ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ಮಹಾರಾಷ್ಟ್ರ ಇದರ 4ನೇ ಮಹಾರಾಷ್ಟ್ರ ರಾಜ್ಯ ಮಾಸ್ಟರ್ಸ್ ಗೇಮ್ಸ್ ಚಾಂಪಿಯನ್ ಶಿಪ್ ನಲ್ಲಿ ಮ್ಯಾರಥಾನ್ ಪಟು, ರಾಷ್ಟೀಯ ಅಂತಾರಾಷ್ಟ್ರೀಯ ಮಟ್ಟದ ಅತ್ಲೀಟ್, ತುಳು – ಕನ್ನಡಿಗ ಶಿವಾನಂದ ಶೆಟ್ಟಿ ಚಿನ್ನ ಗೆದ್ದಿದ್ದಾರೆ. ನ.19 ರಂದು ನಾಸಿಕ್ ನ ಮೀನಾ ತಾಯಿ ಠಾಕ್ರೆ ಮೈದಾನಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ 45 ವರ್ಷ ಮೇಲ್ಪಟ್ಟವರ 5 ಸಾವಿರ ಮೀಟರ್ ಓಟದಲ್ಲಿ ಚಿನ್ನದ ಪದಕ ಜಯಿಸಿರುವ ಶಿವಾನಂದ ಶೆಟ್ಟಿ 2024ರ ಫೆಬ್ರವರಿಯಲ್ಲಿ ಗೋವಾದಲ್ಲಿ ನಡೆಯಲಿರುವ 6ನೇ ವಾರ್ಷಿಕ ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್ ಗೆ ಆಯ್ಕೆಯಾಗಿದ್ದಾರೆ.
ಇವರು ನ.19 ರಂದು ಮುಂಬಯಿಯಲ್ಲಿ ನಡೆದ ಡಬ್ಲ್ಯೂಎನ್ ಐ ನೇವಿ ಹಾಫ್ ಮ್ಯಾರಥಾನ್ ನಲ್ಲಿ 46-59 ವಯೋಮಿತಿಯ ವಿಭಾಗದಲ್ಲಿ 3ನೇ ಸ್ಥಾನ, ನ. 26 ರಂದು ನವಿಮುಂಬಯಿಯಲ್ಲಿ ನಡೆದ ನವಿಮುಂಬಯಿ ಎನ್ ಎಂಎಂಸಿಎಸ್ ಹಾಫ್ ಮ್ಯಾರಥಾನ್ 42-50 ವಯೋಮಿತಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಸ್ವರ್ಧೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಕ್ರೀಡಾಳುಗಳು ಭಾಗವಹಿಸಿದ್ದರು.
ನ.5 ರಂದು ಮಂಗಳೂರಿನಲ್ಲಿ ನಡೆದ ನಿವೋಸ್ ಮಂಗಳೂರು ಮ್ಯಾರಥಾನ್ ನಲ್ಲಿ 45-59 ವಯೋಮಿತಿಯ ವಿಭಾಗದ 21 ಕಿ.ಮೀ. ಓಟದಲ್ಲಿ 5ನೇ ಸ್ಥಾನ, ಅ.15 ರಂದು ದಿಲ್ಲಿಯಲ್ಲಿ ನಡೆದ 21 ಕಿ.ಮೀ ನ ವೇದಾಂತ್ ಹಾಫ್ ಮ್ಯಾರಥಾನ್ ನ 45-50 ವಯೋಮಿತಿಯ ವಿಭಾಗದಲ್ಲಿ 26 ನೇ ಸ್ಥಾನ ಗಳಿಸಿದ್ದಾರೆ. ಇದರಲ್ಲಿ ಹತ್ತು ಸಾವಿರ ಸ್ಪರ್ಧಿಗಳು ಭಾಗವಹಿಸಿದ್ದರು. ಸೆ. 3 ರಂದು ಸತಾರಾದಲ್ಲಿ ನಡೆದ ಜೆಬಿಜಿ ಸತಾರಾ ಹಿಲ್ ಆಫ್ ಮ್ಯಾರಥಾನ್ ನಲ್ಲಿ 45-50 ವರ್ಷದೊಳಗಿನವರ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ಅವರು ಹಲವಾರು ರಾಷ್ಟೀಯ, ಅಂತರಾಷ್ಟ್ರೀಯ ಕ್ರೀಡಾಕೂಟ, ಮ್ಯಾರಥಾನ್ ನಲ್ಲಿ ಭಾಗವಹಿಸಿ ನೂರಾರು ಪದಕಗಳನ್ನು ಗೆದ್ದಿದ್ದಾರೆ. ಈವರೆಗೆ ಏಳು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಅವರು, ಇತ್ತೀಚಿಗೆ ದಕ್ಷಿಣ ಕೊರಿಯಾದಲ್ಲಿ ನಡೆದ ಮಾಸ್ಟರ್ಸ್ ಆತ್ಲೆಟಿಕ್ಸ್ ನಲ್ಲಿ ಮೂರು ಪದಕ ಗೆದ್ದಿದ್ದಾರೆ. ಹೋಟೆಲ್ ಕಾರ್ಮಿಕರಾಗಿರುವ ಅವರು ಮೂಲತಃ ಮೂಡಬಿದ್ರೆ ನಿಡ್ಡೋಡಿ ನಂದಬೆಟ್ಟು ಮನೆಯವರು.