ಇಂತಹ ಸಂಬಂಧವೇ ಇಲ್ಲದ ಕಥೆಗಳನ್ನು ಕೇಳಿ ನಾನು ಸಾಕಷ್ಟು ಹಿಂಸೆ ಅನುಭವಿಸಿದ್ದೇನೆ. ಲೆಕ್ಕೆಸಿರಿ (ನೆನಪಿಡಿ ರಕ್ತೇಶ್ವರಿ ಅಲ್ಲ) ದೈವದ ಕೋಲದಲ್ಲಿ ಲೆಕ್ಕೆಸಿರಿಯನ್ನು, ರಕ್ತಬೀಜನನ್ನು ಕೊಂದ ರಕ್ತೇಶ್ವರಿ ಎಂಬ ಹಾಗೆ ಬಿಂಬಿಸಿ, ಸಂಪೂರ್ಣ ದುರ್ಗಾ ಸಪ್ತಶತಿಯ ಕಥೆಯನ್ನು ಹೇಳುವುದನ್ನು, ಪಂಜುರ್ಲಿಯನ್ನು,(ಈಗ ಅವನಿಗೆ ವಾರಹಮೂರ್ತಿ ಅನ್ನುವ ಹೊಸ ಹೆಸರು ಬಂದಿದೆ) ಹಿರಣ್ಯಾಕ್ಷನನ್ನು ಕೊಂದ ವರಾಹ ಎಂಬ ಹಾಗೆ ಬಿಂಬಿಸಿ ತ್ರಿಜನ್ಮ ಮೋಕ್ಷದ ಕಥೆಯನ್ನು ಹೇಳುವುದನ್ನು ಹೇಳುವಾಗ ನಮ್ಮ ಭೂತಾರಾಧನೆ ಹಳಿ ತಪ್ಪಿದೆ ಅನ್ನೋದು ಸ್ಪಷ್ಟವಾಗುತ್ತಿದೆ. ದೈವದ ಪಾಡ್ದನ ಹೇಳುವಾಗ ಅದರಲ್ಲಿರುವ ದೈವದ ಕಥೆಗೂ, ಈ ಮಧು ಹೇಳುವವರ ಕಥೆಗೂ ದೂರ ದೂರದವರೆಗೂ ಯಾವುದೇ ಸಂಬಂಧ ಇಲ್ಲ. ಆದರೂ ದೈವ ಕಟ್ಟಿದವ ತುಂಬಾ ಹೊತ್ತು ಗಗ್ಗರ ಅಲುಗಾಡಿಸುತ್ತಾ ಅದನ್ನು ಕೇಳಿಸಿಕೊಳ್ಳುವವರಂತೆ ನಟಿಸುತ್ತಾನೆ. ಸುಮಾರು ಅರ್ಧ ಗಂಟೆಯ ಪ್ರವಚನದ ನಂತರವೇ ದೈವ ಮೈಯಲ್ಲಿ “ವಸಾಯ” ಆಗುವುದು.
ಈಗಿನ ಎಲ್ಲಾ ಬೂತಗಳಿಗೂ ಲಾಗಾಯ್ತಿನಿಂದ ಉಪಯೋಗಿಸುತ್ತಿದ್ದ ಅರದಾಳವನ್ನು ಬಿಟ್ಟು ಆಟದವರು ಉಪಯೋಗಿಸುವ ಸಫೇದ್, ಇಂಗಳೀಕ, ಎಣ್ಣೆ ಮಸಿ, ತುಟಿಗೆ ಕೆಂಪು ಹಚ್ಚಿಕೊಂಡು ದೇವೀ ಮಹಾತ್ಮೆಯ ದೇವಿ ವೇಷವನ್ನು ನೆನಪಿಸುತ್ತಿವೆ. ಮಲ್ಲಿಗೆಯ ಉಪಯೋಗವೂ ಭರಪೂರ ಇದೆ. ನಿಜವಾಗಿ ಉಪಯೋಗಿಸಬೇಕಾದ ದೈವಗಳ ಆರಾಧನೆಗೆ ಬೇಕಾದದ್ದು ಕನಕಾಂಬರ ಮತ್ತು ಕೆಂಪುಳದ ಹೂವುಗಳು ಮಾತ್ರ. ಕ್ರಮೇಣ ದೇವಿಯಂತೆ ಆರು ಎಕ್ಸ್ಟ್ರ ಕೈಗಳನ್ನು ಕಟ್ಟಿಕೊಳ್ಳುವ ಸಂಪ್ರದಾಯ ಪ್ರಾರಂಭವಾದರೂ ಆದೀತು. ಇನ್ನೊಂದು, ಎಲ್ಲಾ ಬೂತಗಳೂ ಕೆನ್ನೆಗೆ, ಯಕ್ಷಗಾನದ ಉದ್ದ ನಾಮದ ವೇಷಗಳಂತೆ, ಮುದ್ರೆ ಬರೆಯುವುದು. ನಿಜಕ್ಕಾದರೆ ಇದು ವೈಷ್ಣವರ ಆಚರಣೆ. ಅವರು ಎರಡೂ ಕಣ್ಣಿನ ಕೆಳಗೆ ಶ್ರೀಗಂಧ ಹಚ್ಚುವುದನ್ನು ಮುದ್ರೆ ಅನ್ನುತ್ತಾರೆ. ದೈವಗಳಿಗೆ ಮುದ್ರೆ ಬರೆಯುವುದು ಶುದ್ಧ ತಪ್ಪು. (ಅವುಗಳು ಈಶ್ವರನ ಗಣಗಳೋ ವಿಷ್ಣುವಿನ ಗಣಗಳೋ ಎಂಬುದು ಬೇರೆ ವಿಷಯ) ಇಂತಹ ಅಪಸವ್ಯಗಳು ಕೊನೆಗೊಳ್ಳದೇ ಹೋದರೆ, ನಮ್ಮ ನಿಜವಾದ ದೈವಾರಾದನೆ ಹಳ್ಳ ಹಿಡಿಯುವುದರಲ್ಲಿ ಸಂಶಯ ಇಲ್ಲ. ನಾಗಬನಗಳನ್ನು ಕಡಿದು ಕಾಂಕ್ರೀಟಿನ ಗುಡಿಕಟ್ಟಿ ನಾಗನನ್ನು ಲಗಾಡಿ ತೆಗೆದು ಆಗಿದೆ. ನಾವು ಮುಳಿಹುಲ್ಲಿನ ಮನೆಯಿಂದ ಹಂಚಿನ ಮನೆಗೆ, ಹಂಚಿನ ಮನೆಯಿಂದ ಕಾಂಕ್ರೀಟ್ ಮನೆಗೆ ಸ್ಥಳಾಂತರಗೊಂಡಿದ್ದೇವೆ. ಮತ್ತೆ ನಮ್ಮ ನಾಗ ಯಾಕೆ ಇನ್ನೂ ಮರದ ನೆರಳಿನ ತಂಪು ಜಾಗದಲ್ಲಿ ಇರಬೇಕು? ಅವನಿಗೂ ಒಂದು ಕಾಂಕ್ರೀಟ್ ಮನೆ ಕಟ್ಟಿಸಿ ಕೊಡೋಣ ಅನ್ನುವ ಮನೋಭಾವ ನಮ್ಮದು. ನಾಗ ಕಾಂಕ್ರೀಟಿನ ಬಿಸಿಯಲ್ಲಿ ನಿಲ್ಲುವುದಿಲ್ಲ ಅಂತ ಯಾರಾದರೂ ಹೇಳಿದರೆ, ಅವನಿಗೆ ಒಂದುವರೆ ಟನ್ನಿನ ಎಸಿ ಹಾಕಿ ಕೊಡಲು ನಾವು ಸಿದ್ಧ. ನಮ್ಮ ನಾಗರಾಧನೆ ಮತ್ತು ದೈವರಾದನೆಯ ಬಗ್ಗೆ ತುಳು ಸಂಸ್ಕೃತಿಯ ಬಗ್ಗೆ ಕಾಳಜಿ ಇದ್ದ ಗುತ್ತು ಮನೆಗಳ ಗಡಿಕಾರರು ಹಾಗೂ ಸಂಬಂಧಪಟ್ಟವರು ಕಲೆತು ಚರ್ಚಿಸಬೇಕೇ ಹೊರತು ಅಷ್ಟಮಂಗಳದಿಂದ ಪರಿಹಾರವಾಗುವ ವಿಷಯ ಅಲ್ಲ ಇದು.
ಲೇಖನ : ದಾಮೋದರ ಶೆಟ್ಟಿ ಇರುವೈಲು.








































































































