ಇದೇನು ಐತಿಹಾಸಿಕ ಸಂಗತಿಯೋ ಜನಪದ ಕಥನವೊ ಹೇಳುವುದಕ್ಕೆ ಹೊರಟಿಲ್ಲ ನಾನು. ಗುತ್ತಿನ ಮನೆಗಳಲ್ಲಿ ವಾರ್ಷಿಕ ನೇಮ, ತಂಬಿಲಗಳು ನಡೆಯುವಾಗ ಆಚರಣೆಯ ಕೌತುಕ ಒಂದು ಕಡೆಯಾದರೆ, ಇನ್ನೊಂದು ಕಡೆ ಕೆಲವು ತಮಾಷೆಯ ಮತ್ತು ಯೋಚಿಸುವ ಸಂಗತಿಗಳು ನಮ್ಮ ಗಮನಕ್ಕೆ ಬರುತ್ತವೆ. ಬಂಟ ಮನೆತನದ ವಾರ್ಷಿಕ ಆಚರಣೆಯ ಸಂದರ್ಭದಲ್ಲಿ ಇತ್ತೀಚೆಗೆ ಒಂದು ವಿಚಾರವನ್ನು ಸೂಕ್ಷ್ಮವಾಗಿ ನಾನು ಗಮನಿಸಿದ್ದೇನೆ. ಯುವ ತಲೆಮಾರಿನಲ್ಲಿ ಗಂಡನ ತರವಾಡಿನ ಕಾರ್ಯಕ್ರಮಕ್ಕೆ ಹೆಂಡತಿ ಮಕ್ಕಳು ಬರುವಷ್ಟು ಹೆಂಡತಿಯ ತರವಾಡಿನ ಮನೆಯ ಕಾರ್ಯಕ್ರಮಕ್ಕೆ ಗಂಡನ ಪೂರ್ಣ ಹಾಜರಾತಿ ಇರುವುದಿಲ್ಲ. ಹೊತ್ತಿಗೆ ಬಂದು ಹಿಂದಿರುಗುವ ಅವರಲ್ಲಿ ಸಣ್ಣ ಪರಕೀಯ ಭಾವ. ಗಂಡನ ಜೊತೆ ಹೆಂಡತಿಯೂ ವಾಪಸ್. ಮನೆ ಅಳಿಯಂದಿರಿಗೆ ಇದು ಅನ್ವಯ ಆಗದು. ವಯಸ್ಸಾದ ಹಾಗೆ ಹೆಂಗಳೆಯರ ಆಸಕ್ತಿ ಬದಲಾಗುತ್ತದೆ. ಅವರು ಖಡ್ಡಾಯವಾಗಿ ತಮ್ಮ ತರವಾಡಿನ ಕಾರ್ಯಕ್ರಮದಲ್ಲಿ ಸಕ್ರೀಯರು. ಮಕ್ಕಳನ್ನು ನಾಲ್ಕು ದಿನ ಮೊದಲೇ ಹೊರಡಿಸಲು ಶುರು ಮಾಡುತ್ತಾರೆ. ಅದುವರೆಗೆ ಅಮ್ಮ ಹೋಗ್ತಾರೆ ಅಜ್ಜಿ ಹೋಗುತ್ತಾರೆ, ನಾವು ಹೋದ ಹಾಗೆ ಅಲ್ವಾ ಎನ್ನುವ ನೆಪ. ( ವಯಸ್ಸಾದ ಹಾಗೆ ಇನ್ನು ಕೊನೆಗೆ ಅಲ್ಲಿಗೇ ಸೇರಿಕೊಳ್ಳಬೇಕಲ್ಲ ಎಂಬ ಎಚ್ಚರಿಕೆ ಹುಟ್ಟುತ್ತದೆ ಎಂಬ ತಮಾಷೆಯ ಮಾತು ಕೂಡಾ ಉಂಟು)
ಈಗ ವಿಷಯಕ್ಕೆ ಬರುವ. ವಯಸ್ಸಾದ ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ ಅಂತ ಒಟ್ಟು ಸೇರಿ ಅಡುಗೆ ತಯಾರಿ ಮಾಡುವಾಗ ಒಂದು ಪ್ರೀತಿ, ಸಲುಗೆಯ ವಾತಾವರಣ. ಇತ್ತೀಚೆಗೆ ನನ್ನ ಗಂಡನ ಪಡ್ಡಂಬೈಲು ಗುತ್ತಿನ ಮನೆಯಲ್ಲಿ ವಾರ್ಷಿಕ ಅಗೆಲು, ತಂಬಿಲ ಮತ್ತು ವನದುರ್ಗಾರಾಧನೆಯ ದಿನ ಒಂದು ಬಿಡುವಿನಲ್ಲಿ ಗುತ್ತಿನ ಚಾವಡಿಯಲ್ಲಿ ಆರಾಮದಲ್ಲಿ ಕುಳಿತಿರುವಾಗ ಕುಟುಂಬದ ಒಬ್ಬರು ಅಮ್ಮ ಮೆತ್ತಗೆ ತಮ್ಮ ವ್ಯಾನಿಟಿ ಬ್ಯಾಗಿನಿಂದ ಹೊಸ ಕತ್ತಿಯನ್ನು ಮೆಲ್ಲ ಹೊರ ತೆಗೆದರು. ನಾನು ನನ್ನ ಗಂಡ ಮತ್ತು ಗಂಡನ ಸೋದರ ಅಳಿಯಂದಿರು ಮಾತ್ರ ಅಲ್ಲಿ ಹತ್ತಿರ ಇದ್ದದ್ದು. ನಮಗೂ ಅಚ್ಚರಿ ಮತ್ತು ಆತಂಕ! ಮೆಲ್ಲ ನಮ್ಮತ್ತ ಬಾಗಿ ‘ಇದು ಮಡಿವಾಳನಿಗೆ’ ಅಂದಾಗ ನಾವು ತಬ್ಬಿಬ್ಬು! ಸತ್ಯ ಹೇಳಬೇಕೆಂದರೆ ಪಡ್ಡಂಬೈಲು ಗುತ್ತಿನ ಕುಟುಂಬದವರು ಈ ತನಕ ಪೆಟ್ಟಿಗೆ ಹೆಸರಾದದ್ದು ನಾನಂತು ಕೇಳಿಲ್ಲ. ಮತ್ತೆ ಇವರೆಂಥ, ಮಡಿವಾಳನಿಗೆ ಕತ್ತಿ ತೋರಿಸಲು ಹೊರಟದ್ದು! ಅದೂ, ಕರ್ನಾಟಕದಿಂದ ಈ ಕೇರಳದ ಗಡಿ ಪ್ರದೇಶಕ್ಕೆ ಬಂದಿದ್ದಾರೆ. ಮತದಾನದ ದಿನ ಹತ್ತಿರ ಬರುತ್ತಿರುವ ಕಾರಣ ಅಲ್ಲಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಪೋಲಿಸರ ಚೆಕ್ ಬೇರೆ ಇದೆ. ಇವರು ಬ್ಯಾಗಲ್ಲಿ ಈ ಹೊಸ ಕತ್ತಿ ಹಿಡಿದುಕೊಂಡು ಬಂದದ್ದು ಸಾಕು ಮಾರ್ರೆ…! ಅಲ್ಲ ಇದು ಕತೆ ಹೀಗೆ ಬಿಟ್ಟರೆ ಏನಾದೀತು?
ಮಡಿವಾಳರಂತೂ ನಮ್ಮ ಆಪ್ತ ಜನವೇ, ಇನ್ನೂ ಬಂದಿಲ್ಲ…ಏನು ಎತ್ತ ಅಂತ ಆತಂಕ ಪಡುವಾಗ ಅವರೇ ಮಾತು ಮುಂದುವರಿಸಿದರು, “ಕೇನ್ ಅಪ್ಪೆ.. ನೆತ್ತ ಪಿರವು ಒಂಜಿ ಸಂಗತಿ ಉಂಡು.. ನಿಕ್ಕ್ ಒರ ಪಂಡ್ರುವೆ ( ನೋಡಮ್ಮಾ, ಇದರ ಹಿಂದೆ ಒಂದು ಸಂಗತಿ ಉಂಟು ನಿನಗೆ ಒಮ್ಮೆ ಹೇಳಿ ಬಿಡುವೆ)” ವಿಷಯ ಮೊದಲು ಕೇಳುವ, ಮತ್ತೆ ರಾಜಿ ಪಂಚಾತಿಗೆ ಅಂತ ನಾನು ಕತ್ತು ಉದ್ದ ಮಾಡಿ ಕೂತೆ. “ಕಳೆದ ವರ್ಷ ಧರ್ಮನೇಮ ಇತ್ತಲ್ವಾ. ಮಧ್ಯಾಹ್ನ ಒಂದು ಬಿಡುವಿನಲ್ಲಿ ಬಾಯಿ ಚಪ್ಪೆ ಚಪ್ಪೆ ಆಗಿ ಸ್ವಲ್ಪ ವೀಳ್ಯ ಹಾಕಿಕೊಳ್ಳುವ ಅಂತ ಅಡಿಕೆ ಹೋಳು ಮಾಡಲು ಕತ್ತಿ ಹುಡುಕಿದ್ದೇ ಹುಡುಕಿದ್ದು. ಸಿಗಲೇ ಇಲ್ಲ. ಆಗ ನಮ್ಮ ಮಡಿವಾಳಣ್ಣ ಕೋಲ್ತಿರಿ ಮಾಡುವುದು ಕಂಡಿತು. ಸೀದಾ ಹೋಗಿ “ಒಂಜಿ ಪೂಲು ಮಲ್ತೊನುಬೆ, ಬೀಸತ್ತಿ ಕೊರೊಲಿಯಾ” ಎಂದು ಕೇಳಿದೆ. ಮರು ಮಾತನಾಡದೇ ನನ್ನ ಕೈಗಿತ್ತ. ಯಾರಿಗೂ ಉಪದ್ರ ಬೇಡ ಅಂತ ದೂರ ಹೋಗಿ ಅಡಿಕೆ ಹೋಳು ಮಾಡುವಾಗ ಅಲ್ಲಿಗೆ ದೈವ ನರ್ತಕ ಬಂದ, ‘ಅಕ್ಕೇ ಪೂಲು ನರಿಪುನೆನಾ.. ಎಂಕೊರ ಬೀಸತ್ತಿ ಕೊರಿ, ಇತ್ತೆ ಕೊರ್ಪೆ’ ಅಂದ. ಸರಿ ಅವನಿಗೆ ಕೊಟ್ಟು ವಾಪಾಸು ಬಂದವಳಿಗೆ ಬೀಸತ್ತಿಯ ವಿಷಯ ನೆನಪಾದದ್ದು ಮತ್ತೊಂದು ದೈವದ ನೇಮ ಆಗಿ ಮಡಿವಾಳಣ್ಣ ಬಂದು, “ಅಕ್ಕೇ.. ಎನ್ನ ಬೀಸತ್ತಿ…” ಎಂದಾಗ. ಹೋಗಿ ನೋಡಿದರೆ ಬೀಸತ್ತಿಯೂ ಇಲ್ಲ, ದೈವ ನರ್ತಕ ಅದಾಗಲೇ ಹೋಗಿ ಆಗಿತ್ತು. ತಪ್ಪಿ ಅವರ ಉಳಿದ ಸಾಮಾನುಗಳ ಜೊತೆ ಕತ್ತಿ ಹೋಯಿತೋ, ಇಲ್ಲ ಅಲ್ಲಿ ಇಟ್ಟದ್ದನ್ನು ಯಾರಾದರೂ ತಮ್ಮ ಉಪಯೋಗಕ್ಕೆ ತೆಗೆದು ಇನ್ನೆಲ್ಲೊ ಇಟ್ಟರೋ.. ನಾನಂತು ಇಂಗು ತಿಂದ ಮಂಗನಂತೆ ಆಗಿದ್ದೆ. ನನ್ನ ಕತ್ತಿ ತೆಗೊಂಡದ್ದು, ನೀವು, ಕೊಡಬೇಕಾದದ್ದು ನೀವು ಎಂದ ಮಡಿವಾಳರಿಗೂ ನನ್ನ ಮೇಲೆ ಕೋಪ ಬಂದಿತ್ತು. ಅದು ಸಹಜವಾಗಿತ್ತು. ಅವರ ಕೆಲಸಕ್ಕೆ ಅದರ ಅಗತ್ಯ ತುಂಬಾ ಇತ್ತು. ಯಾಕೋ ನೇಮ ಮುಗಿದು ಮರಳುವಾಗ ಅದೊಂದು ಬೇಜಾರ ಮನಸ್ಸಲ್ಲಿ ಉಳಿದೇ ಹೋಯಿತು. ಹಾಗೆ ಆವತ್ತು ಒಂದು ನಿಶ್ಚಯ ಮಾಡಿಕೊಂಡೇ ಹೋಗಿದ್ದೆ, ಆ ಗುತ್ತಿನ ಮನೆಗೆ ಹೋಗಿ ಹೀಗೆ ಆಯಿತು ಅಂತ ಚಾಕ್ರಿಯವರ ಬಾಯಲ್ಲಿ ಮಾತು ಉಳಿಸಬಾರದು ಅಲ್ವಾ? ಹೊಸಾ ಕತ್ತಿ ಮಾಡಿಸಿ ತರಲೇ ಬೇಕು ಅಂತ ಅವರ ಮುಖದಲ್ಲಿ ಸಂತೃಪ್ತಿಯ ನಗು. ನಮಗೂ ಅವರ ಈ ಸತ್ಯ ನಿಷ್ಠೆ ಕಂಡು ಒಳಗೊಳಗೇ ಹೆಮ್ಮೆ… ಹಾಗೆ ಸಂಜೆ ಮಡಿವಾಳರು ಬಂದ ಕೂಡಲೇ ಎಲ್ಲರ ಸಮ್ಮುಖದಲ್ಲಿ ಕತ್ತಿ ಹಸ್ತಾಂತರ ನಡೆದು ಸಂಗತಿಗೊಂದು ಸುಖಾಂತ್ಯ ಆಯಿತು.
ಇಂಥ ಆದರ್ಶಯುಕ್ತ ಸಣ್ಣ ಸಣ್ಣ ಸಂಗತಿಗಳೇ ನಮಗೆ ನಮ್ಮ ಮನೆತನ ಮತ್ತು ಹಿರಿಯರ ಬಗ್ಗೆ ಅಭಿಮಾನ ಹುಟ್ಟಿಸಿ ಬದುಕಿಗೊಂದು ನೀತಿಪಾಠ ಹೇಳುತ್ತವೆ.
ರಾಜಶ್ರೀ ಟಿ ರೈ ಪೆರ್ಲ