ವಿದ್ಯಾಗಿರಿ: ಯಾವುದೇ ಕೆಲಸದಲ್ಲೂ ಯಶಸ್ವಿಯಾಗಲು ಸ್ಪಷ್ಟತೆ ಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಮುಂಡ್ರೆದುಗುತ್ತು ಕೆ . ಅಮರನಾಥ ಶೆಟ್ಟಿ (ಕೃಷಿಸಿರಿ) ಸಭಾಂಗಣದಲ್ಲಿ ಬುಧವಾರ ನಡೆದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ‘ಪೋಷಕರ – ಶಿಕ್ಷಕರ ಸಭೆ ‘ಯಲ್ಲಿ ಅವರು ಮಾತನಾಡಿದರು.
‘ಎಲ್ಲಾ ವಿದ್ಯಾರ್ಥಿಗಳು ಆರಂಭದಲ್ಲಿ ಕನಸನ್ನು ಕಾಣುವುದು ಸಹಜ. ಆದರೆ ಕಂಡ ಕನಸನ್ನು ನನಸಾಗಿಸಲು ಸಾಗುವ ದಾರಿಯಲ್ಲಿ ಸ್ಪಷ್ಟತೆ ಇರುವುದಿಲ್ಲ. ವಿದ್ಯಾರ್ಥಿಗಳು ಪ್ರೌಢಾವಸ್ಥೆಗೆ ಬರುವಾಗ ದೈಹಿಕವಾಗಿ, ಮಾನಸಿಕವಾಗಿ, ವ್ಯಕ್ತಿತ್ವ ರೂಪಿಸುವಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದರು . ಅದೇ ರೀತಿ ಪ್ರೌಢ ಶಿಕ್ಷಣದಿಂದ ಪದವಿ
ಪೂರ್ವ ಶಿಕ್ಷಣಕ್ಕೆ ಕಾಲಿಡುವಾಗ ಕಲಿಕಾ ಬೋಧನಾ ಕ್ರಿಯೆ, ವಿದ್ಯಾಭ್ಯಾಸ , ಆಳವಾಗಿ ಅಧ್ಯಯನ ನಡೆಸುವ ಕ್ರಮದಲ್ಲಿ ಅನೇಕ ಬದಲಾವಣೆಗಳಾಗುತ್ತವೆ ಎಂದರು.
ಶಿಕ್ಷಣ ಒಂದು ಪಂಚಾಂಗವಿದ್ದಂತೆ. ನೀವು ಯಾವ ಕ್ಷೇತ್ರಕ್ಕೆ ಹೋಗಬೇಕೆಂದು ನಿರ್ಧರಿಸಿದ್ದರೋ ಆ ಕ್ಷೇತ್ರದ ಪ್ರವೇಶಾತಿ ಪರೀಕ್ಷೆಯನ್ನು ಎದುರಿಸಲು ಬದ್ಧರಾಗಿರಬೇಕು ಎಂದು ಅವರು ಹೇಳಿದರು. ಪದವಿ ಪೂರ್ವ ಶಿಕ್ಷಣದಲ್ಲಿ
ಮುಖ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಛಲದ ಮನೋಭಾವ ನಮ್ಮಲ್ಲಿರುವುದು ಅತ್ಯವಶ್ಯಕ. ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯುತ್ತಾರೆ. ಪಿಯುಸಿ ಮುಗಿದ ನಂತರ ತಮ್ಮ ಇಚ್ಛೆಯ ಅನುಸಾರ ವೈದ್ಯಕೀಯ, ತಾಂತ್ರಿಕ, ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯನ್ನು ಮಾಡುತ್ತಾರೆ. ಬದ್ಧತೆಯಿಂದ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನುಡಿದಂತೆ ನಡೆದಿದೆ. ದತ್ತು ಯೋಜನೆ, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಶುಲ್ಕ ರಿಯಾಯಿತಿ ಸೇರಿದಂತೆ ಇನ್ನಿತರ ಯೋಜನೆಯನ್ನು ಕೊಟ್ಟಿರುವ ಮಾತಿನಂತೆ ವಿದ್ಯಾರ್ಥಿಗಳಿಗೆ ಸಮಗ್ರ ವ್ಯವಸ್ತೆಯನ್ನು ಒದಗಿಸಲಾಗಿದೆ ಎಂದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಸದಾಕತ್ , ಉಪ ಪ್ರಾಂಶುಪಾಲೆ ಝಾನ್ಸಿ ಪಿ ಎನ್ ,
ಸಂಯೋಜಕರಾದ ಜ್ಯೋತಿ ಎಂ ಎನ್ , ಡಾ .ಶ್ವೇತಾ, ಡಾ ವಸಂತ ರಾಜ್, ವಿದ್ಯಾ ಕೆ ಇದ್ದರು. ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು .