ಕರ್ನಾಟಕ ಪೊಲೀಸ್ ಇಲಾಖೆಯೊಳಗೆ ದಾರ್ಶನಿಕ ಮತ್ತು ಡೈನಾಮಿಕ್ ಆಗಿ ಇದ್ದ ಹಿರಿಯ ಐಪಿಎಸ್ ಅಧಿಕಾರಿ ಅಂದ್ರೆ ಇಂದಿಗೂ ಖ್ಯಾತಿ ಹೊಂದಿರುವ ಡಾ.ಕೆ.ಮಧುಕರ್ ಶೆಟ್ಟಿಯವರು 19 ವರ್ಷಗಳ ಸೇವಾ ಅವಧಿಯಲ್ಲಿ ಅಪೂರ್ವವಾದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ಆಶಕ್ತರಿಗೆ ರಕ್ಷಕನಾಗಿ, ಅಧೀನ ಅಧಿಕಾರಿಗಳು ಸಿಬ್ಬಂದಿಗೆ ಮಾತೃ ಹೃದಯಿಯಾಗಿ, ಭ್ರಷ್ಟರು ಮತ್ತು ಕಾನೂನು ಬಂಜಕರಿಗೆ ಸಿಂಹ ಸ್ವಪ್ನನಾಗಿದ್ದಂತಹ ಒಬ್ಬ ನಿಷ್ಠಾವಂತ ಅಧಿಕಾರಿ. ಖ್ಯಾತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಪುತ್ರ ನೇ ಈ ಐ.ಪಿ.ಎಸ್ ಮಧುಕರ್ ಶೆಟ್ಟಿ.
“ಮಗನಿಗಾಗಿ ಆಸ್ತಿ ಮಾಡುವುದಿಲ್ಲ, ಮಗನನ್ನೇ ಆಸ್ತಿ ಮಾಡುತ್ತೇನೆ” ಎಂದು ಅವತ್ತೇ ಹೇಳಿದ್ದರು. ಮತ್ತೆ ನುಡಿದಂತೆಯೇ ನಡೆದು ಬಿಟ್ಟರು ನಮ್ಮ ವಡ್ಡರ್ಸೆ ರಘುರಾಮ ಶೆಟ್ಟರು. ಈ ಸಮಾಜದ ಆಸ್ತಿಯನ್ನೇ ಮಾಡಿ ನಮಗೆಲ್ಲಾ ಬಿಟ್ಟು ಹೋದರು. ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಮಗನಾದ ಮಧುಕರ ಶೆಟ್ಟಿ ಜನಿಸಿದ್ದು 1971ರ ಡಿಸೆಂಬರ್ 17 ರಂದು ಉಡುಪಿ ಜಿಲ್ಲೆಯ ವಡ್ಡರ್ಸೆ ಎಂಬಲ್ಲಿ. ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸಿದ ಮಧುಕರ್ ಶೆಟ್ಟಿ 1999ರಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ಕೆಲಸ ಮಾಡಿದ ಎಲ್ಲಾ ಹುದ್ದೆಗಳು, ಕಚೇರಿಗಳಲ್ಲಿ ಮಾದರಿಯೊಂದನ್ನು ರೂಪಿಸಿ ಹೊರನಡೆದರು.
ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಸರಳ ಜೀವನ ಶೈಲಿ ರೂಢಿಸಿಕೊಂಡಿದ್ದ ಮಧುಕರ್ ಶೆಟ್ಟಿಯವರು ಮನೆಗೆಲಸಕ್ಕೆಂದು ಕಾನ್ಸ್ಟೇಬಲ್ ಗಳನ್ನು ನಿಯೋಜಿಸುವ ಪದ್ಧತಿಯನ್ನು ವಿರೋಧಿಸುತ್ತಿದ್ದರು. ದಿಲ್ಲಿಯ ಜೆಎನ್ ಯುನಲ್ಲಿ ಸಮಾಜ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಮಧುಕರ್ ಶೆಟ್ಟಿ, ನ್ಯೂಯಾರ್ಕ್ ನ ಆಲ್ಬನಿ ವಿವಿಯಲ್ಲಿ ಸಾರ್ವಜನಿಕ ಆಡಳಿತ ವಿಷಯ ಕುರಿತು ಪಿ.ಎಚ್.ಡಿ ಮಾಡಿದ್ದರು. ಚಿಕ್ಕಮಗಳೂರು ಎಸ್ಪಿಯಾಗಿ, ಲೋಕಾಯುಕ್ತ ಎಸ್ಪಿಯಾಗಿ ಅವರು ಖಡಕ್ ಹಾಗೂ ಜನಪರ ಅಧಿಕಾರಿಯಾಗಿ ಖ್ಯಾತಿ ಗಳಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಎಸ್ಪಿಯಾಗಿ, ಚಾಮರಾಜನಗರ ಮತ್ತು ಚಿಕ್ಕಮಗಳೂರಿನಲ್ಲಿ ಎಸ್ಪಿಯಾಗಿದ್ದರು.
