ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಮತ್ತು ಶಾಸಕಾಂಗ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಕರ್ನಾಟಕ ಮೂಲದ ಬಂಟ ಸಮಾಜದ ಉದಯ ಕುಮಾರ್ ಶೆಟ್ಟಿ ಅವರನ್ನು ಕೇಂದ್ರ ಸರಕಾರ ನೇಮಕ ಮಾಡಿದೆ.
ಉದಯ ಕುಮಾರ್ ಶೆಟ್ಟಿ ಈ ಹಿಂದೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ, ಶಾಸಕಾಂಗ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಈಗ ಹೆಚ್ಚುವರಿ ಕಾರ್ಯದರ್ಶಿಯಾಗಿ ಭಡ್ತಿ ಪಡೆದಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಕರ್ನಾಟಕದ ಅಧಿಕಾರಿಯೊಬ್ಬರು ಕಾನೂನು ಸಚಿವಾಲಯದ ಉನ್ನತ ಹುದ್ದೆಗೇರಿದಂತಾಯಿತು.
ಪ್ರಸ್ತುತ ಅವರು ಗುಜರಾತ್ ನ ರಾಷ್ಟೀಯ ರಕ್ಷಾ ವಿವಿ ಆಡಳಿತ ಮಂಡಳಿಯ ಎಕ್ಸ್ – ಆಫಿಷಿಯೋ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 2003 ಬ್ಯಾಚ್ ನ ಭಾರತೀಯ ಕಾನೂನು ಸೇವೆಗೆ ಸೇರಿದ ಶೆಟ್ಟಿಯವರು, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೆಗ್ಗುಂಜೆ ಗ್ರಾಮದವರು. ಉದಯ ಕುಮಾರ್ ಶೆಟ್ಟಿ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಎಲ್ಎಲ್ ಬಿ ಮಾಡಿ ನಂತರ ಬೆಂಗಳೂರು ವಿವಿಯಿಂದ ಕಾರ್ಮಿಕ ಕಾನೂನುಗಳಲ್ಲಿ ಎಲ್ ಎಲ್ ಎಂ ಪೂರ್ಣಗೊಳಿಸಿದರು. ಈ ಹಿಂದೆ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಕಾನೂನು ಉಪನ್ಯಾಸಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು.
2001ರಿಂದ 2003 ರವರೆಗೆ ಭಾರತದ ಕಾನೂನು ಆಯೋಗದಲ್ಲಿ ಅಧೀಕ್ಷಕರಾಗಿ, ನಂತರ ಕೇಂದ್ರ ಕಾನೂನು ಸಚಿವಾಲಯದಲ್ಲಿ ಸಹಾಯಕ ಶಾಸಕಾಂಗ ಸಲಹೆಗಾರ, ಉಪ ಸಲಹೆಗಾರ ಮತ್ತು ಹೆಚ್ಚುವರಿ ಶಾಸಕಾಂಗ ಸಲಹೆಗಾರ ಸೇರಿ ಹಲವು ಹುದ್ದೆಗಳಲ್ಲಿ ಉದಯ್ ಕುಮಾರ್ ಕರ್ತವ್ಯ ನಿರ್ವಹಿಸಿದ್ದಾರೆ.