ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ ಅವರು ಹೊರನಾಡ ಕನ್ನಡ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಸಂಘ ಆಂಧೇರಿ (ರಿ) ಪ್ರಸ್ತುತ ಪಡಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಇವರ ಸಹಯೋಗದಲ್ಲಿ ಜೂನ್ 9 ರಂದು ಭಾನುವಾರ ರಾಧಾಬಾಯಿ ಟಿ. ಭಂಡಾರಿ ಸಭಾಗೃಹ, ಬಂಟರ ಭವನ ಕುರ್ಲಾ, ಮುಂಬಯಿಯಲ್ಲಿ ಬೆಳಿಗ್ಗೆ 9.30 ರಿಂದ ಆರಂಭವಾಗುವ ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ 2024 ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಹೇರಂಬ ಇಂಡಸ್ಟ್ರೀಸ್ನ ಸಿ.ಎಂ.ಡಿ. ಕನ್ಯಾನ ಸದಾಶಿವ ಶೆಟ್ಟಿ ಮೊದಲಾದ ಗಣ್ಯರ ಸಮ್ಮುಖದಲ್ಲಿ ಡಾ. ಸುಧಾಕರ ಶೆಟ್ಟಿ ಅವರಿಗೆ ಹೊರನಾಡ ಕನ್ನಡ ಪ್ರಶಸ್ತಿ ಸೇರಿದಂತೆ ಹಲವು ಮಂದಿ ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ ನಡೆಯಲಿದೆ.
ಡಾ. ಮೋಹನ್ ಆಳ್ವರ ಸಹಕಾರದೊಂದಿಗೆ ಮೂಡಬಿದ್ರೆಯಲ್ಲಿ ಬೇಬಿ ಫ್ರೆಂಡ್ ಸಂಚಾರಿ ಮಕ್ಕಳ ಕ್ಲಿನಿಕ್ನ್ನು ಕಳೆದ ಒಂದು ವರ್ಷದಿಂದ ಕಾರ್ಯಾಚರಿಸುತ್ತಾ ಬಂದಿರುವ ಕಠಿಣ ಪರಿಶ್ರಮಿ, ವೈದ್ಯಕೀಯ ಸಮಾಜ ಸೇವೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಸುಧಾಕರ ಶೆಟ್ಟಿಯವರು ಪುಣೆಯಲ್ಲಿ ಯಶಸ್ವಿಯಾಗಿ 30 ವರ್ಷಗಳಿಂದ ಬೇಬಿ ಫ್ರೆಂಡ್ ಮಕ್ಕಳ ಕ್ಲಿನಿಕ್ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿದ್ದಾರೆ.
ದಿನವಿಡೀ ಮಕ್ಕಳ ಆರೋಗ್ಯ ತಪಾಸಣೆ, ಬಡ ಮಕ್ಕಳಿಗಾಗಿ ಸಾವಿರಾರು ವೈದ್ಯಕೀಯ ಶಿಬಿರಗಳನ್ನು ಸಂಘಟಿಸುತ್ತಾ ಬಂದಿರುವ ಡಾ. ಸುಧಾಕರ ಶೆಟ್ಟಿಯವರು ಕೋವಿಡ್ ಸಂದರ್ಭದಲ್ಲಿ ಕರ್ನಾಟಕ ಮೂಲದ 1,500 ಕ್ಕೂ ಹೆಚ್ಚು ರೋಗಿಗಳನ್ನು ತನ್ನ ಪರಿಣಿತ ವೈದ್ಯಕೀಯ ತಂಡದ ಮೂಲಕ ಗುಣಮುಖಗೊಳಿಸಿದ್ದಾರೆ.
ಡಾ. ಸುಧಾಕರ ಶೆಟ್ಟಿ ಮತ್ತವರ ವೈದ್ಯಕೀಯ ತಂಡಕ್ಕೆ ಸತತ 4 ಬಾರಿ ಕೇಂದ್ರ ಸರಕಾರ ಪ್ರತಿಷ್ಠಿತ ಪ್ರಶಸ್ತಿಯಾದ ರಕ್ಷಾ ಮಂತ್ರಿ ಅವಾರ್ಡ್ ದೊರಕಿದೆ.
ಪುಣೆ ಕಂಟೋನ್ಮೆಂಟ್ ಬೋರ್ಡ್ ನಿಂದ ಶ್ರೇಷ್ಠತೆಯ ಪ್ರಮಾಣ ಪತ್ರ ಪ್ರಶಸ್ತಿ, 2023 ರಲ್ಲಿ ಚಾರ್ ಸಹಿ ಬಜಾಡೆ ಅವಾರ್ಡ್ ಬಂದಿದೆ.