ಮೀರಾ ಭಾಯಂದರ್ ಪರಿಸರದಲ್ಲಿ ಸಾಮಾಜಿಕ, ಧಾರ್ಮಿಕ ಸೇವೆಗಳನ್ನು ಮಾಡುತ್ತಾ ಸಂಘಟಕರಾಗಿ, ಬಂಟರ ಸಂಘದ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿಯಾಗಿ, ನವತರುಣ ಮಿತ್ರ ಮಂಡಳಿಯ ಗೌ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿರುವ ಬಳ್ಕುಂಜೆ ಗುತ್ತು ಗುತ್ತಿನಾರ್ ರವೀಂದ್ರ ಶೆಟ್ಟಿ (ಕೊಟ್ರಪಾಡಿ) ಅವರನ್ನು ಭಾರತೀಯ ಜನತಾ ಪಕ್ಷದ ದಕ್ಷಿಣ ಭಾರತೀಯ ಘಟಕ ಮೀರಾ ಭಾಯಂದರ್ ನ ಅಧ್ಯಕ್ಷರಾಗಿ ಮಹಾರಾಷ್ಟ್ರ ಬಿಜೆಪಿ ಸಮಿತಿಯು ಆಯ್ಕೆ ಮಾಡಿದೆ.
ಆಯ್ಕೆ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಬಿಜೆಪಿ ಸಮಿತಿಯ ಪದಾಧಿಕಾರಿಗಳು, ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್, ಮೀರಾ ಭಾಯಂದರ್ ನ ಮಾಜಿ ಬಿಜೆಪಿ ಎಂಎಲ್ ಎ ನರೇಂದ್ರ ಮೆಹ್ತಾ, ಮೀರಾ ಭಾಯಂದರ್ ನ ಬಿಜೆಪಿ ಅಧ್ಯಕ್ಷ ಕಿಶೋರ್ ಶರ್ಮಾ, ಮೀರಾ ಭಾಯಂದರ್ ನ ನಗರ ಸೇವಕ ಅರವಿಂದ ಆನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ನರೇಂದ್ರ ಮೆಹ್ತಾ ಅವರ ಶಿಫಾರಸ್ಸಿನ ಮೇಲೆ ರವೀಂದ್ರ ಶೆಟ್ಟಿ ಕೊಟ್ರಪಾಡಿ ಅವರು ದ. ಭಾರತೀಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು.
ರವೀಂದ್ರ ಶೆಟ್ಟಿ ಕೊಟ್ರಪಾಡಿ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಳ್ಕುಂಜೆಯ ಚಿನ್ನಯ ಬೆನ್ನಿ ಕುತ್ಯಾರು ದೇಜು ಶೆಟ್ಟಿ ಮತ್ತು ಬಳ್ಕುಂಜೆ ಗುತ್ತು ಪುಷ್ಪಾ ಶೆಟ್ಟಿ ದಂಪತಿಯ ನಾಲ್ವರಲ್ಲಿ ಕಿರಿಯವರಾಗಿ ಮುಂಬಯಿ ನಗರದಲ್ಲಿ ಜನಿಸಿದರು. ಶೆಟ್ಟಿಯವರು ಪ್ರಾಥಮಿಕ ವಿದ್ಯಾಭ್ಯಾಸ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಊರಿನಲ್ಲಿ ಪೂರೈಸಿ ಮುಂಬಯಿಗೆ ಆಗಮಿಸಿದ್ದರು.