2006 ರಲ್ಲಿ ಸರ್ಕಾರಿ ಅಧಿಕಾರಿಗಳ ಆದೇಶದ ಮೇರೆಗೆ 35 ಕುಟುಂಬಗಳ ಬಡ ಜನರನ್ನು ತತ್ಕೋಳ ಅರಣ್ಯದಿಂದ ಹೊರ ಹಾಕಿದಾಗ, ಚಿಕ್ಕಮಗಳೂರಿನ ಎಸ್ ಪಿ ಆಗಿದ್ದ ಮಧುಕರ್ ಶೆಟ್ಟರು ಅಂದಿನ ಜಿಲ್ಲಾಧಿಕಾರಿ ಹರ್ಷಗುಪ್ತ ಅವರೊಂದಿಗೆ ಸೇರಿ ಸರಗೋಡು ಕುಂದೂರು ಅಂಚಿನಲ್ಲಿರುವ 64 ಎಕರೆ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿದ ಶ್ರೀಮಂತ ಪ್ಲಾಂಟರ್ ಗಳಿಂದ ತೆಗೆದುಕೊಂಡು ಅಲ್ಲಿನ ಬಡ ನಿರ್ಗತಿಕರಿಗೆ ಕೊಡುವಲ್ಲಿ ಯಶಸ್ವಿ ಆದರು. ಕಾನೂನು ಬದ್ದವಾಗಿಯೇ ಹಕ್ಕು ಪತ್ರವನ್ನು ಅಲ್ಲಿನ ಬಡವರಿಗೆ ಮಾಡಿ ಕೊಟ್ಟರು. ಕೃತಜ್ಞರಾಗಿರುವ ಗ್ರಾಮಸ್ಥರು ತಮ್ಮ ಕುಗ್ರಾಮಕ್ಕೆ “ಗುಪ್ತಾ-ಶೆಟ್ಟಿ ಹಳ್ಳಿ” ಎಂದು ಹೆಸರಿಟ್ಟಿದ್ದರು. ಇದು ಮಧುಕರ್ ಶೆಟ್ಟಿಯವರ ಕಾರ್ಯಕ್ಷಮತೆ ಮತ್ತು ಉದಾತ್ತ ಮನಸ್ಸಿಗೆ ಹಿಡಿದ ಕೈಗನ್ನಡಿ. ಸರ್ಕಾರವು ಒಂದು ರಸ್ತೆಗೆ ಮಧುಕರ್ ಶೆಟ್ಟಿಯವರ ಹೆಸರು ಇಡಲಾಗದ ಸಮಯದಲ್ಲಿ ಒಂದು ಊರಿಗೆ ಇವರ ಹೆಸರನ್ನು ಇಡಲಾಗಿತ್ತು ಎಂದರೆ ಬಹಳ ಆಶ್ಚರ್ಯ ಮತ್ತು ಅವಿಸ್ಮರಣೀಯ.
