ಮುಂಬಯಿಯ ಜನಪ್ರಿಯ ಸಂಘಟಕ, ಸಮಾಜ ಸೇವಕ ಶ್ರೀ ಗಿರೀಶ್ ಶೆಟ್ಟಿ ಇನ್ನ ಕಾಚೂರು ಬಂಟರ ಸಂಘ ಮುಂಬಯಿಯ ಕುರ್ಲಾ ಭಾಂಡುಪ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ನಿಯುಕ್ತಿಗೊಂಡಿರುವುದು ಹೆಮ್ಮೆಯ ವಿಷಯ ಹಾಗೂ ಇದೊಂದು ಅತ್ಯಂತ ಅರ್ಹ ಆಯ್ಕೆಯೂ ಹೌದು. ಇತ್ತೀಚಿನ ವರ್ಷಗಳಲ್ಲಿ ಉನ್ನತ ಶಿಕ್ಷಣ ಪಡೆದ ಯುವಕರು ತಮ್ಮ ಸ್ವಜಾತಿ ಬಾಂಧವರ ಸಾಮಾಜಿಕ ಕಾಳಜಿಯ ಬಂಟರ ಸಂಘ ಮುಂಬಯಿ ಇದರ ಸದಸ್ಯತ್ವ ಪಡೆದು ಕ್ರಮೇಣ ತಮ್ಮ ಸಂಘಟನಾ ಸಾಮರ್ಥ್ಯ, ಪ್ರತಿಭಾ ವಿಶೇಷತೆಗಳನ್ನು ಮೆರೆಯುತ್ತಿರುವುದು ನಿಜಕ್ಕೂ ಆರೋಗ್ಯಕರ ಬೆಳವಣಿಗೆ ಎನ್ನಬಹುದು. ಶ್ರೀ ಯುತ ಗಿರೀಶ್ ಶೆಟ್ಟರು ಬಿಕಾಂ ಜಿಡಿಸಿಎ ಎಲ್.ಎಲ್.ಬಿ ಪದವಿ ವಿಭೂಷಿತರು.
ದಿವಂಗತ ರಾಘು ಕೆ ಶೆಟ್ಟಿ ಪಡುಕುಡೂರು ಹಾಗೂ ಶ್ರೀಮತಿ ಶಾರದಾ ರಾಘು ಶೆಟ್ಟಿ ದಂಪತಿಯ ಸುಪುತ್ರ ಗಿರೀಶ್ ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾವಂತ ಹಾಗೂ ಕ್ರಿಯಾಶೀಲ ಚಟುವಟಿಕೆಗಳಿಂದ ಗುರುತಿಸಿಕೊಂಡಿದ್ದರು. ಆಟ ಪಾಠಗಳಲ್ಲಿ, ಇನ್ನಿತರ ಚಟುವಟಿಕೆಗಳಲ್ಲಿ ಮುಂದಿದ್ದು ತನ್ನ ಅಭ್ಯಾಸವನ್ನೂ ಸಮಾಂತರವಾಗಿ ಕಾಯ್ದುಕೊಂಡು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿ ಉನ್ನತ ಶಿಕ್ಷಣ ಪಡೆದು ಪ್ರತಿಷ್ಠಿತ ಕಂಪೆನಿಯಲ್ಲಿ ಉನ್ನತ ಹುದ್ದೆ ಗಿಟ್ಟಿಸಿಕೊಂಡವರು.
ಸುರತ್ಕಲ್ ನಲ್ಲಿ ಹೆಸರು ಪಡೆದ ಮಧ್ಯಗುತ್ತು ಗುತ್ತಿನ ಮನೆತನದ ಪದವೀಧರೆ ಉದ್ಯೋಗಿ ಸುಪ್ರಿಯಾ ಅವರೊಂದಿಗೆ ಸಪ್ತಪದಿ ತುಳಿದು ಗೃಹಸ್ಥ ಜೀವನ ಪ್ರವೇಶಿಸಿದ್ದು, ಇಬ್ಬರೂ ದುಡಿಯುತ್ತಿದ್ದು, ಜೊತೆಗೆ ಸಮಾಜ ಬಾಂಧವರ ಸುಖ ಕಷ್ಟಗಳಲ್ಲಿ ಪಾಲ್ಗೊಳ್ಳುತ್ತಾ ಆದರ್ಶ ದಂಪತಿಗಳೆಂಬಂತೆ ಗುರುತಿಸಿಕೊಂಡಿದ್ದಾರೆ. ಇವರ ಸರಸ ದಾಂಪತ್ಯದ ಕುರುಹುಗಳೆಂಬಂತೆ ಅಭಿಷಾ, ಅಯಾಂಶ್ ಎಂಬ ಹೆಣ್ಣು ಗಂಡು ಮಕ್ಕಳಿದ್ದಾರೆ. ಇಬ್ಬರೂ ಮಾತಾಪಿತರಂತೆ ಪ್ರತಿಭಾವಂತರು.
ಪ್ರಸ್ತುತ ಗಿರೀಶ್ ಶೆಟ್ಟರು ಎಕ್ಸಲೆಂಸ್ ಬಿಪಿಒ ಸರ್ವಿಸಸ್ ಇಲ್ಲಿ ಕ್ಲೈಂಟ್ಸ್ ಆಪರೇಷನ್ ಸೆಕ್ಷನ್ ಜನರಲ್ ಮೆನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು ಇಪ್ಪತ್ತ ನಾಲ್ಕು ವರ್ಷಗಳಿಂದ ತನ್ನನ್ನು ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಕೈಗೊಂಡು ಅವರ ಸಾಮೂಹಿಕ ಅಭಿವೃದ್ಧಿಗೆ ಶ್ರಮವಹಿಸಿ ಸದಾ ಕಾರ್ಯಪ್ರವೃತ್ತರಾಗಿದ್ದು ಬಡವರ ಪಾಲಿನ ಆಶಾಕಿರಣ ಎನಿಸಿಕೊಂಡಿದ್ದಾರೆ. ಎಕೌಂಟೆನ್ಸಿ ಆಡಿಟಿಂಗ್ ಕಂಪನಿ ಎಕೌಂಟ್ಸ್ ಕಾರ್ಪೋರೇಶನ್ ಅಕೌಂಟ್ಸ್ ಟ್ಯಾಕ್ಸಿಯೇಶನ್ ಐಟಿಇ ಎಸ್ ಕನ್ಸಲ್ಟೆಂನ್ಸಿ ಕಾರ್ಪೋರೇಶನ್ ಅಡಿಟ್ಸ್ ಕ್ಷೇತ್ರದಲ್ಲಿ ದುಡಿಮೆಯಲ್ಲಿ ಇಪ್ಪತ್ತೈದು ವರ್ಷಗಳ ಸುದೀರ್ಘ ಅನುಭವ ಇದೆ.
ಮಹಾರಾಷ್ಟ್ರ ಸರಕಾರದಿಂದ ವಿಶೇಷ SEO ಆಗಿ ನೇಮಿಸಿದ್ದು ತನ್ನ ಅವಧಿಯಲ್ಲಿ ಉತ್ತಮ ಕಾರ್ಯ ನಿರ್ವಹಣೆಯಿಂದ ಗುರುತಿಸಿಕೊಂಡಿದ್ದರು. ಭಾಂಡುಪ್ ಕರ್ನಾಟಕ ಸಂಘದ ಅಧ್ಯಕ್ಷರಾಗಿಯೂ ಅತ್ಯುತ್ತಮ ಕಾರ್ಯಕ್ರಮಗಳನ್ನು ಸಂಘಟಿಸಿರುವ ಸಂಯೋಜಿಸಿದ ಹೆಗ್ಗಳಿಕೆಯೂ ಶೆಟ್ಟರಿಗಿದೆ. ವಿದ್ಯಾ ವಿಹಾರದ ಶ್ರೀಶಾಸ್ತ ಸಂಘಟನೆಯ ಕಾರ್ಯದರ್ಶಿಯಾಗಿಯೂ ದುಡಿದಿದ್ದಾರೆ. ಈ ಹಿಂದೆ ಪ್ರಾದೇಶಿಕ ಸಮಿತಿಯ ಕ್ರಿಯಾಶೀಲ ಸದಸ್ಯರಾಗಿ, ಜೊತೆ ಕಾರ್ಯದರ್ಶಿಯಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಹಂತ ಹಂತವಾಗಿ ವಿಪುಲ ಅನುಭವದಿಂದ ಮುಪ್ಪುರಿಗೊಂಡ ಅರ್ಹ ಅಭ್ಯರ್ಥಿಯಾಗಿದ್ದ ಗಿರೀಶ್ ಅವರು ಇದೀಗ ಕುರ್ಲಾ ಭಾಂಡುಪ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಸರ್ವಾನುಮತದಿಂದ ಆಯ್ಕೆಗೊಂಡಿರುವುದು ಸಮಸ್ತ ಬಂಟ ಸಮುದಾಯಕ್ಕೆ ಹರ್ಷ ತಂದಿದೆ.
ಉತ್ತಮ ಶಿಕ್ಷಣ ಪಡೆಯುತ್ತಿರುವ ಮಕ್ಕಳು, ಉದ್ಯೋಗದಲ್ಲಿರುವ ಪತ್ನಿ, ಉನ್ನತ ಸ್ಥಾನದ ಉದ್ಯೋಗ, ಸ್ವಜನ ಬಾಂಧವರ ಸಂಪರ್ಕ, ಪ್ರೀತಿ ವಿಶ್ವಾಸ, ಸಮಾಜದಲ್ಲಿ ಉತ್ತಮ ಹೆಸರು ಸ್ಥಾನಮಾನ ಇರುವ ಈ ಇನ್ನದ ಚಿನ್ನದ ಕೀರ್ತಿ ಇನ್ನಷ್ಟು ಬೆಳಗಲಿ ಭವಿಷ್ಯದಲ್ಲಿ ಬಂಟರ ಸಂಘ ಮುಂಬಯಿ ಕುರ್ಲಾ, ವಿಶ್ವ ಬಂಟರ ಸಂಘಗಳ ಪದಾಧಿಕಾರಿಯಾಗಿ ಪದೋನ್ನತಿ ಹೊಂದುವ ಯೋಗ ಭಾಗ್ಯಗಳನ್ನು ಇನ್ನಾ ಮುದ್ದಾಣು ಮಹಾಲಿಂಗೇಶ್ವರ ಕರುಣಿಸಲಿ ಎಂದು ಹಾರೈಸೋಣ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು