ಕಲಾ ಕ್ಷೇತ್ರದಲ್ಲಿ ನಿರಂತರವಾಗಿ ತನ್ನದೇ ಛಾಪನ್ನು ಮೂಡಿಸುತ್ತಿರುವ ಬಂಟ ಸಮಾಜದ ಹೆಮ್ಮೆಯ ಗರಿ ಶರತ್ ಆಳ್ವ ಕೂರೇಲು.
ಕಲೆಯೆನ್ನುವುದು ಮುಗಿಯದ ಅಧ್ಯಾಯ. ತನ್ನಲ್ಲಿರುವ ಕಲಾ ಪ್ರತಿಭೆಯನ್ನು ಸಿಗುವ ಅವಕಾಶಗಳ ಮೂಲಕ ಹೊರಹೊಮ್ಮಿಸಿದರೆ ಉತ್ತಮ ಕಲಾವಿದನೆನಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಮನದೊಳಗೆ ಅದೆಷ್ಟೇ ನೋವುಗಳಿದ್ದರೂ ತನ್ನೆದುರಿಗಿರುವ ಪ್ರೇಕ್ಷಕರ ನೋವನ್ನು ಮರೆಸುವಂತಹ ಅದ್ಭುತ ಶಕ್ತಿಯಿರುವುದು ಓರ್ವ ಕಲಾವಿದನಿಗೆ ಮಾತ್ರ. ಕಲಾ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಾ, ಕಲಾವಿದರಿಗಾಗಿ ತಂಡವನ್ನೂ ರಚಿಸಿ ಅನೇಕ ಪ್ರತಿಭಾವಂತರಿಗೆ ಕಲಾವಿದನ ಸ್ಪರ್ಶ ಕೊಟ್ಟು ಬೆಳೆಸುತ್ತಿರುವವರು ಶರತ್ ಆಳ್ವ ಕೂರೇಲು.
27-05-1989 ರಲ್ಲಿ ಸಂಕಪ್ಪ ಆಳ್ವ ಮತ್ತು ಯಮುನಾ ಆಳ್ವ ದಂಪತಿಗಳ ಪುತ್ರನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೂರೇಲಿನಲ್ಲಿ ಜನಿಸಿದ ಶರತ್ ತಮ್ಮ ಒಂದರಿಂದ ನಾಲ್ಕನೇ ತರಗತಿ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಟ್ಯಾರು, ಐದನೇ ತರಗತಿಯಿಂದ ಏಳನೇ ತರಗತಿ ಶಿಕ್ಷಣವನ್ನು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರಿನಲ್ಲಿ ಪಡೆದು ತಮ್ಮ ಪ್ರೌಢ, ಕಾಲೇಜು ಹಾಗೂ ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ ಪಡೆದರು. ಶಾಲಾ ದಿನಗಳಲ್ಲೇ ಛದ್ಮವೇಷ, ನಾಟಕ ಹಾಗೂ ಚಿತ್ರಕಲೆಯಲ್ಲಿ ಆಸಕ್ತಿ ವಹಿಸಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡವರು ಶರತ್. ಚಿತ್ರಕಲೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟವನ್ನೂ ಕೂಡಾ ಪ್ರತಿನಿಧಿಸಿದ್ದಾರೆ. ಕಾಲೇಜು ಹಂತದಲ್ಲಿ ಆಟಗಳ ಕಡೆಯೂ ಒಲವು ಹೆಚ್ಚಿಸಿಕೊಂಡು ವಾಲಿಬಾಲ್ ಕ್ರೀಡೆಯಲ್ಲಿ ವಿಶ್ವವಿದ್ಯಾನಿಲಯ ಮಟ್ಟವನ್ನು ಪ್ರತಿನಿಧಿಸಿದ್ದಾರೆ.
ಸಣ್ಣ ಪ್ರಾಯದಲ್ಲೇ ನಾಟಕದಲ್ಲಿ ವಿಶೇಷಾಸಕ್ತಿ ಬೆಳೆಸಿಕೊಂಡ ಶರತ್ ಆಳ್ವ ನಾಟಕ ತಂಡಗಳೊಂದಿಗೆ ಭಜನಾ ಮಂದಿರ,
ಗಣೇಶೋತ್ಸವ ಸಮಾರಂಭಗಳ ಸಾಂಸ್ಕೃತಿಕ ವೇದಿಕೆಗಳಲ್ಲಿ ನಾಟಕ ಪ್ರದರ್ಶನಗಳನ್ನು ನೀಡುತ್ತಿದ್ದರು. ಏಳನೇ ತರಗತಿಯಲ್ಲಿ ಉಂಡೆಮನೆ ಕೃಷ್ಣ ಭಟ್ ರಿಂದ ಮೂರು ವರ್ಷಗಳ ಕಾಲ ಯಕ್ಷಗಾನ ತರಬೇತಿ ಪಡೆದು ಪ್ರೌಢಶಾಲಾ ಹಾಗೂ ಕಾಲೇಜು ಶಿಕ್ಷಣದ ಸಂದರ್ಭದಲ್ಲಿ ಯಕ್ಷಗಾನದಲ್ಲಿ ಬಣ್ಣವನ್ನೂ ಕೂಡಾ ಹಚ್ಚಿದ್ದಾರೆ. ಪದವಿ ವಿದ್ಯಾಭ್ಯಾಸವನ್ನು ಮುಗಿಸಿದ ಬಳಿಕ ನಾಲ್ಕು ವರ್ಷಗಳ ಕಾಲ ಖಾಸಗಿ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸಿ 2015 ರಲ್ಲಿ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿದರು.
ವಿರಾಮವಿಟ್ಟಿದ್ದ ಕಲಾಕ್ಷೇತ್ರಕ್ಕೆ ಮತ್ತೆ 2013 ರಲ್ಲಿ ಮತ್ತೆ ದಾಪುಗಾಲಿರಿಸಿ ಸುಬ್ಬು ಸಂಟ್ಯಾರು ರಚಿಸಿ ನಿರ್ದೇಶಿಸಿದ ‘ಎನ್ನಿನೊಂಜಿ ಆಪಿನೊಂಜಿ’ ಎಂಬ ನಾಟಕದಲ್ಲಿ ಅಭಿನಯಸಿ ಸಂಟ್ಯಾರು ಶಾಲಾ ವಾರ್ಷಿಕೋತ್ಸವದಲ್ಲಿ ಪ್ರಥಮ ಪ್ರದರ್ಶನ ನೀಡಿದರು. ನಂತರದ ದಿನಗಳಲ್ಲಿ ಶರತ್ ಆಳ್ವ ಸಾರಥ್ಯದಲ್ಲಿ ಕಲಾ ಆಸಕ್ತರಿಗಾಗಿ ‘ಬೊಳ್ಳಿ ಬೊಳ್ಪು ಕಲಾವಿದರು ಪುತ್ತೂರು’ ಎಂಬ ನಾಟಕ ತಂಡವೊಂದನ್ನು ರಚಿಸಿ ಊರು ಪರವೂರಿನಲ್ಲಿ ನಾಟಕ ಪ್ರದರ್ಶನ ನೀಡುವುದರ ಜೊತೆಗೆ ಎಲೆ ಮರೆಯ ಪ್ರತಿಭೆಗಳಿಗೆ ನಾಟಕ ತರಬೇತಿ ನೀಡಿ ತನ್ನ ತಂಡದ ಮೂಲಕ ಅವಕಾಶ ಒದಗಿಸಿಕೊಡುವ ಇವರ ನಿಸ್ವಾರ್ಥ ಮನೋಭಾವ ಇತರರಿಗೂ ಸ್ಪೂರ್ತಿಯಾಗಿದೆ.
ನಂತರದ ದಿನಗಳಲ್ಲಿ ಇವರ ನೇತೃತ್ವದಲ್ಲಿ ಸುಬ್ಬು ಸಂಟ್ಯಾರು ರಚಿಸಿ ನಿರ್ದೇಶಿಸಿದ ‘ಮಂಡೆ ಹಾಕೊಡ್ಚಿ’ ಎಂಬ ನಾಟಕವು ಐವತ್ತು ಪ್ರದರ್ಶನಗಳನ್ನು ಮುಗಿಸಿದೆ. ‘ನನ ಮರ್ಲ್ ಕಟ್ಟೊಡ್ಚಿ’ ಎಂಬ ಅತ್ಯದ್ಭುತ ನಾಟಕವು ಜನರ ಮನ ಗೆದ್ದು 75 ಪ್ರದರ್ಶನಗಳನ್ನು ಮುಗಿಸಿದೆ. ‘ಕಾಸ್ ದ ಕಸರತ್ತ್ ‘, ‘ಸೀತೆ ಸೋತೆಗೆ’, ‘ಪುಲಿ ಮುಂಚಿ’ ಎಂಬ ನಾಟಕವು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
ಇಪ್ಪತ್ತಕ್ಕೂ ಹೆಚ್ಚು ಕಲಾವಿದರನ್ನು ಒಳಗೊಂಡಿರುವ ಇವರ ಸಾರಥ್ಯದ ಬೊಳ್ಳಿ ಬೊಳ್ಪು ಕಲಾವಿದರ ತಂಡದ ನಾಟಕ ಪ್ರದರ್ಶನಗಳು ಕೇವಲ ತಾಲೂಕಿಗಷ್ಟೇ ಸೀಮಿತವಾಗಿರದೆ ಸುಬ್ರಹ್ಮಣ್ಯ, ಸುಳ್ಯ, ಬೆಳ್ತಂಗಡಿ, ಬದಿಯಡ್ಕ ಹೀಗೆ ನಾನಾ ಕಡೆಗಳಲ್ಲಿ ಪ್ರದರ್ಶನಗಳನ್ನು ನೀಡಿ ಜನರ ಮೆಚ್ಚುಗೆ ಗಳಿಸಿದೆ.
ಕಲಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನೇ ಸೃಷ್ಟಿಸುತ್ತಿರುವ ಶರತ್ ಕನ್ನಡ ಕಿರುಚಿತ್ರ ‘ಎಡಿಕ್ಟ್’ ,’ಗುಬ್ಬಚ್ಚಿ’ ಹಾಗೂ ತುಳು ಚಿತ್ರ ‘ಆಯೆರ್’ ನಲ್ಲಿಯೂ ಅಭಿನಯಿಸಿದ್ದಾರೆ. “ನಾನಿಂದು ರಂಗಭೂಮಿಯಲ್ಲಿ ಬಣ್ಣ ಹಚ್ಚಲು ಮುಖ್ಯ ಕಾರಣವೆಂದರೆ ನನ್ನ ಗೆಳೆಯನಾದ ಸುಬ್ಬು ಸಂಟ್ಯಾರು. ಬಾಲ್ಯದಿಂದಲೇ ಸ್ನೇಹಿತನಾಗಿದ್ದು ನನ್ನ ಏಳು-ಬೀಳುಗಳ ಸಮಯದಲ್ಲಿ ಧೈರ್ಯ ತುಂಬಿ ಸಾಧಿಸಲು ಪ್ರೇರಣೆ ನೀಡಿದವರು. ಒಟ್ಟಿಗೆ ನಾಟಕಗಳಲ್ಲಿ ಅಭಿನಯಿಸುತ್ತಾ ಹೊಸ ಅವಕಾಶಗಳತ್ತ ನನ್ನನ್ನೂ ಜೊತೆ ಸೇರಿಸಿಕೊಂಡು ಕಲಾವಿದರ ತಂಡವನ್ನು ರಚಿಸಲು ಪ್ರೇರೇಪಿಸಿದವರು. ನನ್ನ ಸಾಧನೆಯ ಕೀರ್ತಿ ಇವರಿಗೂ ಸಲ್ಲುತ್ತದೆ” ಎನ್ನುತ್ತಾರೆ ಶರತ್.