ಚಾಮರಾಜನಗರದಲ್ಲಿ 2003ರಿಂದ 2004ರಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಚಾಮರಾಜನಗರ ಜಿಲ್ಲೆಯಲ್ಲಿ ಎಸ್ಪಿಯಾಗಿದ್ದಾಗ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ತಮಿಳುನಾಡು, ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ, ಕರಿಕಲ್ಲು, ಮರಳು ದಂಧೆಗೆ ಕಡಿವಾಣ ಹಾಕಿದ್ದರು. ವೀರಪ್ಪನ್ ಬಂಧನದ ಸ್ಪೆಷಲ್ ಟಾಸ್ಕ್ ಪೋರ್ಸ್ ನಲ್ಲಿ ಎಸ್ಪಿ ಆಗಿ ರಾಜ್ಯಾಪಾಲರ ಕಚೇರಿ, ಬೆಂಗಳೂರು ನಗರ ಸಂಚಾರ ವಿಭಾಗದ ಡಿಸಿಪಿಯಾಗಿ, 2008-09ರಲ್ಲಿ ಕೋಸೋವಾದಲ್ಲಿ ಯುನೈಟೆಡ್ ನೇಷನ್ಸ್ ಮಿಷನ್ ನಲ್ಲಿ ಯುದ್ದಾಪರಾಧಗಳ ತನಿಖಾದಲದಲ್ಲೂ ಕಾರ್ಯ ನಿರ್ವಹಿಸಿದ್ದಾರೆ. 2011ರ ಜುಲೈ ತಿಂಗಳಿನಲ್ಲಿ ಅವರು ಉನ್ನತ ವ್ಯಾಸಂಗಕ್ಕೆಂದು ಅಮೇರಿಕಕ್ಕೆ ಹೊರಟು ನಿಂತಾಗ ಅವರ ಬಳಿ ಇದ್ದುದು ಹಳೆಯ ಬೆತ್ತದ ಒಂದು ಸೋಫಾ, ಒಂದೆರಡು ಪ್ಲಾಸ್ಟಿಕ್ ಕುರ್ಚಿ, ಪ್ಲಾಸ್ಟಿಕ್ ಚಾಪೆ, ಬಕೆಟ್, ಚೊಂಬು, ನೀರು ಕಾಯಿಸುವ ಕಾಯಿಲ್ ಹೀಟರ್, ಒಂದೆರಡು ವ್ಯಾಯಾಮ ಸಲಕರಣೆಗಳು ಮತ್ತು ಒಂದಷ್ಟು ಪುಸ್ತಕಗಳು. ಅವುಗಳನ್ನು ಇರಿಸಲು ಸ್ವಂತದ್ದಾದ ಜಾಗವೂ ಅವರ ಬಳಿ ಇರಲಿಲ್ಲ. ಸ್ನೇಹಿತರ ಮನೆಯಲ್ಲಿರಿಸಿ ಅಮೇರಿಕಕ್ಕೆ ತೆರಳಿದ್ದರು.
ಮಧುಕರ್ ಅವರ ಬಳಿ ಸ್ವಂತ ವಾಹನ ಇರಲಿಲ್ಲ. ಪೊಲೀಸ್ ಇಲಾಖೆಯಿಂದ ಒದಗಿಸಿದ್ದ ವಾಹನವನ್ನು ಸ್ವಂತಕ್ಕೆ ಬಳಕೆ ಮಾಡಿದರೆ ಪ್ರಯಾಣದ ವಿವರವನ್ನು ಚಾಚೂ ತಪ್ಪದೆ ಲಾಗ್ ಬುಕ್ ನಲ್ಲಿ ದಾಖಲಿಸಿ ನಿಗದಿತ ಬಾಡಿಗೆಯನ್ನು ಮರುಪಾವತಿ ಮಾಡುತ್ತಿದ್ದರು. ರಾಜ್ಯದ ಪೊಲೀಸ್ ಇಲಾಖೆಯ ಮೇಲೆ ಗಂಭೀರವಾದ ಪರಿಣಾಮ ಬೀರಿದ ನಕ್ಸಲೀಯರ ಶರಣಾಗತಿ ನೀತಿ, ಪೊಲೀಸ್ ಸಿಬ್ಬಂದಿ ವೇತನ ಪರಿಷ್ಕರಣೆಗೆ ಸಂಬಂಧಿಸಿದ ವರದಿಗಳನ್ನು ಸಿದ್ಧಪಡಿಸುವುದರಲ್ಲಿ ಮಧುಕರ್ ಅವರ ಪಾತ್ರ ದೊಡ್ಡದು. ಯಾವ ವಿಚಾರದಲ್ಲೂ ಪ್ರಚಾರ ಬಯಸದ ಅವರು, ಪೊಲೀಸ್ ಇಲಾಖೆಯೊಳಗೆ ಸುಧಾರಣೆಗಾಗಿ ಸದಾ ಹಾತೊರೆಯುತ್ತಿದ್ದರು. ಐಪಿಎಸ್ ಅಧಿಕಾರಿ ಕೆ. ಮಧುಕರ ಶೆಟ್ಟಿ ಅವರು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ಎದೆಯಲ್ಲಿ ನಡುಕ ಹುಟ್ಟಿಸಿದರು. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಹಲವು ಸಚಿವರು, ಶಾಸಕರು ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟ ಎಸಗಿದ್ದ ಹಲವು ಪ್ರಕರಣಗಳನ್ನು ಹೊರಗೆಡವಿದ್ದ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ತಂಡದಲ್ಲಿ ಮಧುಕರ ಶೆಟ್ಟಿ ಕೂಡ ಇದ್ದರು.
