ಇತ್ತೀಚಿಗೆ ಪರಿಚಯವಾದ ಒಬ್ರು ಮಾತನಾಡುತ್ತ ನನ್ನ ಬಳಿ ನಿಮ್ಮ ಹೆಂಡತಿ ಏನು ಕೆಲಸ ಮಾಡೋದು ಎನ್ನುವುದಾಗಿ ಪ್ರಶ್ನಿಸಿದ್ರು ಅವಳದ್ದು ಅರಣ್ಯ ಇಲಾಖೆ ಉಪವಲಯ ಅರಣ್ಯಾಧಿಕಾರಿಗಳು ಅಂದೆ. ಅದು ಹೇಗೆ ಮರ್ರೆ ನಿಮಗೆ ಅವರನ್ನು ಮದುವೆ ಮಾಡಿ ಕೊಟ್ರು ಅಂದ್ರು ??? ಕಸಿವಿಸಿಯಾದರೂ ವ್ಯಂಗ್ಯವೆನಿಸಿದರೂ ಯಾಕೆ ಎಂದು ಮರು ಪ್ರಶ್ನಿಸಿದೆ ಅಲ್ಲಾ ನೀವು ನೋಡಿದ್ರೆ ಪ್ರಾಥಮಿಕ ಶಾಲೆಯ ಟೀಚರು ಅವರು ಅರಣ್ಯ ಇಲಾಖೆಯ ಆಫೀಸರ್ ನಿಮ್ಮ ಅದೃಷ್ಟ ಅಂದ್ರು. ನಾನೇ ಮಹಾನ್ ವ್ಯಕ್ತಿ ಎಂದುಕೊಂಡಿದ್ದವನ ಜಂಘಾಬಲ ಉಡುಗಿ ಹೋಯಿತು. ಈ ಸಮಾಜದರಲ್ಲಿರುವ ಮನುಷ್ಯರು ನಾವು ಅಂದುಕೊಂಡಷ್ಟು ಸುಲಭವಲ್ಲ. ಎಲ್ಲವನ್ನು ಎಲ್ಲರನ್ನೂ ಲೆಕ್ಕಹಾಕಿ ನೋಡ್ತಾರೆ ಅಂತ ಅರಿವಾಯಿತು ಇನ್ನು ಸ್ವಲ್ಪ ಸಮಯ ಬಿಟ್ಟಿದ್ರೆ ನಿನಗೆ ಮದುವೆಯಾಗ್ಲಿಕ್ಕೆ ಹೆಣ್ಣು ಕೊಟ್ಟಿದ್ದೆ ಹೆಚ್ಚು ಅಂತ ಹೇಳುತ್ತಿದ್ರೇನೋ ಆ ಅವಕಾಶ ಕೊಡದೆ ನಮ್ಮ ಮಾತನ್ನು ತುಂಡರಿಸಿದೆ. ತದನಂತರ ಮನಸ್ಸಿನಲ್ಲಿ ಒಂದಿಷ್ಟು ಆಲೋಚನೆಗಳು ಅವರು ಕೇಳಿದ್ದು ಸರಿ ಇದೆ ಅಲ್ವಾ ನಾನು ಜೀವನದಲ್ಲಿ ಏನನ್ನ ಸಾಧಿಸಿದ್ದೇನೆ ! ಗುರುತರವಾದಂತದ್ದು ಏನೂ ಇಲ್ಲ ಅಲ್ವಾ ? ನನ್ನ ಯಶಸ್ಸಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನಾ ಅಥವಾ ಅದರಲ್ಲೂ ಲೋಪ ಆಗಿದೆಯಾ ಎನ್ನುವಂತ ನೂರಾರು ಪ್ರಶ್ನೆಗಳು ತಲೆಯನ್ನು ತಿವಿಯತೊಡಗಿದವು. ಒಂದು ಹಂತದಲ್ಲಿ ನಾನು ಬುದ್ದಿವಂತ ಹುಡುಗನೇ ಆದರೆ ನನ್ನ ಪ್ರಯತ್ನಗಳು ನಿರಂತರವಾಗಿರಲಿಲ್ಲ. ಜ್ಞಾನೋದಯವಾಗುವಾಗ ವಯಸ್ಸು 25ಕ್ಕೆ ಕಾಲಿಟ್ಟಿತ್ತು. ಒಂದೆರಡು ವರುಷಗಳ ಕಾಲ ಡಿ.ಇಡಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ, ತದನಂತರ ಆಗುಂಬೆ ಮತ್ತು ಉಜಿರೆಯ SDMನಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸಿ 2013ರಲ್ಲಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಪರೀಕ್ಷೆ ಬರೆದಿದ್ದೆ ಮೈಸೂರು ವಿಭಾಗದಲ್ಲಿ ಬರೆದ್ರೆ ಸ್ಪರ್ಧೆಗಳು ಹೆಚ್ಚಿರುತ್ತೆ ಆಂಗ್ಲ ಭಾಷಾ ಶಿಕ್ಷಕನಾಗಲು ಬೆಳಗಾವಿ ವಿಭಾಗದಲ್ಲಿ ವಿಪುಲ ಅವಕಾಶ ಇರಬಹುದು ಅಲ್ಲಿರುವವರಿಗೆ ಇಂಗ್ಲೀಷ್ ಭಾಷೆಯಲ್ಲಿ ಅಷ್ಟೊಂದು ಹಿಡಿತವಿಲ್ಲ ಎನ್ನುವ ನನ್ನ ತಪ್ಪು ಕಲ್ಪನೆಯಿಂದಾಗಿ ಕಾರವಾರ ಪರೀಕ್ಷ ಕೇಂದ್ರವನ್ನು ಆಯ್ಕೆ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಫಲಿತಾಂಶ ಬಂದಾಗ ಮೈಸೂರು ವಿಭಾಗಕ್ಕಿಂತ ಹೆಚ್ಚಿನ cut off ಬೆಳಗಾವಿ ವಿಭಾಗಕ್ಕೆ ನಿಂತಿತ್ತು ನಾನು ಉಡುಪಿಯಲ್ಲಿ ಪರೀಕ್ಷೆ ಬರೆದಿದ್ರೆ ಅದೇ ಅಂಕಕ್ಕೆ ಆವತ್ತೆ ಸರಕಾರಿ ಕೆಲಸ ಸಿಗುತ್ತಿತ್ತು ಅಲ್ಲಿಯೂ ಅದೃಷ್ಟ ಕೈ ಹಿಡಿಯಲಿಲ್ಲ ತದನಂತರ ಇಲ್ಲೇ ಇದ್ರೆ ಖಾಸಗಿಯಲ್ಲಿ ನನ್ನ ಬದುಕು ಮುಗಿಯುತ್ತೆ ಎನ್ನುವ ಆಲೋಚನೆಯಿಂದ ದೃಢ ನಿರ್ಧಾರ ತೆಗೆದುಕೊಂಡು ಇದ್ದೊಂದು ಬ್ಯಾಗಿಗೆ ಬಟ್ಟೆಯನ್ನು ತುರುಕಿಕೊಂಡು 2013 ಉಜಿರೆಯಲ್ಲಿ ಕೆಲಸ ಬಿಟ್ಟಾಗ PFನಿಂದ ಸಿಕ್ಕ 20,000 ರೂಪಾಯಿ ಹಿಡಿದುಕೊಂಡು ಧಾರವಾಡಕ್ಕೆ ಕೆಂಪು ಬಸ್ಸನ್ನು ಏರಿದ್ದೆ.

