ಜ್ಞಾನಾರ್ಜನೆಗೆ ಮುಕ್ತಾಯ ಎಂಬುದುವುದಿಲ್ಲ. ತಾನು ಮಹಾಜ್ಞಾನಿ ಎಂದು ಬೀಗುವುದು ಮೂರ್ಖತನ. ಎಲ್ಲವನ್ನು ತಿಳಿದವರು ಏನೂ ತಿಳಿಯದವರಂತೆ ಇರುತ್ತಾರೆ. ಅರೆಬರೆ ತಿಳಿದವನು ಮಹಾಜ್ಞಾನಿಯಂತೆ ವರ್ತಿಸುತ್ತಾನೆ. ಇದನ್ನು ತೊಡೆದು ಹಾಕುವ ಚಿಂತನೆ ಎಳೆಯ ಮಕ್ಕಳಲ್ಲಿ ಬೆಳೆಸಬೇಕು. ಅವರಲ್ಲಿ ಜ್ಞಾನಾರ್ಜನೆಯ ಹಸಿವು ಹುಟ್ಟಿಸುವ ಶಿಕ್ಷಣ ನೀಡಬೇಕು ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿ ಅವರ ತತ್ಕರ ಕಮಲ ಸಂಜಾತ ಪರಮಪೂಜ್ಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ನುಡಿದರು. ಅವರು ಯಡ್ಯಾಡಿ – ಮತ್ಯಾಡಿ ಲಿಟ್ಲ್ ಸ್ಟಾರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ನೂತನ ಕಟ್ಟಡದ ಭೂಮಿ ಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.
ದುಶ್ಚಟಗಳ ಪಟ್ಟಿಗೆ ಹೊಸ ಸೇರ್ಪಡೆ : ಮನುಷ್ಯನ ಜೀವನದಲ್ಲಿ ಹಲವು ಬಗೆಯ ದುಶ್ಚಟಗಳಿವೆ. ಅದಕ್ಕೆ ಹೊಸದಾಗಿ ಈಗ ಸೇರ್ಪಡೆಗೊಂಡಿರುವುದು ಮೊಬೈಲ್ ಬಳಕೆ. ಆಗಾಧ ಜ್ಞಾನ ಸಂಗ್ರಹಿಸಬಹುದಾದ ಸಾಧನವಿಂದು ಕೆಟ್ಟ ಉದ್ದೇಶಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಅದರಲ್ಲೂ ಮಕ್ಕಳು ಇದರ ಬೆನ್ನಹಿಂದೆ ಬಿದ್ದಿದ್ದಾರೆ. ಶಿಕ್ಷಣ ಸಂಸ್ಥೆಗಳು, ಪೋಷಕರು ಈ ಬಗ್ಗೆ ಎಚ್ಚರ ವಹಿಸಬೇಕು. ಶಿಕ್ಷಣ ವ್ಯವಸ್ಥೆಯ ಮೇಲೆ ಮೊಬೈಲ್ ಕೆಟ್ಟ ಪರಿಣಾಮ ಬೀರುತ್ತಿದೆ. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರು ಮತ್ತು ಪೋಷಕರ ಪಾಲು ದೊಡ್ಡದು. ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಶಿಸ್ತುಬದ್ಧ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯಾಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅವರು ಹಾರೈಸಿದರು. ಶ್ರೀಗಳು ಈ ಸಂದರ್ಭ ವಿದ್ಯಾಸಂಸ್ಥೆಯ ಹಾಸ್ಟೇಲ್ ಕಟ್ಟಡ ಉದ್ಘಾಟಿಸಿ ಆಶೀರ್ವದಿಸಿದರು.
ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ನಡಿ ಕಾರ್ಯಾಚರಿಸುತ್ತಿರುವ ಲಿಟ್ಲ್ ಸ್ಟಾರ್ ಇಂಗ್ಲೀಷ್ ಮೀಡಿಯಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕೆ ನೂತನ ಕಟ್ಟಡ ನಿರ್ಮಿಸಲು ಮುಂದಾಗಿದ್ದು ಪರಮಪೂಜ್ಯ ಶೃಂಗೇರಿ ಶ್ರೀಗಳವರು ಸಂತೋಷದಿಂದ ಒಪ್ಪಿ ಇಲ್ಲಿಯ ತನಕ ಆಗಮಿಸಿ ಭೂಮಿಪೂಜೆ ನೆರವೇರಿಸಿರುವುದು ಅತೀವ ಸಂತಸ ನೀಡಿದೆ. ಈ ಭೂಮಿ ಮತ್ತು ಪ್ರದೇಶ ತನ್ಮೂಲಕ ಪಾವನವಾಯಿತು ಎಂದರು.
ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಶೃಂಗೇರಿ ಮಠದ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ ಅಡಿಗ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಹಿರಿಯ ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ, ಹೊಂಬಾಡಿ – ಮಂಡಾಡಿ ಪಂಚಾಯಿತ್ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ಸ್ಥಳೀಯ ಗಣ್ಯರಾದ ಸಬ್ಲಾಡಿ ಮಂಜಯ್ಯ ಶೆಟ್ಟಿ, ವಸಂತಿ ಶೆಟ್ಟಿ, ಉದ್ಯಮಿ ಎಂ. ಮಹೇಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಡಾ. ರಮೇಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕ ರಜತ ಭಟ್ ನಿರ್ವಹಿಸಿದರು.