ಇವರ ಸಾರಥ್ಯದಲ್ಲಿ ರಚನೆಗೊಂಡ ಕಲಾವಿದರ ತಂಡದಲ್ಲಿ ಕಲಾ ಸದಸ್ಯರಾಗಿರುವ ವಿನೋದ್ ಚಾರ್ಮಾಡಿ ಝೀ ನ್ನಡದ ಕಾಮಿಡಿ ಶೋ ಕಾಮಿಡಿ ಕಿಲಾಡಿಗಳು ಹಾಗೂ ಅನಿಲ್ ರೈ ಪೆರಿಗೇರಿ, ರಂಜು ರೈ ಸುಳ್ಯ, ಅಶೋಕ್ ಬನ್ನೂರು ನಮ್ಮ ಟಿ.ವಿ ಯಲ್ಲಿ ಪ್ರಸಾರಗೊಳ್ಳುವ ಬಲೆ_ತೆಲಿಪಾಲೆ ಕಾರ್ಯಕ್ರಮದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ.
ಭರತನಾಟ್ಯ ವಿದ್ವಾನ್, ತುಳು, ಕನ್ನಡ, ಮಲಯಾಳಂ ಚಿತ್ರಗಳ ವಿತರಕರಾದ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿಯವರೇ ನನ್ನ ಕಲಾ ಸಾಧನೆಗೆ ಸ್ಪೂರ್ತಿ. ಬಾಲ್ಯದಿಂದಲೇ ನನ್ನ ಛದ್ಮವೇಷ, ನಾಟಕಾಭಿನಯವನ್ನು ಗಮನಿಸುತ್ತಾ ಹೆಚ್ಚಿನ ಸಾಧನೆಗೆ ಪ್ರೇರೆಪಿಸಿ ಕಲಾ ಕ್ಷೇತ್ರಕ್ಕೆ ನನ್ನನ್ನು ಪರಿಚಯಿಸಿದವರು. ನನ್ನ ಈ ಸಾಧನೆಯ ಹಾದಿಗೆ ಕಾರಣರಾದ ಬಾಲಕೃಷ್ಣ ಶೆಟ್ಟಿಯವರಿಗೆ ನಾನು ಚಿರ ಋಣಿ” ಎನ್ನುತ್ತಾರೆ ಶರತ್ ಆಳ್ವ.
ಓರ್ವ ಕಲಾವಿದನಾಗಿ ಕಲಾ ಕ್ಷೇತ್ರದಲ್ಲಿ ಅತ್ಯದ್ಭುತ ನಟನೆಯ ಮೂಲಕ ಮಿಂಚುತ್ತಾ ಹಲವಾರು ಪ್ರತಿಭೆಗಳ ಕಲಾ ಸಾಧನೆಯ ಹಾದಿಗೆ ಪ್ರೇರಣೆಯಾದ ಶರತ್ ಆಳ್ವರ ಕಲಾ ಸೇವೆ ನಿರಂತರವಾಗಿರಲಿ. ಕಲಾ ಕ್ಷೇತ್ರಕ್ಕೆ ಇವರಿಂದ ಇನ್ನಷ್ಟು ಕೊಡುಗೆ ಲಭಿಸಲಿ. ಸಕಲ ದೈವ ದೇವರುಗಳ ಆಶೀರ್ವಾದ ಇವರ ಮೇಲಿರಲಿ. ಇನ್ನಷ್ಟು ಅವಕಾಶಗಳು ಒದಗಿ ಬಂದು ಇವರ ಸಾಧನೆ ಇತರರಿಗೂ ಪ್ರೇರಣೆಯಾಗಲೆನ್ನುವುದೇ ನಮ್ಮೆಲ್ಲರ ಆಶಯ.