ವಿವಿಧ ಚಾರಿಟಿ ಸಂಸ್ಥೆಗಳಿಂದ ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳು ಮುಂದೆ ಅದೇ ರೀತಿಯ ವಿದ್ಯಾರ್ಥಿವೇತನಗಳನ್ನು ಕೊಡುವಂತರಾಗಬೇಕು. ಕೃತಜ್ಞತೆಯು ಅತಿ ದೊಡ್ಡ ಮೌಲ್ಯವಾಗಿದೆ. ನಮ್ಮ ಶಿಕ್ಷಣಕ್ಕೆ ವಿವಿಧ ವ್ಯಕ್ತಿ ಮತ್ತು ಸಂಸ್ಥೆಗಳಿಂದ ದೊರೆತ ವಿದ್ಯಾರ್ಥಿವೇತನವನ್ನು ಸದುಪಯೋಗಪಡಿಸುವುದು ಮಾತ್ರವಲ್ಲದೇ ಅದನ್ನು ನೆನಪಲ್ಲಿ ಇಟ್ಟುಕೊಳ್ಳುವುದು ಮತ್ತು ಮುಂದೆ ನಾವು ಸಂಪಾದನೆ ಆರಂಭಿಸಿದಾಗ ಅದರ ಒಂದು ಭಾಗವನ್ನು ಸಮಾಜಕ್ಕೆ ಹಿಂದಿರುಗಿಸುವುದು ನಮ್ಮೆಲ್ಲರ ಕರ್ತವ್ಯ ಆಗಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹೇಳಿದರು. ಅವರು ಬೆಳ್ಮಣ್ ಜೂನಿಯರ್ ಕಾಲೇಜಿನ ಸಭಾಂಗಣದಲ್ಲಿ ಅಮ್ಮನ ನೆರವು ಫೌಂಡೇಶನ್ ವತಿಯಿಂದ ನಡೆದ ವಿದ್ಯಾರ್ಥಿವೇತನ ಮತ್ತು ಸಹಾಯಧನ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ಅಮ್ಮನ ನೆರವು ಫೌಂಡೇಶನ್ ಮೂಲಕ ಸರಕಾರಿ ಶಾಲೆಗಳ ಪ್ರತಿಭಾವಂತ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಲಕ್ಷ ರೂ ಮೊತ್ತದ ವಿದ್ಯಾರ್ಥಿವೇತನಗಳನ್ನು ಹಸ್ತಾಂತರ ಮಾಡಿ ಅವರು ಶುಭ ಕೋರಿದರು.

ಸಹಕಾರಿ ಧುರೀಣ ಹಾಗೂ ಬೆಳಪು ಗ್ರಾಮದ ಅಭಿವೃದ್ಧಿಯ ಹರಿಕಾರರಾದ ಡಾ| ಬೆಳಪು ದೇವಿಪ್ರಸಾದ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಕಳದ ವಿಜೇತ ವಿಶೇಷ ಶಾಲೆಗೆ, ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಬೆಳ್ಳಿಹಬ್ಬದ ಕೊಡುಗೆಯಾಗಿ ನಿರ್ಮಾಣ ಮಾಡುತ್ತಿರುವ ಮನೆಗೆ ಮತ್ತು ಕಾರ್ಕಳದ ಸುರಕ್ಷಾ ಸೇವಾಶ್ರಮಗಳಿಗೆ ಅಮ್ಮನ ನೆರವು ಫೌಂಡೇಶನ್ ಕೊಡ ಮಾಡಿದ ತಲಾ ಹತ್ತು ಸಾವಿರ ರೂಪಾಯಿಗಳ ಸಹಾಯಧನವನ್ನು ಹಸ್ತಾಂತರ ಮಾಡಿ ಶುಭ ಕೋರಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ನಿಟ್ಟೆ ಮೆಸ್ಕಾಂನ ಸಹಾಯಕ ಅಭಿಯಂತರರಾದ ವಿನಾಯಕ ಕಾಮತ್, ಬೆಳ್ಮಣ್ ಜೆಸಿಐ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಹೋಟೆಲ್ ಉದ್ಯಮಿ ಜಗದೀಶ್ ಶೆಟ್ಟಿ, ಸಾಹಿತಿ ರೇಷ್ಮಾ ಶೆಟ್ಟಿ ಗೋರೂರು ಅವರು ಕಾರ್ಯಕ್ರಮದ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಚಾರ್ಯರಾದ ವಿನ್ಸಂಟ್ ಡಿಸೋಜ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅಮ್ಮನ ನೆರವು ಫೌಂಡೇಶನ್ ಅಧ್ಯಕ್ಷರಾದ ಅವಿನಾಶ್ ಜಿ ಶೆಟ್ಟಿ ಅವರು ಈ ವರ್ಷದಲ್ಲಿ ಕಾರ್ಕಳ ತಾಲೂಕಿನ ಸರಕಾರಿ ಶಾಲೆಗಳ ಮಕ್ಕಳಿಗೆ 16 ಲಕ್ಷಕ್ಕಿಂತ ಹೆಚ್ಚು ಮೊತ್ತದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು, ಅದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಟ್ರಸ್ಟಿನ ಸಲಹೆಗಾರರಾದ ವಸಂತ್ ಎಂ ಅವರು ವಿದ್ಯಾರ್ಥಿವೇತನದ ವಿವರ ನೀಡಿದರು. ಶಿಕ್ಷಕ ರಾಜೇಂದ್ರ ಭಟ್ ಕೆ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಮುಖ್ಯ ಶಿಕ್ಷಕ ಗೋಪಾಲ್ ಅವರು ಧನ್ಯವಾದ ಸಲ್ಲಿಸಿದರು.