ಕರ್ನಾಟಕ ಕರಾವಳಿಯ ಕಮನೀಯ ಕಲೆ ಯಕ್ಷಗಾನಕ್ಕೆ ಆಕರ್ಷಣೆ ಹೊಂದದ ತುಳು ಕನ್ನಡಿಗರಿರಲಾರರು. ಸಂಗೀತ, ಸಾಹಿತ್ಯ, ನಾಟ್ಯ, ಬಣ್ಣಗಾರಿಕೆ ಹೀಗೆ ಹಲವಾರು ಕಲೆಗಳು ಏಕತ್ರಗೊಂಡು ಪಂಡಿತ ಪಾಮರರನ್ನು ಏಕಕಾಲಕ್ಕೆ ರಂಜಿಸುವ ಕಲೆಯೊಂದಿದ್ದರೆ ಅದು ನಮ್ಮ ಹೆಮ್ಮೆಯ ಯಕ್ಷಗಾನ. ಸಚ್ಚೇರಿ ಗುತ್ತು ಜಗನ್ನಾಥ ಶೆಟ್ಟಿ ಅವರು ಕೃಷಿ ಪ್ರಧಾನ ಕುಟುಂಬದ ಹಿನ್ನೆಲೆ ಹೊಂದಿದವರಾದರೂ ತನ್ನ ಬಾಲ್ಯದ ದಿನಗಳಿಂದಲೇ ಯಕ್ಷಗಾನ ಕಲೆಯ ಕುರಿತಂತೆ ತೀವ್ರ ಆಸಕ್ತಿ ಹೊಂದಿದವರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದ ದಿವಂಗತ ಬಾಬು ಶೆಟ್ಟಿ ಹಾಗೂ ದಿವಂಗತೆ ಬಾಗಿ ಶೆಟ್ಟಿ ದಂಪತಿಯರಿಗೆ ಸುಪುತ್ರರಾಗಿ 1945 ಅಗಸ್ಟ್ 1 ರಂದು ಮಿಜಾರಿನ ಪ್ರತಿಷ್ಠಿತ ಕಿಜನೊಟ್ಟು ಮನೆತನದಲ್ಲಿ ಜನಿಸಿದ ಶೆಟ್ಟರು ಐದನೇ ತರಗತಿ ತನಕ ಶಾಲಾ ಶಿಕ್ಷಣ ಪಡೆದ ಬಳಿಕ ಯಕ್ಷಗಾನ ನೋಡುವ ಕಲಿಯುವ ಆಸಕ್ತಿ ಹೆಚ್ಚಾದ ಪರಿಣಾಮ ವಿದ್ಯಾಭ್ಯಾಸ ವಿಭಾಗದಲ್ಲಿ ಹಿನ್ನಡೆ ಅನುಭವಿಸಿದರಾದರೂ ಕೃಷಿ ಮತ್ತು ಯಕ್ಷಗಾನ ಕುರಿತು ವಿಶೇಷ ಆಸಕ್ತಿ ಕಾಳಜಿ ತಳೆದು ಕಾಲಾಂತರದಲ್ಲಿ ಓರ್ವ ಉತ್ತಮ ಕೃಷಿಕ ಹಾಗೂ ಓರ್ವ ಹವ್ಯಾಸಿ ಕಲಾವಿದರಾಗಿ ರೂಪುಗೊಂಡರು.
