ಸಂಶೋಧನೆ ಮತ್ತು ಕಥನ ನಮ್ಮಲ್ಲಿ ಸದಾ ಜಿಜ್ಞಾಸೆ ಹುಟ್ಟಬೇಕು. ಜಿಜ್ಞಾಸೆ ಹುಟ್ಟಿದರೆ ಮಾತ್ರ ಕಥೆ ರಚನೆ ಸಾಧ್ಯ ಎಂದು ಸಾಹಿತಿ ರಾಜಶ್ರೀ ರೈ ಪೆರ್ಲ ಹೇಳಿದರು. ಉಜಿರೆ ಶ್ರೀಧ. ಮಂ. ಕಾಲೇಜಿನಲ್ಲಿ ಕನ್ನಡ ಸಂಘವು ಆಯೋಜಿಸಿದ್ದ ಕಥೆ ಕಟ್ಟುವ ಬಗೆ ಕಥಾ ರಚನಾ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸತನ ಮತ್ತು ಅವಲೋಕನವಿದ್ದರೆ ಮಾತ್ರ ಕಥೆ ಪರಿಪೂರ್ಣವಾಗುತ್ತದೆ ಕಥೆಗಾರರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕಥೆ ಯಾವುದೇ ಬರೆದರೂ ಅದನ್ನು ಓದುವ ವರ್ಗವು ಮುಖ್ಯವಾಗಿರುತ್ತದೆ. ಕಥೆಗಾರ ತನ್ನತನವನ್ನು ಹುಟ್ಟುಹಾಕಿ, ಬೆಳೆಸಿ, ತನ್ಮೂಲಕ ಓದುಗನಿಗೆ ತಲಪುವಂತೆ ಇರಬೇಕು ಎಂದರು. ನಾವು ಬರೆದ ಕಥೆಯನ್ನು ಓದುಗರು ಗುರುತಿಸಿದ್ದಾರೆ ಎಂದರೆ ಅದು ನಮ್ಮ ಪರಿಪೂರ್ಣತೆ ಅಲ್ಲ. ನಾವು ಕಥೆಯಲ್ಲಿ ಬರೆದ ಯಾವುದೋ ಒಂದು ಹೊಸ ವಿಷಯ ನಮ್ಮನ್ನು ಗುರುತಿಸುವಂತೆ ಮಾಡಿರಬಹುದು. ಆದ್ದರಿಂದ ಕಥೆ ಬರೆಯುವಾಗ ಹೊಸ ಸಂದರ್ಭ, ಹೊಸ ಸನ್ನಿವೇಶ, ಸಂದೇಶವನ್ನು ನೀಡುತ್ತ ಬರೆಯಬೇಕು.ಆ ಶಕ್ತಿ ಕಥೆಗಾರರಲ್ಲಿ ಇರಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ.ಕುಮಾರ ಹೆಗ್ಡೆ ವಿದ್ಯಾರ್ಥಿಗಳಿಗೆ ಕಥಾ ಕಮ್ಮಟದ ಪ್ರಾಮುಖ ತಿಳಿಸಿದರು. ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅದರಲ್ಲೂ ಬಹುಮುಖಿ ಓದು ಅಗತ್ಯ. ಇದರಿಂದ ನಮ್ಮ ಜ್ಞಾನಭಂಡಾರ ಹೆಚ್ಚಾಗುತ್ತದೆ. ಸಾಹಿತ್ಯ ರಚನೆಗೆ ಅನುಕೂಲವಾಗುತ್ತದೆ. ಹಾಗಾಗಿ ಜ್ಞಾನಭಂಡಾರ ವಿಸ್ತರಿಸಿಕೊಳ್ಳಿ ಆರೋಗ್ಯಕರ ಹವ್ಯಾಸ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು. ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಬೋಜಮ್ಮ ಕೆ. ಎನ್., ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಡಾ. ರಾಜಶೇಖರ ಹಳೆಮನೆ ಸ್ವಾಗತಿಸಿ, ಪ್ರಜ್ವಲ್ ವಂದಿಸಿ, ರೇಷ್ಮಾ ನಿರೂಪಿಸಿದರು.