ಲೋಕಾಯುಕ್ತ ಎಸ್ಪಿಯಾಗಿದ್ದ ಅವಧಿಯಲ್ಲಿ ಶಾಸಕರು, ಸಚಿವರನ್ನೂ ಕಾನೂನಿನ ಬಲೆಗೆ ಕೆಡುವುದರ ಮೂಲಕ ಇತಿಹಾಸ ನಿರ್ಮಿಸಿದ್ದರು. ಉದ್ಯಮಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಕೆಜಿಎಫ್ ಶಾಸಕರಾಗಿದ್ದ ವೈ ಸಂಪಗಿಯನ್ನು ಶಾಸಕರ ಭವನದಲ್ಲೇ ಬಂಧಿಸಿ, ರಾಜ್ಯದ ರಾಜಕಾರಣಿದ ಕರಾಳ ಮುಖವನ್ನು ಬಯಲಿಗೆಳೆದಿದ್ದರು. ಹಲವು ಕೆಎಎಸ್, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಲಂಚ ಪ್ರಕರಣದಲ್ಲಿ ಬಂಧಿಸುವಲ್ಲೂ ಯಶಸ್ವಿಯಾಗಿದ್ದರು. ಅದೇ ರೀತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಗೋವಿಂದರಾಜು ಬಂಧಿಸಿದ್ದ ಮಧುಕರ್ ಶೆಟ್ಟಿ ಅವರು ಪಾಲಿಕೆ ಸದಸ್ಯರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಕಡತಗಳಲ್ಲಿ ಮುಚ್ಚಿ ಹೋಗಿದ್ದ ಕೆಐಎಡಿಬಿ ಭೂಹಗರಣವನ್ನು ಹೊರಗೆಳೆದಿದ್ದು ಅವರ ಸಾಧನೆಗಳಲ್ಲೊಂದಾಗಿತ್ತು. ಹಗರಣದ ಸಾಕ್ಷಿಯೊಬ್ಬರಿಗೆ ಲಂಚ ನೀಡುತ್ತಿರುವಾಗ ಪಾಲಿಕೆ ಸದಸ್ಯರಾಗಿದ್ದ ಕಟ್ಟಾ ಜಗದೀಶ್ ಅವರನ್ನು ಬಂಧಿಸಿದ್ದರು. ಇದಾದ ನಂತರದ ಕೆಲವೇ ದಿನಗಳಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದ ಮಧುಕರ್ ಶೆಟ್ಟಿ ಅವರು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಸಚಿವ ಸ್ಥಾನ ಕಳೆದುಕೊಳ್ಳಲು ಕಾರಣರಾಗಿದ್ದನ್ನು ಸ್ಮರಿಸಬಹುದು. ನಂತರದ ದಿನಗಳಲ್ಲಿ ಲೋಕಾಯುಕ್ತದ ಒಳಗಡೆಯೇ ಸರಿಯಾದ ತನಿಖೆ ಆಗುತ್ತಿಲ್ಲ ಎಂದು ಪ್ರಶ್ನಿಸಿ ಅಸಮಾಧಾನದಿಂದಲೇ ರಾಜೀನಾಮೆ ಕೊಟ್ಟರು.