ಓರ್ವ ವೃತ್ತಿಪರ ಕಲಾವಿದನಲ್ಲಿರುವ ಅರ್ಹತೆಗಳನ್ನು ಯಕ್ಷಗಾನ ಕಲಾಭಿಮಾನಿಗಳು ಕೃಷಿಕನಾದ ಜಗನ್ನಾಥ ಶೆಟ್ಟಿ ಅವರಲ್ಲಿ ಕಂಡುಕೊಂಡಿದ್ದರು. ಜಗನ್ನಾಥ ಶೆಟ್ಟಿ ಅವರ ಭಾಗ್ಯ ವಿಶೇಷ ಎಂಬಂತೆ ಯಕ್ಷರಂಗದ ದ್ರೋಣ, ಮಹಾವಿಷ್ಣು ಬಿರುದಾಂಕಿತ ಕೀರ್ತಿ ಶೇಷ ಪಡ್ರೆ ಚಂದುರವರು ತನಗೆ ಆರಂಭಿಕ ಕಲಾ ಗುರುವಾಗಿ ಒದಗಿದ ಪರಿಣಾಮ ಕಲೆಯ ಒಳ ಹೊರಗುಗಳ ಚೆನ್ನಾಗಿ ಅಭ್ಯಾಸ ಮಾಡಿಕೊಂಡರು. ಅಂದಿನ ಹೆಸರಾಂತ ಅರ್ಥಧಾರಿ ನಾರಾಯಣ ನಾಯಕ್ ಅವರಿಂದ ಸಂಭಾಷಣೆ ಸಾಹಿತ್ಯ ಸಂವಾದ ಚರ್ಚೆ ಮಾತುಗಾರಿಕೆ ಇತ್ಯಾದಿ ವಿಭಾಗಗಳಲ್ಲಿ ಅನುಭವ ಸಂಪಾದಿಸಿ ಕೊಂಡರು. ಸಚ್ಚೇರಿಪೇಟೆಯ ಕಲಾಗುರು ಶ್ರೀ ನಾರಾಯಣ ನಾಯಕ್ ಅವರ ಮುಖಾಂತರ ಪೊಸ್ರಾಲ್ ನಲ್ಲಿ ಸ್ಥಾಪನೆಗೊಂಡ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪದ ಜಗನ್ನಾಥ ಶೆಟ್ಟಿ ಅವರನ್ನು ಕೈಬೀಸಿ ಕರೆಯಿತು.
ಅದೆಷ್ಟೋ ಕಲಾಸಕ್ತರು ತಮ್ಮ ಮುಖಾಂತರ ಯಕ್ಷಗಾನ ನಾಟ್ಯ ಮಾತುಗಾರಿಕೆ ಹಾಗೂ ರಂಗಚಲನ, ಅಂಗ ಅಭಿವ್ಯಕ್ತಿ ಕುರಿತ ವಿಶೇಷ ಅಂಗಗಳನ್ನು ಕಲಿತುಕೊಂಡು ಇಂದು ಉತ್ತಮ ಕಲಾವಿದರಾಗಿ ರೂಪುಗೊಂಡು ತಮ್ಮನ್ನು ಗುರು ಸ್ಥಾನದಲ್ಲಿ ಗೌರವಿಸುತ್ತಿದ್ದಾರೆ. ಐವತ್ತೇಳು ವರ್ಷಗಳನ್ನು ಪೂರೈಸುತ್ತಿರುವ ಯಕ್ಷಗಾನ ಮಂಡಳಿ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಗರದ ಹೆಸರಾಂತ ಕಲಾಮಂಡಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶೆಟ್ಟಿ ಅವರ ಹಿರಿಯ ಪುತ್ರಿ ಬಹುಮುಖ ಪ್ರತಿಭೆಯ ಸಂಘಟಕಿ, ಹವ್ಯಾಸಿ ಕಲಾವಿದೆ ಶ್ರೀಮತಿ ಶಾಲಿನಿ ಸತೀಶ್ ಶೆಟ್ಟಿ ಅವರು ತನ್ನ ತೀರ್ಥರೂಪರ ಆಸಕ್ತಿಯನ್ನು ಗೌರವಿಸಿ ಸದಾ ಪ್ರೋತ್ಸಾಹಿಸುತ್ತಾ ಬರುತ್ತಿದ್ದಾರೆ.
