ಮೂಡುಬಿದಿರೆ: ಕಲಿಕೆಯುವ ಮಾಹಿತಿ ಯಾವುದೇ ಇರಲಿ, ಗುಣಮಟ್ಟದ ಕಲಿಕೆಗೆ ಪರಿಶ್ರಮ ಪ್ರಾಮುಖ್ಯವಾಗುತ್ತದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್ಒ ಜಾಕ್ಸಿನ್ ಫೆನಾರ್ಂಡಿಸ್ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಎಂಬಿಎ ಸೆಮಿನಾರ್ ಸಭಾಂಗಣದಲ್ಲಿ ತ್ರಿಶಾಕ ಫೌಂಡೇಶನ್, ಸೈಸೆಕ್ ಸಹಯೋಗದಲ್ಲಿ ಆಯೋಜಿಸಿದ್ದ ‘ಸೈಸೆಕ್- ಸೈಬರ್ ಸೆಕ್ಯುರಿಟಿ ಫಿನಿಶಿಂಗ್ ಸ್ಕೂಲ್’ ಸಮಾರೋಪ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.
ಬದುಕಿನಲ್ಲಿ ಚಿಂತನೆಯ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಿ, ಕಲಿಕೆಯುವ ವಿಷಯವು ಸಣ್ಣ ಅಥವಾ ದೊಡ್ಡದಾಗಿರಲಿ. ನಿಮ್ಮ ಪರಿಶ್ರಮ ಇರಲೇ ಬೇಕು ಎಂದ ಅವರು, ಪ್ರತಿಯೊಬ್ಬರಿಗೂ ಜ್ಞಾನವಿದೆ, ಆದರೆ, ಕಲಿಯುವ ಹಂಬಲ ಇರಬೇಕು. ಈ ದಿನಗಳ ಕಲಿಕೆಯೇ ಮುಂದಿನ ದಿನಗಳ ಮಾರ್ಗದರ್ಶಿ ಎಂದು ಅವರು ವಿಶ್ಲೇಷಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ. ಸಮಯ ಹಣಕ್ಕಿಂತ ಮುಖ್ಯ. ಸಕಾರಾತ್ಮಕ ಪರಿಸರ ಇದ್ದರೆ, ಪ್ರತಿಯೊಬ್ಬ ವ್ಯಕ್ತಿಯು ಉತ್ತಮವಾಗಿ ಬೆಳೆಯಲು ಸಾಧ್ಯ ಎಂದರು.
ಯಾವುದೇ ವ್ಯಕ್ತಿಯನ್ನು ನಿರ್ದಿಷ್ಟತೆಗೆ ಬ್ರ್ಯಾಂಡ್ ಮಾಡಬಾರದು. ವ್ಯಕ್ತಿತ್ವದ ಕುರಿತು ನಿರ್ಣಯಿಸಬಾರದು ಎಂದ ಅವರು, ಒಂದೇ ಉದ್ಯೋಗವನ್ನು ನಂಬಿ ಸಾಗುವುದಕ್ಕಿಂತ ಉದ್ಯೋಗದ ಆಯ್ಕೆಗೆ ಒತ್ತು ನೀಡಬೇಕು ಎಂದರು. ಭಾಷೆ ಯಾವುದಾದರೂ, ಜ್ಞಾನ ನಿಮ್ಮ ಸಬಲೀಕರಣಕ್ಕೆ ಕಾರಣವಾಗುತ್ತದೆ. ಪ್ರತಿ ಕಲಿಕೆಯ ಹಂತದಲ್ಲಿ ಛಲ, ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದ ಅಂತ್ಯದಲ್ಲೇ ಜವಾಬ್ದಾರಿಯ ಸಮಯ ಪ್ರಾರಂಭವಾಗಲಿ ಎಂದರು.
ತ್ರಿಶಾಕ ಫೌಂಡೇಶನ್ ಯೋಜನಾ ನಿರ್ದೇಶಕ ಮೋಹನ್ ರಾಮ್, ಸೈಸೆಕ್ ಎಎಂ ಕೌಶಿಕ್ ಜಿ.ಎನ್, ಸೈಬರ್ ಸೆಕ್ಯುರಿಟಿ ಕ್ಲಬ್ನ ಸಂಯೋಜಕ ವಿನೀತ್ ಶೆಟ್ಟಿ, ಸೈಬರ್ ಸೆಕ್ಯುರಿಟಿ ಕ್ಲಬ್ನ ಸಂಯೋಜಕಿ ಹಾಗೂ ಸಹಾಯಕ ಪ್ರಾಧ್ಯಾಪಕಿ ದೀಪಿಕಾ ಕಾಮತ್ ಇದ್ದರು. ಸಹಾಯಕ ಪ್ರಾಧ್ಯಾಪಕಿ ದೀಕ್ಷಾ ಎಂ ಕಾರ್ಯಕ್ರಮ ನಿರೂಪಿಸಿದರು. ಸಿಎಸ್ಸಿ ವಿಭಾಗದ ಮುಖ್ಯಸ್ಥ ಡಾ ಮಂಜುನಾಥ್ ಕೊಠಾರಿ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕ ಹರ್ಷವರ್ಧನ್ ವಂದಿಸಿದರು.