ವಿದ್ಯಾಕಾಶಿಯದು. ಕನಸುಗಳು ಗರಿಗೆದರಿತ್ತು. 10,000 ರೂಪಾಯಿ ತರಬೇತಿ ಶುಲ್ಕ ತುಂಬಿ 3,500 ರೂಪಾಯಿ ಒಂದು ತಿಂಗಳಿನ ಹಾಸ್ಟೆಲ್ ಫೀಸ್ ಕಟ್ಟಿ ಆಗಿನ ಕಾಲದ ಪ್ರತಿಷ್ಠಿತ ತರಬೇತಿ ಸಂಸ್ಥೆ ಕ್ಲಾಸಿಕ್ KAS & IAS ಸ್ಟಡಿ ಸರ್ಕಲ್ ನಲ್ಲಿ KAS ತರಬೇತಿಗೆ ಸೇರಿದ್ದೆ. ಮನೆಯಲ್ಲಿ ನೂರಾರು ಸಮಸ್ಯೆಗಳು, ಸಹಾಯ-ಸಹಕಾರಕ್ಕೆ ನಮ್ಮವರು ಅಂತ ಯಾರು ಇಲ್ಲದಿರುವ ಸ್ಥಿತಿ, ಅವಿದ್ಯಾವಂತರಾಗಿ ಪಿತ್ರಾರ್ಜಿತ ಆಸ್ತಿಯನ್ನು ನೋಡಿಕೊಂಡಿದ್ದ ತಂದೆಯನ್ನು ವಿದ್ಯಾವಂತರೆನಿಸಿಕೊಂಡಿದ್ದ ಅವರ ಮನೆಯವರು ಇವನಿಗೆ ಪಾಲು ಕೊಡಬೇಕಾಗುತ್ತೆ ಅಂತ ಅವರನ್ನು ಮನೆಯಿಂದ ಹೊರದಬ್ಬಿ ಎರಡು ದಶಕಗಳೇ ಸಂದಿತ್ತು. ಆ ಸಂದರ್ಭದಲ್ಲಿ ನನ್ನ ಬಳಿ ಇದ್ದದ್ದು ಎರಡೇ. ಒಂದು ನನ್ನ ಬದುಕಿಗೆ ದಾರಿದೀಪವಾದ 2015 ರಲ್ಲಿ ನಾನು ಅಕಾಲಿಕವಾಗಿ ಕಳೆದುಕೊಂಡ ನನ್ನ ಜೀವನದ ಬಹುದೊಡ್ಡ ಆಸ್ತಿ ತಮ್ಮಯ್ಯಣ್ಣ. ಮತ್ತೊಂದು ಏನಾದರೂ ಸಾಧಿಸಬೇಕೆನ್ನುವ ಹುಚ್ಚು ಛಲ. ಇದ್ದ ಹಣದಲ್ಲಿ ಒಂದು ರೂಪಾಯಿಯನ್ನು ಅನಗತ್ಯವಾಗಿ ಖರ್ಚು ಮಾಡದೆ ಮೂರುವರೆ ತಿಂಗಳ ತರಬೇತಿ ಮುಗಿಸಿದೆ. ನನ್ನ ಆಲೋಚನೆ ಇಷ್ಟೇ ತರಬೇತಿ ಮುಗಿದ ನಂತರ ನೇಮಕಾತಿಗೆ ಕರೆ ಮಾಡಬಹುದು ನನಗೊಂದು ಯಾವುದಾದರೂ ಕೆಲಸ ಸಿಗುತ್ತೆ ಎನ್ನುವ ಹುಸಿ ನಂಬಿಕೆ, 2013 ಹೊಸ ಸರಕಾರ ರೂಪುಗೊಂಡ ಸಮಯ ಕಾಲ್ ಫಾರ್ ಬಿಡಿ ಅದರ ಸುದ್ದಿಯೇ ಇರಲಿಲ್ಲ. ಹೆಚ್ಚಿನ ನೇಮಕಾತಿಯಾಗುವುದು ಸರಕಾರದ ಆಡಳಿತಾವಧಿ ಮುಗಿದು ಚುನಾವಣೆಗೆ ಹೋಗುವ ಸಂದರ್ಭದಲ್ಲಿ ಮತ ಕೇಳಲು ಅವರಿಗೆ ಅದೊಂದು ಪ್ರೋಗ್ರೆಸ್ ರಿಪೋರ್ಟ್ ಆಗಿರುತ್ತೆ. ಹಾಸ್ಟೆಲ್ ಫೀಸ್ ಕಟ್ಟಲು ಹಣವಿಲ್ಲ ನೇಮಕಾತಿಯ ಸುಳಿವು ಇಲ್ಲ ಧಾರವಾಡದಲ್ಲಿದ್ದು ಓದುವಷ್ಟು ಆರ್ಥಿಕ ಪರಿಸ್ಥಿತಿ ನಮ್ಮದು ಉತ್ತಮವಾಗಿರಲಿಲ್ಲ. ಯಾವುದಾದರೊಂದು ಸರಕಾರಿ ಉದ್ಯೋಗ ಸಿಕ್ಕಿದ ಮೇಲೆಯೇ ಊರಿಗೆ ಬರುವುದೆಂದು ಮಾನಸಿಕ ನಿರ್ಧಾರ ಮಾಡಿ ಹೋದವನಿಗೆ ಬರಿಗೈಯಲ್ಲಿ ವಾಪಾಸು ಮನೆಗೆ ಬಾರದೆ ಬೇರೆ ವಿಧಿ ಇರಲಿಲ್ಲ ಆರೋಗ್ಯವು ಕೂಡ ನನ್ನ ಕಷ್ಟವನ್ನು ನೋಡಿ ನಾನು ಜೊತೆಯಲ್ಲಿರುತ್ತೇನೆಂದು ನನ್ನ ಹೆಗಲೇರಿತ್ತು.