2011ರಲ್ಲಿ ವಿದ್ಯಾಭ್ಯಾಸದ ರಜೆ ಮೇಲೆ ಅಮೇರಿಕಕ್ಕೆ ತೆರಳಿದ್ದ ಅವರು ರಜೆಯಿಂದ ವಾಪಸ್ ಬಂದ ಬಳಿಕ ಡಿಐಜಿ ಆಗಿ ಬಡ್ತಿ ಪಡೆದಿದ್ದರು. ತರಬೇತಿ ಮತ್ತು ನೇಮಕಾತಿ ವಿಭಾಗದ ಡಿಐಜಿ ಆಗಿದ್ದರು. ಬಳಿಕ ಕೇಂದ್ರ ಸೇವೆಗೆ ನಿಯೋಜಿತರಾಗಿ 2017 ರ ಮಾರ್ಚ್ ನಿಂದ ಹೈದರಾಬಾದ್ ನ ಸರ್ದಾರ್ ವಲ್ಲಭಾಯ್ ಪಟೇಲ್ ರಾಷ್ಟೀಯ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕರ ಹುದ್ದೆಯಲ್ಲಿದ್ದರು. ಅಚಾನಕ್ ಆಗಿ ಸಾಮಾನ್ಯ ಜ್ವರಕ್ಕೆ ತುತ್ತಾದ ಶೆಟ್ಟಿ ಅವರು 2018 ಡಿಸೆಂಬರ್ ನಲ್ಲಿ ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗಂಭೀರವಾದ ಹೃದಯದ ತೊಂದರೆಗಳಿಂದ ಮತ್ತು ಇನ್ನೂ ಅನುಮಾನಾಸ್ಪದವಾಗಿ 28 ಡಿಸೆಂಬರ್ 2018ರಂದು ನಿಧಾನರಾದರು. ಇವರ ಈ ಅಸಹಜ ಸಾವು ಅದೆಷ್ಟೋ ದಿಟ್ಟ ಅಧಿಕಾರಿಗಳ ನಿದ್ದೆಗೆಡಿಸಿತ್ತು ಎಂದರೆ ತಪ್ಪಿಲ್ಲ. ಇಂದಿಗೂ ಅವರ ಈ ಸಾವು ತುಂಬಾ ಅನುಮಾನಗಳಿಂದಲೇ ಕೂಡಿದೆ. ಯಾವುದೋ ದೊಡ್ಡ ಭ್ರಷ್ಟ ವ್ಯವಸ್ಥೆಯ ವಿರುದ್ಧ ತೊಡೆ ತಟ್ಟಿ ಅನುಮಾನಾಸ್ಪದವಾಗಿಯೇ ಮರಣ ಹೊಂದಿದ್ದಾರೆ ಎಂಬ ಗುಮಾನಿ ಇನ್ನೂ ಹಾಗೆಯೇ ಇದೆ. ಇವರ ತಂದೆ ವಡ್ಡರ್ಸೆ ರಘುರಾಮ ಶೆಟ್ಟರು ಹೇಳಿದಂತೆ “ಮಗನಿಗಾಗಿ ಆಸ್ತಿ ಮಾಡುವುದಿಲ್ಲ, ಮಗನನ್ನೆ ಆಸ್ತಿ ಮಾಡುತ್ತೇನೆ ” ಎಂಬ ಮಾತು ಕೊನೆಗೂ ಅಕ್ಷರಶ ನಿಜವಾಗಿ ಹೋಯ್ತು. ಮಧುಕರ್ ಶೆಟ್ಟಿಯವರು ನಿಜಕ್ಕೂ ಈ ಸಮಾಜದ ಆಸ್ತಿ. ಆದರೆ ಆ ಆಸ್ತಿಯನ್ನು ನಾವು ಉಳಿಸಿಕೊಂಡಿಲ್ಲ ಎಂಬ ಕೊರಗು ನಮ್ಮನ್ನು ಸದಾ ಕಾಡುತ್ತಿರುತ್ತದೆ.
ಇವರ ಮರಣವನ್ನು ತುಂಬಾ ಹತ್ತಿರದಿಂದ ಕಂಡ ಇನ್ನೊಬ್ಬ ದಕ್ಷ ಅಧಿಕಾರಿ ಅಣ್ಣಾಮಲೈ ಕೂಡ ಕೆಲ ಸಮಯದ ನಂತರ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ ಮಾಡಿದನ್ನು ಇಲ್ಲಿ ಸ್ಮರಿಸಬಹುದು. ದುಷ್ಟರನ್ನು ಸದೆ ಬಡಿಯುವ ದಕ್ಷ ಅಧಿಕಾರಿಗಳಿಗೆ ಇಲ್ಲಿ ಉಳಿಗಾಲ ಇಲ್ಲ ಎಂಬುದು ನಮ್ಮ ಭ್ರಷ್ಟ ವ್ಯವಸ್ಥೆಯಲ್ಲಿ ಪದೇ ಪದೇ ಸಾಬಿತಾಗುತ್ತಿದೆ. ಆದರೂ ದುರುಳರನ್ನು ಮೆಟ್ಟಿ ನಿಲ್ಲುವ ಶಕ್ತಿಯೊಂದು ಮತ್ತೆ ಮತ್ತೆ ಹುಟ್ಟಿ ಬರಬೇಕು ಈ ನೆಲದಲ್ಲಿ ಮಧುಕರ್ ಶೆಟ್ಟಿಯವರ ರೂಪದಲ್ಲಿ.
ಪ್ರಸಾದ್ ಶೆಟ್ಟಿ ಸೀತಾನದಿ.