ಮುಂಬೈ:- ಸಾಹಿತ್ಯವಲಯದಲ್ಲಿ ಮುಂಬಯಿ ತುಳು-ಕನ್ನಡಿಗರ ಸಾಧನೆ ಅಪೂರ್ವವಾದುದು. ಮುಂಬಯಿ ಮಹಾನಗರದಲ್ಲಿ ಪುಸ್ತಕ ಪ್ರಕಟಣೆ ಸವಾಲಿನ ಕೆಲಸ. ಮುಂಬಯಿಯಲ್ಲಿ ಸಾಹಿತ್ಯದ ಕೃಷಿ ಪುಸ್ತಕ ರೂಪದಲ್ಲಿ ಫಲ ನೀಡಬೇಕೆಂದರೆ ಪ್ರಕಾಶಕರ ಕೊರತೆ ಇತ್ತು. ಮುಂಬಯಿ ಮಹಾನಗರದಲ್ಲಿ ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂಬ ಅಭಿಲಾಷೆ ಇತ್ತು. ಲೇಖಕರು ತಮ್ಮ ಪುಸ್ತಕಗಳನ್ನು ಪ್ರಕಟಿಸಲು ಅನುಕೂಲವಾಗಬೇಕೆಂಬ ಉದ್ದೇಶದಿಂದ 2004ರಲ್ಲಿ ಅಭಿಜಿತ್ ಪ್ರಕಾಶನವನ್ನು ಸ್ಥಾಪಿಸಿದೆ. ನಂತರ ಲೇಖಕರ ಅಭೂತಪೂರ್ವ ಸ್ಪಂದನೆ ಈ ಪ್ರಕಾಶನ ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಿದೆ. ಈ ಎರಡು ದಶಕಗಳಲ್ಲಿ ಹಿರಿಕಿರಿಯ ಲೇಖಕರ ಬೇರೆ ಬೇರೆ ಪ್ರಕಾರದ ಪುಸ್ತಕಗಳು ಬೆಳಕು ಕಂಡು ವಿದ್ವಾಂಸರ ಗಮನ ಸೆಳೆದಿದೆ. ಉತ್ತಮ ಪುಸ್ತಕಗಳು ಅಭಿಜಿತ್ ಪ್ರಕಾಶನ ಹೊರತಂದಿದೆ ಎಂಬ ಸಮಧಾನವಿದೆ ಎಂದು ಅಭಿಜಿತ್ ಪ್ರಕಾಶನದ ಸಂಚಾಲಕರಾದ ಪ್ರೊ.ಜಿ.ಎನ್.ಉಪಾಧ್ಯ ಅವರು ಅಭಿಪ್ರಾಯ ಪಟ್ಟರು. ಅವರು ಮೇ 25ರಂದು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ಕನಕ ಸಭಾ ಫರ್ಮಫಾರ್ಮಿಂಗ್ ಆರ್ಟ್ಸ್ ಸೆಂಟರ್ ಇವರ ಸಂಯುಕ್ತ ಆಶ್ರಯದಲ್ಲಿ ಚೆಂಬೂರಿನ ಬಾಲವಿಕಾಸ ಸಭಾಗೃಹದಲ್ಲಿ ನಡೆದ ಅಭಿಜಿತ್ ಪ್ರಕಾಶನದ ಇಪ್ಪತ್ತರ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂಬಯಿಯಲ್ಲಿ ಅಭಿಜಿತ್ ಪ್ರಕಾಶನದ ಕೆಲಸ ದೊಡ್ಡದು. ಉತ್ತಮ ಸಾಹಿತ್ಯವು ಬದುಕನ್ನು ಬದಲಿಸುತ್ತದೆ.
ಈ ಸಂಸ್ಥೆ ಪುಸ್ತಕ ಪ್ರಕಟಣೆಯ ಮೂಲಕ ಜನಾಂಗವನ್ನು ರೂಪಿಸುವ ಕೆಲಸವನ್ನು ಮಾಡುತ್ತಿದೆ. ಇಪ್ಪತ್ತು ವರ್ಷದಲ್ಲಿ ನೂರಮೂವತ್ತು ಪುಸ್ತಕಗಳು ಪ್ರಕಟವಾಗಿರುವುದು ಸಣ್ಣ ಮಾತಲ್ಲ. ಇಲ್ಲಿ ಸಂಖ್ಯೆಗಿಂತಲೂ ಪ್ರಕಟಣೆಗೊಂಡ ಕೃತಿಗಳು ಮಹತ್ವಪೂರ್ಣವಾಗಿರುವುದನ್ನು ನಾವು ಗಮನಿಸಬೇಕು. ವೈವಿಧ್ಯಮಯವಾದ ಕೃತಿಗಳ ಮೂಲಕ ಸಾಂಸ್ಕೃತಿಕ ಜಗತ್ತನ್ನು ಸೃಷ್ಟಿಸಿದ ಹೆಗ್ಗಳಿಕೆ ಅಭಿಜಿತ್ಗೆ ಸಲ್ಲಬೇಕು. ಹೊಸ ಲೇಖಕರ ಪುಸ್ತಕ ಪ್ರಕಟಿಸಿ ಪ್ರೋತ್ಸಾಹವನ್ನು ನೀಡುತ್ತಿರುವ ಅಭಿಜಿತ್ ಪ್ರಕಾಶನದ ಕಾರ್ಯ ಶ್ಲಾಘನೀಯವಾದುದು ಎಂದು ಕರ್ನಾಟಕ ಸಂಘ, ಮಾಟುಂಗದ ಅಧ್ಯಕ್ಷರಾದ ಡಾ. ಭರತ್ ಕುಮಾರ್ ಪೊಲಿಪು ಅವರು ಅಭಿಪ್ರಾಯ ಪಟ್ಟರು. ವಿದುಷಿ ಸರೋಜಾ ಶ್ರೀನಾಥ್ ಅವರು ಮಾತನಾಡುತ್ತಾ ಇಂದು ಅಭಿಜಿತ್ ಪ್ರಕಾಶನದ ಮೂಲಕ ಪ್ರಕಟಗೊಂಡ ನನ್ನ ಎರಡು ಕೃತಿಗಳು ಸುಂದರವಾಗಿ ಪ್ರಕಟಗೊಳ್ಳಲು ಕಾರಣಕರ್ತರಾದವರು ಡಾ.ಜಿ.ಎನ್.ಉಪಾಧ್ಯ ಅವರು. ನನಗೆ ಬರೆಯಲು ಸದಾ ಸ್ಪೂರ್ತಿಯನ್ನು ನೀಡುತ್ತಾ ಅವರದ್ದೇ ಆದ ಅಭಿಜಿತ್ ಪ್ರಕಾಶನದ ಮೂಲಕ ಪ್ರಕಟಿಸುವ ಬಹುದೊಡ್ಡ ಜವಾಬ್ದಾರಿಯನ್ನು ಕೂಡಾ ತೆಗೆದುಕೊಂಡಿದ್ದಾರೆ. ಅವರೊಂದಿಗೆ ಸಹಕರಿಸಿದವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಅಭಿಜಿತ್ ಪ್ರಕಾಶನಕ್ಕೆ ಶುಭ ಹಾರೈಸಿದರು. ಕರ್ನಾಟಕ ಮಲ್ಲ ಪತ್ರಿಕೆಯ ಉಪಸಂಪಾದಕರಾದ ಶ್ರೀನಿವಾಸ ಜೋಕಟ್ಟೆ ಅವರು ಮಾತನಾಡುತ್ತಾ ಇಪ್ಪತ್ತು ವರ್ಷಗಳನ್ನು ಪೂರೈಸಿದ ಅಭಿಜಿತ್ ಪ್ರಕಾಶನದಲ್ಲಿ ಉತ್ತಮ ಗುಣಮಟ್ಟದ ಪುಸ್ತಕಗಳು ಹೊರಬಂದಿವೆ.
ಅನೇಕ ಲೇಖಕರನ್ನು ಬೆಳೆಸಿದೆ. ಈ ಪ್ರಕಾಶನದಲ್ಲಿ ಬೆಳಕು ಕಂಡ ನನ್ನ ಪುಸ್ತಕಕ್ಕೆ ಉತ್ತಮ ಮಾರುಕಟ್ಟೆ ದೊರೆತು ಹೆಚ್ಚು ಪುಸ್ತಕಗಳು ಮಾರಾಟವಾಗಿತ್ತು. ಅಭಿಜಿತ್ ಪ್ರಕಾಶನ ಅನೇಕ ಲೇಖಕರನ್ನು ಬೆಳೆಸಿದೆ ಎಂದರು. ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿರುವ ಓಂದಾಸ್ ಕಣ್ಣಂಗಾರ್ ಅವರು ಸತತ ಅಧ್ಯಯನ ಮತ್ತು ಕ್ರಿಯಾಶೀಲರಾಗಿರುವ ಡಾ.ಜಿ.ಎನ್.ಉಪಾಧ್ಯ ಅವರ ಅಭಿಜಿತ್ ಪ್ರಕಾಶನ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಅಕ್ಷಯ ಮಾಸಿಕದ ಡಾ.ಈಶ್ವರ ಅಲೆವೂರು ಅವರು ಅಭಿಜಿತ್ ಪ್ರಕಾಶನದ ಸಾಧನೆಯನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕನ್ನಡ ವಿಭಾಗದ ಸರ್ಟಿಫಿಕೇಟ್ ಕೋರ್ಸಿನ ಶಿಕ್ಷಕಿ ಗೀತಾ ಮಂಜುನಾಥ್, ವಿದ್ಯಾರ್ಥಿಗಳಾದ ಕಲಾ ಭಾಗ್ವತ್, ಅಕ್ಷರ ವಿನ್ಯಾಸಕರಾದ ಸವಿತಾ ಶೆಟ್ಟಿ ಅಭಿಜಿತ್ ಪ್ರಕಾಶನದ ಸಾಧನೆಯನ್ನು ಕೊಂಡಾಡಿ ಶುಭ ಹಾರೈಸಿದರು. ಆರಂಭದಲ್ಲಿ ವೇದಿಕೆಯಲ್ಲಿನ ಗಣ್ಯರು ಅಭಿಜಿತ್ ಪ್ರಕಾಶನದ ಪುಸ್ತಕಗಳನ್ನು ಅನಾವರಣಗೊಳಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಡಾ.ಉಮಾ ರಾಮರಾವ್, ಕಲಾವಿದರಾದ ಮೋಹನ ಮಾರ್ನಾಡ್, ಸಂಘಟಕ ಎಸ್.ಕೆ.ಸುಂದರ್, ನಾರಾಯಣ ರಾವ್, ಅನುಸೂಯ ಗಲಗಲಿ, ಸುಶೀಲಾ ದೇವಾಡಿಗ, ಹೇಮಾ ಸದಾನಂದ ಅಮೀನ್, ಸೋಮಶೇಖರ ಮಸಳಿ, ಸುರೇಖಾ ಹರಿಪ್ರಸಾದ ಶೆಟ್ಟಿ, ವಿಭಾಗದ ವಿದ್ಯಾರ್ಥಿಗಳಾದ ಸವಿತಾ ಆರ್ ಶೆಟ್ಟಿ, ವಿದ್ಯಾ ರಾಮಕೃಷ್ಣ, ರೂಪಾ ಸಂಗೊಳ್ಳಿ, ಆಶಾ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.