ಈ ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗೂ ಅದು ಮಾನವನಾಗಲೀ ಮೃಗ ಪಕ್ಷಿಗಳಾಗಲೀ, ಸರೀಸೃಪವಾಗಲೀ ಇಲ್ಲವೇ ಮತ್ಸ್ಯವಾಗಲೀ ಪ್ರತಿಯೊಂದಕ್ಕೂ ಹಸಿವು ಇದ್ದೇ ಇದೆ. ಹಸಿವು ಇಲ್ಲದ ಜೀವಿಯೇ ಇಲ್ಲ. ಹಸಿವು ಇಲ್ಲದೇ ಇರುತ್ತಿದ್ದರೆ ಈ ಪ್ರಪಂಚವೇ ಇರುತ್ತಿರಲಿಲ್ಲ. ಕಾರಣ ಶರೀರ ಬದುಕಿರಲು ಶಕ್ತಿ ಬೇಕು. ಶಕ್ತಿಯನ್ನು ಪೂರೈಸಲು ಆಹಾರ ಬೇಕು. ಆಹಾರ ಬೇಕಾದರೆ ಹಸಿವು ಆಗಬೇಕು. ಆದ್ದರಿಂದಲೇ ಪ್ರತಿಯೊಂದು ಜೀವಿಗೂ ಪರಮಾತ್ಮನು ಹಸಿವನ್ನು ಕರುಣಿಸಿದ್ದಾನೆ. ಹಸಿವು ಪುಟ್ಟ ಮಗುವಿನಿಂದ ಹಿಡಿದು ಮುದಿತನದ ತನಕ ಇದ್ದೇ ಇರುತ್ತದೆ. ಹಸಿವನ್ನು ನೀಗಿಸುವ ಆಹಾರಕ್ಕಾಗಿ ಹೋರಾಟ ಮಾಡಲೇ ಬೇಕಾಗುತ್ತದೆ. ಹಸಿವಿನ ಬೇಗೆಯನ್ನು ಅನುಭವಿಸಿದವರೇ ಬಲ್ಲರು.
ಫೋಟೋದಲ್ಲಿ ಹಸಿವಿನಿಂದ ಬಳಲುವ ಪುಟ್ಟ ಮಗುವು ನನ್ನ ಕೈಯಿಂದ ಯಾರಾದರೂ ಆಹಾರವನ್ನು ಕಿತ್ತುಕೊಳ್ಳುವರೋ ಎಂಬ ಗಾಬರಿಯಿಂದ ಆಹಾರದ ಬಟ್ಟಲನ್ನು ಹಿಡಿದುಕೊಂಡು ಓಡುತ್ತಿದೆ. ಆ ದೃಶ್ಯವನ್ನು ನೋಡುವಾಗ ನಮ್ಮ ಮನ ಕರಗುತ್ತದೆ. ಆ ಪುಟ್ಟ ಮಗುವಿನ ಕೈಯಿಂದ ಆಹಾರದ ಬಟ್ಟಲನ್ನು ಕಿತ್ತುಕೊಳ್ಳಲು ಕರಿಯ ಟೊಣಪನೊಬ್ಬನು ಬೆನ್ನಟ್ಟುತ್ತಿದ್ದಾನೆ. ಆ ಟೊಣಪನ ಮೇಲೆ ನನ್ನ ಹೊರತು!!! ಹೆಚ್ಚಿನವರಿಗೆ ಕೋಪ ಬರಬಹುದು. ನನ್ನ ದೃಷ್ಟಿಯಲ್ಲಿ ಆ ಮಗುವೂ ಓಡುವುದಲ್ಲ! ಮತ್ತು ಟೊಣಪನು ಮಗುವನ್ನು ಬೆನ್ನಟ್ಟುವುದೂ ಇಲ್ಲ. ಬದಲಾಗಿ ಪುಟ್ಟ ಮಗುವಿನ ಹಸಿವು ಓಡುತ್ತಿದೆ. ಟೊಣಪನ ಹಸಿವು ಓಡಿಸುತ್ತಿದೆ. ಪ್ರಪಂಚದಲ್ಲಿ ಆಹಾರಕ್ಕಾಗಿ ಹಾಹಾಕಾರ ಇರುವ ನೈಜ್ಯ ಚಿತ್ರಣವಿದು. ಇದರಿಂದ ಆಹಾರದ ಪ್ರಾಮುಖ್ಯತೆಯನ್ನು ನಾವು ಅರಿಯಬಹುದು.
ಆತ್ಮೀಯರೇ, ನೀವು ಮನೆಯಲ್ಲಿ ಇಲ್ಲವೇ ಇತರ ಕೂಟಗಳಲ್ಲಿ ಊಟ ಮಾಡುವಾಗ ನಿಮಗೆ ಬೇಕಾದಷ್ಟೇ ಆಹಾರ ತೆಗೆದುಕೊಳ್ಳಿ. ಹೆಚ್ಚಿಗೆ ಬಡಿಸಿಕೊಂಡು ಅರ್ಧ ಊಟ ಮಾಡಿ ಉಳಿದದ್ದು ಚೆಲ್ಲುವಂತೆ ಮಾಡಬೇಡಿ. ಒಂದು ಅಗಳು ಅನ್ನ ಚೆಲ್ಲಿದರೂ ಅನ್ನದ ಮಹತ್ವ ತಿಳಿಯದವರು ಎಂದು ಅರ್ಥೈಸಲು ಮೇಲಿನ ಪೋಟೋವೇ ಸಾಕ್ಷಿ.
“ಅನ್ನ ಸಾಕ್ಷಾತ್ ಪರಬ್ರಹ್ಮ”
ಶಿವಪ್ಪ ಶೆಟ್ಟಿ