ಶ್ರೀ ಮುಂಡ್ಕೂರು ಕ್ಷೇತ್ರ ಮಹಾತ್ಮೆ, ಶ್ರೀ ಚಿತ್ರಾಪುರ ಕ್ಷೇತ್ರ ಮಹಾತ್ಮೆ, ಶ್ರೀದೇವಿ ಮಹಾತ್ಮೆ ಪ್ರಸಂಗಗಳಲ್ಲಿ ಜಗನ್ನಾಥ ಶೆಟ್ಟಿ ಅವರ ವಿಶೇಷ ಪಾತ್ರಗಳು ಅವಿಸ್ಮರಣೀಯವೆನಿಸಿವೆ. ಮುಂಬಯಿಯ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳ ಪುರಸ್ಕೃತೆ ಶ್ರೀಮತಿ ಶಾಲಿನಿ ಶೆಟ್ಟಿ ಸೇರಿದಂತೆ ಇತರ ಮಕ್ಕಳು ಕರುಣಾಕರ ಶೆಟ್ಟಿ, ರಾಜೇಶ್ ಶೆಟ್ಟಿ, ಉದಯ ಶೆಟ್ಟಿ, ರೇಶ್ಮಾ ದಯಾಶಂಕರ್ ಶೆಟ್ಟಿ ಹಾಗೂ ಮೊಮ್ಮಕ್ಕಳಾದ ಪೃಥ್ವಿ, ಶರಣ್ಯಾ, ಯತಿಕ್ಷಾ, ವಿಹಾನ್, ಅವಿಷ್ಕಾ ಅವರ ಪ್ರೀತಿ ಮಮಕಾರಗಳಿಂದ ಧನ್ಯತಾ ಭಾವದಲ್ಲಿರುವ ಶೆಟ್ಟಿ ಅವರ ಒಬ್ಬಾಕೆ ಮೊಮ್ಮಗಳು ಶಾಲಿನಿ ಸತೀಶ್ ಶೆಟ್ಟಿ ಪುತ್ರಿ ಬಹುಮುಖ ಪ್ರತಿಭೆಯ ವಿದ್ಯಾರ್ಥಿನಿ ಕು.ಪೃಥ್ವಿ ತನ್ನ ಅಜ್ಜನ ಜೊತೆಗಿನ ತೀವ್ರ ಪ್ರತಿಸ್ಫರ್ಧೆಯ ಪಾತ್ರ ನಿರ್ವಹಣೆ ಕಂಡು ಪುಳಕಿತಗೊಳ್ಳುವ ಭಾಗ್ಯವನ್ನೂ ತಾನು ಅನುಭವಿಸಿದ್ದಾರೆ. ಇಂಥಹ ಓರ್ವ ಬಹುಮುಖೀ ವ್ಯಕ್ತಿತ್ವದ ಸಾಧಕ ಹವ್ಯಾಸಿ ಪ್ರಬುದ್ಧ ಕಲಾವಿದ ಜಗನ್ನಾಥ ಶೆಟ್ಟಿ ಅವರಿಗೆ ಅನೇಕ ಪ್ರಶಸ್ತಿಗಳು ಲಭ್ಯವಾಗಿದ್ದರೂ, ಇದೀಗ ಇತ್ತೀಚೆಗೆ ಮಂಗಳೂರು ಘಟಕ ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಸಂಭ್ರಮಾಚರಣೆ ಸಂದರ್ಭದಲ್ಲಿ ಜಗನ್ನಾಥ ಶೆಟ್ಟಿ ಅವರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ವಿಶೇಷ ಸೇವೆ ಹಾಗೂ ತನ್ನ ಸಾಧನೆಗೆ ಪ್ರತಿಫಲ ಎಂಬಂತೆ ಹೃದಯಸ್ಪರ್ಶಿ ಸನ್ಮಾನ ಸ್ವೀಕರಿಸಿ ಕೃತಾರ್ಥರಾಗಿದ್ದಾರೆ. ಓರ್ವ ಹಿರಿಯ ಕೃಷಿಕ ಕಲಾ ಪ್ರೇಮಿ ಸಮಾಜ ಸೇವಕ ಎನಿಸಿದ ಶೆಟ್ಟಿ ಅವರ ಭವಿಷ್ಯ ಆರೋಗ್ಯ ನೆಮ್ಮದಿ ಸಂತೃಪ್ತಿಯಿಂದ ಕೂಡಿರಲೆಂದು ಸಮಾಜ ಬಾಂಧವರೊಂದಿಗೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಮನಸಾ ಹಾರೈಸುತ್ತದೆ.
ಯಕ್ಷಗಾನಂ ವಿಶ್ವಗಾನಂ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು