ಇತ್ತೀಚಿನ ದಿನಗಳಲ್ಲಿ ಯಕ್ಷಗಾನದತ್ತ ಯುವ ಸಮುದಾಯ ಆಕರ್ಷಿತಗೊಳ್ಳುತ್ತಿದೆ. ಆದರೆ ಇಂತಹ ಶ್ರೇಷ್ಠ ಎಲ್ಲರಿಗೂ ಒಲಿಯವುದಿಲ್ಲ. ನಿರಂತರ ಅಭ್ಯಾಸ, ಅಧ್ಯಯನ ಶೀಲತೆ, ಕಲೆಯ ಮೇಲಿನ ಒಲುಮೆ, ಪ್ರೀತಿ, ಅಭಿಮಾನ ಆ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಮಾಡುತ್ತದೆ. ಬಂಟ್ವಾಳದ ಎಂಜಿನಿಯರ್ ವಿದ್ಯಾರ್ಥಿಯೋರ್ವನಿಗೆ ಯಕ್ಷಗಾನ ಕಲೆ ಒಲಿದಿದೆ. ಬಾಲ್ಯದಿಂದಲೂ ಯಕ್ಷಗಾನ ಮೇಲಿನ ಆಸಕ್ತಿ ಇಂದು ಈ ಕಲಾವಿದನನ್ನು ಯಕ್ಷ ಲೋಕದಲ್ಲಿ ಸಾಧನೆ ಮಾಡುವಂತೆ ಮಾಡಿದೆ. ಯಕ್ಷಗಾನದ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಬಾಚಿಕೊಳ್ಳುತ್ತಾ ವಿದ್ಯಾಭ್ಯಾಸದೊಂದಿಗೆ ಯಕ್ಷಗಾನ ಕ್ಷೇತ್ರದಲ್ಲೂ ಪರಿಣತಿಯನ್ನು ಪಡೆದುಕೊಳ್ಳುತ್ತಿದ್ದಾನೆ. ಆತನೇ ಅನ್ವೇಶ್ ಆರ್ ಶೆಟ್ಟಿ.
ತಾಂತ್ರಿಕ ಪದವಿ (ಇಂಜಿನೀಯರಿಂಗ್) ಶಿಕ್ಷಣದ ಜತೆ ಕಲೋಪಾಸನೆಯಲ್ಲಿ ತೊಡಗಿಸಿಕೊಂಡಿರುವ ಕೆಲವೇ ಮಂದಿ ವಿದ್ಯಾರ್ಥಿಗಳಲ್ಲಿ ಅನ್ವೇಷ್ ಆರ್.ಶೆಟ್ಟಿ ಓರ್ವರು. ಯಕ್ಷಗಾನ ರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಅನ್ವೇಷ್ ವಿದ್ಯಾರ್ಥಿ ಯಕ್ಷ ಸಾಧಕ. ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನದಲ್ಲಿ ತನ್ನನ್ನು ಗುರುತಿಸಿಕೊಂಡು ಯಶಸ್ಸು ಪಡೆಯುತ್ತಿರುವುದು ಇವರ ಸಾಧನೆಯಾಗಿದೆ. ಮೂಲತ: ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ನಿವಾಸಿ ಪತ್ರಕರ್ತ, ಕಲಾವಿದ ರತ್ನದೇವ್ ಶೆಟ್ಟಿ ಮತ್ತು ಶಿಕ್ಷಕಿ ಸುಜಾತಾ ದಂಪತಿಯ ಪುತ್ರ ಅನ್ವೇಷ್ ಎಳೆಯ ವಯಸ್ಸಿನಿಂದಲೆ ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ್ದರು. ಎಲ್ಲೆಲ್ಲೋ ತಿರುಗಿ ಯಕ್ಷಗಾನದ ಕುಣಿತ ಅಭ್ಯಸಿಸಿ ಹತ್ತಾರು ವೇದಿಕೆಗಳಲ್ಲಿ ತನ್ನ ಪ್ರತಿಭೆ ತೋರ್ಪಡಿಸಿದ್ದರು. ತನ್ನ ಏಳನೇ ವರ್ಷದಲ್ಲಿ ಬಣ್ಣ ಹಚ್ಚಿದ ಇವರು ಬಾಲಕಲಾವಿದನಾಗಿ ಬಳಿಕ ಹಿರಿಯ ಕಲಾವಿದರೊಂದಿಗೆ ಪಾತ್ರ ನಿರ್ವಹಿಸುವ ಅವಕಾಶ ಪಡೆದಿದ್ದರು. ಪ್ರಸ್ತುತ ಇಪ್ಪತ್ತೊಂದು ವರ್ಷಕ್ಕೆ ಕಾಲಿರಿಸಿದ ಇವರು ನೂರಾರು ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.
ಕಲಾ ಕುಟುಂಬದ ಕುಡಿಯಾಗಿರುವ ಅನ್ವೇಷ್ಗೆ ಕಲೆ ರಕ್ತಗತವಾಗಿ ಬಂದಿದೆ. ಚಿತ್ರಬ್ರಹ್ಮನೆಂದೇ ಖ್ಯಾತಿಗಳಿಸಿದ ಮೇರು ಕಲಾವಿದ ಮುತ್ತಾತ ವಿಟ್ಲ ಬಾಬು ಮಾಸ್ಟರ್ ಅವರ ಸೀನು ಸೀನರಿಯ ಯಕ್ಷಗಾನ ಪ್ರಖ್ಯಾತಿ ಪಡೆದಿದೆ. ಅರುವತ್ತು ವರ್ಷಗಳ ಬಳಿಕ ಮಂಗಳೂರಿನಲ್ಲಿ ಮತ್ತೆ ಸೀನು ಸೀನರಿಯ ಯಕ್ಷಗಾನ ಆರಂಭವಾದಾಗ ಅದರಲ್ಲಿ ಪಾತ್ರ ನಿರ್ವಹಿಸಲು ಅವಕಾಶ ದೊರಕಿದ್ದು ಯೋಗಾಯೋಗಾವೇ ಸರಿ. ಅಜ್ಜ ದಿ.ಲಕ್ಷ್ಮಣ ಮಾಸ್ಟರ್ ಹೆಸರಾಂತ ಚಿತ್ರಕಲಾ ಅಧ್ಯಾಪಕರು. ಗೀಚಿದ ರೇಖೆಗಳೇ ಚಿತ್ರವಾಗಿಸುವ ಕಲಾ ನೈಪುಣ್ಯದ ಖ್ಯಾತರು. ನಾಟಕ, ಸಂಗೀತದ ನಿಪುಣರು. ಅದರಿಂದಲೇ ಅನ್ವೇಷ್ರಿಗೆ ಯಕ್ಷಗಾನ ಬಣ್ಣಗಾರಿಕೆ ಕರತಲಾಮಲಕವಾಗಿದೆ. ಅದರಲ್ಲೂ ಹಸಿ ಬಣ್ಣ ಬರೆಯುವ ಕಲೆ ಇವರಿಗೆ ಸಿದ್ಧಿಸಿದೆ. ಸ್ವತ: ಮುಖವರ್ಣಿಕೆ ನಡೆಸುವುದರ ಜತೆ ಪ್ರಸಾಧನ ಕಲಾವಿದನಾಗಿಯೂ ಪರಿಣತಿ ಪಡೆದಿದ್ದಾರೆ. ಶಿಕ್ಷಣದ ಜತೆ ಯಕ್ಷಗಾನ ಸಾಧನೆ ಬಹುದೊಡ್ಡ ಕಾರ್ಯ. ಪ್ರಾಥಮಿಕ ಹಂತದಲ್ಲಿ ಶ್ರೀಗೋಪಾಲ ಅಂಚನ್ ಅವರ ಯಕ್ಷಲೋಕದ ಮೂಲಕ ಶ್ರೀ ಯೋಗೀಶ್ ಆಚಾರ್ಯ ಅಳದಂಗಡಿ ಅವರಲ್ಲಿ ಆರಂಭಿಕ ಹೆಜ್ಜೆಗಾರಿಕೆ ಕಲಿತು,ಬಳಿಕ ಬಂಟ್ವಾಳದ ಆರಾಧನ ಫ್ರೆಂಡ್ಸ್ ಸರ್ಕಲ್ ನಲ್ಲಿ ಕಟೀಲಿನ ಶ್ರೀ ಶ್ರೀವತ್ಸ ಅವರಲ್ಲಿ ನಾಟ್ಯ ಕಲಿತರು. ನಂತರ ರಾಯಿ ಶ್ರೀ ಮಹಾಲಿಂಗೇಶ್ವರ ಬಾಲ ಯಕ್ಷಗಾನ ಮಂಡಳಿಯಲ್ಲಿ ಶ್ರೀ ದಿನೇಶ್ ಶೆಟ್ಟಿ ಕಾವಳಕಟ್ಟೆ ಹಾಗೂ ಕಟೀಲು ಮೇಳದ ಕಲಾವಿದ ಶ್ರೀ ಪ್ರೇಮ್ರಾಜ್ ಕೊಯಿಲ ಅವರಿಂದ ನಾಟ್ಯ ತರಬೇತಿ ಪಡೆದರು. ಪ್ರಸ್ತುತ ಹನುಮಗಿರಿ ಮೇಳದ ಕಲಾವಿದ ಶ್ರೀ ರಕ್ಷಿತ್ ಶೆಟ್ಟಿ ಪಡ್ರೆ ಅವರ ಶಿಷ್ಯನಾಗಿ ನಾಟ್ಯ, ಅಭಿನಯ, ಮಾತುಗಾರಿಕೆಯನ್ನು ಕಲಿತು ಅಂತರಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ ಆರು ಬಾರಿ ಪ್ರಥಮ ಪ್ರಶಸ್ತಿ ಪಡೆದಿದ್ದಾರೆ. ಪ್ರೌಢಶಾಲಾ ಹಂತದಲ್ಲೇ ಗುರುಗಳ ಮಾರ್ಗದರ್ಶನದಲ್ಲಿ ಕಟೀಳು ಮೇಳದಲ್ಲಿ ಪಾತ್ರ ನಿರ್ವಹಿಸುವ ಅವಕಾಶ ಪಡೆದ ಅನ್ವೇಷ್ ಹನುಮಗಿರಿ ಮೇಳ ಸಹಿತ ವಿವಿಧ ಸಂಘ ಸಂಸ್ಥೆಗಳ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಹವ್ಯಾಸಿ ಕಲಾವಿದನಾಗಿ ಭಾಗವಹಿಸಿ ಮಿಂಚುತ್ತಿದ್ದಾರೆ. ಬಾಲಕಲಾವಿದನಾಗಿ ಬಣ್ಣ ಹಚ್ಚಿದ ಇವರು ಪುಂಡು ವೇಷ, ಸ್ತ್ರೀ ವೇಷ, ರಾಜ ವೇಷ, ಕಿರೀಟ ವೇಷಗಳಲ್ಲದೆ ಬಣ್ಣದ ವೇಷ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಪ್ರಸ್ತುತ ನಿಟ್ಟೆ ಡಾ. ಎನ್.ಎಸ್.ಎ.ಎಂ.ಇಂಜಿನೀಯರಿಂಗ್ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಯಾಗಿರುವ ಇವರು ಈಗಾಗಲೆ ತನ್ನ ಪ್ರತಿಭೆಯಿಂದ ಐಟಿ ಕಂಪೆನಿಯಲ್ಲಿ ಆಯ್ಕೆ ಯಾಗಿ ತರಬೇತಿ ಪಡೆಯುತ್ತಿದ್ದಾರೆ. ಶಿಕ್ಷಣದ ಜತೆ ಯಕ್ಷಗಾನ, ಚಿತ್ರಕಲೆ, ತುಳು ಭಾಷೆ, ಸಂಸ್ಕೃತಿ, ಭೂತಾರಾಧನೆ ಅಧ್ಯಯನ, ಛಾಯಾಗ್ರಹಣದ ಬಗ್ಗೆ ಆಸಕ್ತಿ ಹೊಂದಿ ಕಾಲೇಜಿನಲ್ಲಿ ತುಳುಕೂಟದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಸಂಚಾಲಕತ್ವದಲ್ಲಿ ಕಾಲೇಜಿನಲ್ಲಿ ಅಂತರಕಾಲೇಜು ಯಕ್ಷಗಾನ ಸ್ಪರ್ಧೆ ಸಂಘಟಿಸಿ ಯಶಸ್ವಿಯಾಗಿದ್ದಾರೆ. ಯಕ್ಷಗಾನ ನಾಟ್ಯದ ಜತೆ ಶ್ರೀ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಮತ್ತು ಶ್ರೀ ಚಂದ್ರಶೇಖರ ಕೊಂಕಣಾಜೆ ಅವರಲ್ಲಿ ಹಿಮ್ಮೇಳದ ಚಕ್ರತಾಳ, ಮದ್ದಳೆ,ಚೆಂಡೆ ವಾದನ ಅಭ್ಯಾಸ ನಡೆಸಿದ್ದಾರೆ. ಪ್ರಾಥಮಿಕ, ಪ್ರೌಢ ಶಾಲಾ ಮಟ್ಟದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಲಯ, ತಾಲೂಕು ಮಟ್ಟದಲ್ಲಿ ಪ್ರಶಸ್ತಿ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಯಾಗಿ ಅಂತರಕಾಲೇಜು ಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿ ಆರು ಬಾರಿ ವೈಯ್ಯಕ್ತಿಕ ಉತ್ತಮ ಕಿರೀಟ ವೇಷ ಪ್ರಶಸ್ತಿ. ಯಕ್ಷಧ್ರುವ ಪಟ್ಲ ಫೌಂಡೇಶನ್ ನಡೆಸಿದ ಅಂತರ ಕಾಲೇಜು ಸ್ಪರ್ಧೆಯಲ್ಲಿ ಉತ್ತಮ ರಾಜವೇಷ ಪ್ರಥಮ ಪ್ರಶಸ್ತಿ ಪಡೆದಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ತಾಳಮದ್ದಳೆ ಅರ್ಥಧಾರಿಯಾಗಿ ಭಾಗವಹಿಸಿದ್ದಾರೆ. ಶ್ರೀಮತಿ ವಿದ್ಯಾ ಕೂಳ್ಯೂರು ಅವರ ಯಕ್ಷ ಮಂಜೂಷ ತಂಡದಲ್ಲಿ ಹಿಂದಿ ಭಾಷೆಯ ಯಕ್ಷಗಾನದಲ್ಲಿ ಪಂಚವಟಿ ಪ್ರಸಂಗದಲ್ಲಿ ಶ್ರೀರಾಮನ ಪಾತ್ರ ನಿರ್ವಹಣೆ ಇವರ ಹೆಗ್ಗಳಿಕೆ.
ಬಣ್ಣದ ವೇಷಗಳಾದ ಯಮ, ರಾವಣ, ವರಾಹ, ಶೂರ್ಪನಖಿ, ಕರಾಳ ನೇತ್ರೆ, ಧೂಮ್ರಾಕ್ಷ, ಹನುಮಂತ ಮೊದಲಾದ ಪಾತ್ರಗಳಿಗೆ ಸ್ವಂತ ಮುಖವರ್ಣಿಕೆ. ಪ್ರಸಾಧನ ಕಲಾವಿದನಾಗಿ ಶ್ರೀ ಭಗವತೀ ಯಕ್ಷಕಲಾ ಬಳಗ ಉಡುಪಿ, ಪುತ್ತೂರು ಸಂಸ್ಥೆ ಹಾಗೂ ಮೋಹಿನಿ ಕಲಾಸಂಪದ ಕಿನ್ನಿಗೋಳಿ ಇದರಲ್ಲಿ ಸಕ್ರಿಯ. ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಯಕ್ಷಶಿಕ್ಷಣ ಯೋಜನೆಯಲ್ಲಿ ದಿ. ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢ ಶಾಲೆ ಶಂಭೂರು ಹಾಗೂ ಶ್ರೀ ರಾಮ ಪ್ರೌಢ ಶಾಲೆ ಫರಂಗಿಪೇಟೆ ಇದರಲ್ಲಿ ಯಕ್ಷ ಗುರುವಾಗಿ ವಿದ್ಯಾರ್ಥಿಗಳಿಗೆ ಯಕ್ಷಗಾನಾಭ್ಯಾಸ. ಭಾಗವಹಿಸಿದ ಯಕ್ಷಗಾನ ಸಂಘ,ಸಂಸ್ಥೆಗಳು; ಯಕ್ಷಲೋಕ ಸಂಗಮ ವಾಮದಪದವು, ವಾಮದಪದವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಪುಂಜಾಲಕಟ್ಟೆ ಶ್ರೀ ಶಾರದಾಂಬಾ ಯುವಕ ಮಂಡಲ, ರಾಯಿ ಶ್ರೀ ಮಹಾಲಿಂಗೇಶ್ವರ ಬಾಲ ಯಕ್ಷಗಾನ ಮಂಡಳಿ(ಖಾಯಂ ಸದಸ್ಯ), ಯಕ್ಷಕೂಟ ಮಧ್ವ, (ಹಿಮ್ಮೇಳ, ಮುಮ್ಮೇಳ), ಯಕ್ಷಾವಾಸ್ಯಂ ಕಾರಿಂಜ, ಯಕ್ಷ ಮಿತ್ರರು ಪಂಜಿನಡ್ಕ ಕಿನ್ನಿಗೋಳಿ, ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇದರ ಆರೂ ಮೇಳಗಳಲ್ಲಿ ಸೇವೆ. ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಯಕ್ಷಗಾನ ಸಮಿತಿ, ಕಡ್ತಾಲಬೆಟ್ಟು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಯಕ್ಷಗಾನ ಸಮಿತಿ ಬಂಟ್ವಾಳ. ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಶತಮಾನೋತ್ಸವ ಸಮಿತಿ, ಸಾಯಿ ಶಕ್ತಿ ಕಲಾ ಬಳಗ ಚಿಲಿಂಬಿ ಇದರ ಸೀನು ಸೀನರಿ ಯಕ್ಷಗಾನ. ಯಕ್ಷ ಮಂಜೂಷ, ಮಂಗಳೂರು, ಶ್ರೀ ಭಗವತೀ ಯಕ್ಷಕಲಾ ಬಳಗ , ಉಡುಪಿ, ಪುತ್ತೂರು, ಮಯೂರ ಪ್ರತಿಷ್ಠಾನ ಪಡ್ರೆ.
ವಿದ್ಯಾರ್ಥಿ ದೆಸೆಯಲ್ಲಿ ಬಿಡುವಿಲ್ಲದ ತಾಂತ್ರಿಕ ಅಧ್ಯಯನದ ನಡುವೆಯೂ ಯಕ್ಷಗಾನ ಕಲೆಯಲ್ಲಿ ಅಭಿರುಚಿ ಹೊಂದಿ ಮುಂದಿನ ಪೀಳಿಗೆಯ ಯಕ್ಷಗಾನ ಕಲಾವಿದನಾಗಿ ರೂಪುಗೊಳ್ಳುವುದರ ಜತೆ ಯಕ್ಷಗಾನದ ಮೂಲಕ ತನ್ನ ಆದಾಯವನ್ನು ಕಂಡುಕೊಂಡು ಸ್ವಾಭಿಮಾನದ ಬದುಕಿಗೆ ಇತರರಿಗೆ ಮಾದರಿಯಾಗಿರುವ ಇವರಿಗೆ ಅರ್ಹವಾಗಿಯೇ ಈ ಬಾರಿಯ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಒಲಿದು ಬಂದಿದೆ.