ಬದುಕು ಕಟ್ಟಿಕೊಳ್ಳುವ ಸವಾಲಿನ ನಡುವೆ ಬೆಂಗಳೂರಿನಲ್ಲಿ ಟೆಕ್ನಿಶಿಯನ್ ಆಗಿ ದುಡಿಯುತ್ತಿದ್ದ ಯುವಕ ಆರ್. ರಾಜೇಶ್ ಶೆಟ್ಟಿ ಇಂದು ದೇಶದ ಉದ್ದಗಲ ವ್ಯಾಪಿಸಿರುವ ಪ್ರತಿಷ್ಠಿತ ಕಂಪನಿಗಳ ಎಲೆಕ್ಟ್ರಿಕಲ್ ನಿರ್ವಹಣೆಯ ಕೋಟ್ಯಂತರ ವಹಿವಾಟಿನ ಯಶಸ್ವಿ ಉದ್ಯಮಿ. ಸಂಸ್ಥೆ ರಜತ ಸಂಭ್ರಮದಲ್ಲಿರುವಾಗಲೇ ಐತಿಹಾಸಿಕ ಅಯೋಧ್ಯೆಯ ಶ್ರೀರಾಮ ಮಂದಿರದ ಸಮಗ್ರ ಎಲೆಕ್ಟ್ರಿಕಲ್ ವ್ಯವಸ್ಥೆ, ನಿರ್ವಹಣೆಯ ಹೊಣೆ ಅವರ ಬಳಗಕ್ಕೆ ಲಭಿಸಿದೆ. ಇವರು ಕರಾವಳಿ ಕರ್ನಾಟಕದ ದ. ಕ. ಜಿಲ್ಲೆಯ ಮೂಡಬಿದಿರೆಯವರು. ಸಾಫ್ಟ್ ವೇರ್ ಎಂಜಿನಿಯರಿಂಗ್ ಆಗಬೇಕೆಂದಿದ್ದ ರಾಜೇಶ್, ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಶಿಕ್ಷಣ ಪೂರೈಸಿ ಅಲ್ಲೇ ಟೆಕ್ನಿಷಿಯನ್ ಆಗಿ ಬದುಕು ಕಟ್ಟಿಕೊಳ್ಳಲು ಒದ್ದಾಡಿದರು. ತಾನಿದ್ದ ಕಂಪನಿಯಲ್ಲಿ ಕೆಲಸ ಇನ್ನೇನು ಕಾಯಂ ಆಗುತ್ತದೆ ಎನ್ನುವಷ್ಟರಲ್ಲೇ ಮೇಲಾಧಿಕಾರಿಯ ಒತ್ತಡಕ್ಕೆ ಕಟ್ಟು ಬಿದ್ದು ತನ್ನದೇ ಸಂಸ್ಥೆ ತೆರೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದು ಬದುಕಿಗೇ ಹೊಸ ತಿರುವು ನೀಡಿತು. ಅಂದು ಒತ್ತಡಕ್ಕೆ ಸಿಲುಕಿ ಸ್ಥಾಪಿಸಿದ್ದ ಶಂಕರ್ ಹೆಸರಿನ ಸಂಸ್ಥೆ ಇಂದು ಶಂಕರ್ ಎಲೆಕ್ಟ್ರಿಕಲ್ಸ್ ಸರ್ವೀಸಸ್ ಇಂಡಿಯಾ ಪ್ರೈ. ಲಿ. ಎಂಬ ಬೃಹತ್ ಸಂಸ್ಥೆಯಾಗಿ ಬೆಳೆದಿದ್ದು ಅಮೆಜಾನ್, ಗೂಗಲ್, ಯಾಹೂ, ಮೈಕ್ರೋಸಾಫ್ಟ್ ಹೀಗೆ ಬೆಂಗಳೂರು ಮಾತ್ರವಲ್ಲ ಚೈನೈ, ಹೈದ್ರಾಬಾದ್, ಮುಂಬೈ ಹೀಗೆ 400 ಕ್ಕೂ ಅಧಿಕ ದೊಡ್ಡ ಕಂಪನಿಗಳ ಎಲೆಕ್ಟ್ರಿಕಲ್ ನಿರ್ವಹಣೆಯಲ್ಲಿ ಟಾಪರ್ ಆಗಿದೆ. ವಾರ್ಷಿಕ 500 ಕೋಟಿ ರೂ. ನಷ್ಟು ವ್ಯವಹಾರವನ್ನೂ ನಡೆಸುತ್ತಿದೆ.
ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣದ ಪೂರ್ಣ ಹೊಣೆಗಾರಿಕೆ ಇರುವುದು ಅಲ್ಲಿನ ಶ್ರೀರಾಮ ಜನ್ಮ ಭೂಮಿ ಟ್ರಸ್ಟ್ ಹಾಗೂ ಟಾಟಾ ಅವರ ಟೆಸಿಎಸ್ ಎಂಜಿನಿಯರಿಂಗ್ ಸಂಸ್ಥೆಗೆ ರಾಜೇಶ್ ಶೆಟ್ಟಿ ಅವರ ಸಾಮರ್ಥ್ಯ, ಸಾಧನೆ ಚಿರಪರಿಚಿತ. ಹಾಗಾಗಿಯೇ ಅಯೋಧ್ಯೆಯ ಮಂದಿರದ ಎಲೆಕ್ಟ್ರಿಕಲ್ ವ್ಯವಸ್ಥೆ, ನಿರ್ವಹಣೆಯ ಜವಾಬ್ದಾರಿ ರಾಜೇಶ್ ಅವರಿಗೆ ಕೊಡಬಾರದೇಕೆ ಎನ್ನುವ ಯೋಚನೆ ಹೊಳೆದದ್ದೇ ಇವರ ಹೆಸರನ್ನು ಟಿಸಿಎಸ್ ಗೆ ರವನಿಸಲಾಗಿತ್ತು. ಇವರಿಗೆ ಅಯೋಧ್ಯೆ ಶ್ರೀ ರಾಮ ಮಂದಿರದ ಎಲೆಕ್ಟ್ರಿಕಲ್ ವ್ಯವಸ್ಥೆಯ ಜವಾಬ್ದಾರಿ ಜನವರಿಯಲ್ಲಿ ದೊರೆಯಿತು. ಮೊದಲ ಹಂತದಲ್ಲಿ ಗರ್ಭಗುಡಿಯ ಲೈಟಿಂಗ್ ವ್ಯವಸ್ಥೆಗೆ ಅಧ್ಯತೆ ನೀಡಲಾಗಿದ್ದು, ಈ ಡಿಸೆಂಬರ್ ಒಳಗಡೆ ಸಂಪೂರ್ಣ ವಿದ್ಯುದ್ದೀಕರಣ ಕಾರ್ಯ ಮುಗಿಸಿಕೊಡಬೇಕು. ಆ ನಂತರದ ನಿರ್ವಹಣೆಯ ಜವಾಬ್ದಾರಿಯೂ ರಾಜೇಶ್ ಬಳಗದ ಪಾಲಿಗೆ ದೊರೆತಿದೆ. ಇದೀಗ 150 ರಿಂದ 200 ಮಂದಿಯ ತಂಡ ಅಯೋಧ್ಯೆ ಮಂದಿರದ ಆವರಣದಲ್ಲಿ ಕಾರ್ಯನಿರತವಾಗಿದ್ದು, ಶೇ 70 ರಷ್ಟು ಮಂದಿ ಕರಾವಳಿಯವರೇ ಇದ್ದಾರೆ. ಗಣೇಶ್ ದೇವಾಡಿಗ, ಸಂಜಯ್ ಪೂಜಾರಿ, ಸಂಪತ್ ಶೆಟ್ಟಿ, ಪ್ರಮೋದ್ ಶೆಣೈ ಮೂಡಬಿದಿರೆ ಹೀಗೆ ತುಳುನಾಡಿನ ದಂಡೇ ಅಯೋಧ್ಯೆಯ ಮಂದಿರದಲ್ಲಿ ಉತ್ಸಾಹದಿಂದ ಕಾರ್ಯ ನಿರತವಾಗಿದೆ.
ವರ್ಷಕೊಮ್ಮೆ ಊರ ದೈವಗಳ ಸೇವೆಗೆ, ಕಟೀಲು ಹೀಗೆ ತವರಿನತ್ತ ಮುಖ ಮಾಡುವ ರಾಜೇಶ್, ತಾಯಿ ಲೀಲಾ, ಪತ್ನಿ ಅಪರ್ಣಾ, ಪುತ್ರರಾದ ದಕ್ಷ್ರಾಜ್, ಶೌರ್ಯ ಹೀಗೆ ಎಲ್ಲರ ಸಹಕಾರದಿಂದ ತನ್ನ ಸ್ವ ಉದ್ಯಮದಲ್ಲಿ ಸಾಮಾಜಿಕ ಕಾಳಜಿ, ಸೇವಾ ಕಾರ್ಯಗಳಿಂದ ಗುರುತಿಸಿಕೊಂಡಿದ್ದಾರೆ. ಇದೊಂದು ಬಯಸದೇ ಬಂದ ಭಾಗ್ಯ. ವೃತ್ತಿ ಮಾತ್ರವಲ್ಲ ಜೀವನದ ಅವಿಸ್ಮರಣೀಯ ಕ್ಷಣ. ತುಳುನಾಡಿನ ಕಟೀಲು ಅಮ್ಮನ ಕೃಪೆ, ಮಂತ್ರಾಲಯದ ಗುರುಗಳ ಆಶೀರ್ವಾದ ಎನ್ನುತ್ತಾರೆ ಶೆಟ್ರು.