ಪನ್ವೇಲ್ ನ ಪ್ರಸಿದ್ಧ ಕ್ರೀಡಾ ಸಂಸ್ಥೆ ಕರಾವಳಿ ಸ್ಪೋರ್ಟ್ಸ್ ಮತ್ತು ಎಜುಕೇಶನಲ್ ಟ್ರಸ್ಟ್ (ರಿ.) ಇದರ 12 ನೇ ವಾರ್ಷಿಕೋತ್ಸವ ಸಮಾರಂಭವು ನ್ಯೂ ಪನ್ವೇಲ್ ಪಶ್ಚಿಮ ಖಾಂದ ಕಾಲೊನಿಯ ಬಿಜೆಪಿ ಜನ ಸಂಪರ್ಕ ಕಾರ್ಯಾಲಯದ ಸಭಾಂಗಣದಲ್ಲಿ ಧಾರ್ಮಿಕ ಹಾಗೂ ಸನ್ಮಾನ ಕಾರ್ಯಕ್ರಮದೊಂದಿಗೆ ಅದ್ದೂರಿಯಾಗಿ ಸಂಪನ್ನಗೊಂಡಿತು. ಅದೇ ದಿನ ಪ್ರಧಾನಿ ನರೇಂದ್ರ ಮೋದಿಯವರಿಂದ ಅಯೋಧ್ಯೆಯಲ್ಲಿ ರಾಮಮಂದಿರದ ಮಹಾ ಉದ್ಘಾಟನಾ ಕಾರ್ಯಕ್ರಮವು ಜರಗಿದ ಹಿನ್ನಲೆಯಲ್ಲಿ ಕರಾವಳಿ ನಿರ್ವಹಣಾ ತಂಡವು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳ ಬದಲಿಗೆ ಸಂಪೂರ್ಣವಾಗಿ ಧಾರ್ಮಿಕ ಕಾರ್ಯಕ್ರಮವನ್ನು ಆಚರಿಸಲು ನಿರ್ಧರಿಸಿತ್ತು. ಕರಾವಳಿ ಸ್ಪೋರ್ಟ್ಸ್ ಮತ್ತು ಎಜುಕೇಶನಲ್ ಟ್ರಸ್ಟ್ ನ ಗೌರವಾಧ್ಯಕ್ಷ ಮಹಾಬಲ ಶೆಟ್ಟಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕಾಳಿಕಾಂಬಾ ವಿನಾಯಕ ಟ್ರಸ್ಟ್ (ರಿ.) ಅಧ್ಯಕ್ಷ ಸಿಎ ಶ್ರೀಧರ ಆಚಾರ್ಯ ಮುಖ್ಯ ಅತಿಥಿಯಾಗಿ ಹಾಗೂ ಡಾ. ಆರತಿ ಮಲಿಕ್, ಎಂ.ಡಿ., (ಪ್ಯಾಥೋ), ಆರತಿ ಮಲಿಕ್ ಲ್ಯಾಬ್, ನ್ಯೂ ಪನ್ವೇಲ್ ಮತ್ತು ಡಾ. ಸ್ವಾತಿ ಲಿಖಿತೆ, ಎಂಬಿಬಿಎಸ್, ಡಿಸಿಎಚ್ (ಲಿಖಿತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪನ್ವೇಲ್), ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಮಾರಂಭದ ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ವಿಕಾಸ್ ಎನ್. ಪಾಟೀಲ್ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ರತ್ನಾ ಚೌಟ ಉಪಸ್ಥಿತರಿದ್ದರು.
ಸಿಎ ಶ್ರೀಧರ ಆಚಾರ್ಯ ಅವರು ಉಡುಪಿ ಶ್ರೀ ಕೃಷ್ಣ ದೇವರ ಛಾಯಾಚಿತ್ರದ ಮುಂಭಾಗದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೀಪದ ಹಣತೆಗಾಗಿ ಉಡುಪಿ ಶ್ರೀಕೃಷ್ಣ ಮಠದ ಶೈಲಿಯ ಸ್ಟಾಂಡ್ ಗಳನ್ನು ಒದಗಿಸಲಾಗಿತ್ತು ಮತ್ತು ಇದು ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿತ್ತು. ಕರಾವಳಿ ಸ್ಪೋರ್ಟ್ಸ್ ಮತ್ತು ಎಜುಕೇಶನಲ್ ಟ್ರಸ್ಟ್ (ರಿ.) ಸ್ಥಾಪಕ ಮತ್ತು ಅಧ್ಯಕ್ಷರಾದ ಕೆ. ತಾರಾನಾಥ ಶೆಟ್ಟಿ ಅವರು ಆಗಮಿಸಿದ ಎಲ್ಲಾ ಗಣ್ಯರು ಮತ್ತು ಭಕ್ತರನ್ನು ಸ್ವಾಗತಿಸಿದರು ಮತ್ತು ಕಳೆದ 12 ವರ್ಷಗಳಲ್ಲಿ ಸಂಸ್ಥೆಯು ನಡೆದು ಬಂದ ದಾರಿ ಮತ್ತು ಸ್ಥಾಪನೆಯ ಮುಖ್ಯ ಉದ್ದೇಶದ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸಂಸ್ಥೆಯ ವಿಸ್ತರಣಾ ಯೋಜನೆಯ ಬಗ್ಗೆ ತಿಳಿಸಿದರು. ಸಂಸ್ಥೆಯ ಅಧ್ಯಕ್ಷರಾದ ಮಹಾಬಲ ಟಿ. ಶೆಟ್ಟಿ ಅವರ ಕೊಡುಗೆ ಮತ್ತು ತ್ಯಾಗವನ್ನು ಇದೇ ವೇಳೆ ಕೆ. ತಾರನಾಥ್ ಶೆಟ್ಟಿಯವರು ಮೆಲುಕು ಹಾಕಿದರು. ಮಹಾಬಲ ಶೆಟ್ಟಿ, ರಸಾಯನಿಯವರಿಗೆ ಸಂಸ್ಥೆಯ ಈವರೆಗಿನ ಬೆಳವಣಿಗೆಯ ಸಂಪೂರ್ಣ ಶ್ರೇಯಸ್ಸನ್ನು ನೀಡಲಾಯಿತು. ನಂತರ ಕರಾವಳಿ ಕುಟುಂಬದ ಡಾ. ಆರತಿ ಮಲಿಕ್, ಡಾ. ಸ್ವಾತಿ ಲಿಖಿತೆ, ಶಾಂತಾರಾಮ ಪುತ್ರನ್, ಹೇಮಚಂದ್ರ ಎರ್ಮಾಳ್ ಮತ್ತು ಕರಾವಳಿ ತಂಡದಿಂದ ಮಹಾಬಲ ಶೆಟ್ಟಿಯವರಿಗೆ ‘ಕರಾವಳಿ ನವರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆ ಕಾರ್ಯಕ್ರಮ ಮುಕ್ತಾಯದ ನಂತರ ಸಂಸ್ಥೆಯ ಭಜನಾ ತಂಡ ಮತ್ತು ಉಡುಪಿ ಶ್ರೀಕೃಷ್ಣ ಭಜನಾ ಮಂಡಳಿ, ಖಾಂದ ಕಾಲೋನಿ, ನ್ಯೂ ಪನ್ವೇಲ್(ಪ) ಇವರಿಂದ ಬಹುಭಾಷಾ ಭಜನಾ ಕಾರ್ಯಕ್ರಮವು ಜರಗಿತು. ಭಜನಾ ತಂಡದ ನೇತೃತ್ವವನ್ನು ಅದರ ತಂಡದ ನಾಯಕಿ ಅರುಣಾ ನಾಯಕ್ ಬಹಳ ಸುಂದರವಾಗಿ ಬಹುಭಾಷಾ ಭಜನಾ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು. ಎಲ್ಲಾ ಭಜನಾ ಗಾಯಕರು ಉತ್ತಮ ಪ್ರದರ್ಶನ ನೀಡಿದರು. ಹಿಂದಿ, ಮರಾಠಿ, ಕನ್ನಡ, ತುಳು, ತೆಲುಗು ಮತ್ತು ಗುಜರಾತಿ ಭಾಷೆಗಳಲ್ಲಿ ಭಜನಾ ಕಾರ್ಯಕ್ರಮ ನೀಡಲಾಯಿತು ಮತ್ತು ಭಜನಾ ಕಾರ್ಯಕ್ರಮದಿಂದ ನೆರೆದ ಎಲ್ಲಾ ಭಕ್ತರು ಅತ್ಯಂತ ಪ್ರಸನ್ನಗೊಂಡರು.
ಸಂಪೂರ್ಣ ಭಜನಾ ಕಾರ್ಯಕ್ರಮವನ್ನು ಶಾಂತರಾಮ ಪುತ್ರನ್ (ರಾಗ ರಂಜಿನಿ), ಪ್ರಭಾದೇವಿ, ನಿರ್ದೇಶಿಸಿದ್ದರು. ಬಹುಮುಖ ಪ್ರತಿಭೆಯ ಕಲಾವಿದರಾದ ಹೇಮಚಂದ್ರ ಎರ್ಮಾಳ್ ಅವರಿಗೆ ಹಿನ್ನಲೆ ಸಹಕಾರವನ್ನು ನೀಡಿದರು. ಈ ಎರಡು ಗಂಟೆಗಳ ಸುಂದರ ದಿವ್ಯ ಭಜನಾ ಕಾರ್ಯಕ್ರಮವನ್ನು ಶ್ರೀರಾಮ ಮತ್ತು ಉಡುಪಿ ಶ್ರೀಕೃಷ್ಣನಿಗೆ ಸಮರ್ಪಿಸಲಾಯಿತು. ನಂತರ ಪ್ರಧಾನ ಕಾರ್ಯದರ್ಶಿ ವಿಕಾಸ ಪಾಟೀಲ ವಂದಿಸಿದರು. ಕರಾವಳಿ ಸ್ಪೋರ್ಟ್ಸ್ ಮತ್ತು ಎಜುಕೇಶನಲ್ ಟ್ರಸ್ಟ್ (ರಿ.), ನಿರ್ವಹಣಾ ತಂಡದ ಸದಸ್ಯರಾದ ವಿನೋದ್ ವಿ. ಕಾಮತ್ ಪರಿತೋಷ್ ಚಕ್ರವರ್ತಿ, ಸುದೀಪ್ ಚೌಟ, ಘನಶ್ಯಾಮ್ ಜಾಧವ್, ಸುನಂದಾ ಸಫಲಿಗ, ವಾರಿಜ ಗುಜರನ್, ಸದಸ್ಯರಾದ ರೇಣುಕಾ ಶೆಟ್ಟಿ, ಶಾರದಾ ಕುಂದರ್, ವಿನೋದ್ ಶೆಟ್ಟಿ, ಗಾಯತ್ರಿ ಕುಲಕರ್ಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ನೆರೆದ ಎಲ್ಲಾ ಭಕ್ತರಿಗೆ ಮಹಾಪ್ರಸಾದವನ್ನು ನೀಡಲಾಯಿತು.