ಒಂದಿಷ್ಟು ತಿಂಗಳುಗಳ ಕಾಲ ಮನೆಯಲ್ಲಿ ಅಲ್ಪಸ್ವಲ್ಪ ಓದು ಭವಿಷ್ಯದ ಉದ್ಯೋಗಕ್ಕೆ ಏನು ಮಾಡುವುದೆನ್ನುವ ಒತ್ತಡ, ಅಲ್ಲಿ ಇಲ್ಲಿ ಕುಳಿತುಕೊಂಡಾಗ ನಿನಗೇನು ಕೆಲಸ ಇಲ್ವಾ ಅಂತ ಪರಿಚಿತರು ಕೇಳುವ ಮಾತುಗಳು 2014 ವಾಪಾಸ್ಸು ನನ್ನನ್ನು ಧಾರವಾಡಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸಿತ್ತು. ನಾನು ತರಬೇತಿ ಪಡೆದ ಅಧ್ಯಯನ ಕೇಂದ್ರದ ನಿರ್ದೇಶಕರ ಶಾಲೆಯಲ್ಲಿ ಪ್ರಾಂಶುಪಾಲನಾಗುವ ಅವಕಾಶ ಸಿಕ್ಕಿತ್ತು. ವಸತಿ ಊಟ ಓದಲು ಬೇಕಾದಷ್ಟು ಪುಸ್ತಕ ಖರೀದಿಸಲು ಸಾಕಾಗುವಷ್ಟು ಸಂಬಳ ಸಿಗುತ್ತಿತ್ತು 2015 ಏಕಕಾಲದಲ್ಲಿ ಶಿಕ್ಷಕ ಮತ್ತು KAS ಹುದ್ದೆಗೆ ನೇಮಕಾತಿ ಹೊಂದಲು ನೋಟಿಫಿಕೇಶನ್ ಆಗಿತ್ತು. ಶಿಕ್ಷಕರ ಅರ್ಹತಾ ಪರೀಕ್ಷೆ ಟಿಇಟಿಯಲ್ಲಿ ಪಾಸಾಗಿದ್ದೆ ಅದೊಂದೇ ನನಗೆ ಕೆಲಸ ಸಿಗ್ಲಿಕ್ಕೆ ಬ್ರಹ್ಮಾಸ್ತ್ರ ಆಗಿನ ಸಮಯದಲ್ಲಿ ನೇಮಕಾತಿಗೆ ನಮ್ಮ ಪದವಿ, ಬಿ.ಇಡಿ ಅಂಕಗಳನ್ನು ಕೂಡ ತೆಗೆದುಕೊಳ್ತಾ ಇದ್ರು. ನಮ್ಮ ಪದವಿಯೋ !!! ಕಾಲೇಜಿಗೆ ಹೋದದ್ದಕ್ಕಿಂತ ಬಸ್ಟ್ಯಾಂಡಿನಲ್ಲಿ ಕುಳಿತುಕೊಂಡು ಇದ್ದ ಬದ್ದವರ ಹೆಸರನ್ನು ಕರೆದು ನಾವು ಪಾಸಾಗಿದ್ದೆ ಹೆಚ್ಚು. ಆ ಅಂಕಗಳನ್ನು ನೇಮಕಾತಿಗೆ ತೆಗೆದುಕೊಳ್ಳುವುದರಿಂದ ಸರಕಾರಿ ಕೆಲಸ ನಮಗಂತೂ ಮರೀಚಿಕೆಯೇ. ಅನುಭವಸ್ಥರ ಬಳಿ ಸಲಹೆ ಕೇಳಿದೆ ಎರಡು ಹುದ್ದೆಗಳ ನೇಮಕಾತಿಗೆ ಕರೆದಿದ್ದಾರೆ. ಯಾವುದನ್ನು ಓದುವುದು ಅಂತ ಎಲ್ಲರ ಸಲಹೆ ಒಂದೇ ಆಗಿತ್ತು. ಟಿಇಟಿ ಪಾಸ್ ಆಗಿದ್ದೀಯಾ ಮೊದಲ ಬಾರಿ ಪಾಸಾದವರ ಸಂಖ್ಯೆ ಬಹಳ ಕಡಿಮೆ ಇದೆ ಸ್ವಲ್ಪ ಪ್ರಯತ್ನ ಪಟ್ರೆ ನಿನಗೆ ಶಿಕ್ಷಕನ ಹುದ್ದೆ ಸಿಗುತ್ತೆ. ಇನ್ನು KAS ನ ವಿಚಾರ ನಿನಗೆ ಗೊತ್ತೇ ಇರುವುದು ಪ್ರಿಲಿಮ್ಸ್ ಪಾಸಾದರೂ ಮತ್ತೆ ಮೈನ್ಸ್ ಗೆ ಅಧ್ಯಯನ ಮಾಡ್ಬೇಕು. ತದನಂತರ ಇಂಟರ್ವ್ಯೂ ಈ ಎಲ್ಲಾ ಹಂತಗಳು ಮುಗಿಯುವಾಗ ಖಂಡಿತವಾಗಿ ಮೂರು ವರ್ಷ ದಾಟುತ್ತೆ ಅದು ಸುಲಭವೂ ಅಲ್ಲ ಎನ್ನುವ ಅರಿವೂ ನನಗಿತ್ತು. ಒಮ್ಮೆ ಯಾವುದಾದರೊಂದು ಕೆಲಸ ಸಿಕ್ಕಿದ್ರೆ ಸಾಕು ಮತ್ತೆ ಬೇರೆ ಹುದ್ದೆಗೆ ಓದಿಕೊಳ್ಳುವ ಎನ್ನುವ ಏಕಪಕ್ಷೀಯ ನಿರ್ಧಾರ ಮಾಡಿ ಶಿಕ್ಷಕನ ಕೆಲಸಕ್ಕೆ ಪರೀಕ್ಷೆ ಬರೆದು ಆವಾಗ ಹೊಸದಾಗಿ ಸೃಷ್ಟಿಯಾದ ವೃಂದ 6 ರಿಂದ 8ನೇ ತರಗತಿಯ ಶಿಕ್ಷಕನಾಗಿ ನೇಮಕಾತಿಯಾದೆ. ಕೆಲಸ ಸಿಕ್ಕ ಮೇಲೆ ಹಾಗೆ ಮಾಡ್ತೇನೆ ಹೀಗೆ ಮಾಡ್ತೇನೆ ಬೇರೆ ಬೇರೆ ದೊಡ್ಡ ಹುದ್ದೆಗೆ ಹೋಗ್ತೇನೆ ಅಂತ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ನಾನು ಹಲ್ಲು ಕಿತ್ತ ಹಾವಿನಂತೆ ನನ್ನಷ್ಟಕ್ಕೆ ಬುಸುಗುಟ್ಟುತ್ತಿದ್ದೇನೆ.
ಒಂಬತ್ತುವರೆ ವರ್ಷದಿಂದ ಕಾರ್ಕಳ ತಾಲೂಕಿನಲ್ಲಿ ಕೆಲಸ ಮಾಡುತ್ತಿರುವ ನಾನು ಶಾಲೆಗೆ ತಲುಪಲು ದಿನಪ್ರತಿ 46+46=92 ಕಿಲೋಮೀಟರ್ ಪ್ರಯಾಣಿಸಲೇಬೇಕು. ಉತ್ತಮ ಪರಿಸರದ ಒಳ್ಳೆಯ ಮನಸ್ಸಿರುವ ಸಜ್ಜನ ಬಂಧುಗಳು ಇರುವಂತಹ ಊರಿನ ಶಾಲೆಯಾದರೂ ಹೋಗಿ ಬರಲು ತುಂಬಾ ದೂರವಾಗುತ್ತೆ ಎನ್ನುವ ಕಾರಣದಿಂದ ವರ್ಗಾವಣೆ ತೆಗೆದುಕೊಳ್ಳುವ ಅಂತ ಕಳೆದೆರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ನನಗಿಂತ ತಡವಾಗಿ ನೇಮಕಾತಿ ಹೊಂದಿದವರಿಗೆ ಅವಕಾಶ ಸಿಕ್ಕಿದರೂ ಈ ವರ್ಗಾವಣೆ ನೀತಿಯಿಂದಾಗಿ ನನಗಂತೂ ಹತ್ತಿರದ ಸ್ಥಳ ಸಿಗ್ಲಿಲ್ಲ. ಇಷ್ಟೆಲ್ಲಾ ಬರೆಯಲು ಕಾರಣವಿಷ್ಟೇ ಸ್ನೇಹಿತರೇ ನನಗೂ ದೊಡ್ಡ ಕನಸಿತ್ತು. ಅದ್ಭುತವಾದದನ್ನು ಸಾಧಿಸಬೇಕೆನ್ನುವ ತುಡಿತವಿತ್ತು. ಬಡತನ-ಕಷ್ಟ ಇದೆಲ್ಲವೂ ನಮ್ಮ ಸಾಧನೆಗೆ ಬ್ರೇಕ್ ಹಾಕಿತು ಅನ್ನುವುದಕ್ಕಿಂತ ನನ್ನಲ್ಲಿನ ಉದಾಸೀನತೆ, ಅಲ್ಪತೃಪ್ತತೆ, ಆಶಿಸ್ತಿನ ಬದುಕು ಸಾಧನೆಗೆ ಅಡ್ಡವಾಯಿತಷ್ಟೇ. ನಮಗಿಂತ ನೂರು ಪಟ್ಟು ಹೆಚ್ಚು ಕಷ್ಟ ಇದ್ದವರು ಏನೇನೋ ಸಾಧಿಸಿರುವಾಗ ನಾವು ಶೂನ್ಯವೆನಿಸುತ್ತೆ, ನಾವು ನಿರೀಕ್ಷಿಸಿರುವ ಹುದ್ದೆಯಲ್ಲಿ ಆ ಕುರ್ಚಿಯಲ್ಲಿ ಬೇರೆಯವರು ಕುಳಿತುಕೊಂಡಿದ್ದನ್ನು ನೋಡಿದಾಗ ಯಶಸ್ಸಿನ ದೀವಿಗೆಗೆ ನಾವೇರಿದ ತೈಲ ಕಡಿಮೆಯಾಯಿತೆನ್ನುವ ಅರಿವು ನಮಗಾಗುತ್ತೆ. ಮಹತ್ತರವಾಗಿರುವುದನ್ನು ಸಾಧಿಸಲು ಹೊರಟಿರುವವರು ನಿಮ್ಮ ಸಾಧನೆಗೆ ಹಾಕಬೇಕಾಗಿರುವ ಪರಿಶ್ರಮ ದುಪ್ಪಟ್ಟಾಗಲಿ ಗುರಿ ಮುಟ್ಟುವವರೆಗೆ ವಿಮುಖರಾಗದಿರಿ, ಸ್ಥಾನಮಾನ ಇಲ್ಲದಿದ್ದರೆ ನಿಮಗೆ ಹತ್ತು ರೂಪಾಯಿ ಸಾಲ ಕೊಡಲು ಕೂಡ ನೂರು ಬಾರಿ ಆಲೋಚಿಸುತ್ತಾರೆ ಇವನ ಬಳಿ ವಾಪಸು ಕೊಡಲು ಯಾವ ಆದಾಯವಿದೆಯೆಂದು ಪ್ರಶ್ನಿಸುತ್ತಾರೆ, ನೀವು ಗೆದ್ದರೆ ಅಪರಿಚಿತರೆಲ್ಲ ನಿಮ್ಮನ್ನು ನಮ್ಮ ಸಂಬಂಧಿ ಎನ್ನುತ್ತಾರೆ ಸೋತರೆ ಸಂಬಂಧಿಕರೆಲ್ಲ ಇವನು ಯಾರೋ ನಮಗೆ ಗೊತ್ತೇ ಇಲ್ಲ ಅಂತ ತೆಗಳುತ್ತಾರೆ. ನಿಮಗೊಂದು ಉತ್ಕೃಷ್ಟವಾದ ಉದ್ಯೋಗ ಸಿಕ್ಕಿದರೆ ವೈವಾಹಿಕ ಸಂಬಂಧಕ್ಕೆ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಇಲ್ಲದಿದ್ದರೆ ಇವರ ಜೊತೆ ಎಂತಹ ಸಂಬಂಧ ಅಂತ ಹೀಯಾಳಿಸುತ್ತಾರೆ. ಬದುಕು ನಿಂತಿರುವುದೆ ಲೆಕ್ಕಾಚಾರದ ಮೇಲೆ. ಆಯ್ಕೆ ನಿಮ್ಮದು.
ಬರಹ : ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ











































































































