ಮುಂಬಯಿ:- ಮುಂಬಯಿ:- ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ನಾಡೋಜ ಪ್ರೊ.ಕಮಲಾ ಹಂಪನಾ ಪ್ರತಿಷ್ಠಾನ, ಬೆಂಗಳೂರು ಹಾಗೂ ಸಪ್ನ ಬುಕ್ ಹೌಸ್, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಸಂಭ್ರಮ, ರಾಷ್ಟೀಯ ವಿಚಾರ ಸಂಕಿರಣ ಹಾಗೂ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ಸೆಪ್ಟೆಂಬರ್ 24ರಂದು ಶನಿವಾರ ಮುಂಬಯಿ ವಿಶ್ವವಿದ್ಯಾಲಯ, ಕಲಿನಾ ಕ್ಯಾಂಪಸ್ಸಿನ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಆಯೋಜಿಸಲಾಗಿತ್ತು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರು ಕನ್ನಡ ವಿಭಾಗದ ಮೂರು ಪ್ರಕಟಣೆಗಳು ಬಿಡುಗಡೆಗೊಳ್ಳುತ್ತಿರುವುದು ಸಂತೋಷವನ್ನು ತಂದಿದೆ. ಕನ್ನಡ ವಿಭಾಗ ಕನ್ನಡ, ಇಂಗ್ಲಿಷ್, ಮರಾಠಿ, ತುಳು ಹೀಗೆ ಬೇರೆ ಬೇರೆ ಭಾಷೆಗಳ ಇದುವರೆಗೆ 90 ಕೃತಿಗಳನ್ನು ಪ್ರಕಟಿಸಿದೆ. ಬಹುಭಾಷಾ ನೆಲೆಯಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ.
ಪೂರ್ಣಿಮಾ ಶೆಟ್ಟಿ ಅವರ ಎರಡು ಕೃತಿಗಳು ಪುತ್ತೂರು, ಕತಾರ್ ಹಾಗೂ ಇಂದು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಬಿಡುಗಡೆಗೊಳ್ಳುತಿದೆ. ಈ ರವಿತೇಜ ಕೃತಿಯನ್ನು ಇಂಗ್ಲಿಷ್ ಜಾಯಮಾನಕ್ಕೆ ಒಗ್ಗುವಂತೆ ಮಿಥಾಲಿ ರೈ ಅವರ ಅನುವಾದಿಸಿದ್ದಾರೆ. ನಮ್ಮ ವಿಭಾಗ ಬೇರೆ ಬೇರೆ ಸಂಘ ಸಂಸ್ಥೆಗಳ ಜೊತೆ ಸೇರಿಕೊಂಡು ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿಯೇ ಅತಿ ಹೆಚ್ಚು ದತ್ತಿನಿಧಿಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ಕನ್ನಡ ವಿಭಾಗದ್ದು. ಈ ಕೃತಿಗಳನ್ನು ಬಿಡುಗಡೆಗೊಳಿಸಲು ಆಚಾರ್ಯ ಹಂಪನಾ, ಪ್ರೊ.ವಿವೇಕ ರೈ ಅವರು ಬಂದಿರುವುದು ನಮ್ಮ ಭಾಗ್ಯ. ಅವರು ನಮಗೆ ಸದಾಕಾಲ ಮಾರ್ಗದರ್ಶನವನ್ನು ಮಾಡುತ್ತಾ ಬಂದವರು. ವಿಶ್ವವಿದ್ಯಾಲಯ ಎಂದರೆ ಕೇವಲ ಶೈಕ್ಷಣಿಕ ಚಟುವಟಿಕೆಗೆ ಸೀಮಿತವಾಗಿರಬಾರದು. ಅಶೋಕ ಪಕ್ಕಳ ಅವರು ಉತ್ತಮ ಸಂಘಟಕರು, ಲೇಖಕರು, ನಿರೂಪಕರು. ಅವರು ಇಂದು ವಿಭಾಗದ ಪ್ರಕಟಣೆಯ ಕುರಿತು ಮಾತನಾಡುತ್ತಿರುವುದು ಸಂತೋಷ ತಂದಿದೆ.
ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರ ‘ರವಿತೇಜ’ ಕೃತಿಯ ಕನ್ನಡ ಮತ್ತು ಇಂಗ್ಲಿಷ್ ಆವ್ರತ್ತಿಗಳನ್ನು ಡಾ.ಬಿ.ವಿವೇಕ ರೈ ಹಾಗೂ ಡಾ.ಜಿ.ಎನ್.ಉಪಾಧ್ಯ ಅವರು ಲೋಕಾರ್ಪಣೆಗೊಳಿಸಿದರು. ರವಿತೇಜ ಕೃತಿಯನ್ನು ಲೋಕಾರ್ಪಣೆಗೊಳಿಸಿ ಡಾ.ವಿವೇಕ ರೈ ಅವರು ಮಾತನಾಡುತ್ತಾ ಪೂರ್ಣಿಮಾ ಶೆಟ್ಟಿ ಅವರ ಈ ಕೃತಿ ವ್ಯಕ್ತಿಚಿತ್ರಣವನ್ನು ಹೇಗೆ ಬರೆಯಬೇಕೆನ್ನುವುದಕ್ಕೆ ಉತ್ತಮ ಮಾದರಿಯಾಗಿದೆ. ಅದನ್ನು ಅಷ್ಟೇ ಸುಂದರವಾಗಿ ಮಿಥಾಲಿ ರೈ ಅವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಈಗಾಗಲೇ ಪುತ್ತೂರು, ಕತಾರಿನಲ್ಲಿ ಬಿಡುಗಡೆಯಾದ ಈ ಕೃತಿ ಇಂದು ಮುಂಬಯಿಯಲ್ಲಿ ಬಿಡುಗಡೆಗೊಂಡಿರುವುದು ಅದಕ್ಕೊಂದು ಪೂರ್ಣತೆಯನ್ನು ನೀಡಿದೆ. ರವಿ ಶೆಟ್ಟಿ ಅವರು ಬದುಕಿದ ರೀತಿ, ಅದನ್ನು ಈ ಕೃತಿಯಲ್ಲಿ ಮೂಡಿಸಿದ ಬಗೆ ಎಲ್ಲವನ್ನೂ ನಾನು ಹತ್ತಿರದಿಂದ ಕಂಡವನು. ಉಪಾಧ್ಯ ಅವರು ವಿಭಾಗವನ್ನು ವಿಸ್ತರಿಸಿದ ರೀತಿಯೂ ಅಚ್ಚರಿಯನ್ನುಂಟು ಮಾಡುತ್ತದೆ. ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಕಟಣೆಯ ಕಾರ್ಯವೂ ಮೆಚ್ಚುವಂತದ್ದು ಎಂದು ಅವರು ನುಡಿದರು.
ಕೃತಿಯ ಕುರಿತು ಲೇಖಕರಾದ ಅಶೋಕ ಪಕ್ಕಳ ಅವರು ಮಾತನಾಡಿದರು. ರವಿ ಶೆಟ್ಟಿ ಅವರು ತುಂಬಿದ ಮನೆಯಲ್ಲಿ ಹುಟ್ಟಿ ಬೆಳೆದವರು. ಇಂಜಿನಿಯರ್ ಪದವಿ ಪಡೆದು ಉದ್ಯೋಗಿಯಾಗಿ, ಉದ್ಯಮಿಯಾಗಿ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಾಣುತ್ತಲೇ ಹಂತ ಹಂತವಾಗಿ ಸಾಧನೆಯ ಮೆಟ್ಟಿಲೇರಿದವರು. ರವಿತೇಜ ಕೃತಿಯಲ್ಲಿ ಈ ಎಲ್ಲ ಅಂಶಗಳು ಮೂಡಿಬಂದ ಬಗೆಯನ್ನು ಅವರು ತೆರೆದಿಟ್ಟರು.
ಮೂಡಂಬೈಲು ರವಿ ಶೆಟ್ಟಿ ಅವರು ರವಿತೇಜ ಎನ್ನುವ ಕೃತಿ ನನ್ನ ಬಗ್ಗೆ ಬರೆದಿರುವುದೇ ನನ್ನ ಜೀವನದ ಅತ್ಯಂತ ಸಂತೋಷವನ್ನು ನೀಡಿರುವಂತದ್ದು. ಈ ಕೃತಿಗೆ ಕಾರಣಕರ್ತರಾದದ್ದು ಐಲೇಸಾ ಡಿಜಿಟಲ್ ವೇದಿಕೆ. ಅ ಮೂಲಕ ಮುಂಬಯಿ ವಿಶ್ವವಿದ್ಯಾಲಯದ ಮೂಲಕ ಈ ಕೃತಿ ಹೊರಬರುತ್ತದೆ ಎಂದು ನಾನು ಕನಸಿನಲ್ಲೂ ಎಣಿಸಿರಲಿಲ್ಲ. ಸರಳ ಸಜ್ಜನರಾದ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರ ಸಹಕಾರವನ್ನು ನಾವು ಮರೆಯುವಂತಿಲ್ಲ. ಅವರಿಗೆ ನಾನು ಋಣಿಯಾಗಿದ್ದೇನೆ. ವಿವೇಕ ರೈ ಅವರು ತೋರಿದ ಮುತುವರ್ಜಿ ಯಾವತ್ತೂ ಸ್ಮರಣೀಯವಾದುದು. ಇವೆಲ್ಲವೂ ನನ್ನ ಯೋಗವೆಂದೇ ತಿಳಿದುಕೊಂಡಿದ್ದೇನೆ. ಕನ್ನಡ ಮತ್ತು ಇಂಗ್ಲಿಷಿಗೆ ಈ ಕೃತಿಯನ್ನು ಹೊರತಂದಿರುವ ಪೂರ್ಣಿಮಾ ಶೆಟ್ಟಿ, ಮಿಥಾಲಿ ರೈ ಅವರ ಪರಿಶ್ರಮವನ್ನು ನಾನು ಬಲ್ಲೆ. ಪುಸ್ತಕವನ್ನು ಓದಿ ದೊರೆತ ಸ್ಪಂದನೆಯನ್ನು ನೋಡಿ ಆ ಎಲ್ಲ ಶ್ರಮ ಸಾರ್ಥಕ ಎನಿಸುತ್ತದೆ. ನಮ್ಮಲ್ಲಿ ಇಚ್ಛಾಶಕ್ತಿ ಇರಬೇಕು. ಸಾಧಿಸುವ ಛಲವಿರಬೇಕು. ಆಗ ಎಲ್ಲ ಕಷ್ಟಗಳನ್ನು ಎದುರಿಸಿ ಜೀವನದಲ್ಲಿ ಮುಂದೆ ಬರಲು ಸಾಧ್ಯವಿದೆ ಎಂದರು. ಹಾಗೂ ಈ ಕೃತಿಯ ಹಿಂದೆ ಸಹಕರಿಸಿದ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದರು. ರವಿತೇಜ ಕೃತಿಯನ್ನು ಅನುವಾದಿಸಿದ ಮಿಥಾಲಿ ರೈ ಅವರು ಮಾತನಾಡುತ್ತಾ ಮೂಲ ಕೃತಿಯ ನೆರಳಾಗಿ ಈ ಅನುವಾದ ಮಾಡಿದ್ದೇನೆ. ಈ ಪುಸ್ತಕ ನಾನು ಬರೆದಿದ್ದೇನೆ ಅನ್ನುವುದಕ್ಕಿಂತ ಅದು ನನ್ನನ್ನು ಬರೆಸಿಕೊಂಡು ಹೋಯಿತು. ಅಲ್ಲದೆ ಈ ಕೃತಿ ನನಗೆ ಅನೇಕ ಅವಕಾಶಗಳನ್ನು ದೊರಕಿಸಿಕೊಟ್ಟಿತು. ಆ ಎಲ್ಲ ಶ್ರೇಯ ಡಾ.ಜಿ.ಎನ್.ಉಪಾಧ್ಯ ಅವರಿಗೆ, ಪೂರ್ಣಿಮಾ ಶೆಟ್ಟಿ ಅವರಿಗೆ ಹಾಗೂ ರವಿ ಶೆಟ್ಟಿ ಅವರಿಗೆ ಸಲ್ಲುತ್ತದೆ ಎಂದು ಧನ್ಯವಾದ ಸಲ್ಲಿಸಿದರು.
ಕೃತಿಕಾರರಾದ ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕೃತಿಯ ರಚನೆಯ ಹಿನ್ನೆಲೆ, ಸಹಕರಿಸಿದವರನ್ನು ಸ್ಮರಿಸಿ ಕೃತಜ್ಜತೆಗಳನ್ನು ಸಲ್ಲಿಸಿದರು. ಕನ್ನಡ ವಿಭಾಗದ ಹಿರಿಯ ವಿದ್ಯಾರ್ಥಿಮಿತ್ರರಾದ ಶಶಿಕಲಾ ಹೆಗಡೆ ಅವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.