ಅವಿಭಕ್ತ ದಕ್ಷಿಣ ಕನ್ನಡ ಜಿಲ್ಲೆಯ ಬಂಟರು ಉದ್ಯಮಶೀಲರು, ಸಾಹಸಿಗಳು ಮತ್ತು ಪರಿಶ್ರಮಿಗಳು. ತಾವು ತಮ್ಮ ಲಕ್ಷ್ಯವನ್ನು ಹಿಂಬಾಲಿಸುವಲ್ಲಿ ಎದುರಾಗುವ ಕಷ್ಟನಷ್ಟಗಳನ್ನು ಸವಾಲು ಎಂಬಂತೆ ಸ್ವೀಕರಿಸುತ್ತಾ ಕೊನೆಗೊಂದು ದಿನ ಯಶಸ್ಸಿನ ತುತ್ತ ತುದಿಯಲ್ಲಿದ್ದು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಶ್ರೀ ಕೆ. ಎಂ. ಶೆಟ್ಟಿ ಹೆಸರು ದೇಶಾದ್ಯಂತ ಪರಿಚಿತ. 1975 ರ ಸುಮಾರಿಗೆ ವಿ. ಕೆ. ಇಂಜಿನಿಯರ್ಸ್ ಎಂಬ ಹೆಸರಿನೊಂದಿಗೆ ಉದ್ಯಮ ರಂಗ ಪ್ರವೇಶಿಸಿದ ಕೆ. ಎಂ ಶೆಟ್ಟರು ಟೂಲ್ ರೂಂ ವರ್ಕ್ ಶಾಪ್ ಯಂತ್ರೋಪಕರಣಗಳ ಮೂಲಕ ತಮ್ಮ ಕಾರ್ಯಾಗಾರವನ್ನು ಪ್ರಾರಂಭಿಸಿದರು. ಉದ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಗುಣಮಟ್ಟದ ಇಂಜೆಕ್ಷನ್ ಮೌಲ್ಡಿಂಗ್ ಉಪಕರಣಗಳನ್ನು ಉತ್ಪಾದಿಸುವ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡರು. ತನ್ನ ಉದ್ಯಮ ಅಪೂರ್ವ ಯಶಸ್ಸು ಕಂಡ ಬಳಿಕ ದೇಶದ ಅನ್ಯಭಾಗಗಳಲ್ಲಿ ಗ್ರಾಹಕರ ಬೇಡಿಕೆಗಳನ್ನು ಅನುಸರಿಸಿ ಶಾಖೆಗಳನ್ನು ತೆರೆದು ಉದ್ಯಮ ವ್ಯಾಪ್ತಿಯನ್ನು ವಿಸ್ತರಿಸಿ ಕೊಂಡರು. ಕೆ. ಎಂ ಶೆಟ್ಟರು ಇದರ ಕಾರ್ಯಾಧ್ಯಕ್ಷರಾಗಿ, ಆಡಳಿತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸತೊಡಗಿದರು.
ಪ್ರಸ್ತುತ ಈ ಕಂಪನಿಯಲ್ಲಿ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸುತ್ತಾರೆ. ಮುಖ್ಯವಾಗಿ ಇಂದಿನ ದಿನಗಳಲ್ಲಿ ದೈನಂದಿನ ಕೆಲಸಕ್ಕೆ ಅವಶ್ಯಕವಾದ ಗೃಹೋಪಯೋಗಿ ಇಲೆಕ್ಟ್ರಿಕಲ್ ಸಾಮಾಗ್ರಿಗಳಾದ ಮಿಕ್ಸರ್ಸ್, ಗ್ರೈಂಡರ್ಸ್, ಆಹಾರ ಸಂಸ್ಕರಣ ಉಪಕರಣ, ಜ್ಯೂಸರ್, ಏರ್ಕೂಲರ್, ಇಂಡಕ್ಷನ್ ಕುಕ್ಕರ್, ಪ್ಲಾಸ್ಟಿಕ್ ಮೌಲ್ಡಿಂಗ್ಸ್ ವಾಟರ್ ಹೀಟರ್ಸ್, ಗ್ಯಾಸ್ ಸ್ಟೌವ್, ಸೀಲಿಂಗ್ ಪವರ್ ಫ್ಯಾನ್, ಇಸ್ತ್ರಿ ಪೆಟ್ಟಿಗೆ, ಏರ್ ಕಂಡೀಷನ್ ಹೀಗೆ ಮುನ್ನೂರಕ್ಕೂ ಹೆಚ್ಚು ಉಪಕರಣಗಳ ಉತ್ಪಾದನೆ ಆಗುತ್ತಿದೆ. ಮೆಕ್ಕಾಯ್, ಸಹರಾ ಎಂಬ ಬ್ರಾಂಡಿನ ಹೆಸರಿನಿಂದ ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳು ಐ ಎಸ್ ಒ 9001 ಪ್ರಮಾಣಪತ್ರವನ್ನು ಹೊಂದಿದೆ. ಕ್ಯಾನ್ಬರಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಸುವಿಧಾ ಎಪ್ಲೈಯನ್ಸಸ್, ವಿ. ಕೆ. ಎಪ್ಲೈಯನ್ಸಸ್ ಹೆಸರಿನಲ್ಲಿ ವಿವಿಧ ಪ್ರದೇಶಗಳಾದ ಪಾಲ್ಘರ್, ಸಿಲ್ವಾಸ ಎಂಬಲ್ಲಿನ ನಾಲ್ಕು ಘಟಕಗಳಲ್ಲಿ ಉತ್ತಮ ಗುಣಮಟ್ಟದ ಗೃಹೋಪಯೋಗಿ ವಸ್ತುಗಳ ಉತ್ಪಾದನೆಯಾಗುತ್ತಿವೆ. ಹಿಮಾಚಲ ಪ್ರದೇಶದಲ್ಲಿ ಸುವಿಧಾ ಎಪ್ಲೈಯನ್ಸಸ್ ಹೆಸರಿನ ಉತ್ಪಾದನಾ ಘಟಕವಿದ್ದು ಇದು ರಾಜ್ಯದಲ್ಲೇ ಅತ್ಯಂತ ದೊಡ್ಡ ಉತ್ಪಾದನಾ ಘಟಕ ಎಂಬ ಕೀರ್ತಿಗೆ ಪಾತ್ರವಾಗಿದೆ.
ಒಂದು ಕೃಷಿ ಪ್ರಧಾನ ಕುಟುಂಬದ ಹಿನ್ನೆಲೆ ಹೊಂದಿದ ವ್ಯಕ್ತಿಯೊಬ್ಬರು ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡುವುದು ಸಾಮಾನ್ಯ ವಿಷಯವಲ್ಲ. ಕೇಂದ್ರ ಸರಕಾರವು ಇವರನ್ನು ಓರ್ವ ಅತ್ಯುತ್ತಮ ಕೈಗಾರಿಕೋದ್ಯಮಿ ಎಂದು ಗುರುತಿಸಿದ್ದು ಸಮಸ್ತ ಬಂಟ ಸಮುದಾಯಕ್ಕೆ ಅಭಿಮಾನದ ವಿಷಯ. ಕಟಪಾಡಿ ಮೆನ್ನ ಶೆಟ್ಟಿ ಹಾಗೂ ಸುರತ್ಕಲ್ ಮಧ್ಯಗುತ್ತು ಗಿರಿಜಾ ಎಂ ಶೆಟ್ಟಿ ದಂಪತಿಯ ಸುಪುತ್ರ ಕರುಣಾಕರ ಶೆಟ್ಟರ ಧರ್ಮ ಪತ್ನಿ ಮುಂಡ್ಕೂರು ಪೊಸ್ರಾಲ್ ನವರು. ಇವರಿಗೆ ಮೂವರು ಪುತ್ರರು. ಆದಿತ್ಯ ಶೆಟ್ಟಿ ಬಿಕಾಂ ಪದವಿಧರರು ಮತ್ತು ಮೌಲ್ಡಿಂಗ್ ಎಂಡ್ ಡೈ ಡಿಪ್ಲೋಮಾ ಪಡೆದವರು. ಎರಡನೆಯವರು ಅಖಿಲ್ ಕೆ ಶೆಟ್ಟಿ ಇನ್ ಸ್ಟ್ರುಮೆಂಟ್ ನಲ್ಲಿ ಬಿ.ಟೆಕ್ ಪದವಿಧರರು. ಕೊನೆಯವರಾದ ಅಂಕಿತ್ ಕೆ ಶೆಟ್ಟಿ ಮಾರ್ಕೆಟಿಂಗ್ ನಲ್ಲಿ ಎಂ.ಬಿ.ಎ ಪದವಿಧರರು. ಮೂವರೂ ತಂದೆಯವರ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಕೆ. ಎಂ ಶೆಟ್ಟರು ತನ್ನ ಲಾಭಾಂಶದಲ್ಲಿ ದೊಡ್ಡ ಮೊತ್ತವನ್ನು ತನ್ನ ಊರಿನ ಸರ್ವಾಂಗೀಣ ಅಭಿವೃದ್ಧಿಗೆ ಖರ್ಚು ಮಾಡುತ್ತಾರೆ. ಸುರತ್ಕಲ್ ನ ಮಧ್ಯ ಒಂದು ಆದರ್ಶ ಪ್ರದೇಶವಾಗುವಂತೆ ಶ್ರಮಿಸುತ್ತಿದ್ದಾರೆ.
ಕೊಡುಗೈ ದಾನಿಯಾಗಿರುವ ಶೆಟ್ಟರು ಬಂಟರ ಸಂಘ ಮುಂಬಯಿ ಹಾಗೂ ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ವಿಶ್ವಸ್ತರಾಗಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ ತಾನು ಹುಟ್ಟಿದ ಸಮುದಾಯದ ಋಣ ತೀರಿಸಲು ಪ್ರಯತ್ನಿಸುತ್ತಿದ್ದಾರೆ. ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಇದರ ನಿರ್ದೇಶಕರಾಗಿ, ಮಿಕ್ಸರ್ ಎಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷರಾಗಿದ್ದಾರೆ. ಸಾಹಿತ್ಯ ಹಾಗೂ ಎಲ್ಲಾ ಕಲಾ ಪ್ರಕಾರಗಳಲ್ಲಿ ಆಸಕ್ತಿ ಹೊಂದಿರುವ ಶ್ರೀಯುತರು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಮತ್ತು ಮಹಾರಾಷ್ಟ್ರ ಘಟಕದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಮುಂಬಯಿಯಲ್ಲಿ 2020 ರಲ್ಲಿ ಸುಗಮ ಸಂಗೀತ ಸಮ್ಮೇಳನ ಮತ್ತು ಗೀತೋತ್ಸವವನ್ನು ಅದ್ಧೂರಿಯಿಂದ ಸಂಯೋಜಿಸಿದ್ದಾರೆ.
ಕೊಡುಗೈ ದಾನಿಯೂ, ಪರಮ ದೈವಭಕ್ತರೂ, ಬಡಜನರ ಕುರಿತು ಚಿಂತಿಸುವ ಮಾನವೀಯತಾವಾದಿಯೂ ಆಗಿರುವ ಇವರು ಊರಿನ ಪರ ಊರಿನ ದೆವಾಲಯಗಳ ಜೀರ್ಣೋದ್ಧಾರ ಹಾಗೂ ಬ್ರಹ್ಮ ಕಲಶೋತ್ಸವಗಳಲ್ಲಿ ಕೈಜೋಡಿಸಿ ದೈವಕೃಪೆ ಹಾಗೂ ಭಕ್ತ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರ ಎಲ್ಲಾ ಧಾರ್ಮಿಕ ಸಮಾಜಪರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪತ್ನಿ, ಮಕ್ಕಳು ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ. ಶಿಕ್ಷಣ ಪ್ರೇಮಿಯೂ ಆದ ಶೆಟ್ಟರು ಊರಿನ ಶಾಲೆಯನ್ನು ಮಾದರಿ ಶಾಲೆ ಎಂಬಂತೆ ರೂಪಿಸುವಲ್ಲಿ ಕಂಕಣ ಬದ್ಧರಾಗಿದ್ದಾರೆ. ಮಂಗಳೂರಿನ ಶ್ರೀ ಖಡ್ಗೇಶ್ವರ ದೇವಳದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದು ಮಹತ್ತರ ಯೋಗದಾನ ನೀಡಿದ್ದಾರೆ. ಕೆ ಎಂ ಶೆಟ್ಟಿ ಅವರು ಇಂದು ಬಂಟ ಸಮುದಾಯದ ಸಾಧನೆಯ ಸಾಕ್ಷಿಯ ಹೆಗ್ಗುರುತಾಗಿ ಹೊರ ಹೊಮ್ಮಿದ್ದು, ಸಮುದಾಯದ ಅಭಿಮಾನ ದ್ಯೋತಕ ಎಂಬಂತೆ ಗುರುತಿಸಲ್ಪಡುತ್ತಾರೆ. ಸರಳ ಸ್ನೇಹಿ, ಕರುಣಾ ಹೃದಯಿ, ಪ್ರಾಮಾಣಿಕ ಪರಿಶ್ರಮಿ ಕೆ.ಎಂ.ಶೆಟ್ಟರು ಆರ್ಥಿಕವಾಗಿ ಇನ್ನಷ್ಟು ಸಬಲರಾಗಿ ಸಮುದಾಯಕ್ಕೆ ಸಮಾಜಕ್ಕೆ ಒಟ್ಟು ರಾಷ್ಟ್ರಕ್ಕೆ ಇನ್ನಷ್ಟು ಸೇವೆ ಮಾಡುವ ಭಾಗ್ಯವನ್ನು ಶ್ರೀ ಸದಾಶಿವ, ಗಣೇಶ, ಮಹಮ್ಮಾಯಿ ಹಾಗೂ ಮಹಾಲಿಂಗೇಶ್ವರ ದೇವರು ಕರುಣಿಸಲೆಂಬುವುದೇ ಸಮಸ್ತ ಸಮುದಾಯದ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಹಾರೈಕೆಗಳು.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು