ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಜತೆಗೆ ಜೀವನಾನುಭವವನ್ನು ಕೂಡಾ ಕಲಿಯಿರಿ. ಆಗ ಬದುಕು ಏನೆಂಬುದು ಅರ್ಥವಾಗುತ್ತದೆ. ನನ್ನ ಬೆಳವಣಿಗೆಗೆ ಭುವನೇಂದ್ರ ಕಾಲೇಜು ಬಹಳ ದೊಡ್ಡ ಮೈಲುಗಲ್ಲು, ಅದರ ಉನ್ನತಿಗಾಗಿ ನನ್ನ ಕಡೆಯಿಂದ ಯಾವತ್ತೂ ನೆರವು ಇರುತ್ತದೆ ಎಂದು ಬಾಂಬೇ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ ಹೇಳಿದರು.ಅವರು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರಾಂಶುಪಾಲ ಮಂಜುನಾಥ ಎ. ಕೋಟ್ಯಾನ್, ಕಾಲೇಜಿನ ಏಳಿಗೆಗೆ ಕಾರಣಕರ್ತರಾದ ಹಳೆ ವಿದ್ಯಾರ್ಥಿಗಳ ಪಾತ್ರ ಮತ್ತವರ ಕೊಡುಗೆಯನ್ನು ಸ್ಮರಿಸಿ ದಾನಿಗಳು, ಪ್ರಬುದ್ಧರಿರುವ ಹಳೆ ವಿದ್ಯಾರ್ಥಿ ಸಂಘವಿರುವುದು ನಮ್ಮ ಕಾಲೇಜಿನ ಅದೃಷ್ಟ ಹಾಗೂ ಹೆಮ್ಮೆಯ ವಿಚಾರವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ ಎ. ಶಿವಾನಂದ ಪೈ ಮಾತನಾಡಿ, ಕಾಲೇಜಿನ ಅಭಿವೃದ್ಧಿಗೆ ಎಲ್ಲಾ ರೀತಿಯಿಂದ ಬೆನ್ನೆಲುಬಾಗಿ ನಿಲ್ಲುವವರು ಹಳೆ ವಿದ್ಯಾರ್ಥಿಗಳು. ದೇಣಿಗೆಯ ಹೊರತಾಗಿಯೂ ಅವರ ಅನುಭವ, ಜ್ಞಾನವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದಾರೆ. ಕಾಲೇಜಿನ ಬೆಳವಣಿಗೆಗೆ ಕಾರಣರಾದವರನ್ನು ಶ್ಲಾಘಸಿದರು.
ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ವಿದ್ಯಾರ್ಥಿಗಳಾದ ನಾಗೇಂದ್ರ ಕುಡ್ವ ಹಾಗೂ ಪವಿತ್ರಾ ಅಶೋಕ್ ಕಾಮತ್, ನಿವೃತ್ತ ಪ್ರಾಧ್ಯಾಪಕ ಡಾ. ಅರುಣ್ ಕುಮಾರ ಎಸ್.ಆರ್. ಮತ್ತು ಡಾ.ಶಕುಂತಳಾ ಅವರನ್ನು ಸನ್ಮಾನಿಸಲಾಯಿತು. ಹಳೆವಿದ್ಯಾರ್ಥಿ ಸಂಘದ ವತಿಯಿಂದ ಪ್ರರಿಭಾನ್ವಿತ ವಿದ್ಯಾರ್ಥಿಗಳಿಗೆ ಕೊಡ ಮಾಡುವ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾರ್ಧನ ಇಡ್ಯಾ ಸ್ವಾಗತಿಸಿ, ಕಾರ್ಯದರ್ಶಿ ಅನಂತ ಪೈ ವಂದಿಸಿ, ಉಪನ್ಯಾಸಕ ಶಂಕರ್ ಕುಡ್ವ ನಿರೂಪಿಸಿದರು. ಕಾಲೇಜಿನ ಹಳೆ ವಿದ್ಯಾರ್ಥಿನಿ ರಮ್ಯಾ ಸುಧೀಂದ್ರ ಅವರಿಂದ ಸಂಗೀತ ರಸಮಂಜರಿ ನಡೆಯಿತು.