ಮೂಡುಬಿದಿರೆ: ‘ಪೌಷ್ಟಿಕ ಆಹಾರ ಸೇವನೆಯ ಮೂಲಕ ಅನ್ನನಾಳದ ರೋಗಗಳು (ಡಿಸ್ಪೇಜಿಯ) ನಿವಾರಿಸಲು ಸಾಧ್ಯ ಎಂದು ಆಹಾರ ಚಿಕಿತ್ಸಕಿ, ಬೆಂಗಳೂರಿನ ಟ್ರಸ್ಟ್ವೆಲ್ ಆಸ್ಪತ್ರೆಯ ಶ್ರೀಮತಿ ವೆಂಕಟರಮಣ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗ ಹಾಗೂ ಐಎಪಿಇಎನ್ ಇಂಡಿಯಾ ಮಂಗಳೂರು ಅಧ್ಯಾಯದ ಜಂಟಿ ಆಶ್ರಯದಲ್ಲಿ ನಡೆದ ಶುಕ್ರವಾರ ಕಾಲೇಜಿನಲ್ಲಿ ನಡೆದ ‘ಅನ್ನನಾಳದ ರೋಗಗಳಿಗೆ ಪೌಷ್ಟಿಕಾಂಶದ ನಿರ್ವಹಣಾ ಕಾರ್ಯಾಗಾರ’ ದಲ್ಲಿ ಅವರು ಮಾತನಾಡಿದರು.
ಅನ್ನನಾಳದ ರೋಗ ಲಕ್ಷಣ ಕಂಡುಬಂದಾಗ ಎಚ್ಚೆತ್ತುಕೊಳ್ಳುವುದು ಬಹುಮುಖ್ಯ. ಒಂದು ರೋಗವು ನಾನಾ ರೋಗಕ್ಕೆ ಕಾರಣವಾಗಬಹುದು, ಪೌಷ್ಟಿಕ ಆಹಾರ ಸೇವನೆಯೂ ಒಂದು ನಿವಾರಕ ಅಂಶ ಎಂದು ಅವರು ಮಾಹಿತಿ ನೀಡಿದರು. ಪೌಷ್ಟಿಕಾಂಶ ಆಹಾರ ಎಲ್ಲವನ್ನೂ ಗುಣಪಡಿಸುವ ಶಕ್ತಿ ಹೊಂದಿದೆ. ಕೋವಿಡ್ ನಂತರ ಜನರು ತಮ್ಮ ರೋಗ ನಿವಾರಿಸಲು ಮಾತ್ರೆಗಳನ್ನು ಸೇವಿಸುವುದಕ್ಕಿಂತ ಪೌಷ್ಟಿಕ ಆಹಾರ ಸೇವಿಸುವಲ್ಲಿ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅದನ್ನು ಮುಂದುವರೆಸುವುದು ಅವಶ್ಯಕವಾಗಿದೆ ಎಂದರು.
ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಆಹಾರವು ಎಲ್ಲಾ ಜೀವರಾಶಿಗೂ ಮುಖ್ಯವಾದುದು. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿದೆ. ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬ ತಿಳಿವಳಿಕೆ ಇರಬೇಕು. ಆಗ ಮಾತ್ರ ಎಲ್ಲಾ ರೋಗಗಳಿಂದ ಮುಕ್ತರಾಗಲು ಸಾಧ್ಯ ಎಂದರು. ಜನರು ನಾಲಿಗೆಗೆ ರುಚಿ ಬಯಸುತ್ತಾರೆ ಆದರೆ ಪೌಷ್ಟಿಕ ಆಹಾರ ತಿನ್ನಲು ಇಚ್ಛಿಸುವುದಿಲ್ಲ. ಆ ಹವ್ಯಾಸ ಬದಲಾದಾಗ ಮಾತ್ರ ರೋಗವನ್ನು ತಡೆಯಲು ಸಾಧ್ಯ ಎಂದರು.
ಅನ್ನನಾಳ ರೋಗಗಳಿಗೆ ನೀಡುವ ಆಹಾರ ಪದ್ಧತಿ ಮತ್ತು ಆಹಾರದ ವಿನ್ಯಾಸದ ಕುರಿತು ನೇರ ಪ್ರಾತ್ಯಕ್ಷಿಕೆಯನ್ನು ಅವರು ನೀಡಿದರು. ಸ್ನಾತಕೋತ್ತರ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಪ್ರಭಾತ್ ಹಾಗೂ ಪದವಿ ಆಹಾರ ವಿಜ್ಞಾನ ಹಾಗೂ ಪೌಷ್ಟಿಕಾಂಶ ವಿಭಾಗದ ಮುಖ್ಯಸ್ಥೆ ಆಶಿತಾ ಇದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಜಾನ್ವಿ ಮತ್ತು ಮೋಕ್ಷ ನಿರೂಪಿಸಿ, ಸ್ವಾಗತಿಸಿದರು.