ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಯಾಗಿರುವ ಚೇತನ್ ಶೆಟ್ಟಿ ಕೋವಾಡಿ ಅವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಮಂಗಳೂರಿನ ಥಿಯೋಲಾಜಿಕಲ್ ಸಂಶೋಧನಾ ಕೇಂದ್ರದ ಮೂಲಕ ಪ್ರಸಿದ್ಧ ಅಂಕಣ ಬರಹಗಾರ, ಲೇಖಕ, ಪುತ್ತೂರಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾದ ಡಾ ನರೇಂದ್ರ ರೈ ದೇರ್ಲ ಅವರ ಮಾರ್ಗದರ್ಶನದಲ್ಲಿ “ಕರ್ನಾಟಕ ಕರಾವಳಿಯ ಪ್ರಾದೇಶಿಕ ಅಧ್ಯಯನದ ವಿಭಿನ್ನ ಪ್ರವೃತ್ತಿಗಳು” ಎಂಬ ವಿಷಯದ ಕುರಿತು ಸಿದ್ಧಪಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಪದವಿ ನೀಡಲಾಗಿದೆ.
ಇವರು 2014ರಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ “ಗ್ರಾಮ ಚರಿತ್ರೆ ಕೋಶ” ಯೋಜನೆಗೆ ಹಿರಿಯ ಜಾನಪದ ವಿದ್ವಾಂಸ ಪ್ರೊ. ಎ.ವಿ. ನಾವಡ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ತಾಲೂಕಿನ ಕ್ಷೇತ್ರ ತಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿ ನಿರತರಾಗಿರುವ ಇವರಿಗೆ ನೇಶನ್ ಬಿಲ್ಡರ್, ಯುವರತ್ನ ಪ್ರಶಸ್ತಿಗಳು ಲಭಿಸಿವೆ. ಇವರು ಕ್ರೋಢ ಬೈಲೂರು ಕೆಳಮನೆ ಬಾಲಕೃಷ್ಣ ಶೆಟ್ಟಿ ಹಾಗೂ ಕೋವಾಡಿ ಗೌರಿ ಬಿ. ಶೆಟ್ಟಿ ದಂಪತಿಯ ಪುತ್ರರಾಗಿದ್ದಾರೆ.