ಬೆಂಗಳೂರು ವಿಶ್ವವಿದ್ಯಾನಿಲಯವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಸ್ನಾತಕ ಪದವಿ ತರಗತಿಗಳಿಗೆ ಭಾಷಾ ಪಠ್ಯಪುಸ್ತಕಗಳನ್ನು ಅಧ್ಯಯನ ಕೇಂದ್ರದ ನಿರ್ದೇಶಕರ ನೇತೃತ್ವದಲ್ಲಿ ಪಠ್ಯಪುಸ್ತಕ ಸಿದ್ದಪಡಿಸಿದ್ದು ಅದರಲ್ಲಿ ಬಿ.ಎಸ್. ಡಬ್ಲ್ಯೂ (ಬ್ಯಾಚುಲರ್ ಓಫ್ ಸೋಶಿಯಲ್ ವರ್ಕ್) ವಿದ್ಯಾರ್ಥಿಗಳ ನಾಲ್ಕನೇ ಸೆಮಿಸ್ಟರ್ ಗೆ ಸಮಾಜ ಕಾರ್ಯ ಕನ್ನಡ ಭಾಷಾ ಪಠ್ಯದಲ್ಲಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಬರೆದ ಕುಂದಾಪುರದ ಕಂಪು ಶಿರ್ಷಿಕೆಯ ಲೇಖನ ಪಠ್ಯರೂಪದಲ್ಲಿ ಪಾಠ ಪುಸ್ತಕದಲ್ಲಿ ಸೇರ್ಪಡೆಗೊಂಡಿದೆ.
ಕನ್ನಡ ಅಧ್ಯಯನ ಕೇಂದ್ರ, ಸ್ನಾತಕ ಅಧ್ಯಯನ ಮಂಡಳಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳು ರಾಜ್ಯ ಪಠ್ಯ ಕ್ರಮಗಳ ಸಮಿತಿಯ ನಿರ್ದೇಶನಗಳ ಅನುಸಾರ ಈ ಪಠ್ಯ ಪುಸ್ತಕದ ಸಿದ್ದತೆ ನಡೆದಿದೆ. ಸಾಹಿತ್ಯ, ಸಂಸ್ಕ್ರತಿ ಮತ್ತು ರಾಷ್ಟ್ರೀಯ ಮನೋಭಾವವನ್ನು ಇಂದಿನ ಶಿಕ್ಷಣ ವ್ಯವಸ್ಥೆಯು ಕಟ್ಟಿಕೊಡಬೇಕೆಂಬ ನಿಟ್ಟಿನಲ್ಲಿ ವಿಷಯಾದಾರಿತ ಪಠ್ಯ ಪುಸ್ತಕಗಳನ್ನು ತಯಾರಿಸಿದೆ. ಈ ಪಠ್ಯ ಪುಸ್ತಕದಲ್ಲಿ 1)ಮಾಧ್ಯಮ ವಿಭಾಗ, 2)ಪ್ರಾದೇಶಿಕತೆ ವಿಭಾಗ, 3) ಜೀವನ ಚರಿತ್ರೆ ವಿಭಾಗ, 4) ಸಂಕೀರ್ಣ ವಿಭಾಗ ಎಂಬ ಈ ನಾಲ್ಕು ವಿಭಾಗಗಳಿವೆ.
ಪ್ರಾದೇಶಿಕತೆ ವಿಭಾಗದಲ್ಲಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಬರೆದ ಕುಂದಾಪುರದ ಕಂಪು ಬರಹದ ಪಾಠವಿದೆ. ಭಾಷಾ ಸೊಗಡು, ಆಚಾರಣೆಯಲ್ಲಿನ ವೈವಿಧ್ಯತೆ, ಬದಲಾದ ಕಾಲ ಘಟ್ಟಕ್ಕೆ ಅನುಗುಣವಾಗಿ ಹಬ್ಬ ಹರಿದಿನಗಳಲ್ಲಿ ತಂದುಕೊಂಡ ಆಚರಣೆಯೊಳಗಿನ ಅನುಕೂಲ ಶಾಸ್ತ್ರ, ಋತುಮಾನದೊಂದಿಗೆ ಬೆಸೆದುಕೊಂಡಿರುವ ಇಲ್ಲಿನ ಜನರ ಬದುಕಿನ ಚಿತ್ರಣಕ್ಕೆ ಬಣ್ಣ ಬಳಿದಂತೆ ಪ್ರತಿ ತಿಂಗಳಲ್ಲೂ ವಿಭಿನ್ನ ಶೈಲಿಯಲ್ಲಿ ವಿಶಿಷ್ಟ ಆಚರಣೆಯ ವಿಶೇಷತೆ. ಅದು ಗಿಜಿ ಗಿಜಿ ಗುಡುಗುವ ಮಳೆಗಾಲವಿರಲಿ, ಬಿರು ಬಿಸಿಲಿನ ಬೇಸಿಗೆಯಿರಲಿ, ಹೆಜ್ಜೆ ಹೆಜ್ಜೆಯಲ್ಲೂ ಪ್ರತಿ ಆಚರಣೆಯಲ್ಲೂ ಆಸ್ವಾದಿಸುವಂತಹ ವಿಶಿಷ್ಟತೆ, ಸಮರ್ಪಣ ಭಾವದಿಂದ ಆಚರಿಸಲ್ಪಡುವ ಆಚರಣೆ ಮತ್ತು ಜಗತ್ತು ಆಧುನಿಕತೆಯಲ್ಲಿ ಎಷ್ಟೇ ತುಂಬಿ ತುಳುಕಿದರೂ ಜನರು ತಮ್ಮ ಆಚರಣೆ, ಸಂಸ್ಕೃತಿ, ಸಂಪ್ರದಾಯಗಳನ್ನು ಮರೆಯುವುದಿಲ್ಲ ಎಂಬುದಕ್ಕೆ ಈಗಲೂ ಹತ್ತು ಹಲವು ಬಗೆಯ ಹಬ್ಬ, ಹರಿದಿನಗಳು ನಮ್ಮ ನೆಲದ ಮಣ್ಣಿನಲ್ಲಿ ಘಮ ಘಮಿಸುತ್ತಿರುವುದು ಸತ್ಯ. ಪ್ರತಿಯೊಂದು ಆಚರಣೆಗೂ ಅದರದ್ದೇ ಆದ ಮಹತ್ವ ಹಾಗೂ ತನ್ನತನವಿರುವುದನ್ನು ಇಲ್ಲಿ ಲೇಖಕಿ ನಿರೂಪಿಸಿದ್ದಾರೆ. ಕುಂದಾಪ್ರ ಕನ್ನಡ ಅಗೆದಷ್ಟು, ಬಗೆದಷ್ಟು ಮೊಳಗುವ ಭಾಷಾ ಸೌಂದರ್ಯ ಮತ್ತು ಗ್ರಾಮೀಣ ಜನರು ತಮ್ಮ ಜೀವನ ಅನುಭವದಿಂದ ಕಂಡ ವಿಚಾರಗಳು ಇವರ ಬರಹದಲ್ಲಿ ಅಡಕವಾಗಿದ್ದು ಈ ಬರಹ ಪಠ್ಯ ಪುಸ್ತಕಕ್ಕೆ ಸೇರ್ಪಡೆಗೊಂಡಿದೆ.
ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಡಾ. ಮುನಿಯಪ್ಪ, ನಿರ್ದೇಶಕರು ಕನ್ನಡ ಅಧ್ಯಯನ ಕೇಂದ್ರ ಬೆಂಗಳೂರು ವಿಶ್ವವಿದ್ಯಾಲಯ, ಡಾ. ಎಸ್ ಎಂ ಜಯಕರ, ಕುಲಪತಿಗಳು ಬೆಂಗಳೂರು ವಿಶ್ವವಿದ್ಯಾಲಯ, ಡಾ. ಸವಿತಾ ರವಿಶಂಕರ್ ಕ್ರೆಸ್ಟ್ ಅಕಾಡೆಮಿ ಹುಲ್ಲಹಳ್ಳಿ, ಪ್ರೋ ಕರಿ ಬಸವನ ಗೌಡ ಜೀ, ಸಂತ ಪ್ರಾನ್ಸಿಸ್ ಡುಸೇಲ್ಸ್ ಕಾಲೇಜ್ ಬೆಂಗಳೂರು, ಡಾ. ಸಿದ್ದಲಿಂಗಪ್ಪ ಎಸ್ ದೇಶ್ ಮುಖ್ ಸೆಂಟ್ ಕ್ಲಾರಟ್ ಪದವಿ ಕಾಲೇಜು ಜಾಲಹಳ್ಳಿ, ಪ್ರೋ ಶೋಭಾ ಪಾಟೀಲ್ ಆರ್ ಪಿ ಎ ಪದವಿ ಕಾಲೇಜು ರಾಜಾಜಿನಗರ, ಡಾ. ಎಂ ನಾರಾಯಣ ನಿರ್ದೇಶಕರು ಪ್ರಸಾರಾಂಗ ಮತ್ತು ಮುದ್ರಣಾಲಯ, ಡಾ. ರಾಮಲಿಂಗಪ್ಪ ಟಿ ಬೇಗೂರು ಇವರೆಲ್ಲರ ಮುತುವರ್ಜಿಯಲ್ಲಿ ಈ ಪಠ್ಯಪುಸ್ತಕ ತಯಾರಾಗಿದೆ.