ಪಡುಬಿದ್ರಿ ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿ ಇರುವ ಅದಮಾರು ಮಠ ಶಿಕ್ಷಣ ಮಂಡಳಿಯ ಆಡಳಿತಕ್ಕೆ ಒಳಪಟ್ಟ, ಎಸ್.ಬಿ.ವಿ.ಪಿ. ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗಣಪತಿ ಪ್ರೌಢ ಶಾಲೆಯಲ್ಲಿ 2024-2025 ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ಮತ್ತು ಎಂಟನೇ ತರಗತಿಗೆ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬಾಂಡ್ ನೀಡಲು ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ, ಶಾಲಾ ಹಳೆ ವಿದ್ಯಾರ್ಥಿ ಮುಂಬಯಿ ಉದ್ಯಮಿ ಪೃಥ್ವಿರಾಜ್ ಹೆಗ್ಡೆ ನಿರ್ಧರಿಸಿದ್ದಾರೆ. ಇದರಂತೆ 1 ನೇ ತರಗತಿಗೆ ಸೇರ್ಪಡೆಗೊಳ್ಳುವ ಪುಟಾಣಿಗಳ ಹೆಸರಲ್ಲೇ 3000 ರೂ. ಮತ್ತು 8 ನೇ ತರಗತಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ 2000 ರೂ ಗಳ ಶೈಕ್ಷಣಿಕ ಬಾಂಡ್ ನೀಡಲು ನಿರ್ಧರಿಸಲಾಗಿದೆ.

ವಿದ್ಯಾರ್ಥಿಗಳ ಶಾಲಾ ವಿದ್ಯಾಭ್ಯಾಸದ ಬಳಿಕ ಅವರಿಗೆ ಮರಳಿ ದೊರೆಯಲಿದೆ. ಹಾಗೆಯೇ ಪ್ರಾಥಮಿಕ ಶಾಲೆ (1-7) ಯ ಎಲ್ಲಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸ್ಪೀಕಿಂಗ್ ತರಗತಿಯನ್ನು ಪರಿಣಿತ ಶಿಕ್ಷಕರು ನಡೆಸಲಿದ್ದು, ಇದಕ್ಕೆ ಅವಶ್ಯಕವಿರುವ 350ರೂ. ಮೌಲ್ಯದ ಸ್ಪೀಕಿಂಗ್ ಕೋರ್ಸ್ ಪುಸ್ತಕವನ್ನೂ ಉಚಿತವಾಗಿ ನೀಡಲಾಗುವುದು. 104 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ, ಅತ್ಯುತ್ತಮ ಶೈಕ್ಷಣಿಕ ಗುಣಮಟ್ಟವುಳ್ಳ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿದೆ.
ಉಚಿತ ಸಮವಸ್ತ್ರ, ಪಠ್ಯಪುಸ್ತಕ ಮೊದಲಾದ ಸವಲತ್ತುಗಳನ್ನು ಮೊದಲೇ ಇಲ್ಲಿ ನೀಡಲಾಗುತ್ತಿತ್ತು. ಈಗ ರೂಪಿಸಲಾಗಿರುವ ಶೈಕ್ಷಣಿಕ ಬಾಂಡ್ ಯೋಜನೆಯ ಮೂಲಕ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನದತ್ತ, ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವತ್ತ ಶಿಕ್ಷಣ ಪ್ರೇಮಿ ಪೃಥ್ವಿರಾಜ್ ಹೆಗ್ಡೆ ದಿಟ್ಟ ಹೆಜ್ಜೆ ಇರಿಸಿರುವುದಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಕರಂದ, ಸದಸ್ಯರಾದ ಕಸ್ತೂರಿ ರಾಮಚಂದ್ರ, ಪೂರ್ಣಿಮಾ, ರಮಾಕಾಂತ್ ರಾವ್ ತಿಳಿಸಿದ್ದಾರೆ.





































































































