ಸಾಲಿಗ್ರಾಮ ಹಾಗೂ ಇತರ ಮೂರ್ತಿಗಳನ್ನು ಅರ್ಚಕರು ಮತ್ತು ಆಡಳಿತ ವರ್ಗದ ವೈದಿಕರು ಇರಿಸುತ್ತಾರೆ. ಇವುಗಳೆಲ್ಲ ಅವರ ಮನೆಯ ಅಥವಾ ಕುಟುಂಬಕ್ಕೆ ಸೇರಿದವುಗಳು. ಅವುಗಳಿಗೆ ಮನೆಯಲ್ಲಿ ನಿತ್ಯ ನೈವೇದ್ಯ ಪೂಜೆ ಮಾಡಬೇಕಾಗಿದೆ. ಅದಕ್ಕಾಗಿ ದೇವಸ್ಥಾನದಲ್ಲಿಟ್ಟರೆ, ದೇವರೊಂದಿಗೆ ಇವುಗಳಿಗೂ ಪೂಜೆಯಾಗುತ್ತದೆ. ಮಾತ್ರವಲ್ಲದೇ ಕೆಲವು ತಂತ್ರಿಗಳ ಮನೆದೇವರು ಕೂಡಾ ದೇವಾಲಯದಲ್ಲಿ ಆಶ್ರಿತವಾಗಿವೆ ಎಂದು ತಿಳಿಯಿತು. ವಿಚಿತ್ರ ಎಂದರೆ ಕೆಲವು ದೇವಸ್ಥಾನಗಳಲ್ಲಿ ಐದಾರು ಸಾಲಿಗ್ರಾಮ ಮೂರ್ತಿಗಳಿವೆಯಂತೆ. ಹಿಂದೆ ಪೂಜೆ ಬಿಟ್ಟು ಹೋದ ಅರ್ಚಕರದ್ದೂ ಇವೆಯಂತೆ. ವಿಚಿತ್ರವಾದರೂ ಇದು ಸತ್ಯ. ದುರಾದೃಷ್ಟವೆಂದರೆ ಹೀಗೆ ದೇವರ ಪೀಠದಲ್ಲಿ ಇಟ್ಟವರ ನಂಬಿಕೆಯಂತೆ ಖಂಡಿತವಾಗಿಯೂ ಕ್ಷೇತ್ರದ ದೇವರಿಗೂ ತೃಪ್ತಿ ಇಲ್ಲದೇ ಪರಿಣಾಮ ಸಂತಾನ ಕ್ಷಯಾದಿ ಘೋರ ದುರಿತಗಳಿಗೆ ಹೇತುವಾಗಲಿದೆ ಎಂದು ತಿಳಿದು ಬಂದಿದೆ. ಆ ಅಪ್ರಿಯ ಸತ್ಯವನ್ನು ತೆರೆದಿಟ್ಟವರು ಕೂಡ ಓರ್ವ ಸಂಸ್ಕಾರವಂತ ವಿಪ್ರೋತ್ತಮ ಕುಲದ ಯುವ ದಿಟ್ಟ ದೈವಜ್ಞರು, ಜ್ಯೋತಿಷ್ಯದಲ್ಲಿ ಪಿಎಚ್ ಡಿ ಮಾಡಿದ ಬೆರಳೆಣಿಕೆಯಲ್ಲಿ ಒಬ್ಬರಾಗಿದ್ದಾರೆ.
ದೇವರು, ಪ್ರಶ್ನೆ ಕೇವಲ ಹಣ ಸಂಪಾದನೆಯಲ್ಲ, ದೇವ ಮಂದಿರದ ಅನಿಷ್ಟ ನಿವಾರಣೆಯಾಗಿ ನಾಡಿಗೆ ಸುಭಿಕ್ಷೆಯೇ ನನ್ನ ಧ್ಯೇಯ ಎನ್ನುತ್ತಾರೆ ಈ ದೈವಜ್ಞರು. ತುಳುನಾಡಿನ ಅದೆಷ್ಟೋ ದೇವಾಲಯಗಳಲ್ಲಿ ಪ್ರಶ್ನೆ ಚಿಂತಿಸಿದಾಗಲೂ ಈ ಸತ್ಯ ಬೆಳಕಿಗೆ ಬಂದಿದೆ. ಪ್ರಶ್ನೆ ಕೇಳಲು ಬಂದ ಸಂಬಂಧ ಪಟ್ಟವರಲ್ಲಿ ಪರಿಹರಿಸಿಕೊಳ್ಳಲು ಹೇಳಿದ್ದೇವೆ. ಆದರೆ ಎಲ್ಲಿಯೂ ಇದಕ್ಕೆ ಪರಿಹಾರ ಆಗಲಿಲ್ಲ ಎಂಬ ಚಿಂತೆಯನ್ನು ತೋಡಿಕೊಂಡಿದ್ದಾರೆ. ಸಾಲಿಗ್ರಾಮವನ್ನು ಇಟ್ಟವರು ತಮ್ಮ ಮನೆಯಲ್ಲಿ ಪಿತೃ ಕಾರ್ಯ ಇದ್ದರೆ ಕೊಂಡು ಹೋಗಿ ಪುನಃ ತಂದು ದೇವರ ಪೀಠದಲ್ಲಿ ಇಡುತ್ತಾರೆ. ಆದರೆ ಇತರ ಮುಗ್ಧರಾದ ಆಡಳಿತ ವರ್ಗದವರಾಗಲಿ, ಭಕ್ತರಿಗಾಗಲಿ ಈ ಸತ್ಯ ತಿಳಿದಿರುವುದಿಲ್ಲ. ವಿಶೇಷವೆಂದರೆ, ಅವರು ಸ್ವಂತ ದೇವಾಲಯದಂತೆ ಇತರ ಯಾರಲ್ಲಿ ಅಂದರೆ ಅಧಿಕಾರ ವರ್ಗದವರಲ್ಲಿ ಕೂಡಾ ಒಪ್ಪಿಗೆಯನ್ನು ಪಡೆಯುವ ಸಾಮಾನ್ಯ ಮರ್ಯಾದೆಯನ್ನು ಪಾಲಿಸದಿರುವುದು ಖೇದಕರವಲ್ಲವೇ?
ಗರ್ಭಗುಡಿಯ ದೇವರ ಪೀಠ ಅನಾಥಾಶ್ರಮ ಆಗಬಾರದು. ದೇವರಿಗೆ ವೈಭವದ ಚಿನ್ನ, ಬೆಳ್ಳಿ ಆಭರಣ, ಗುಡಿ ಗೋಪುರ ಆಡಂಬರ ಇಲ್ಲದಿದ್ದರೂ ಪ್ರಧಾನ ದೇವರಿಗೆ ಮುಖ್ಯ ದೇವಾಲಯ ಜೀರ್ಣೋದ್ದಾರಗೊಂಡರೆ ದೇವರು ಸಂಪ್ರೀತನಾಗಿ ನಾಡಿಗೆ ಕ್ಷೇಮಾವೃದ್ಧಿಯಾಗುವುದೆಂದು ಮುಗ್ಧ ಭಕ್ತರು ನಂಬಿರುತ್ತಾರೆ. ತಮ್ಮ ಸಂಪಾದನೆಯ ಯೋಗ್ಯ ಅಂಶವನ್ನು ಅರ್ಪಿಸುತ್ತಾರೆ. ಆದರೆ ಕೆಲವರ ಸ್ವಂತ ಕುಟುಂಬ ಕ್ಷೇಮಕ್ಕೆ ನಾಡನ್ನೆ ಬಲಿ ಪಡೆಯುವುದು ಯಾವ ನ್ಯಾಯ? ಇನ್ನು ಅರ್ಚನೆಗಿರುವ ಹೂ, ದೂಪ, ದೀಪದ ಎಣ್ಣೆ, ಬಹಳ ಶ್ರದ್ದೆ, ಅಗತ್ಯ ದೇವರ ದೀಪಕ್ಕೆ ಶುದ್ಧ ಎಳ್ಳೆಣ್ಣೆ, ಉತ್ತಮ ಆದರೆ ಮಾರುಕಟ್ಟೆಯಲ್ಲಿ ಸಿಗುವುದು ಎಳ್ಳೆ ಇಲ್ಲದ ಎಳ್ಳೆಣ್ಣೆ, ಆದ್ದರಿಂದಾಗಿ ತುಳುನಾಡಿನ ಎಲ್ಲಾ ದೈವ ದೇವಾಲಯಗಳಲ್ಲಿ ಊರಲ್ಲಿ ಸಿಗುವ ಕೊಬ್ಬರಿ ಎಣ್ಣೆಯೇ ಉರಿಸುವಂತಾಗಲಿ. ಈಗಿನ ತುಪ್ಪವು ದೇವರಿಗೆ ಇಷ್ಟವಿಲ್ಲ. ಕಾರಣ ಕಲಬೆರಕೆ ಮಾತ್ರವಲ್ಲದೇ ಅವು ದೇಸಿ ಹಸುಗಳದ್ದಲ್ಲ. ದೇವರಿಗೆ ಧೂಪ, ದೀಪ ಪ್ರಧಾನ, ಆದರೆ ಧೂಪದ ಬದಲಾಗಿ ಕೆಮಿಕಲ್ ಊದುಬತ್ತಿನೂ ಉರಿಸಲಾಗುತ್ತದೆ. ಮಾರುಕಟ್ಟೆಯ ಗಂಧದ ಉಂಡೆ ಬಳಸುತ್ತಾರೆ. ಇದರಲ್ಲಿ ಗಂಧದ ಅಂಶವೇ ಇಲ್ಲ. ಈಗ ಸಿಗುವ ಕುಂಕುಮ ಬಳಸಿದರೆ ಪುಣ್ಯಕ್ಕೆ ಬದಲಾಗಿ ಚರ್ಮರೋಗ ಬೋನಸ್ ಎಂಬಂತಾಗಿದೆ. ಆದ್ದರಿಂದ ಗಂಧ, ಕುಂಕುಮ ಕೊಡುವ ಪ್ರಮಾಣ ಕಡಿಮೆ ಮಾಡಿ ಉಪಯೋಗಕ್ಕೆ ಯೋಗ್ಯ ಇರುವಂತದ್ದಾಗಿರಲಿ. ಈ ಎಲ್ಲಾ ವಿಷಯಗಳು ಚರ್ಚೆಗೆ ಬರಲಿ ಎಂದು ಆಶೀಸೋಣ.
ಇಷ್ಟರವರೆಗೆ ಆದದ್ದು ಆಯಿತು. ಮುಂದೆ ದೇವಸ್ಥಾನಕ್ಕೂ ನಾಡಿಗೂ ತಾಂತ್ರಿಕ ಅರ್ಚಕ ವಿಭಾಗಕ್ಕೂ ಎಲ್ಲಾ ರೀತಿಯ ಕ್ಷೇಮಾಭಿವೃದ್ಧಿಗಾಗಿ ತುಳುನಾಡಿನ ಎಲ್ಲಾ ದೇವಾಲಯಗಳಲ್ಲಿ ಆಡಳಿತ ವರ್ಗ, ವೈದಿಕ ವರ್ಗ ಮತ್ತು ಭಕ್ತರು ಒಟ್ಟು ಸೇರಿ ಗರ್ಭಗುಡಿಯ ಪೀಠದಲ್ಲಿರುವ ಎಲ್ಲಾ ಸಾಲಿಗ್ರಾಮ ಹಾಗೂ ಇತರ ಮೂರ್ತಿಗಳನ್ನು ಸಂಬಂಧಪಟ್ಟವರ ದೇವರ ಕೋಣೆಯಲ್ಲಿ ಪೂಜೆಗೊಳ್ಳಲಿ. ಅಂತೆಯೇ ಗುಡಿಯ ದೇವರನ್ನು ಮುಕ್ತಗೊಳಿಸಿ ಪೂಜಿಸುವಂತಾಗಲಿ ಎಂದು ಪ್ರಾರ್ಥಿಸೋಣ. ನೆಮ್ಮದಿಯ ತುಳುನಾಡು ಸದಾ ಬೆಳಕಾಗಲಿ.
ಕಡಾರು ವಿಶ್ವನಾಥ ರೈ