ಸೃಷ್ಟಿಕರ್ತ ಎಲ್ಲಾ ಜೀವಿಗಳಿಗೆ ಐದು ಅರಿವುಗಳನ್ನು ನೀಡಿದರೆ ಮನುಷ್ಯನಿಗೆ ಮಾತ್ರ ಆರು ಅರಿವುಗಳನ್ನು ನೀಡಿದ್ದಾರೆ. ಅದರಿಂದಾಗಿ ಮಾನವನು ವಿಚಾರದ ಬಗೆಗೆ ವಿವೇಚನೆ ವಿವೇಕಗಳನ್ನು ಉಪಯೋಗಿಸಿ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾನೆ. ಎಲ್ಲಾ ಮತ ಧರ್ಮಗಳು ಲೋಕ ಕಲ್ಯಾಣಕ್ಕಾಗಿ ಕೆಲವೊಂದು ಮಾರ್ಗಸೂಚಿಗಳನ್ನು ತಿಳಿಸಿಕೊಟ್ಟರೂ ಸ್ವಾರ್ಥವನ್ನು ಹಾಸಿಗೆ ಹೊದ್ದುಕೊಂಡು ಮಲಗಿರುವ ಮಾನವ ಸಂತತಿ ಶೇಕಡವಾರು ಲೆಕ್ಕ ಹಾಕಿದರೆ ಮುಕ್ಕಾಲು ಭಾಗದಷ್ಟು ಜನರು ಸ್ವಾರ್ಥಕ್ಕಾಗಿಯೇ ಬದುಕುತ್ತಿದ್ದಾರೆ. ಉಳಿದಿರುವ ಕಾಲು ಭಾಗದಷ್ಟು ಜನರ ಸಜ್ಜನಿಕೆ, ನಿಸ್ವಾರ್ಥತೆ, ಸಹೃದಯತೆ, ಮಾನವಕಳಕಳಿ, ಜೀವಕಾರುಣ್ಯವೇ ಮೊದಲಾದ ಉನ್ನತ ಜೀವನಾರ್ಥಕ ನಡೆಯಿಂದಾಗಿ ಅಶಾಂತಿಯೂ ಉದ್ವೇಗ ಪೂರಿತ ಜೀವನ ಯಾತ್ರೆಯಲ್ಲಿ ಸ್ವಲ್ಪವಾದರೂ ಸಮಾಧಾನ, ನೆಮ್ಮದಿ ದೊರಕುತ್ತದೆ.
ಸದಾ ತನಗೂ ಸಮಾಜಕ್ಕೂ ಇರುವ ಅವಿನಾಭಾವ ಸಂಬಂಧವನ್ನು ಅರಿತು ಸಮಾಜಕ್ಕೆ ತನ್ನಿಂದಾದಷ್ಟು ಕೊಡುಗೆಯನ್ನು ನೀಡಿ ಸಮಾಜದ ಋಣವನ್ನು ತೀರಿಸಬೇಕೆಂಬ ತುಡಿತವನ್ನು ಹಲವರಲ್ಲಿ ಕಾಣಬಹುದಾಗಿದೆ. ಇಂತಹ ಸಮಾಜಮುಖೀ ದ್ಯೇಯಾದರ್ಶಗಳೊಡನೆ ಮಿಂಚುತ್ತಿದ್ದಾರೆ ಉಮೇಶ್ ಶೆಟ್ಟಿ ಮಂದಾರ್ತಿಯವರು. ನೊಂದವರ ಬಾಳಿಗೆ ಆಸರೆಯಾಗಿ, ಸಾಂತ್ವನಕಾರರಾಗಿ, ಸಹಾಯಕರಾಗಿ, ಅಸಹಾಯಕರಿಗೆ ಊರುಗೋಲಾಗಿ, ಸಾಧಕರಿಗೆ, ಪ್ರೇರಕ ಶಕ್ತಿಯಾಗಿ ತಾನೇ ಪ್ರೇರಣೆಯಾಗಿ ದುಡಿಯುತ್ತಿರುವ, ತನ್ನ ಸಾಧನೆಯಿಂದಲೇ ನಾಯಕರಾಗಿ ರೂಪುಗೊಳ್ಳುತ್ತಿರುವ ಉಮೇಶ್ ಶೆಟ್ಟಿಯವರು ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರದವರಾಗಿದ್ದು ಸದ್ಯ ಬೆಂಗಳೂರಿನ ರಾಜಾಜಿನಗರದಲ್ಲಿ ದುರ್ಗಾಪರಮೇಶ್ವರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ವ್ಯವಹಾರದಿಂದ ವೃತ್ತಿ ಬದುಕನ್ನು ನಿಭಾಯಿಸುತ್ತಿದ್ದಾರೆ. ತಮ್ಮ ವ್ಯವಹಾರದಲ್ಲಿ ದೊರಕುತ್ತಿರುವ ಆದಾಯದಲ್ಲಿ ಸ್ವಲ್ಪ ಭಾಗವನ್ನು ಬಡವರಿಗೆ, ದೀನರಿಗೆ, ಶೋಷಿತರಿಗೆ, ಪೀಡಿತರಿಗೆ, ನೀಡಿ ಅವರ ಬದುಕನ್ನು ಹಸನಾಗಿಸಬೇಕೆಂಬ ಆದರ್ಶದೊಂದಿಗೆ ಅವರು ಸ್ಥಾಪಿಸಿರುವ “ಅಭಯ ಸೇವಾ ಫೌಂಡೇಶನ್” ಕ್ರಿಯಾಶೀಲವಾಗಿ
ಕಾರ್ಯಾಚರಿಸುತ್ತಿದೆ. ಕಲೆ, ಸಂಸ್ಕೃತಿಯ ಉಳಿವಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿ ತನ್ನಿಂದಾದ ದೇಣಿಗೆಯನ್ನು ನೀಡುತ್ತಿದೆ. ಯುವ ಜನರಿಗೆ ಕ್ರೀಡಾಕೂಟಗಳನ್ನು ಏರ್ಪಡಿಸಿ ಪ್ರೇರಕ ಶಕ್ತಿಯಾಗಿ ಬೆಂಗಾವಲಾಗಿದ್ದಾರೆ. “ಅಭಯ ಕ್ರಿಕೆಟ್ ಟೀಮ್” ಉತ್ತಮ ನಿರ್ವಹಣೆಯಿಂದ ಮುನ್ನುಗ್ಗುತ್ತಿದೆ. ಪ್ರತಿಷ್ಠಿತ ಬೆಂಗಳೂರು ಬಂಟರ ಸಂಘದಲ್ಲಿ ಸಮಾಜ ಸೇವಾ ಸಮಿತಿ ಮತ್ತು ಬಂಟ್ಸ್ ಸೇವಾದಳ ಎನ್ನುವ ಘಟಕಗಳನ್ನು ಸ್ಥಾಪಿಸಿ ಬಡ ಮಕ್ಕಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ಹಾಗೂ ಮೂಲಸೌಕರ್ಯ ವಂಚಿತರಿಗೆ ಸವಲತ್ತು ಒದಗಿಸುವಲ್ಲಿ ತನ್ನೊಳಗಿರುವ ಮಾನವೀಯತೆಯನ್ನು ಅನಾವರಣ ಗೊಳಿಸಿದ್ದಾರೆ. ಸೇವಾ ಚೇತನ ಕಾರ್ಯಕ್ರಮದ ಮೂಲಕ ಜನರನ್ನು ಒಗ್ಗೂಡಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿ ತೋರಿಸಿದ್ದಾರೆ. ಕರಾವಳಿಯ ಹೆಮ್ಮೆಯ ಕ್ರೀಡೆಯನ್ನು ಬೆಂಗಳೂರಿನಲ್ಲಿ ಆಯೋಜಿಸುವಲ್ಲಿ ಪ್ರಮುಖ ಪಾತ್ರವಹಿಸಿ ಸೈ ಎಣಿಸಿಕೊಂಡಿದ್ದಾರೆ.
ಜಗತ್ತನ್ನು ತಲ್ಲಣಗೊಳಿಸಿದ ಕೋವಿಡ್ ಸಂದರ್ಭದಲ್ಲಿ ಬಡವರಿಗೆ, ನಿರಾಶ್ರಿತರಿಗೆ, ನಿರ್ಗತಿಕರಿಗೆ, ಉಚಿತ ಕಿಟ್, ಔಷಧ, ನೀಡಿದ್ದಲ್ಲದೆ ಬಾಧಿತರನ್ನು ಆಸ್ಪತ್ರೆಗೆ ಸಾಗಿಸುವ ಅಂಬುಲೆನ್ಸ್ ಹಾಗೂ ಬೆಡ್ ನ ವ್ಯವಸ್ಥೆ, ಅಗತ್ಯವಿರುವವರಿಗೆ ಆಕ್ಸಿಜನ್ ಕಾನ್ಸ್ವಟ್ರೇಟ್ ವ್ಯವಸ್ಥೆಯನ್ನು ಕಲ್ಪಿಸಿ ಸಾಕಷ್ಟು ಜನರ ಪ್ರಾಣ ರಕ್ಷಣೆ ಮಾಡಿ ಸಾಕಿ ತಮ್ಮ ಅಭಯ ಫೌಂಡೇಶನ್ ಮೂಲಕ ಗರ್ಭಿಣಿ ಮಹಿಳೆಯರನ್ನು ಮತ್ತು ವೃದ್ಧರನ್ನು ಊರಿಗೆ ತಲುಪಿಸುವ ಮೂಲಕ ತಮ್ಮ ಅಂತಃಕರಣ ತೆಗೆದಿರಿಸಿದ್ದಾರೆ.
ಇವರ ಸೇವಾ ವೈಕರಿಯನ್ನು ಗುರುತಿಸಿದ ಪ್ರತಿಷ್ಠಿತ ಸಂಸ್ಥೆಗಳು ಇವರಿಗೆ ಪ್ರಶಸ್ತಿಗಳ ಸುರಿಮಳೆಗೈದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮಾಡಿದ ನಿಸ್ವಾರ್ಥ ಸೇವೆಗೆ ‘ಲೈಫ್ ಸೇವಾ ಪ್ರಶಸ್ತಿ’, 2010 ರಲ್ಲಿ ಇಂದಿರಾ ಪ್ರಿಯಾದರ್ಶಿನಿ ನ್ಯಾಷನಲ್ ಅವಾರ್ಡ್, ಕರ್ನಾಟಕ ಕಲಾಸಂಪದ, ಕರಾವಳಿ ರತ್ನ, ಕಾರುನಾಡಿನ ಕಲಿ, ಸಾಮಾಜಿಕ ಸೇವಾ ಸ್ಪಂದನ ಅಲ್ಲದೇ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಮಾದ್ಯಮದವರು ಕೊಡ ಮಾಡುವ ಸುವರ್ಣ ಸಾಧಕರು ಪ್ರಶಸ್ತಿಯೂ ಇವರನ್ನು ಅಲಂಕರಿಸಿದೆ. ಅಲ್ಲದೇ ಲಂಡನ್ ವರ್ಲ್ಡ್ ಬುಕ್ನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಈ ಮೂಲಕ ಉಮೇಶ್ ಶೆಟ್ಟಿ ಮಂದಾರ್ತಿಯವರಿಗೆ ಹೃದಯ ತುಂಬಿದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.