ಮುಂಬಯಿಯಲ್ಲಿ ಉದ್ಯೋಗವನ್ನು ಮಾಡುತ್ತಾ, ಸ್ವಂತ ಉದ್ಯಮವನ್ನು ಪ್ರಾರಂಭಿಸಿಕೊಂಡರು. ಮೀರಾ ಭಾಯಂದರ್ ಪರಿಸರದಲ್ಲಿ ತನ್ನ ಸಾಮಾಜಿಕ ಸೇವೆಯನ್ನು ಪ್ರಾರಂಭಿಕೊಂಡ ಇವರು 2004 ರಲ್ಲಿ ನವತರುಣ ಮಿತ್ರ ಮಂಡಳಿ ಗಣೇಶೋತ್ಸವ ಸಮಿತಿಯ ಸ್ಥಾಪನೆಯ ರೂವಾರಿಯಾಗಿ 19 ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಈ ಸಂಸ್ಥೆಯ ಮೂಲಕ ರಕ್ತದಾನ, ವೈದ್ಯಕೀಯ ಶಿಬಿರ, ಶಿಕ್ಷಣ ಹೀಗೆ ಹಲವಾರು ಕಾರ್ಯಗಳು ರವೀಂದ್ರ ಶೆಟ್ಟಿಯವರ ಮೂಲಕ ನಡೆಯುತ್ತಾ ಬಂತು. ಮುಂಬಯಿ ಬಂಟರ ಸಂಘದ ಸೇವಾ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡರು. 2018ರಲ್ಲಿ ಬಂಟರ ಸಂಘದ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿಯಾಗಿ ಬಂಟ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡರು. ಇವರ ಸೇವಾ ಕಾರ್ಯಗಳನ್ನು ಗುರುತಿಸಿ ಮೀರಾ ಭಾಯಂದರ್ ನ ವಿವಿಧ ಸಂಘ ಸಂಸ್ಥೆಗಳು ಗೌರವಿಸಿತು.
ರವೀಂದ್ರ ಶೆಟ್ಟಿ ತವರೂರಿನ ಕೊಟ್ರಪಾಡಿ ಲಕ್ಷ್ಮೀ ಜನಾರ್ಧನ ಮಹಾಲಿಂಗೇಶ್ವರ ದೇವಸ್ಥಾನ ಇದರ ಆಶ್ರಯದಲ್ಲಿ ಕುಟುಂಬ ಸದಸ್ಯರು ಸೇರಿ ಶ್ರೀ ಲಕ್ಷ್ಮೀ ಜನಾರ್ಧನ ಬ್ರಹ್ಮ ಸಿರಿ ಯಕ್ಷಗಾನ ಬಳಗವನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನದಲ್ಲಿ ತೊಡಗಿಸಿಕೊಂಡರು. ಮುಂಬಯಿಯಲ್ಲಿ ನಾಗೇಶ್ ಪೊಳಲಿ ಮತ್ತು ಅಜೆಕಾರ್ ಬಾಲಕೃಷ್ಣ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಯಕ್ಷಗಾನ ಪಾತ್ರದಲ್ಲಿ ಪಾತ್ರವನ್ನು ಮಾಡಿ ಅಭಿನಯಿಸಿದ್ದಾರೆ. ಇವರ ಸೇವಾ ಕಾರ್ಯವನ್ನು ಗುರುತಿಸಿ ಅಜೆಕಾರ್ ಕಲಾಭಿಮಾನಿ ಬಳಗವು ಸಮಾಜ ರತ್ನ ಬಿರುದು ನೀಡಿ ಗೌರವಿಸಿದೆ. ಮೂಡಬಿದ್ರಿ ಅಮ್ಮಣ್ಣ ಬೆಟ್ಟು ಮುದ್ದಣ್ಣ ಶೆಟ್ಟಿ ಮತ್ತು ಮಾರ್ನಾಡ್ ಮೀನಾಕ್ಷಿ ಶೆಟ್ಟಿ ದಂಪತಿಯ ಪುತ್ರಿ ವನಿತ ಅವರನ್ನು ವಿವಾಹವಾಗಿ ಹಾರ್ದಿಕ್ ಮತ್ತು ದೃತಿಕ್ ಎಂಬ ಇಬ್ಬರು ಪುತ್ರರೊಂದಿಗೆ ಸಂಸಾರ ನಡೆಸುತ್ತಿದ್ದಾರೆ. 2021 ರಲ್ಲಿ ಬಳ್ಕುಂಜೆ ಗ್ರಾಮದ ಬಳ್ಕುಂಜೆ ಗುತ್ತಿನ ಪಟೇಲ ಮನೆತನದ ಕುಟುಂಬಿಕರ ಶ್ರೀ ರಾಜನ್ ದೈವ, ಧೂಮಾವತಿ ದೈವಸ್ಥಾನದ ಗುತ್ತಿನಾರ್ ಆಗಿ ಪಟ್ಟ ಪ್ರದಾನವನ್ನು ಪಡೆದವರಾಗಿದ್ದಾರೆ.