ಪೆರಾರ ಮುಂಡಬೆಟ್ಟು ಮೂಲದ ಅಕ್ಷಯಾ ತನ್ನ ಎಳವೆಯಿಂದಲೇ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಅತೀವ ಆಸಕ್ತಿ ಹೊಂದಿದ್ದು ಬೆಳೆಯುತ್ತಿದ್ದಂತೆ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಪ್ರಸ್ತುತ ಮಂಗಳೂರಿನ ಅಡ್ಯಾರಿನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಹಾಯಕ ಪ್ರಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಈಕೆ ಬಹುಮುಖ ಪ್ರತಿಭೆಯ ಮೇಧಾವಿಯಾಗಿದ್ದು ಸಾಹಿತ್ಯದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯ ಛಾಪು ಮೂಡಿಸಿದ್ದು ಈಗಾಗಲೇ ನಾಡಿನ ಹೆಸರಾಂತ ಸಾಹಿತ್ಯ ವಿಮರ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೈಕ್ರೋ ಬಯಾಲಜಿಯಲ್ಲಿ ವಿಜ್ಞಾನ ಪದವಿ, ಕನ್ನಡ ಸಾಹಿತ್ಯದ ಎಂ.ಎ ಸ್ನಾತಕೋತ್ತರ ಶಿಕ್ಷಣ ಪಡೆದ ಧೀಮಂತೆ. ಅಷ್ಟಕ್ಕೇ ಸಾಲದೆಂಬಂತೆ ಮಾನವ ಸಂಪನ್ಮೂಲ ವಿಷಯ ಕುರಿತು ಎಂ.ಬಿ.ಎ ವ್ಯಾಸಂಗವನ್ನೂ ಪೂರ್ತಿಗೊಳಿಸಿದ್ದು ಪ್ರಾಧ್ಯಾಪಕಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಜನಮೆಚ್ಚಿದ ಸಾಹಿತಿಯಾಗಿ ಗಮನೀಯ ಸಾಧನೆಗೈದ ಅಕ್ಷಯಾ ಅವರ ಅರ್ಹತೆಯನ್ನು ಗುರುತಿಸಿ ಇದೀಗ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಗೌರವ ಸದಸ್ಯೆಯಾಗಿಯೂ ಆಯ್ಕೆ ಮಂಡಳಿ ಆರಿಸಿದ್ದು ಆಕೆಯ ಅರ್ಹತೆಗೆ ಹೊಸ ಗರಿ ಮೂಡಿದಂತಾಗಿದೆ.
ಅವರು ತನ್ನ ಗುರುತರ ಜವಾಬ್ದಾರಿಯ ಸ್ಥಾನಮಾನಗಳನ್ನು ನಿರ್ವಹಿಸುತ್ತಲೇ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಬದುಕು ಆಚಾರ ವಿಚಾರ ಸಂಪ್ರದಾಯ ನಂಬಿಕೆ ಇತ್ಯಾದಿ ವಿಷಯಗಳ ಸಂಶೋಧನಾತ್ಮಕ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಪ್ರತಿಷ್ಠಿತ ಬಂಟ ಕುಟುಂಬದ ಸಂಸ್ಕಾರ ಹೊಂದಿದ ಅಕ್ಷಯಾ ಅನೇಕ ಕೃತಿಗಳನ್ನು ರಚಿಸಿದ್ದು ಪ್ರಕಟಿತ ಕೃತಿಗಳು ವ್ಯಾಪಕ ಜನ ಮನ್ನಣೆ ಗಳಿಸಿವೆ. ನನ್ನ ಹಾದಿ – ಕವನ ಸಂಕಲನ,ಬದುಕು ಭಾವದ ತೆನೆ – ಕವನ ಸಂಕಲನ, ಕನಕ – ಚಿಂತನ ಸಂಪಾದಿತ ಕೃತಿ ಮಂಗಳೂರು ವಿಶ್ವವಿದ್ಯಾಲಯ, ದೆಂಗ – ತುಳು ಕಾದಂಬರಿ, ಪೆರ್ಗ – ತುಳು ನಾಟಕ, ಹಿಡಿ ಅಕ್ಕಿಯ ಧ್ಯಾನ – ಕವನ ಸಂಕಲನ ಇವು ಅಕ್ಷಯ ಅವರ ಪ್ರಕಟಿತ ಕೃತಿಗಳಾದರೆ ಅನೇಕ ಕವನಗಳು, ಲೇಖನಗಳು ನಾಡಿನ ವಿವಿಧ ತುಳು ಕನ್ನಡ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ.
ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಅನೇಕ ಸಂಘಟನೆಗಳು ಪ್ರಶಸ್ತಿ ಸ್ಮರಣಿಕೆಗಳೊಂದಿಗೆ ಆತ್ಮೀಯವಾಗಿ ಸಂಮಾನಿಸಿವೆ. ಅನೇಕ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. ಬದುಕು ಭಾವದ ತೆನೆ ಹಸ್ತಪ್ರತಿಗೆ ಶ್ರೀಮತಿ ಸುಶೀಲಾ ಶೆಟ್ಟಿ ಸ್ಮಾರಕ ದತ್ತಿ ನಿಧಿ ಪ್ರಶಸ್ತಿ ದೊರಕಿದೆ. ಇವರ ಬಿಡಿ ಲೇಖನ ಕವನಗಳಿಗೆ ಬೆಂಗಳೂರು ಲೇಖಕಿಯರ ಸಂಘದ ಪುರಸ್ಕಾರ ಲಭ್ಯವಾಗಿರುತ್ತದೆ. ತ್ರಿವೇಣಿ ಸ್ಮಾರಕ ದತ್ತಿನಿಧಿ ಪ್ರಶಸ್ತಿ, ಸಂದೇಶ ಪ್ರತಿಷ್ಠಾನದ ಬಾಂಧವ್ಯ ಪ್ರಶಸ್ತಿಗಳೂ ಇವರ ಮುಡಿಗೇರಿವೆ.
ದೆಂಗ – ತುಳು ಕಾದಂಬರಿಗೆ ಎಸ್ ಯು ಪಣಿಯಾಡಿ ಪ್ರಶಸ್ತಿ ಲಭಿಸಿದ್ದು, ಪೆರ್ಗ ತುಳುನಾಟಕ ಹಸ್ತಪ್ರತಿಗೆ ಶ್ರೀ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಮಾರಕ ಪ್ರಶಸ್ತಿ ದೊರೆತಿರುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ ಅನುವಾದ ಕೃತಿಗಳ ಪ್ರಶಸ್ತಿ ಆಯ್ಕೆಗೆ ವಿಮರ್ಶಕಿಯಾಗಿ ಆಯ್ಕೆಗೊಂಡ ಹೆಗ್ಗಳಿಕೆ ಅಕ್ಷಯಾ ಅವರಿಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಕರ್ನಾಟಕ ಕೃಷಿ ಸಂಸ್ಕೃತಿ ಕುರಿತಂತೆ ಎರಡು ಗಂಟೆಗಳ ಕಾಲ ನಿರರ್ಗಳ ಪ್ರಭಾವಿ ಉಪನ್ಯಾಸ ನೀಡಿದ ದಾಖಲೆ ಅಕ್ಷಯಾ ಅವರ ಮಡಿಲು ಸೇರಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಪ್ರಾದೇಶಿಕ ಭಾಷೆಗಳ ಕವಿಗೋಷ್ಠಿಯಲ್ಲಿ ಭಾಗವಹಿಸಿ ತನ್ನ ಕವಿತೆ ಪ್ರಸ್ತುತಪಡಿಸಿ ಮೆಚ್ಚುಗೆ ಪಡೆದಿದ್ದಾರೆ. ಜೆಂಡರ್ ಇಕ್ವಿಟಿ ಲಿಂಗ ಸಮಾನತೆ ಕುರಿತ ಸಂದರ್ಶನ ನಾರ್ವೆ ಪತ್ರಿಕೆಗಳಲ್ಲಿ ಪ್ರಸಾರಗೊಂಡಿದ್ದು ವ್ಯಾಪಕ ಪ್ರಸಿದ್ಧಿ ಪ್ರಚಾರ ಪಡೆದಿದೆ. ಕನ್ನಡ ಸಾಹಿತ್ಯ ಪರಿಷತ್ ಕಲ್ಕೂರ ಸಾಹಿತ್ಯ ಪ್ರತಿಷ್ಠಾನ ಆಯೋಜಿಸಿದ್ದ ಹಾಗೂ ರಾಣಿ ಅಬ್ಬಕ್ಕ ಉತ್ಸವ ಸಂದರ್ಭದಲ್ಲಿ ಆಯೋಜಿಸಲ್ಪಟ್ಟಿದ್ದ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ. ಅದೆಷ್ಟೋ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ಸಾಹಿತ್ಯಿಕ ವೈಚಾರಿಕ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿರುವ ಕೀರ್ತಿ ಅಕ್ಷಯಾ ಆರ್ ಶೆಟ್ಟಿ ಅವರಿಗಿದೆ. ಹೀಗೆ ಅಸಾಧಾರಣ ಪ್ರತಿಭೆಯ ಮೇಧಾಶಕ್ತಿಯ ಅನನ್ಯ ಸಾಧಕಿಗೆ ಸಹಜವಾಗಿಯೇ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯತ್ವ ಗೌರವ ಒಲಿದು ಬಂದಿದೆ. ಬಂಟ ಕುಲ ಸಂಜಾತೆ ಹೆಮ್ಮೆಯ ಮಹಿಳಾ ಸಾಧಕಿಗೆ ಉತ್ತರೋತ್ತರ ಶ್ರೇಯಸ್ಸಾಗಲಿ ಎನ್ನುವ ಶುಭ ಹಾರೈಕೆಗಳು ಬಂಟ್ಸ್ ನೌ ಮಾಧ್ಯಮ ಸಂಸ್ಥೆಯಿಂದ.
ಶುಭವಾಗಲಿ ಸರ್ವರಿಗೆ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು